ಒಟ್ಟು ನೋಟಗಳು

Monday, May 25, 2020

ನಾನು ಬಕುತನೂ ಅಲ್ಲ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಾನು ಬಕುತನೂ ಅಲ್ಲ ನಿನ್ನ ಬೇಡುವ ಪರಿಯ ಅರಿತವನೂ ಅಲ್ಲ
ಬರೀ ಮಾತುಗಳಲಿ ನಿನ್ನ ಪೂಜಿಸಿ ನಿಜ ಬಕುತನೆಂದೆನಲ್ಲ ಗುರುವೇ|

ಮನಸಿನಾಳದ ಭಾವನೆಗಳ ಹೊಡೆದಾಟದಿ ಮಂಕುಹಿಡಿದು ನಿನ್ನ ಬೇಡುವುದೆಂತು
ಅಡುವುದೊಂದು ಮಾಡುವುದೊಂದು ಮಾಡುತ ನಿನ್ನ ಬೇಡುವುದೆಂತೋ|

ಸರಿ ತಪ್ಪುಗಳ ಅರಿವಿದ್ದು ಬದುಕು ನಡೆಸುವ ಬರದಲಿ ಎಡುವತಿಹೆನೋ
ಮತ್ತೆ ಮತ್ತೆ ಎನ್ನ ಮನ್ನಿಸೆನುತ ನಿನ್ನ ಬೇಡುವ ನಾಟಕವಾಡುತ ನಿಂತಿಹೆನೋ|

ಧರ್ಮದ ದಾರಿಯದು ಬಲು ದುಸ್ತರವು ನಾನೂ ನಡೆವೆನೆ0ಬ ಹುಂಬಿನಲಿ ಕಾಲಿಟ್ಟೆನೋ
ಮುಗ್ಗರಿಸಿ ಬಿದ್ದು ಕರ್ಮದ ಕೂಪದೊಳು ಸಿಲುಕಿ ನಿನ್ನ ಮೊರೆ ಹೋಗುವೆನೋ|

ಕಾಮ ಕಾಂಚಾಣದ ಮೋಹವೆಂಬ ಮಾಯಾ ಜಾಲದ ಬಲೆಗೆ ಸಿಲುಕಿದ ಹುಳುವಾದೆನೋ
ಎನ್ನ ಉದ್ಧರಿಸಿ ನಿನ್ನ ನಾಮದಲೇ ಎನ್ನ ಉಸಿರಿರಿಸಿ ಸಲಹೋ ಸಖರಾಯಧೀಶನೇ|

Sunday, May 17, 2020

ಎಲ್ಲಿ ನೋಡಲಿ ಗುರುವೇ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಲ್ಲಿ ನೋಡಲಿ ಗುರುವೇ ಸದಾ ನಿನ್ನ ಇರುವನ್ನೇ ಕಾಣುತಿಹೆನು
ಏನಾದರೂ ಕೇಳುತಿಹನೆಂದರೆ ಪ್ರಭುವೇ ಅದು ನಿನ್ನ ನಾಮವ ಹೊರತು ಬೇರೇನನು |

ಕಣ್ಣು ಮುಚ್ಚಿದೊಡೆ ನಿನ್ನ ಬೃಂದಾವನದ ಸುಂದರ ಪರಿಸರವು ಎನ್ನ ಸೆಳೆವುದು
ಮೈ ಬಾಗಿಸಿ ನಮಿಸಿರೆ ನಿನ್ನ ಚರಣಾರವಿಂದವೇ ಎನಗೆ  ಗೋಚರಿಸುವುದು|

ನಿನ್ನ ಮಧುರ ಮಾತುಗಳು ವೇದಗಳ ದ್ವನಿಯಂತೆ ಬಲ್ಲವರು ಹೇಳುತಿಹರು
ನೀನಾಡುತ್ತಿದ್ದ ಮಾತುಗಳು ಮಹಾದೇವನ ಅದೇಶವೆಂಬಂತೆ ನಂಬಿಹರು|

ಒಳಗೊಂದು ಹೊರಗೊಂದು ಭಾವವ ನೀ ಸಹಿಸದವನೆಂದು ಬಕುತರು ಅರಿತಿದ್ದರು
ನುಡಿದೆಯಂದರೆ ಅಂತಃಕರಣವ ಮುಟ್ಟಿ ಬದುಕು ಬದಲಾಗುವುದ ಕಂಡರೋ|

ಭವರೋಗ ವೈದ್ಯನು ನೀನಂತೆ ನಿನ್ನ ಕಾಣದೇ ಬದುಕು ಬರಡಾಯಿತು ಎನ್ನದು
ನಿನ್ನ ಚರಿತವ ಕೇಳಿ ಪಾಡಿ ಬದುಕು ಕಟ್ಟಿ ಮುನ್ನೆಡವ ಆಸೆ ನನ್ನದೋ|

ನಿಜ ಬಕುತರ ಸಾಲಿನಲ್ಲಿ ನಾನಿಲ್ಲ ಎನ್ನ ಮನ್ನಿಸಿ ಮುನಿಸು ತೋರದಿರೋ
ಎನ್ನಂತರಂಗದಲಿ ನೆಲೆ ನಿಲ್ಲೋ ಪ್ರಭುವೇ ಸಖರಾಯಪುರದ ಸಂತನೋ|

ಸಕಲವೂ ಗುರುವೇ - ರಚನೆ : ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

!! *ಸಕಲವೂ ಗುರುವೇ* !!

ನಮ್ಮೊಳು ನೀವಿರಲು 
ನಿಮ್ಮೊಳು ಜಗವಿರಲು
ಭಯದಾ ಮಾತೇಕೆ !! ೧ !!

ಅರಿವನು ನೀ ನೀಡಲು
ಅಕ್ಷರವ ನೀ ಬರೆಸಲು
ಅಜ್ಞಾನದಾ ಭ್ರಮೆಯೇಕೆ !! ೨ !!

ಮಾತನು ನೀ ನುಡಿಸಲು
ಮೌನದಿ ನೀ ಪೊರೆಯಲು
ಮಾಯೆಯಾ ಮುನಿಸೇಕೆ !! ೩ !!

ಉಸಿರಲಿ ನಿನ್ನ ನಾಮವಿರಲು
ಅಭಯವ ನೀ ನೀಡಲು
ಬದುಕಲಿ ಬೇರೆ ಚಿಂತೆಯೇಕೆ !! ೪ !!

!! ಸರ್ವದಾ ಸದ್ಗುರುನಾಥೋ ವಿಜಯತೇ !!
೧೫-೫-೨೦೨೦

Saturday, May 16, 2020

ಕಾಣದಾಗಿದೆ ಬದುಕು ನಡೆಸುವ ದಾರಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಕಾಣದಾಗಿದೆ ಬದುಕು ನಡೆಸುವ ದಾರಿ ನಿನ್ನ ನಾಮ ಮರೆತು ಗುರುವೇ
ಭಾರವಾಗಿದೆ ಮನಸು ನಿನ್ನ ನಾಮ ಭಜಿಸದೆ ಮನ್ನಿಸೋ  ಸಖರಾಯಧೀಶ  ಪ್ರಭುವೇ|  

ಎಷ್ಟು ಬೇಡುವುದೋ ಗುರುವೇ ಎನ್ನ ಮನದ ದುಗುಡ ಅರಿಯಲಾರೆಯ
ಇನ್ನಷ್ಟು ಕಷ್ಟ ಕೊಡೋ ದೊರೆಯೇ ನಿನ್ನ ಮರೆತು ಬದುಕುವೆನೆಂದೆಯಾ|

ನಿನ್ನ ಒಲಿಸಿ ಕೊಳ್ಳಲು ಅಂತರಂಗ ಬಹಿರಂಗ ಶುದ್ದಿ ಬೇಕೆನ್ನುವರೋ
ನೀ ಎನ್ನ ನೋಡಿ ಹರಸದೆ ಇನ್ನೆಲ್ಲಿಯ ಶುದ್ಧ ಮನವ ಹುಡುಕಲೋ ಪ್ರಭುವೇ|

ಇಡುವ ಹೆಜ್ಜೆಯದು ತಪ್ಪಾಗಿದ್ದರೆ ಮುಂದಿನ ದಾರಿ ತೋರದೇ ನಿಲ್ಲಿಸೆನ್ನನು
ಎಲ್ಲಾ ಮನದ ಆಟವೆನ್ನುತ ಕಪಟ ವೇಷ ಧರಿಸಿ ನಿನ್ನ ಭಜಿಸುವ ನಾಟಕವೇನೋ|

ಲೌಕಿಕದ ಆಸೆಯ ಬಲೆಯೊಳು ಮನವು ಸಿಲುಕಿ ನಿನ್ನ ಬೇಡುವುದು ಸರಿಯೇ ಗುರುವೇ
ಇಷ್ಟು ದಿನ ಎನ್ನ ದೂರವಿಟ್ಟರೂ ನಿನ್ನ ಮನ ಕರಗಿ ಸಲಹ ಬಾರದೇ ದೊರೆಯೇ|

ಸಖರಾಯಪುರದ ಅರಸ ನೀನು ನಿನ್ನರಸಿ ಓಡೋಡಿ ಬಂದ ಪಾಮರ ನಾನು
ಬೃಂದಾವನದ  ಆ ತಂಪು ನೆರಳು ಮನಕೆ ಶಾಂತಿ ನೀಡಿ ಹರಸ ಬಾರದೇನೋ|