ನಮಿಸುವೆ ನಿನಗೆ ಗುರುದೇವ ನೀನೇ ಅಲ್ಲವೇ ನಮ್ಮೆಲರ ಮಹಾದೇವ
ಬವಣೆ ನೀಗಿಸಿ ಬದುಕಿನ ಹಾದಿ ಸುಗಮ ಮಾಡೋ ಬೇಡುವೆವು ಗುರುದೇವ.
ಎಲ್ಲಿ ಹುಡುಕಲಿ ನಿನ್ನ ಗುರುವೇ ಹೇಗೆ ಬೇಡಲಿ ನಿನ್ನ ಮುನಿಯದೆ ಹರಸೆನ್ನಾ
ಆಲಿಸೋ ಕರುಣದಿ ಗುರುವೇ ಈ ನಿನ್ನ ಪಾಮರ ಬಕುತನ ಮೊರೆಯನ್ನ.
ಅಂತರಾಳದಲಿಹ ಅಹಂ ಅಳಿಸಿ ಏನೂ ಅಲ್ಲದ ಈ ಜೀವಕೆ ದಾರಿ ತೋರೋ
ಬರೀ ಬೂಟಾಟಿಕೆಯ ಬದುಕು ನಡೆಸೋ ನಿನ್ನ ಸೇವಕನ ಮನ್ನಿಸೋ .
ಭ್ರಮೆಯ ಸಿಂಗಾರಕೆ ತೋರಿಕೆಯ ಆಡಂಬರಕೆ ನೀ ಒಲಿಯಲಾರೆ ಗುರುವೇ
ಒಳ ಹೊರಗೂ ಶುದ್ಧ ಭಾವದ ಕೊರತೆ ನಿನ್ನ ದರುಶನ ದೂರವಂತೆ ನಿಜವೇ.
ಎಲ್ಲಿದ್ದೆನೋ ಹೇಗಿದ್ದೆನೋ ಅದುವೇ ನನ್ನ ಕರ್ಮದ ಫಲವಲ್ಲವೇನೋ
ನಿನ್ನ ನಂಬಿದೊಡೆ ನಿನ್ನ ಬೇಡಿದೊಡೆ ಕರ್ಮ ಕಳೆದು ಶಾಂತಿ ನೀ ನೀಡಿದೆ.
ಅರಿವು ಮೂಡಿಸಿ ಆರು ಅರಿಗಳಿಂದ ದೂರವಿರಿಸಿ ನಮ್ಮ ಪೊರೆಯೋ ದೊರೆಯೇ
ನುಡಿಯು ನಡೆಯು ಅನ್ಯರಿಗೆ ಆನಂದ ನೀಡುವ ಪರಿ ತೋರೋ ಗುರುವೇ.
ನಾ ಬೇಡುತಿಹೆನೆಂದು ಬರೀ ಪೊಳ್ಳು ಬಕುತಿಯೆಂದು ದೂರ ಮಾಡಬೇಡ ದೊರೆಯೇ
ಸಖಾರಾಯದೀಷ ಪ್ರಭುವೇ ಬೇಡುವೆನು ನಿನ್ನ ಬೇರೆ ದಾರಿ ಅರಿತಿಲ್ಲ ಗುರುವೇ.