ಎಲ್ಲೂ ಸಲ್ಲದವನು ಎಲ್ಲಿಯಾದರೂ ಸಲ್ಲುವನೆನುತ ಎಲ್ಲೆಲ್ಲೋ ಹುಡುಕಿ ಹೊರಟೆನು
ಬಳಲಿ ಬೆಂಡಾಗಿ ದಾರಿ ಸಾಗದಾಗಿ ಉಸಿರು ಚೆಲ್ಲುತ ದಾರಿ ಕಾಣದೇ ಕುಳಿತೆನೋ.
ಏನಿದು ಬದುಕಿನ ಮರ್ಮ ತಿಳಿಯದೆ ಚಡಪಡಿಸಿ ಕೈ ಚೆಲ್ಲಿ ಕುಳಿತೆನೋ
ಯಾರ ಸಂಗಮಾಡಲಿ ಹೇಗೆ ವಿಷಯ ಅರಿಯಲಿ ಅರ್ಥವಾಗದೆ ಗಲಿಬಿಲಿಯಾದೆನೋ.
ವೇಷಧರಿಸಿ ನಾಮಧರಿಸಿ ಅಡಂಬರದಿ ಮೆರೆದು ಸೋತು ನಿಂತೆನೋ
ನಿನ್ನ ಇರುವ ಅರಿಯದೇ ವ್ಯರ್ಥ ಬದುಕು ನಡೆಸಿ ಸಮಯ ಕಳೆದೆನೋ.
ನಿಜ ಬಕುತರ ಸಂಗ ಗಳಿಸದೆ ಬರೀ ಅಂತೆಕಂತೆಗಳ ಸಂತೆಯಲಿ ಕಳೆದು ಹೋದೆನೋ
ನಿನ್ನ ತತ್ವ ಅರಿಯದೇ ಬದುಕಿನರ್ಥ ತಿಳಿಯದೇ ಅಲ್ಪಮತಿಯಾದೆನೋ.
ನಾನೇನು ನಿನ್ನ ಸೇವಕನೇ ಮೆಚ್ಚಿನ ಶಿಷ್ಯನೇ ನನ್ನ ಹರಸೆಂದು ಬೇಡಲು
ಸಖರಾಯಪುರದ ಮಹಾದೇವನು ನೀನೇ ಬೇಕಲ್ಲವೇ ಇದಕುತ್ತರ ಹೇಳಲು.