ಗುರುನಾಥ ಗಾನಾಮೃತ
ತೊಟ್ಟಿಲೊಳು ಮಲಗೀಸೀ
ರಚನೆ: ಅಂಬಾಸುತ
ತೊಟ್ಟಿಲೊಳು ಮಲಗೀಸೀ
ತೂಗೂವ ಬನ್ನೀರೇ
ಗುರುನಾಥನಾ ನಮ್ಮ ಅವಧೂತನಾ ||ಪ||
ಜಗವಾ ಪಾಲಿಸುವವನಾ
ಜಗದೀಶ ರೂಪನಾ
ಗುರುನಾಥನಾ ನಮ್ಮ ಅವಧೂತನಾ ||ಅ ಪ||
ಶಾರದಾಂಬೆಯ ಕಂದನಾ
ಶ್ರೀನಿವಾಸನ ಸುತನಾ
ಸಖರಾಯಪುರದಾ ನಿವಾಸನಾ
ಸಂತತಾ ಸೋಜಿಗಾ
ತೋರುತಾ ಸಲಹುವಾ
ಗುರುನಾಥನಾ ನಮ್ಮ ಅವಧೂತನಾ ||೧||
ಮಾರ್ಗಶಿರ ಮಾಸದಾ
ಬಹುಳಾ ಆರನೆ ದಿನಾ
ಮಗುವಾಗೀ ಭುವಿಗೇ ಬಂದವನಾ
ಶ್ರೀ ವೇಂಕಟಾಚಲ ಎಂಬಾ
ನಾಮವ ಧರಿಸಿದಾ
ಗುರುನಾಥನಾ ನಮ್ಮ ಅವಧೂತನಾ ||೨||
ವೇದಶಾಸ್ತ್ರಗಳಲ್ಲಿ
ಪಂಡಿತ ತಾನಾಗೀ
ಗುರುಸೇವೆ ಹರಸೇವೇ ಎನ್ನುತಲೀ
ಗುರುತರ ಭಾಗ್ಯವಾ
ನೀಡುವಾ ಗುರುವಾದಾ
ಗುರುನಾಥನಾ ನಮ್ಮ ಅವಧೂತನಾ ||೩||
ಸಂಸಾರದೊಳಗಿದ್ದೂ
ಸುಖದುಖಃ ಮೀರಿರ್ದಾ
ಸಾಧಕನಾ ನಿಜ ಸಂತನಾ
ಭಾವೀಕ ಭಕುತರಿಗೇ
ಭಾಗ್ಯದ ನಿಧಿಯಾದಾ
ಗುರುನಾಥನಾ ನಮ್ಮ ಅವಧೂತನಾ ||೪||
ಬಹುಲೀಲೆಗಳ ತೋರೀ
ಬವಣೆಗಳ ಹರಿಸುತಲೀ
ನಿಜ ಭಕ್ತಗೆ ಭಗವಂತನಾದವನಾ
ಕಂಬನಿ ಒರೆಸುತಾ
ಕರುಣೆಯಾ ತೋರುವಾ
ಗುರುನಾಥನಾ ನಮ್ಮ ಅವಧೂತನಾ ||೫||
ಹಣ ತೃಣವೆನ್ನುತಲೀ
ಮನಸಿರಿ ಹಿರಿದೆನ್ನುತ್ತಲೀ
ಹೆತ್ತವರೇ ಹಿರಿದೈವ ಎನ್ನುತಲೀ
ತಮವಾ ಕಳೆದೂ
ಶಿಷ್ಯರ ಪಾಲಿಗೇ ಬೆಳಕಾದಾ
ಗುರುನಾಥನಾ ನಮ್ಮ ಅವಧೂತನಾ ||೬||
ಬೋದರೂಪನಾ
ನಿಜ ಆನಂದಧಾಮನಾ
ಚಂದ್ರಶೇಖರ ಚರಣಾರ್ಚಕನಾ
ಅಂಬಾಸುತನಾ
ಅಂತರಂಗದಾ ಗುರುವರನಾ
ಗುರುನಾಥನಾ ನಮ್ಮ ಅವಧೂತನಾ ||೭||
No comments:
Post a Comment