ನನ್ನೊಳಗಿಹ ಏನನೋ ಹುಡುಕುತಿಹೆ ನೀ ಸರಿ ದಾರಿ ತೋರೋ ಗುರುವೇ
ಹುಡುಕಾಟದಲಿ ನನ್ನ ಇರುವನೇ ಮರೆತಂತಾಗಿ ಕಳೆದು ಹೋಗದಿರಲಿ ಪ್ರಭುವೇ|
ಅದು ಯಾಕೆಂದು ತಿಳಿದರೂ ನೀ ಎಮಗೆ ತಿಳಿಸುವ ಪರಿ ನಾ ಅರಿಯದಾದೆ
ಭ್ರಮೆಯ ಕೂಪದೊಳು ಮನವ ನಿಲ್ಲಿಸಿ ಪರಿ ಪರಿಯಲಿ ಲೀಲೆ ತೋರುವುದೇ|
ಆಸೆ ಅಮಿಷಗಳ ಸುಳಿಯಲಿ ಮನ ಸಿಲುಕಿಸಿ ಮುಸಿ ನಗುತ ಕುಳಿತೆಯಲ್ಲ
ಮನವ ಮರ್ಧಿಸಿ ಹೊರ ಹೊಮ್ಮುವ ಭಾವಗಳ ಜೊತೆ ನಾ ಸಿಲುಕಿದೆನಲ್ಲಾ|
ತುಸು ರುಚಿಯ ತೋರಿ ಬೊಗಸೆ ಹಿಡಿದಾಗ ಬರೀ ಭಾವಗಳ ತುಂಬಿದೆಯಲ್ಲ
ಬರೀ ಭಾವಿಸುತಲೇ ನಿನ್ನ ಸೇವಿಸುವ ಈ ಜೀವಕೆ ನಿಜ ದಾರಿ ನೀ ತೋರಲಿಲ್ಲ
ಎಲ್ಲವನೂ ಕರುಣಿಸುವ ಗುರುನಾಥ ನೀನು ಈ ಪರಿಯಲಿ ಕಾಡಿಸುವೆಯಲ್ಲ
ಶರಣಾಗಿ ಬಂದಿಹ ಈ ಅಲ್ಪ ಜೀವಕೆ ತುಸು ಕರುಣೆ ಸಾಕೆಂದು ಸಖರಾಯಪ್ರಭುವಿಗೆ ಬೇಡುವೆನಲ್ಲ|