ಒಟ್ಟು ನೋಟಗಳು

Tuesday, August 23, 2016

ಶ್ರೀ.ವೆಂಕಟಾಚಲ ಅವಧೂತರ ಸ್ಥೂಲ ಪರಿಚಯ: 



ಶ್ರೀಮತಿ. ಶಾರದಮ್ಮ ಮತ್ತು ಶ್ರೀ.ಶ್ರೀನಿವಾಸಯ್ಯ ದಂಪತಿಗಳ ಪುತ್ರನಾಗಿ ಶ್ರೀ.ವೆಂಕಟಾಚಲ ಅವಧೂತರು ಚಿಕ್ಕಮಗಳೂರಿನ ಸಖರಾಯಪಟ್ಟಣದಲ್ಲಿ 20ನೇ ಡಿಸೆಂಬರ್ 1940ನೇ ಇಸವಿಯ ಪವಿತ್ರ ಮಾರ್ಗಶೀರ್ಷ ಮಾಸ ಬಹುಳ ಷಷ್ಠಿಯಂದು ಜನಿಸಿದರು. ದಂಪತಿಗಳಿಗೆ ಮೊದಲು ಎರಡು ಹೆಣ್ಣು ಮಕ್ಕಳು ಜನಿಸಿದ ಕಾರಣ ಅವರು ಒಂದು ವೇಳೆ ಗಂಡು ಮಗು ಜನಿಸಿದಲ್ಲಿ ಕುಲದೇವರಾದ ತಿರುಪತಿಯ ವೆಂಕಟರಮಣನ ಸನ್ನಿಧಾನದಲ್ಲಿ ತಮ್ಮ ಮಗನ ಚೌಲವನ್ನು ಮಾಡಿಸುವುದಾಗಿ ಹರಕೆ ಮಾಡಿಕೊಂಡರು. ಹೀಗೆ ಹರಕೆ ಮಾಡಿಕೊಂಡ ಕೆಲವು ದಿನಗಳ ತರುವಾಯ ಶಾರದಮ್ಮನವರು ಒಂದು ದಿನ ತುಳಸೀಪೂಜೆ ಮುಗಿಸಿ ಮನೆಯೊಳಗೆ ಬಂದಾಗ ಸಾಕ್ಷಾತ್ ಶ್ರೀಮನ್ನಾರಾಯಣನು ತೊಟ್ಟಿಲಲ್ಲಿ ಮಲಗಿದಂತೆ ಭಾಸವಾಯಿತು. ಕಾಲಾನಂತರದಲ್ಲಿ ತಿರುಪತಿ ವೆಂಕಟರಮಣನ ಆಶೀರ್ವಾದದ ಫಲವಾಗಿ ಗಂಡು ಮಗುವಿನ ಜನನವಾಯಿತು. ಹಾಗಾಗಿ, ಮಗುವಿಗೆ "ವೆಂಕಟಾಚಲ" ಎಂದು ನಾಮಕರಣ ಮಾಡಿದರು.

ಬಾಣಾವರದ ಶ್ರೀ ಕೃಷ್ಣಯೋಗೀಂದ್ರ ಸರಸ್ವತಿ ಪರಮಹಂಸರು ಮತ್ತೆ ಸಖರಾಯಪಟ್ಟಣದಲ್ಲಿ ಶ್ರೀ ವೆಂಕಟಾಚಲ ಅವಧೂತರಾಗಿ  ಪುನಃ ತಮ್ಮ ಇರುವಿಕೆಯನ್ನು ಭಕ್ತರಲ್ಲಿ ಮೂಡಿಸಿದರು. ತಮ್ಮ 5ನೇ ವಯಸ್ಸಿನಿಂದಲೇ ತಮ್ಮ ಪೂರ್ವ ಅವತಾರವಾದ ಬಾಣಾವರದ ವೃಂದಾವನದ ಬಳಿಯಲ್ಲಿ ಸಾಧನೆಯನ್ನು ಪ್ರಾರಂಭಿಸಿದರು. ಇವರೂ ಕೂಡ ಗಾಯತ್ರಿ ಪುರಶ್ಚರಣೆ ಹಾಗೂ ಅರುಣ ಪೂರ್ವಕ ಸೂರ್ಯ ನಮಸ್ಕಾರದಲ್ಲಿ ಸಾಧನೆಯನ್ನು ಮಾಡಿದ್ದರು.


ಇವರು ತಮ್ಮ 48ನೇ ವಯಸ್ಸಿಗೆ ಬಾಹ್ಯ ಪ್ರಪಂಚಕ್ಕೆ ಸದ್ಗುರುವಾಗಿ ಪ್ರಕಟರಾದರು. ಆ ನಂತರ ಅಪಾರ ಭಕ್ತ ವೃಂದವನ್ನು ಹೊಂದಿದ್ದರು. ಶೃಂಗೇರಿಯ ಶಾರದಾ ಪೀಠದ 34ನೇ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತಿಗಳಿಂದ ಭಾರೀ ಪ್ರಭಾವಿತರಾಗಿದ್ದರು.

ಗುರು ಎಂಬುದು ಏನು? ಗುರುವಿನ ಮಹತ್ವ ಏನು?  ಸದ್ಗುರುವಿನ ಸೇವೆ ಹೇಗೆ ಮಾಡಬೇಕು, ಗುರುವಿನ ಕೃಪೆಗೆ ಹೇಗೆ ಪಾತ್ರರಾಗಬೇಕು ಎಂಬುದನ್ನು ಭಕ್ತವೃಂದಕ್ಕೆ ಉಪದೇಶಿಸುತ್ತಿದ್ದರು. 

ಶೃಂಗೇರಿ ಶಾರದಾ ಪೀಠದ ನಿಕಟ ಸಂಪರ್ಕವನ್ನು ಹೊಂದಿದ್ದ ಇವರು ಗುರುವಿನ ಪೂರ್ಣಾಶೀರ್ವಾದವನ್ನು ಹೊಂದಿದ್ದರು. ಇವರು ಸ್ವಯಂಘೋಷಿತ ಅವಧೂತರಲ್ಲ. ಪ್ರಪ್ರಥಮ ಬಾರಿಗೆ ಶ್ರೀ  ಶೃಂಗೇರಿ ಶಾರದಾ ಪೀಠದ 36ನೇ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಇವರನ್ನು ಅವಧೂತರೆಂದು ಕರೆದರು. ಆನಂತರ ಇವರು ಶ್ರೀ ವೆಂಕಟಾಚಲ ಅವಧೂತರೆಂದು ಪ್ರಕಟವಾದರು. ಪ್ರತಿನಿತ್ಯ ತಪ್ಪದೆ ಸಖರಾಯಪಟ್ಟಣದಿಂದ ಶೃಂಗೇರಿ ಗುರುಗಳಿಗೆ ಭಿಕ್ಷೆ ಹೋಗುತ್ತಿತ್ತು.

ಇವರೇ ಬಾಣಾವರದ ಶ್ರೀ ಕೃಷ್ಣಯೋಗೀಂದ್ರ ಸರಸ್ವತಿ ಪರಮಹಂಸರ ವೃಂದಾವನವನ್ನು ಗುರುತಿಸಿ ಅವರ ವಿಚಾರಧಾರೆಗಳನ್ನು ಭಕ್ತರಿಗೆ ತಿಳಿಸಿ ಅಲ್ಲಿ ನಿತ್ಯ ಪೂಜೆ, ಆರತಿ, ಭಜನೆ ನಡೆಯುವಂತೆ ಉಪದೇಶಿಸಿದ್ದಾರೆ. ಶ್ರೀ.ವೆಂಕಟಾಚಲ ಅವಧೂತರು 30ನೇ ಜುಲೈ 2010 ಆಷಾಢ ಬಹುಳ ಪಂಚಮಿಯ ರಾತ್ರಿ 73ನೇ ವಯಸ್ಸಿನಲ್ಲಿ ತಮ್ಮ ದೇಹವನ್ನು ತ್ಯಜಿಸಿ ವಿಶ್ವವ್ಯಾಪಿಯಾದರು. ಅವರ ವೇದಿಕೆಯನ್ನು ಸಖರಾಯಪಟ್ಟಣದಲ್ಲಿ ನಿರ್ಮಿಸಲಾಗಿದೆ.

ವೆಂಕಟಾಚಲ ಅವಧೂತರ ಕೆಲವು ಪ್ರಮುಖ ನುಡಿ ಮುತ್ತುಗಳು ಈ ಕೆಳಕಂಡಂತೆ ಇವೆ:  

* ದೇಹಕ್ಕೇ ಗುರುವಲ್ಲಯ್ಯಾ ವಿಚಾರ ಜ್ಞಾನಕ್ಕೇ ಗುರು.
* ನಮಸ್ಕಾರಕ್ಕಲ್ಲಯ್ಯಾ ಗುರು ನಿನ್ನ ನಿತ್ಯ ಸಾಧನೆಗೆ ಗುರು.
* ತಾಯಿಯೇ ಮೊದಲ ಗುರು.
* ಮೊದಲು ತಂದೆ ತಾಯಿಯರ ಸೇವೆ ಮಾಡಿ ಆನಂತರ ಗುರುವಿನ  ಸೇವೆ ಮಾಡು. 
* ಹಸಿದವರಿಗೆ ಊಟವನ್ನು ಹಾಕಿ ಅವನು ಯಾವ ಜಾತಿಯವನೆಂದು ನೋಡಬೇಡಿ.
* ಗುರುವಿನ ನಾಮಸ್ಮರಣೆ ಬಿಡಬೇಡಿ.


No comments:

Post a Comment