ಒಟ್ಟು ನೋಟಗಳು

Wednesday, November 8, 2017

ಗುರುನಾಥ ಗಾನಾಮೃತ 
ದೇವದೇವನೇ ಭಕ್ತಪಾಲನೇ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ದೇವದೇವನೇ ಭಕ್ತಪಾಲನೇ
ನಿನಗೆ ಸಾಷ್ಟ್ರಾಂಗ ವಂದನೆ
ಗುರುವರೇಣ್ಯನೇ ದೇವದೂತನೇ 
ನಿನಗಿದೋ ಭಕ್ತಿಯ ವಂದನೆ ।। ಪ ।।

ಎಲ್ಲರಲ್ಲಿಹ ಸುಪ್ತಚೇತನನೇ
ಮೂಡಿಸಿ ಅದ್ವೈತದ ಚಿಂತನೆ
ನಾನು ನನ್ನದೆಂಬ ಕಲ್ಪನೆ
ತೊಡೆದುಹಾಕು ಈ ಭಾವನೆ ।। ೧ ।।

ಮನದಿ ನೆಲೆಸಿಹ ಗುರುದತ್ತನೇ
ಅಳಿಸು ನೀ ನಶ್ವರ ಕಾಮನೆ
ಕರುಣಿಸು ಅರಿವಿನ ಸೂಚನೆ
ಮಾಡಿಸು ನೀ ಆತ್ಮೋದ್ಧಾರದ ಸಾಧನೆ ।। ೨ ।।
ಗುರುನಾಥ ಗಾನಾಮೃತ 
ತೊಟ್ಟಿಲೊಳು ಮಲಗೀಸೀ
ರಚನೆ: ಅಂಬಾಸುತ 


ತೊಟ್ಟಿಲೊಳು ಮಲಗೀಸೀ
ತೂಗೂವ ಬನ್ನೀರೇ
ಗುರುನಾಥನಾ ನಮ್ಮ ಅವಧೂತನಾ ||ಪ||

ಜಗವಾ ಪಾಲಿಸುವವನಾ
ಜಗದೀಶ ರೂಪನಾ
ಗುರುನಾಥನಾ ನಮ್ಮ ಅವಧೂತನಾ ||ಅ ಪ||


ಶಾರದಾಂಬೆಯ ಕಂದನಾ
ಶ್ರೀನಿವಾಸನ ಸುತನಾ
ಸಖರಾಯಪುರದಾ ನಿವಾಸನಾ
ಸಂತತಾ ಸೋಜಿಗಾ
ತೋರುತಾ ಸಲಹುವಾ
ಗುರುನಾಥನಾ ನಮ್ಮ ಅವಧೂತನಾ ||೧||

ಮಾರ್ಗಶಿರ ಮಾಸದಾ
ಬಹುಳಾ ಆರನೆ ದಿನಾ
ಮಗುವಾಗೀ ಭುವಿಗೇ ಬಂದವನಾ
ಶ್ರೀ ವೇಂಕಟಾಚಲ ಎಂಬಾ
ನಾಮವ ಧರಿಸಿದಾ
ಗುರುನಾಥನಾ ನಮ್ಮ ಅವಧೂತನಾ ||೨||

ವೇದಶಾಸ್ತ್ರಗಳಲ್ಲಿ
ಪಂಡಿತ ತಾನಾಗೀ
ಗುರುಸೇವೆ ಹರಸೇವೇ ಎನ್ನುತಲೀ
ಗುರುತರ ಭಾಗ್ಯವಾ
ನೀಡುವಾ ಗುರುವಾದಾ
ಗುರುನಾಥನಾ ನಮ್ಮ ಅವಧೂತನಾ ||೩||

ಸಂಸಾರದೊಳಗಿದ್ದೂ
ಸುಖದುಖಃ ಮೀರಿರ್ದಾ
ಸಾಧಕನಾ ನಿಜ ಸಂತನಾ
ಭಾವೀಕ ಭಕುತರಿಗೇ
ಭಾಗ್ಯದ ನಿಧಿಯಾದಾ
ಗುರುನಾಥನಾ ನಮ್ಮ ಅವಧೂತನಾ ||೪||

ಬಹುಲೀಲೆಗಳ ತೋರೀ
ಬವಣೆಗಳ ಹರಿಸುತಲೀ
ನಿಜ ಭಕ್ತಗೆ ಭಗವಂತನಾದವನಾ
ಕಂಬನಿ ಒರೆಸುತಾ
ಕರುಣೆಯಾ ತೋರುವಾ
ಗುರುನಾಥನಾ ನಮ್ಮ ಅವಧೂತನಾ ||೫||

ಹಣ ತೃಣವೆನ್ನುತಲೀ
ಮನಸಿರಿ ಹಿರಿದೆನ್ನುತ್ತಲೀ
ಹೆತ್ತವರೇ ಹಿರಿದೈವ ಎನ್ನುತಲೀ
ತಮವಾ ಕಳೆದೂ
ಶಿಷ್ಯರ ಪಾಲಿಗೇ ಬೆಳಕಾದಾ
ಗುರುನಾಥನಾ ನಮ್ಮ ಅವಧೂತನಾ ||೬||

ಬೋದರೂಪನಾ
ನಿಜ ಆನಂದಧಾಮನಾ
ಚಂದ್ರಶೇಖರ ಚರಣಾರ್ಚಕನಾ
ಅಂಬಾಸುತನಾ
ಅಂತರಂಗದಾ ಗುರುವರನಾ
ಗುರುನಾಥನಾ ನಮ್ಮ ಅವಧೂತನಾ ||೭||

Saturday, November 4, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಲಬ್ಧ್ವಾ  ಪಾರ್ಥೋ ದಿವ್ಯಂ ಚಕ್ಷುಂ 
ದದರ್ಶ ವಿಶ್ವರೂಪಂ ಚ |
ಪ್ರಯಚ್ಛ ಮೇ ಅಂತರ್ಚಕ್ಷುಂ 
ವೇದಿತುಂ ಗಹನಂ ತತ್ತ್ವಂ ||


ಪಾರ್ಥನು ಭಗವಂತನಾದ ಶ್ರೀಕೃಷ್ಣನ ವಿಶ್ವರೂಪವನ್ನು ಚರ್ಮದ ಕಣ್ಣಿನಿಂದ ನೋಡಲಸಾಧ್ಯವಾಗಿ ಕೃಷ್ಣನಿಂದ ದಿವ್ಯಚಕ್ಷುವನ್ನೇ ಪಡೆದ ಹಾಗೆ ಗುರುವೇ..ನಿನ್ನ ಗಹನವಾದ ತತ್ತ್ವವನ್ನು ಅರಿಯಲು ಉತ್ಕೃಷ್ಟವಾದ ಅಂತರಂಗದ ಚಕ್ಷುವನ್ನು ದಯಪಾಲಿಸು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಗಾನಾಮೃತ 
ಎಡೆಬಿಡದೇ ಭಜಿಸೂ ಗುರುನಾಥನಾ
ರಚನೆ: ಅಂಬಾಸುತ 


ಎಡೆಬಿಡದೇ ಭಜಿಸೂ ಗುರುನಾಥನಾ
ಎಣೆಯಿಲ್ಲದ ಫಲವಾ ನೀಡುವ ಅವಧೂತನಾ ||ಪ||

ಹಾಸಿಗೆಯಿಂದೆದ್ದಾಗಾ ಗುರು ಎನ್ನೂ
ಸ್ನಾನವ ಮಾಡುವಾಗ ಸದ್ಗುರು ಎನ್ನೂ
ದೈವ ಮಂದಿರದೊಳೂ ಗುರುನಾಥನಾ ಕಾಣೂ 
ಉಪಹಾರ ಉಂಬುವಾಗ ಒಮ್ಮೆ ಗುರುನಾಥ ಎನ್ನೂ ||೧||

ವ್ಯವಹಾರ ವ್ಯಾಪಾರದೊಳು ಶ್ರೀಗುರು ಎನ್ನೂ
ಸಂಚಾರ ಕಾಲದೀ ಸಲಹೋ ಗುರು ಎನ್ನೂ
ಅನ್ನವಾ ತಿನ್ನುವಾಗಾ ಅರಿವಿನ ಗುರು ಕಾಯೋ ಎನ್ನೂ
ಸಾಯಂಕಾಲದಿ ಜ್ಯೋತಿರೂಪ ಗುರು ಸಲಹೆನ್ನೂ ||೨||

ನಿಂತಾಗಾ ಗುರು ಎನ್ನೂ ನಡೆದಾಗ ಗುರು ಎನ್ನೂ
ನುಡಿದಾಗಾ ಗುರು ಎನ್ನೂ ಕುಳಿತಾಗ ಗುರು ಎನ್ನೂ
ನಗುವಾಗ ಗುರು ಎನ್ನೂ ಅಳುವಾಗ ಗುರು ಎನ್ನೂ
ನನಗೇ ನೀನೇ ಗತಿ ಗುರು ಕಾಯೋ ಎನ್ನೂ ||೩||

ತಂದೆ ಸದ್ಗುರು ಎನ್ನೂ ತಾಯಿ ಸದ್ಗುರು ಎನ್ನೂ
ಮಡದೀ ಸದ್ಗುರು ಎನ್ನೂ ಬಂಧು ಬಳಗ ಗುರು ಎನ್ನೂ
ಮಲಗುವಾ ಕಾಲದೀ ಸಖರಾಯಧೀಶನೆನ್ನೂ
ಅಂಬಾಸುತನಾ ಆತ್ಮಬಂಧು ಕಾಯೋ ಎನ್ನೂ ||೪||

Friday, November 3, 2017

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಪ್ರಾಕ್ಪುಣ್ಯಕಾರಣಾತ್ ಲಬ್ಧಂ
ಸದ್ಗುರು ಪಾದಸೇವನಮ್ |
ತ್ವದನ್ಯಂ ನ ಹಿ ಜಾನಾಮಿ
ಭವೇ ದರ್ಶಯ ಮೇ ಮಾರ್ಗಮ್ ||


ಹಿಂದಿನ ಜನುಮದಿ ಮಾಡಿದ ಪುಣ್ಯದ ಫಲದಿಂದ ಸದ್ಗುರುವಿನ ಪಾದಸೇವೆಯ ಭಾಗ್ಯ ದೊರೆತಿದೆ.... ಹೇ ಗುರುವೇ... ನಿನ್ನ ಹೊರತಾಗಿ ಬೇರಾರೂ ನನಗೆ ತಿಳಿದಿಲ್ಲ... ಈ ಭವಸಾಗರದಲ್ಲಿ ಮಾರ್ಗಬಂಧುವಾಗಿ ಮಾರ್ಗವ ತೋರೋ .. ಸದ್ಗುರುವೇ..

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಗಾನಾಮೃತ 
ಬಿಡೋ ಮೋಹವ 
ರಚನೆ: ಅಂಬಾಸುತ 


ಬಿಡೋ ಮೋಹವ 
ಹಿಡೀ ಸದ್ಗುರು ಪಾದವಾ
ಕಡಿ ನಿನ್ನತನವಾ
ನಡೆ ಗುರು ಮನೆಯೆಡೆಗೇ ||ಪ||

ಸರ್ವಸಮರ್ಥನೂ ಸದ್ಗುರುನಾಥನಾ
ಕೈಪಿಡಿದು ನೆಡೆಸುವಾ
ಕಂಗಳಲಿಟ್ಟುಕೊಂಡು ಕಾಯುವಾ ||೧||

ಮನ್ನಿಸುವನೂ ನೀ ಮಾಡಿದಾ ತಪ್ಪನೂ
ಮುದ್ದಿಸುವ ಕಂದಾ
ಬಾ ನಾ ತಂದೆ ಎನುತಾ ||೨||

ಬೇಧಾಭಾವವಾ ಎಣಿಸದ ಭಾವಾತೀತನೂ
ಭಾವುಕರಿಗೆ ಭಾಗ್ಯಾ
ಸದ್ಗುರುವಿನಾ ದರುಷನಾ ||೩||

ಅಂಬಾಸುತನಾ ಅಸ್ತಿತ್ವ ಇವನಿಂದಾ
ಸಖರಾಯಪುರವಾಸೀ
ಸದ್ಗುರುನಾಥನಿಂದಾ ||೪||

Thursday, November 2, 2017

ಗುರುನಾಥ ಗಾನಾಮೃತ 
ಬಂದಾ ಬಂದಾ ಸದ್ಗುರುರಾಯಾ
ರಚನೆ: ಅಂಬಾಸುತ 


ಬಂದಾ ಬಂದಾ ಸದ್ಗುರುರಾಯಾ
ಸಖರಾಯಪುರದಿಂದಾ
ನಿಂದಾ ನಿಂದಾ ಎನ್ನ ಮನಮಂದಿರದೊಳೂ ||ಪ||

ದಟ್ಟಿಯೊಂದನು ಸುತ್ತಿಕೊಂಡೂ
ವಿಭೂತಿ ಪಟ್ಟೆಯಾ ಧರಿಸೀಕೊಂಡೂ
ಹೆಗಲಲ್ಲಿ ಯಜ್ಞೋಪವೀತಾ ಇರಿಸೀ
ಭಕುತಾ ಜನರಾ ಹರಸೀ ಹರಸೀ ||೧||

ನಸುನಗುತಾ ಒಮ್ಮೇ ಹುಸಿಕೋಪದೊಳು ಒಮ್ಮೇ
ಹಸಿದಾ ಹೊಟ್ಟೆಗೇ ಮೃಷ್ಟಾನ್ನವೀಯುತಾ
ಮಾತಿನಾ ಮಂಥನದೊಳೂ
ಪರಮಾರ್ಥ ಹೇಳುತಾ ಹೇಳುತಾ ||೨||

ಕೆದರಿದಾ ಕೂದಲೂ ಮಿಂಚಿನಾ ಕಣ್ಗಳೂ
ಸಿಂಹದಾ ತೆರನಾಗೀ ಸುರಮುನಿಯಂತೇ ವೇಂಕಟಾಚಲನೆಂಬೋ ನಾಮವ ಧರಿಸೀ
ಅಂಬಾಸುತನಾ ಅನವರತಾ ಪೋಷಿಸೇ ||೩||
ಗುರುನಾಥ ಗಾನಾಮೃತ 
ಶರಣು ಶರಣೆನುವೆ ಗುರುನಾಥಾ
ರಚನೆ: ಅಂಬಾಸುತ 


ಶರಣು ಶರಣೆನುವೆ ಗುರುನಾಥಾ
ಶ್ರೀವೇಂಕಟಾಚಲ ಅವಧೂತಾ ||ಪ||

ಘನ್ನ ಮಹಿಮನೂ ನೀ ಕೃಪಾ ಸಾಗರಾ
ಚತುರಾಶ್ರಮ ಮೀರಿದ ಮಹಿಮಾನ್ವಿತಾ ||೧||

ನಗುಮೊಗದೀ ನಿಂದಿಹಾ ನಾದವೇದ ಬ್ರಹ್ಮ ನೀ
ಸಾಕಾರರೂಪ ನೀ ಸ್ವಾತ್ಮಾರಾಮಾ ||೨||

ಅರ್ಚಿಸುವುದನರಿಯೇ ನಿನ್ನ ಪದವಾ
ಮನದೊಳು ಬಚ್ಚಿಟ್ಟುಕೊಂಡು ನಾ ಕುಳಿತಿರುವೇ ||೩||

ತತ್ವರೂಪ ನೀ ತಮ ನಾಶಕ ನೀ
ತೋರೋ ನಿನ್ನ ಪಾದ ಹೇ ವಿಧಾತಾ ||೪||

ಅಂಬಾಸುತನ ಅರಿವಿನಾ ದೊರೆಯೇ
ಆಶ್ರಯಿಸಿರುವೇ ಪಾಲಿಸೋ ಪ್ರಭುವೇ ||೫||
ಗುರುನಾಥ ಗಾನಾಮೃತ 
ಮೊರೆಯಾಲಿಸೈ ಗುರುನಾಥಾ
ರಚನೆ: ಅಂಬಾಸುತ 


ಮೊರೆಯಾಲಿಸೈ ಗುರುನಾಥಾ
ಮರೆಯದೆ ಎಮ್ಮ ಪಾಲಿಸೈ ಅವಧೂತಾ ||ಪ||

ಅರಿಯೆವಯ್ಯಾ ಅನ್ಯರನೂ
ಹೇ ಕೃಪಾಸಿಂಧೋ ನಿನ್ನಾ ಹೊರೆತೂ
ಓಡೋಡಿ ಬಾರಾಯ್ಯಾ ನಾ ಕಂದಾ ನೀ ತಂದೇ
ಬಿಗಿದಪ್ಪೀ ಮುದ್ದಾಡೋ ಕಾದಿಹೆ ನಾ ||೧||

ನಿನ್ನಿಂದಾ ಅನ್ನ ನೀರೂ ನಿನ್ನಿಂದಾ ನೆರಳು ವಸ್ತ್ರಾ
ನಿನ್ನ ನಾಮ ಒಂದೇ ಎನಗೇ ಉಸಿರಾಗಿಹುದಯ್ಯಾ
ಅತ್ತು ಕರೆಯುತಲಿರುವೆ ಹೆಚ್ಚು ಹೊತ್ತು ಕಾಯಿಸಲು ಬೇಡವೋ
ಹತ್ತಿರದ ಹೇ ಆತ್ಮಬಂಧೂ ನೀ ನೆಮಗೆ ಕೃಪಾಸಿಂಧೂ ||೨||

ದೋಷವೆಲ್ಲವ ದೂರಕಿರಿಸೋ ಧರ್ಮ ಮಾರ್ಗದ ದಾರಿ ತೋರಿಸೋ
ಅಂಬಾಸುತನಾ ಅನವರತಾ ಪೋಷಿಸೋ
ಸಖರಾಯಪುರವಾಸಾ ಹೇ ಸದ್ಗುರುನಾಥಾ
ಅಂಬೇಯಾ ರೂಪ ನೀ ಎಂದು ನಾ ನಂಬಿಹೆನಯ್ಯಾ ||೩||

Wednesday, November 1, 2017

ಗುರುನಾಥ ಗಾನಾಮೃತ 
ಸದಾ ನಮಸ್ತೇ ಗುರುನಾಥಾ
ರಚನೆ: ಅಂಬಾಸುತ 


ಸದಾ ನಮಸ್ತೇ ಗುರುನಾಥಾ
ಸಾಮೀಪ್ಯ ಸುಖ ನೀಡೈ ಅವಧೂತಾ ||ಪ||

ಸೇವಾಭಾಗ್ಯವಿದಿರಲಿ ನಿರಂತರಾ
ಪ್ರಾಪಂಚಿಕೆಗೇ ಇರಿಸೋ ಅಂತರಾ
ಸಂತತಾ ಸಂತರಾ ಸಾನಿಧ್ಯದಲೀ
ನಿನ್ನನೇ ಕಾಂಬುವಂತೇ ಹರಸಯ್ಯಾ ||೧||

ರಾಗದ್ವೇಷವ ಹರಿಸಯ್ಯಾ
ನಿಜಭಕ್ತಿಯೊಂದನೇ ಉಳಿಸಯ್ಯಾ
ಇನಷ್ಟು ಜನುಮವದು ಎನಗಿರಲೀ
ನೀ ಗುರು ನಾ ಶಿಷ್ಯ ಅದು ತಪ್ಪದಿರಲೀ ||೨||

ತಾಯಿಯು ತಂದೆಯೂ ನೀನಯ್ಯಾ
ಎನ್ನ ಬಂಧುಬಳಗವೂ ನೀನಯ್ಯಾ
ತೊರೆಯದಿರಯ್ಯಾ ತೃಣನಿವನೆಂದೂ
ಅಡಿಗಡಿಗೆರಗುವೆ ನೀ ಎನ್ನ ಆತ್ಮಬಂಧು ||೩||

ಸಖರಾಯಪುರವಾಸೀ ಗುರುನಾಥಾ
ಸಖನಾಗಿ ಎನ್ನೊಳಿರೋ ಅವಧೂತಾ
ಅಂಬಾಸುತಾ ಈ ಪದಕುಸುಮಗಳನೂ
ಅರ್ಪಿಸುತಲಿಹನೂ ಸ್ವೀಕರಿಸೋ ಅವಧೂತಾ ||೪||