ಒಟ್ಟು ನೋಟಗಳು

Thursday, September 10, 2020

ಸೇವಕನಾಗುವೆನು ನಾನು ಎನ್ನ ಗುರುವಿನ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಸೇವಕನಾಗುವೆನು  ನಾನು ಎನ್ನ ಗುರುವಿನ ಪದಕಮಲ ಕಾಯ್ವ ಸೇವಕನಾಗುವೆನು
ಸೇವೆಯ ಮಾಡುವೆನು ಗುರುವಿನ ಪಾದದೂಳಿಯ ಕಣವಾಗುವೆನು|

ಎನ್ನ ಅಂತರಂಗದಿ ನೆಲೆ ನಿಲ್ಲೆನುತ ಬಕುತಿಯ ಕಾಯಕದ  ಸೇವೆ ನೀಡುವೆನು
ಮನದ ಬಕುತಿಯ ಭಾವಗಳ ಮಾಲೆ  ಮಾಡಿ ಗುರುವಿನ ಪದಕರ್ಪಿಸಿ ಸೇವೆಗೈವೆನು|

ಪಾಮರನಾನು ತೊದಲು ನುಡಿಗಳಾಡುತ ಮನ ಬಂದಂತೆ ಪಾಡುತ ನಿನ್ನ ಪಾದವ ಕಾಯುವೆನು
ಸನಿಹದಿ ಹರಿವ ನೀರನೆ ಗಂಗೆಯೆನುತ ನಿನ್ನ ಪಾದ ಪದ್ಮಗಳ ತೊಳೆದು ಸೇವೆ ಮಾಡುವೆನು|

ದೊರೆವ ಪುಷ್ಪವನೆ ಜಾಜಿ ಮಲ್ಲಿಗೆ ಎನುತ ನಿನ್ನ ಪಾದ ಕಮಲಕರ್ಪಿಸಿ ಸೇವೆ ಎನ್ನುವೆನು
ಸುಗಂಧ ದ್ರವ್ಯಗಳ ಮನದಿ ಕಲ್ಪಿಸಿ ಪಾದವ ತೊಳೆದು ಶುದ್ಧ ಭಾವದಿ ಸೇವೆ ನೀಡುವೆನು|

ಮೂಡುವ ಮಲಿನ ಭಾವಗಳ ದಮನ ಮಾಡೆನ್ನುತ ಕೂಗಿ ಬೇಡುವ ಸೇವಕನಾಗಿಹೆನು
ಮಧುರ ಮಾತುಗಳ ಕಪಟ ಆಟಗಳ ಬದುಕು ಬೇಸತ್ತು ನಿನ್ನ ಪಾದ ಪಿಡಿವೆನು|

ಸಖರಾಯಧೀಶನೆ ನಿನ್ನ ಮನ ಒಪ್ಪಿದರೆ ಎನ್ನ ಸೇವೆ ಸ್ವೀಕರಿಸಿ ಹರಸು ಎನ್ನನು
ಒಪ್ಪಿ ನೀ ಒಲಿದರೆ ಮುದದಿ ಶಿರವೆತ್ತಿ ಕೈ ಮುಗಿದು ನಿನ್ನ ದರುಶನವ ಬೇಡುತಿಹವೆನು|

1 comment:

  1. Guru venkatachala nimma aashirvaada haagu rakshe sadaa yellara mele erali. Hari om tatsat.

    ReplyDelete