ಒಟ್ಟು ನೋಟಗಳು

Wednesday, August 19, 2020

ನಾನಲ್ಲ ನಾನಲ್ಲ ಗುರುವೇ ನಿನ್ನ ಬಕುತನು ನಾನಲ್ಲ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ನಾನಲ್ಲ ನಾನಲ್ಲ ಗುರುವೇ ನಿನ್ನ ಬಕುತನು ನಾನಲ್ಲ
ಮನವ ಹಿಡಿಯಲಾರದೆ ನಾ ಸೋತು ಶರಣಾದೆನಲ್ಲ|

ಕಾಮ ಕ್ರೋಧವೇ ಮೇಲಾಯಿತಲ್ಲ ಅಲ್ಪ ಸುಖದ ಆಸೆಯೇ ಹೆಚ್ಚಾಯಿತಲ್ಲ
ಮುಸುಕು ಧರಿಸಿ ಬದುಕು ನಡೆಸಿ ಮೈ ಮರೆತು ಹೋದೆನಲ್ಲ ಗುರುವೇ|

ದುರಾಸೆಯ ಬಲೆಯು ಮೈ ಮರೆತ ಮನವ ಸೆಳೆದು ಬೆಂಬಿಡದೆ ಕಾಡಿತಲ್ಲ
ಅನ್ಯರ ಸೊತ್ತು ಪಾಷಾಣವೆಂದರೂ ಮನಸು ಆಸೆಪಟ್ಟು ಬಯಸಿತಲ್ಲ|

ಕಂಡವರ ಸುದ್ದಿ ಮೈಲಿಗೆ ಅಂದರೂ ನಾಲಿಗೆಯು ದೂರ ನಿಲ್ಲದಲ್ಲ
ಶುದ್ದವಿಲ್ಲದ ಮನವ ಹೊತ್ತು ಮಡಿ ಮಡಿ ಎಂದು ಜಪವ ಮಾಡಿದೆನಲ್ಲ|

ಹಸಿದವರಿಗೆ ಅನ್ನ ನೀಡದೆ ತೋರಿಕೆಯ ಧರ್ಮ ಮಾಡಿ ಮೆರೆದೆನಲ್ಲ
ಕೂಡಿಟ್ಟ ಧನವನು ಮನವಿಲ್ಲದೇ ನೀಡಿ ದಾನವೆಂದು ಬೀಗಿದೆನಲ್ಲ|

ಕರ್ಮ ಕಳೆಯದೇ ದೇವ ನೀ ಒಲಿಯದೇ ಎನ್ನ ಬದುಕು ಬದಲಾಗದಲ್ಲ
ಸಖರಾಯಪುರದ ದೇವ ನೀನು ಕರುಣಿಸದೆ ಎನ್ನ ಕೂಗು ನಿಲ್ಲದಲ್ಲl

Sunday, August 16, 2020

ಹರಣವಾಗಲಿ ಎನ್ನ ಗರ್ವವು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಹರಣವಾಗಲಿ ಎನ್ನ ಗರ್ವವು ನಿನ್ನ ಮರೆತು ಮೆರೆಯುತಿಹೆ ನಾನಿಲ್ಲಿ
ಬರಲಿ ಎನ್ನ ಮನಕೆ ನಿನ್ನ ಸ್ಮರಣೆಯು ಬದುಕಿನ ಪ್ರತಿ ಹೆಜ್ಜೆ ಹೆಜ್ಜೆಯಲಿ|

ಯಾರಗೊಡವೆ ಎನಗೆ ಬೇಡ ನೀಡೆನಗೆ ಮನದ ಶಾಂತಿ ನಿನ್ನ ಬಜಿಪ ಕಾಯಕದಲಿ
ನಿತ್ಯ ಎನ್ನ ಬದುಕಲಿ  ನಿನ್ನ ಕರುಣೆಯ ಫಲವಾಗಿ ಭಕುತಿ ತುಂಬಿ ಹರಿಯಲಿ|

ಮನವ ಮರ್ಧಿಸಿ  ನಾನೆಂಬ ಭಾವವ ಅಳಿಸಿ ಅಲ್ಪ ನಾನೆಂಬುದ ತಿಳಿಸಿ ಹೇಳಲಿ
ನಿನ್ನ ದರುಶನ ದೊರೆಯಲಿಲ್ಲ  ಅಂದು ಮಾಡಿದ ಕುಕರ್ಮ ಕಾಡಿತೆನ್ನ ನಾನೇನು  ಮಾಡಲಿ|

ಏನು ಅರ್ಪಿಸಿ ನಿನ್ನ ಬೇಡಲಿ ಶುದ್ಧ ಭಾವದ ಕೊರತೆ ನೀಗಿ ನನ್ನ ಬಾಳ ಹರಸಲಿ
ಬೇಡಿತೆನ್ನ ಮನವು ಇಂದು ಒಂದು ನೋಟ ಮನದ ಬ್ರಾಂತಿ ದೂರ ಮಾಡಲಿ|

ಆರು ಅರಿಗಳ ಸಂಗ ಮಾಡಿ ಪ್ರತೀ ಗಳಿಗೆ ವ್ಯರ್ಥವಾಯ್ತು ಯಾರ ಬಳಿ ಹೇಳಲಿ
ಅಲ್ಪ ಸುಖದ ಬೆನ್ನ ಏರಿ ಎಲ್ಲಾ ಪಡೆದೆನೆಂಬ ಹುಂಬತನದಿ ಸೋತು ಬಂದಿಹೆನಿಲ್ಲಿ|

ಎಲ್ಲಾ ಅರಿತಿಹ ಮಹದೇವ ನೀನು ನನ್ನ ಬಾಳ ದಾರಿದೀಪವಾಗಿ ಬೆಳಗಲಿ
ಸಖರಾಯಧೀಶ ಪ್ರಭುವೇ  ಮೊರೆಯ ಕೇಳೋ ಉಳಿದ ಬಾಳು  ನಿನಗೆ ಮೀಸಲಾಗಲಿ|

Thursday, August 13, 2020

ಎಷ್ಟು ಬೇಡಲಿ ನಿನ್ನ ಇನ್ನೆಷ್ಟು ಕಾಡಲಿ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಎಷ್ಟು ಬೇಡಲಿ ನಿನ್ನ ಇನ್ನೆಷ್ಟು ಕಾಡಲಿ ಗುರುವೇ ನಿನ್ನ ಒಲುಮೆಗೆ
ನಿನ್ನಿಷ್ಟದ ಪೂಜೆ ಎನಗೊಲಿದಿಲ್ಲವೋ ಮನ್ನಿಸೋ ಸಖರಾಯ ಪ್ರಭುವೇ|

ಇಷ್ಟ ದೇವನು ನೀನು ಎನ್ನ ಕಷ್ಟಗಳ ದೂರ ಮಾಡೆಂದು ಅರಿಕೆ ಸಲ್ಲಿಸಿಹೆ ನಾನು
ನಿನಗರಿವಿಲ್ಲವೇ ದೊರೆಯೇ ಏನು ನೀಡಲು ಸುಮ್ಮನಾಗುವೆನೆಂದು ನಾನು|

ದಾರಿ ಕಾಣದು ಎನಗೆ ಬರೀ ಅಂಧಕಾರವೇ ಮನದಿ ತುಂಬಿಹುದು ಗುರುವೇ
ಬೆಳಕು ಚೆಲ್ಲಿ ಎನ್ನ  ಮನವ ಅರಳಿಸಿ ನಿನ್ನ ಸ್ತುತಿಪ  ಭಾವ  ತುಂಬೋ ಪ್ರಭುವೇ|

ಬದುಕಿನ ದಾರಿಯದು ಕಲ್ಲೋ ಮುಳ್ಳೋ ಏನಗರಿವಿಲ್ಲವೋ ಗುರುವೇ
ನೀ ನಡೆಸುವ ದಾರಿಯ ಅಂದ ಚೆಂದದ ಗೊಡವೆ ಏನಗೇಕೋ  ಪ್ರಭುವೇ|

ಆಡುವ ಮಾತು ಸತ್ಯವೋ ಅಸತ್ಯವೋ ಎಲ್ಲಾ ನುಡಿಸುವುದು ನೀನಲ್ಲವೇ ಗುರುವೇ
ಇಷ್ಟವಾಗದ ಮಾತು ಪದಕೆ ನಿನ್ನ ಹುಸಿಮುನಿಸು ಉತ್ತರವಲ್ಲವೇ ನನ್ನ ದೊರೆಯೇ|

ಮಹಾದೇವನೇ ನೀನು ಪಾಮರನು ನಾನು  ಬೇಡುವುದೆಂತೋ ನಿನ್ನ ಗುರುವೇ
ಮನವ ಹರಿಬಿಟ್ಟು ಪದಗಳ ಮಾಲೆ ಮಾಡಿ ಅರುಹಿದರೆ ಒಲಿಯುವೆಯಾ ಪ್ರಭುವೇ|