ಗುರುನಾಥ ಇರುವಾಗ ಅಭಯ ನೀಡುವಾಗ ಇನ್ಯಾಕೆ ಭಯವು ಹೇಳು ಮನವೇ
ನಿನ್ನ ದಾರಿ ಸರಿ ಎಂದಾಗ ನಿನ್ನ ಜೊತೆ ಗುರುವಿರುವಾಗ ಭಯವೆಂತು ನಾನರಿಯೇ.
ಅವನ ನಂಬಿದ ಮನವು ಅವನೇ ಎಲ್ಲಾ ಎಂಬ ಭಾವವು ಎನ್ನ ಕಾಪಾಡಿದೆ
ಅನುಮಾನದ ಒಂದು ಸುಳಿಯು ದೂರ ಮಾಡುವುದು ನಿನ್ನಿಂದ ಗುರುವೇ.
ಅವನ ನಾಮದ ಜಪವು ತರುವುದು ಮನಕೆ ಹೇಳಲಾರದ ಮುದವು
ಮನದ ಕಲ್ಮಶ ದ್ವೇಷ ಅಸೂಯೆಗಳ ತೊಳೆದು ಶುದ್ಧ ಭಾವ ಮೂಡುವುದು.
ಎಲ್ಲಾ ಅವನೆಂದಾಗ ನಾನೆಲ್ಲಿ ಉಳಿದೆ ಎಲ್ಲಾ ಅವನ ಪಾದ ಸೇರಿದವು
ಎಲ್ಲರೂ ನನ್ನವರೆಂಬ ಭಾವ ಎಲ್ಲರಲೂ ನೀನಿರುವ ಅರಿವು ಮೂಡಿದವು.
ಎಲ್ಲಾ ನಿನ್ನದಾದಾಗ ನನ್ನದೆಂಬುದು ಏನುಂಟು ತಿಳಿಸೋ ಪ್ರಭುವೇ
ಇಲ್ಲದಿರುವುದಕೆ ಹೊಡೆದಾಡಿ ಎಲ್ಲರಿಂದ ದೂರಾಗಿ ನಾ ಮಾಡುವದೆಂತೋ.
ಯಾರನೂ ಧೂಷಿಸದೆ ಹಳಿಯದೆ ನಿನ್ನ ಭಜಿಸುವ ಮನ ನೀಡೋ ದೊರೆಯೇ
ಬದುಕು ಹಸನಗೊಳಿಸಿ ಮನವ ಶುದ್ದಿಗೊಳಿಸೋ ಸಖರಾಯ ಪ್ರಭುವೇ.
No comments:
Post a Comment