ಒಟ್ಟು ನೋಟಗಳು

Wednesday, June 10, 2020

ಗುರುಕಥಾಸಾಗರ - ಜಪತಪಧ್ಯಾನ

ಶಿಷ್ಯ :- ಗುರುಗಳೇ ಜಪ ಎಂದರೇನು ?
ಗುರುನಾಥ:- .......(ಮೌನ)
ಶಿಷ್ಯ :- ಗುರುಗಳೇ ಜಪ ಎಂದರೇನು ? 
ಗುರುನಾಥ:- .......(ಮೌನ)
ಶಿಷ್ಯ :- ಗುರುಗಳೇ ಜಪ ಎಂದರೇನು ?ದಯವಿಟ್ಟು ನನ್ನ ಪ್ರಶ್ನೆಗೆ ಉತ್ತರ ಕೊಡುವಿರಾ?
ಗುರುನಾಥ :- ನಮ್ಮೆಡೆಗೆ ತಿರುಗಿ ಕಣ್ಣು ಮಿಟುಕಿಸುತ್ತಾ "ಹೀಗೆ ಪದೇ ಪದೇ ಕೇಳುತ್ತಿರುವೆಯಲ್ಲಾ ಅದನ್ನೇ ಜಪ ಎನ್ನುವದು" ಮತ್ತೆ ಮುಸುನಗುತ್ತಾ "ಅಂದರೇ .ಯಾವ ವಿಷಯವನ್ನು  ತಿಳಿದುಕೊಳ್ಳಬೇಕೆಂಬ ಇಚ್ಛೆಯಿದ ಅದೇ ವಿಷಯವನ್ನು  ಪದೇ ಪದೇ ಮನಸ್ಸಿಗೆ ತಂದುಕೊಳುತ್ತೇವೋ ಅದರ ಸಲುವಾಗಿ ಸಾಧನವಾಗಿ ಯಾವುದಾದರೊಂದು ಮಂತ್ರವನ್ನೋ ಶ್ಲೋಕವನ್ನೋ ಸಾಧನವಾಗಿಟ್ಟು ಕೊಂಡು ಅದನ್ನೇ  ಪುನಃ ಪುನಃ ಪಠಿಸುವ  ಕ್ರಿಯೆಗೆ ಜಪ ಎನ್ನುತ್ತಾರೆ. 
ಶಿಷ್ಯ :- ಎಷ್ಟು ಕಾಲದ ವರೆಗೆ ಮತ್ತು ಎಷ್ಟು ಸಂಖ್ಯೆ ಜಪ ಮಾಡಬೇಕು ?
ಗುರುನಾಥ :- ಎಲ್ಲಿಯವರೆಗೆ ಮನಸ್ಸು ಹತೋಟಿಗೆ ಬರುವದಿಲ್ಲವೋ ಅಲ್ಲಿಯವರೆಗೆ ಮಾಡಬೇಕು.
ಶಿಷ್ಯ :- ಜಪದ ಮಣಿಗಳನ್ನು ಏತಕ್ಕಾಗಿ ಉಪಯೋಗಿಸುವರು ?
ಗುರುನಾಥ :-ಮತ್ತೆ ಗುರುನಾಥರು ಹಸನ್ಮುಖರಾಗಿ  "ಸಂಕಲ್ಪಸಿದ ಸಂಖ್ಯೆಯ ಲೆಕ್ಕ ತಪ್ಪದಿರಲು ಉಪಯೋಗಿಸುತ್ತಾರೇನೋ , ನನಗೆ ಸರಿಯಾಗಿ ತಿಳಿದಿಲ್ಲ.ನಾನಂತೂ ಜಪ ಮಾಡುವದಿಲ್ಲ " ಎನ್ನುವಾಗ ಅವರ ಹುಸಿನಗೆಯಲ್ಲಿ ಅಡಗಿದ್ದ ಅವರ ಸಹಜ ಸ್ಥಿತಿಯ ಅರಿವು ತಂದುಕೊಳ್ಳುವ  ವಿಫಲ ಪ್ರಯತ್ನ ನಮ್ಮಿಂದ." 
ಗುರುನಾಥ:- ಜಪವು ಆಂತರಿಕ ಕ್ರಿಯೆಯಾಗಿ ಮಾರ್ಪಾಡುವಾಗುವವರೆಗೂ ಸಂಖ್ಯೆ , ಕಾಲ ಇವುಗಳು ಬಾಹ್ಯ ವಿಷಯವಾಗೇ ಇರುತ್ತದೆ. 
ಶಿಷ್ಯ :- ಹೆಚ್ಚು ಸಂಖ್ಯೆಗಳಲ್ಲಿ ಜಪವನ್ನು ಮಾಡುವಲ್ಲಿ ಜಪಮಣಿಯು ಅನುಕೂಲ ಮಾಡುತ್ತದೆ ಅಲ್ಲವೇ ಗುರುಗಳೇ .? 
ಗುರುನಾಥ :  ಮತ್ತೆ ಗುರುನಾಥರು ಹಸನ್ಮುಖರಾಗಿ  " ಆಗಲೇ ಹೇಳಿದೆನಲ್ಲಾ .ಜಪವು ಆಂತರಿಕ ಕ್ರಿಯೆಯಾಗಿ ಮಾರ್ಪಾಡಾಗುವವರೆಗೂ ಸಂಖ್ಯೆ , ಕಾಲ ಇವುಗಳು ಬಾಹ್ಯ ವಿಷಯವಾಗೇ ಇರುತ್ತದೆ. 
ಶಿಷ್ಯ :- ಜಪವು ಫಲಕಾರಿಯಾಗುವ ಸೂಚನೆ ಹೇಗೆ ?
ಗುರ್ನಾಥರು :- " ಇದಪ್ಪಾ ಪ್ರಶ್ನೆ ?"  ನನ್ನ ಕಡೆಗೆ ತಿರುಗಿ " ಏನಯ್ಯಾ ಯಾವಾಗಲೂ  ಮಾವ ..ಮಾವ  ಆಂತ ಜಪ ಮಾಡುತ್ತಿರುತ್ತೀಯಲ್ಲಾ ಇದಕ್ಕೆ ಏನು ಉತ್ತರ ಕೊಡುತ್ತೀಯಾ ? ಎಂದು ಕೇಳಿದಾಗ  ನಾನು " ನಿಮ್ಮ ಒಡನಾಟ" ಎಂಬುದಾಗಿ ಮನದಲ್ಲಿ ಅಂದುಕೊಳ್ಳುವಷ್ಟರಲ್ಲೇ ’ಭಾವೋದ್ರೇಕ ಬೇಡ ,ಸರಿಯಾಗಿ ಹೇಳು" ಎಂದಾಗ ನಿರ್ಮನಸ್ಕನಾಗಿ ಮೌನವಾದೆ.ಗುರುನಾಥರ ಉತ್ತರ ಅತ್ಯಂತ ಮಾರ್ಮಿಕವಾಗಿತ್ತು . 
ಗುರುನಾಥ :- ನೀನು ದಿನಕ್ಕೆ ಎಷ್ಟು ಸಂಖ್ಯೆಗಾಯತ್ರೀ  ಜಪ ಮಾಡುತ್ತೀಯೇ ? 
ಶಿಷ್ಯ :- ಕೊನೇ ಪಕ್ಷ ಒಂದುಸಾವಿರದೆಂಟು. 
ಗುರುನಾಥ :- ಗಾಯತ್ರೀ ಜಪದ ಸಂಕಲ್ಪ ಹೇಳುವೆಯಾ ?
ಶಿಷ್ಯ :- ಮಮೋಪಾತ್ತ .....ಯಥಾ ಶಕ್ತಿ ಗಾಯತ್ರೀ ಮಂತ್ರ ಜಪಂ ಕರಿಷ್ಯೇ .
ಗುರುನಾಥ :- ಯಥಾ ಶಕ್ತಿ ಎಂದು ಸಂಕಲ್ಪ ಮಾಡಿದರೂ  ಸಾವಿರದೆಂಟು ಮಾಡುವಷ್ಟೇ ನಿನ್ನ ಶಕ್ತಿಯ ಪರಿಮಿತಿ ಎಂದಾಯಿತು ಅಲ್ಲವೇ.?  ಮಣಿಯ  ಸಹಾಯದಿಂದಲೇ ಜಪದ ಎಣಿಕೆ ಮಾಡುವೆಯಾ ?  ಮಧ್ಯೆ ಲೆಕ್ಕ ತಪ್ಪುವದಿಲ್ಲವೇ ?
ಶಿಷ್ಯ :- ಹೌದು. ಕೆಲವೊಮ್ಮೆ ಲೆಕ್ಕ ತಪ್ಪುತ್ತದೆ. 
ಗುರುನಾಥರು:-  ಎಷ್ಟು ಜಪ ಮಾಡಿದೆ ಎಂಬುದಾಗಿ ಲೆಕ್ಕ ಮಾಡಿಕೊಳ್ಳಲು ಜಪದ ಮಣಿ ಸಹಾಯವಾಗುತ್ತದೆಯೆಂದು  ನೀನೇ ಹೇಳಿದ ಮಾತು ಸುಳ್ಳಾಯಿತೋ ? ಜಪವನ್ನು ಮಾಡುತ್ತಿರುವಾಗ ಮನಸ್ಸು ಮಂತ್ರದ ಮೇಲೆ ಕೇಂದ್ರೀಕೃತವಾಗಿರುತ್ತದೆಯೋ ಅಥವಾ ಎಣಿಕೆ ಮಾಡುವದರ ಮೇಲೆ ಕೇಂದ್ರೀಕೃತವಾಗಿರುತ್ತದೆಯೋ ? ಮನಸು ಮಂತ್ರದ ಮೇಲಿದ್ದರೇ ಲೆಕ್ಕದ ಅರಿವಿರುವುದಿಲ್ಲ,ಕಾಲದ ಅರಿವೂ ಇರುವದಿಲ್ಲ ,ಇದನ್ನು ಜಪ ಎನ್ನಬಹುದು. ಆದರೇ ಅದೇ ಮನಸ್ಸು ಜಪಮಣಿಯನ್ನು ಎಣಿಸುವದರ ಮೇಲಿದ್ದರೇ ಜಪ ವ್ಯರ್ಥವಾದಂತೆ  ಅಲ್ಲವೇ ? ಅಥವಾ ಜಪಮಾಡುವಾಗ ಮನಸ್ಸು ಮಂತ್ರದ ಮೇಲಿರದೆ ಬೇರೇಯಾವುದನ್ನೋ ಆಲೋಚನೆ ಮಾಡುತ್ತಿದ್ದರೇ ಜಪ ಮಾಡುವ ಕ್ರಿಯೆಯೇ ಕೇವಲ ಕಾಲಹರಣವಾದಂತಲ್ಲವೇ ? 
ಶಿಷ್ಯ :- ಹಾಗಾದರೇ ಜಪವು ಫಲಕಾರಿಯಾಗುತ್ತಿದೆ ಎಂಬ ಸೂಚನೆ ಹೇಗೆ ಸಿಗುತ್ತದೆ ?
ಗುರುನಾಥರು :-  ಜಪವನ್ನು ಮಾಡುತ್ತಿರುವಾಗ ಕಾಲದ ಅರಿವು ಇಲ್ಲವಾಗಬೇಕು ಅರ್ಥಾತ್ ಮನಸ್ಸು ಯಾವಾಗ ಆಚೀಚೇ ಅಲ್ಲಾಡದೇ ಒಂದೇ ವಿಷಯದಲ್ಲಿ ಕೇಂದ್ರೀಕೃತವಾಗುತ್ತದೆಯೋ ಆಗ  ಕಾಲದ ಅರಿವು ಉಂಟಗುವದಿಲ್ಲ.ಜಪದ ನಂತರ ಮನಸ್ಸು ಅತ್ಯಂತ ನಿರ್ಮಲವಾಗಿ ಶಾಂತವಾಗಿರುತ್ತದೆ. ಇದು ಜಪ ಫಲಕಾರಿಯಾಗುತ್ತಿರುವ ಸೂಚನೆ.
ಶಿಷ್ಯ :- ಜಪವು ಫಲಕಾರಿಯಾಗುತ್ತಿಲ್ಲ ಎಂಬುದಾಗಿ ಹೇಗೆ ತಿಳಿಯುವದು?
ಗುರುನಾಥ : ಮೇಲೆ ಹೇಳಿದ ಅನುಭವ ಆಗದಿದ್ದರೇ ಜಪವು ವ್ಯರ್ಥವೇ ಎಂಬುದಾಗಿ ತಿಳಿಯಬೇಕು.ಲೆಕ್ಕ ತಪ್ಪುವದು ಅರ್ಥಾತ್ ಮನಸ್ಸು ಬಹಿರ್ಮುಖವಾಗುವದು ,ನಾನು ಇವತ್ತು ಇಷ್ಟು ಜಪ ಮಾಡಿದೆ ಎಂದು ಹೆಮ್ಮೆ ಪಟ್ಟುಕೊಳ್ಳುವದು , ಜಪದ ಮಣಿಯನ್ನು ಜೋಪಾನವಾಗಿ ಇಟ್ಟುಕೊಳ್ಳ ಬೇಕು ಎನ್ನುವದು, ಎಲ್ಲರಿಗೂ ಕಾಣುವಂತೆ ಜಪದಮಣಿಯನ್ನು ಇಟ್ಟುಕೊಂಡು ಜಪಮಾಡುವದು , ಇವೆಲ್ಲ ಜಪಮಣಿಯ *ಸೈಡ್  ಎಫೆಕ್ಟ್* ಕಣಯ್ಯಾ ಎನ್ನುತ್ತಾ ಮತ್ತೆ ಮುಗುಳ್ನಕ್ಕರು. 
ಇದಕ್ಕೆ ವ್ಯತಿರಿಕ್ತವಾಗಿ ಜಪದ ಮಣಿಗೇ ಬೆಳ್ಳಿಯ ದಾರ ಹಾಕಿಸಬೇಕು , ಚಿನ್ನದ ಮಣಿ ಹಾಕಿಸಬೇಕೆದು ಮುಂತಾಗಿ ಪ್ರಾಪಂಚಿಕ ವಿಷಯದ ಕಡೆಗೆ ಮನಸ್ಸು ಎಳೆದರೇ ಜಪದ ಫಲ ವಿಪರೀತವೆಂದೂ  ತಿಳಿಯಬೇಕು.ಎಲ್ಲರಿಗೂ ಕಾಣಿಸುವಂತೆ ಜಪಮಣಿ ಕೈಯ್ಯಲ್ಲಿ ಇಟ್ಟುಕೊಂಡು ಬಾಯಲ್ಲಿ ಪಿಟಿ ಪಿಟಿ ಜಪಮಾಡುವದಂತೂ ಕೇವಲ ಹೆಗ್ಗಳಿಕೆಗೇ ಹೊರತು ಅದರಿಂದ ಪರಮಾರ್ಥ ಸಾಧನವೇನೂ ಸಾಧ್ಯವಿಲ್ಲ. ಜಪಮಣಿ ಕೇವಲ ಕ್ಷಣಿಕ ಬಾಹ್ಯ ಸಾಧನವಷ್ಟೇ , ಇದರ ಉಪಯೋಗ ಜಪಸಂಖ್ಯೆಯ ಲೆಕ್ಕಾಚಾರಕ್ಕೆ ಹೊರತು ಆಂತರಿಕ ಸಾಧನೆಗೆ ಇದರ ಆತ್ಯಂತಿಕ ಉಪಯೋಗವಿಲ್ಲವಷ್ಟೇ . ಜಪಕ್ರಿಯೆ ಅಂತರ್ಮುಖರಾಗುವದಕ್ಕೆ ಸಹಾಯವಾಗಬೇಕು . ಏಕೆಂದರೇ ಅಂತರ್ಮುಖರಾದವರಿಗೆ ಜಗತ್ತಿನ ಪರಿವೆಯೇ ಬೇಕಿರುವದಿಲ್ಲ , ಅಂಥವರಿಗೆ ಜಪದ ಮಣಿಯಿಂದ ಆಗಬೇಕಾದುದೇನು? 

ಶಿಷ್ಯ : ಹಾಗಾದರೇ ಜಪದ ಮಣಿ ಫಲಕಾರಿಯಾಗುತ್ತದೆ ಎಂದು ಹೇಗೆ ತಿಳಿಯುವದು ? 
ಗುರುನಾಥರು :- ಜಪದ ಮಣಿಯ ಅವಶ್ಯಕತೆಯೇ ಇಲ್ಲವಾಗಿ ಹೆಚ್ಚುಹೆಚ್ಚು ಜಪಮಾಡಬೇಕು ಎನ್ನುವ ಹಂಬಲ ಉಂಟಾದಕೂಡಲೇ ಜಪದ ಮಣಿಯ ಅವಶ್ಯಕತೆಯು ಇಲ್ಲವಾಗುವದು.ಇದೇ ಅದರ ಪ್ರಯೋಜನ. ಸಾಮಾನ್ಯವಾಗಿ ಮನಸ್ಸಿಗೆ ಸಾವಿರ ಕಾಲುಗಳಿವೆ. ಒಂದೊಂದು ಬಾರಿ ಒಂದೊಂದು ಕಡೆ ನಮಗರಿವಿಲ್ಲದೇ ಚಲಿಸುತ್ತಿರುತ್ತದೆ.ಅದನ್ನು ಹಿಡಿದು ಕಟ್ಟು ಹಾಕಬೇಕು.ಮಂತ್ರದಮೇಲಿನ ಗಮನ ಮತ್ತು ಎಣಿಕೆಯ ಮೇಲಿನ ಗಮನ ಮನಸ್ಸಿನ ಮಿಕ್ಕೆಲ್ಲಾ ಕಾಲುಗಳನ್ನು ಕತ್ತರಿಸಿ ಕೇವಲ ದ್ವಿಪದಿಯನ್ನಾಗಿ ಮಾಡುತ್ತದೆ.ಇಷ್ಟರ ಮಟ್ಟಿಗೆ ಮಾತ್ರ ಜಪದ ಮಣಿ ಸಹಾಯ ಮಾಡುತ್ತದೆ. ಹೀಗೆ ಸಾಧನೆ ಮಾಡುತ್ತಾ ಮಾಡುತ್ತಾ ಮನಸ್ಸು" ಜಪದ ಮಣಿ " ಎಂಬ ಎರಡನೆಯ ಕಾಲನ್ನೂ ಕಳೆದುಕೊಂಡು ಕೇವಲ ಮಂತ್ರದ ಮೇಲೊಂದೇ ಕೇಂದ್ರೀಕೃತವಾಗಿ ಏಕಪದಿಯಾಗುತ್ತದೆ. ಈ ರೀತಿಯಾಗಿ ಮಂತ್ರದಲ್ಲೇ ಲೀನವಾಗಿ ಅಂತರ್ಮುಖಿಯಾದಾಗ ಇದ್ದ ಇನ್ನೊಂದೇ ಕಾಲನ್ನೂ ಅರ್ಥಾತ್ ಮನಸ್ಸನ್ನು ಕಳೆದುಕೊಂಡು ಕೇವಲ ಸಾಕ್ಷಿಯಾಗುತ್ತಾನೆ.ಇದುವೇ ಜಪದ ಆತ್ಯಂತಿಕ ಫಲ.

ಜೈ ಗುರುದೇವ ದತ್ತ.
ಹರಿ ಓಮ್ ತತ್ ಸತ್ 
ಸತ್ಯಪ್ರಕಾಶ.

1 comment:

  1. Poojya gurugalaada venkatachala Avara paadagalige nanna bhakti poorvaka namanagalu. Sarve jano sukinobavantu. Hari om tatsat.

    ReplyDelete