ಮನವೆಂಬ ಮಲಿನ ಮಣ್ಣಿನೊಳು ಬಕುತಿಯಾ ಬೀಜ ಬಿತ್ತಿ ಶ್ರದ್ದೆಯಾ ನೀರೆರೆದು ಭಜಿಸುವೆನು
ಗುರು ಕರುಣೆ ಎಂಬ ಸುಮವು ಉದಿಸಿ ನಿನ್ನ ಕಾರುಣ್ಯದ ಫಲ ನೀಡೋ ಗುರುದೇವ|
ಅಲ್ಲ ಸಲ್ಲದ ಜಗದ ವಿಷಯಗಳ ಹಳುವೆಂಬ ಮಲಿನವನು ದೂರ ಮಾಡೋ
ಪೊಳ್ಳು ಭಕುತಿಯಂಬ ಮನದ ಮಲಿನ ಜರಿಯ ಹರಿಯ ಬಿಡ ಬೇಡವೋ|
ನಾನು ತಾನೆಂಬ ಮನದ ಕೀಟವ ಹಾರಬಿಡದೆ ಎಲ್ಲಾ ನೀನೆಂಬ ಅರಿವು ನೀಡೋ
ನಿಜ ಬಕುತಿಯ ಫಸಲು ನುಂಗುವ ಆಸೆ ಆಮಿಷಗಳ ಕೀಟವ ನಾಶ ಮಾಡೋ|
ಮಿಥ್ಯೆಯಂಬ ಜಂತುವ ಹತ್ತಿರ ಬಿಡದೇ ಬಕುತಿಯ ಫಸಲ ಕಾಯೋ ಗುರುದೇವ
ಸುಂದರ ಸುಮವಾಗಿ ನಿನ್ನ ಮೂರುತಿ ಮನದಿ ಕಾಣಲಿ ಮಹಾದೇವ|
ಹೂವು ಕಾಯಾಗಿ ಕಾಯಿ ಹಣ್ಣಾಗುವಂತೆ ನನ್ನ ಭಕುತಿ ಬಲಿಯಲಿ ನನ್ನ ದೇವ
ನಿನ್ನ ಚರಣಕೆ ಅರ್ಪಿಸುವೆ ನನ್ನ ಹೃದಯದ ದೈನ್ಯ ತುಂಬಿದ ಶುದ್ಧ ಭಾವವ|
ಸಕರಾಯಧೀಶನ ಆಸ್ಥಾನದಿ ಬಕುತ ಜನಗಳ ಗುಂಪಿನಲಿ ನಿನಗಾಗಿ ಕಾಯುವೆನು ನಾನು
ಎನ್ನ ಬಕುತಿಯಾ ಹೊರೆ ಇಳಿಸಿ ಎನ್ನ ಸರಿ ತಪ್ಪುಗಳ ತಿಳಿಸೋ ಸದ್ಗುರು ದೇವಾ|