ಒಟ್ಟು ನೋಟಗಳು

Wednesday, December 28, 2022

ಸ್ತಿರವಲ್ಲದ ಮನವಹೊತ್ತು - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ಸ್ತಿರವಲ್ಲದ ಮನವಹೊತ್ತು ಬಿದ್ದೆದ್ದು ಓಡುವ ಬದುಕ ನಡೆಸಿ ಸೋತೆನೋ
ಸಂಕುಚಿತ ಭಾವದೊಳು ನಿನ್ನ ಬಜಿಸುವೆನೆನುತ ಬೀಗಿ ಏನೂ ಪಡೆಯದಾದೆನೋ.

ಗುರು ಕೊಡುವನೆಂದು ಹಗುರ ಭಾವದಿ ಮೈ ಮರೆತು ಮೆರೆದೆನೋ
ಅರಿವು ಮೂಡುವ ಮೊದಲೇ ಅರಿತವನಂತೆ ಬೀಗುತ ಎಡವಿ ಬಿದ್ದೆನೋ.

ಚಪಲ ತುಂಬಿದ ಮನ ಹೊತ್ತು ನಿನ್ನ ಭಜಿಸುವ ವೇಷ ಧರಿಸಿ ನಿಂತಿಹೆನೋ
ಆಸೆಗಳ ಮೂಟೆ ಹೊತ್ತು ಏನೂ ಅರಿಯದ ಭಾವ ತೋರಿ ಸೋತೆನೋ.

ನಾನೇ ನಿನ್ನ ಬಕುತನೆನುತ ಬಿಂಕತೋರಿ ನಿಜ ಬಕುತರ ಅರಿಯದಾದೆನೋ
ಶುದ್ಧ ಭಾವದ ಕೊರತೆ ನೀಗದೆ ಚಂಚಲ ಮನದ ಸೆಳೆತ ಮೆಟ್ಟಿ ನಿಲ್ಲದಾದೆನೋ.

ನಿನ್ನ ಕೃಪೆಗೆ ಹಾತೊರೆದು ನಿನ್ನ ಪದತಲದಿ ಶಿರವಿಟ್ಟು ಬೇಡುವ ಪರಿ ತಿಳಿಯದಾದೆನೋ
ಸಖರಾಯಪುರದ ಸರದಾರ ನೀನು ಸರಿ ತಪ್ಪು ತೋರಿ ಹರಸಬಾರದೇನೋ.

Saturday, November 5, 2022

ಕಳೆದ ವಸಂತಗಳೆಷ್ಟೋ ನಿನ್ನ ನೆನೆಯದ ದಿನಗಳು ಇನ್ನೆಷ್ಟೋ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ಕಳೆದ ವಸಂತಗಳೆಷ್ಟೋ ನಿನ್ನ ನೆನೆಯದ ದಿನಗಳು ಇನ್ನೆಷ್ಟೋ
ಅಂತೆ ಕಂತೆಗಳ ಸಂತೆಯೊಳು ಬದುಕ ನಡೆಸಿ ನಿನ್ನ ಮರೆತ ದಿನವೆಷ್ಟೋ.

ಏನಿದು ಗುರುದೇವ ಏನಿದು ನಿನ್ನ  ಲೀಲಾ ಪರಿಯ ನಾ ತಿಳಿಯೆ
ನಾ ನಿನ್ನವನಲ್ಲದೇ ಹೋದರೆ ನೀ  ಎನ್ನ ಮನದೊಳು ಯಾಕೆ ನಿಂತಿರುವೆ.

ಭವರೋಗ ವೈದ್ಯನು ನೀನು ಭವ ಭಂದನ ಬಿಡಿಸುವವ ನೀನು
ಎಲ್ಲಾ ಕರ್ಮ ಮಾಡಿ ಕುಕರ್ಮಿಯಾದ ನಾನು  ನಿನ್ನ ಬೇಡುವ  ಅರ್ಹತೆ ನನಗೇನು.

ನಾ ಅರಿತು ಮಾಡುವ ಕರ್ಮಕೆ ಹೊಣೆಯಾರು ತಿಳಿಸು ಗುರುವೇ 
ಲೌಕಿಕದ ಬಣ್ಣಗಳ ವಿವಿಧ ವಾಸನೆಗಳ ಸುಳಿಯಿಂದ ದೂರಿಡೋ ಪ್ರಭುವೇ.

ನಾನು ನಾನಲ್ಲ ಯಾವುದೂ ನನದಲ್ಲ ಆದರೂ ಒಪ್ಪುವ ಮನವಲ್ಲ
ನೀನೇ ಎಲ್ಲಾ ನಿನ್ನ ಲೀಲೆಗೆ ಕೊನೆಯಿಲ್ಲ  ನಾ ಅರಿಯದೆ ಹೋದೆ ಸಖರಾಯಪ್ರಭುವೇ.

Friday, November 4, 2022

ಗುರುನಾಥ ಇರುವಾಗ ಅಭಯ ನೀಡುವಾಗ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಗುರುನಾಥ ಇರುವಾಗ ಅಭಯ ನೀಡುವಾಗ ಇನ್ಯಾಕೆ ಭಯವು ಹೇಳು ಮನವೇ
ನಿನ್ನ ದಾರಿ ಸರಿ ಎಂದಾಗ ನಿನ್ನ ಜೊತೆ ಗುರುವಿರುವಾಗ ಭಯವೆಂತು ನಾನರಿಯೇ.

ಅವನ ನಂಬಿದ ಮನವು ಅವನೇ ಎಲ್ಲಾ ಎಂಬ ಭಾವವು ಎನ್ನ ಕಾಪಾಡಿದೆ
ಅನುಮಾನದ ಒಂದು ಸುಳಿಯು ದೂರ ಮಾಡುವುದು ನಿನ್ನಿಂದ ಗುರುವೇ.

ಅವನ ನಾಮದ ಜಪವು ತರುವುದು ಮನಕೆ ಹೇಳಲಾರದ ಮುದವು
ಮನದ ಕಲ್ಮಶ ದ್ವೇಷ ಅಸೂಯೆಗಳ ತೊಳೆದು ಶುದ್ಧ ಭಾವ ಮೂಡುವುದು.

ಎಲ್ಲಾ ಅವನೆಂದಾಗ ನಾನೆಲ್ಲಿ ಉಳಿದೆ ಎಲ್ಲಾ ಅವನ ಪಾದ ಸೇರಿದವು
ಎಲ್ಲರೂ ನನ್ನವರೆಂಬ ಭಾವ ಎಲ್ಲರಲೂ ನೀನಿರುವ ಅರಿವು ಮೂಡಿದವು.

ಎಲ್ಲಾ ನಿನ್ನದಾದಾಗ ನನ್ನದೆಂಬುದು ಏನುಂಟು ತಿಳಿಸೋ ಪ್ರಭುವೇ
ಇಲ್ಲದಿರುವುದಕೆ ಹೊಡೆದಾಡಿ ಎಲ್ಲರಿಂದ ದೂರಾಗಿ ನಾ ಮಾಡುವದೆಂತೋ.

ಯಾರನೂ ಧೂಷಿಸದೆ  ಹಳಿಯದೆ ನಿನ್ನ ಭಜಿಸುವ ಮನ ನೀಡೋ ದೊರೆಯೇ
ಬದುಕು ಹಸನಗೊಳಿಸಿ ಮನವ ಶುದ್ದಿಗೊಳಿಸೋ ಸಖರಾಯ ಪ್ರಭುವೇ.

Sunday, October 30, 2022

ಗುರುವೆಂದು ನುಡಿಯುತ ಎಲ್ಲಾ ನೀನೆಂದು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಗುರುವೆಂದು ನುಡಿಯುತ ಎಲ್ಲಾ ನೀನೆಂದು ಹೇಳುತ ಬರೀ ನಟಿಸಿ ಬದುಕಿದೆನು
ನಿನ್ನ ನುಡಿಯ ಆಲಿಸದೆ ನಿನ್ನ ತತ್ವ ಅರಿಯದೆ ಬರೀ ವೇಷ ದರಿಸಿ ಬಾಳಿದೆನೋ.

ಕೊಡು ಕೊಡೆಂದು ಸದಾ ಬೇಡುತ ಬೆಂಬಿಡದೆ ನಿನ್ನ ಕಾಡಿದೆನೋ
ನಂಬಿದಂತೆ ನಟಿಸಿ ಬೇಡುವವನಂತೆ ತೋರಿಸಿ ಭಕುತಿಗೆ ವಂಚಿಸಿದೆನೋ.

ಗುಂಪಿನಲಿ ನಿಂತು ತೋರಿಕೆಯ ಭಕುತಿ ಬೀರಿ ನನಗೆ ನಾ ವಂಚಿಸಿ ಕೊಂಡೆನೋ 
ಅನ್ಯರ ಬಕುತಿಯ ಅರಿಯದೆ ತೋರಿಕೆಯ ಭಾವ ತೋರಿ ಸೋತೆನೋ.

ಸ್ವಾರ್ಥದ ಭಕುತಿ ತೋರಿ ಆಸೆಗಳ ಹೊರೆ ಹೊತ್ತು ನಿನ್ನ ಬೇಡಿದೆನೋ
ಮಾಡುವ ಕುಕರ್ಮಕೆ ನಿನ್ನ ಬೆಂಬಲ ಬೇಡಿ ಬಂಡ ಬದುಕ ಬಾಳಿದೆನೋ.

ತಂದೆ ತಾಯಿಯರ  ಸಲಹದೆ ಬೂಟಾಟಿಕೆಯ  ಬದುಕು ನಡೆಸಿ ಕೊರಗಿದೆನೋ
ಓ ಸಖರಾಯಾಧೀಶ  ಎನ್ನ ಸಲಹೆನ್ನಲು ಕನಿಕರದಿ ಬರುವೆಯಾ ನೀನು.

Tuesday, May 10, 2022

ಬಲು ಸಡಗರದಿ ಬಂದು ಬೃಂದಾವನವ ಸುತ್ತಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಬಲು ಸಡಗರದಿ ಬಂದು ಬೃಂದಾವನವ ಸುತ್ತಿ ಆನಂದದಿ ನಿಂತೆನೋ
ಎಂದೂ ಕಾಣದ ಅನುಭೂತಿ ಪಡೆದು ಮೈ ಮರೆತು ಭಜಿಸಿಹೆನೋ|

ಹರನೆಲ್ಲಿ ಹರನೆಲ್ಲಿ ಎನುತ ಮುದದಿ ಪಾಡುತ ಸಖರಾಯಧೀಶನ ಕಂಡೆನೋ
ಮಹದೇವ ತಾನಾಗಿ ಬಕುತರಾ ಪೊರೆಯುತ ಇದ್ದರೂ ಇಲ್ಲದಂತಿಹನೋ|

ಶಿವನೇ ತಾನಾಗಿ ಲೀಲೆಗಳ ತೋರುತ ಎಲ್ಲರೊಳಗೊಂದಾಗಿ ಬೆರೆತಿಹನೋ
ಪಂಚ ಭೂತಗಳೊಡೆಯ ತಾನಾದರೂ ಕಿಂಚಿತ್ತೂ ಗರ್ವ ತೋರನಿವನೋ|

ಎಲ್ಲಾ ಅವನ ಲೀಲೆ ಎನುತ ಎಲ್ಲಾ ಕಷ್ಟ ದೂರಮಾಡುತ ಮೌನದರಿಸಿಹನೋ 
ಎಲ್ಲಾ ಜೀವಿಗಳ ಒಡನಾಟದಿ ಅರಿವಿಲ್ಲದೇ ಎಲ್ಲರಲೂ ಅರಿವು ಮೂಡಿಸಿಹನೋ|

ಕರ್ಮ ಬಂಧನದ ಸಂಕೋಲೆ ಕಳಚುತ ನಿತ್ಯ ಸತ್ಯ ಸಾರಿ ಹೇಳಿಹನೋ
ಗುರುನಾಥ ಎಂದೊಡೆ ಅನಾಥ ಭಾವ ಸರಿಸಿ ನಿಮ್ಮೊಡನೆ ಇರುವೆನೆಂದನೋ|

Sunday, May 8, 2022

ಬಡವನಾದೆನು ನಾನು ಭಜಿಸದೇ ನಿನ್ನನು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಬಡವನಾದೆನು ನಾನು ಭಜಿಸದೇ ನಿನ್ನನು ಪ್ರಭುವೇ  ಮನ್ನಿಸಿ ಹರಸೆನ್ನನು
ಬಕುತಿಯ ಸೋಗು ಧರಿಸಿಹೆ  ಲೌಕಿಕದ ಚಿಂತೆ ಕಾಡುತಿದೆ ಗುರುವೇ ಎನ್ನನು|

ಮನದ ಒಳಹೊಕ್ಕು ಭಾವನೆಗಳ ತಡಕಾಡಿ ಸೋತು ನಿಂತಿಹೆನೋ
ಬರೀ  ಪ್ರಲೋಭನೆಗಳ ಸುಳಿಯೊಳು ಮನ ಸಿಲುಕಿ ಅಂಧನಾಗಿಹೆನೋ|

ಭಾವಶುದ್ದಿಯ ಬಯಸಿ ಬಯಕೆಗಳ ಬದಿಗೊತ್ತಿ ಹೋರಾಡುತಿಹೆನೋ
ಅಲ್ಪ ಬುದ್ಧಿಯ ಜೀವಿಯು ನಾನು ಏನೂ ಅರಿವಿಲ್ಲದೇ ಕೊರಗುತಿಹೆನೋ|

ಮನವ ನಿನಗರ್ಪಿಸದೆ ಮತಿಯ ಮರ್ದಿಸದೆ ನೀ ಒಲಿಯಲಾರೆಯೇನೋ
ನನಗರಿಯದು ಗುರುವೇ ಬದುಕು ನಡೆಸುವ ಪರಿ ಸೋತು ಕೂಗುತಿಹೆನೋ|

ಬಣ್ಣದಾ ಬದುಕಿನ ರಂಗಿನಾ ಆಟ ಸಾಕು ನೀ ಒಮ್ಮೆ ದಯೆ ತೋರಬಾರದೇನೋ
ಸಖರಾಯ ದೊರೆಯೇ  ನಿನ್ನಂಗಳದಿ ನಾ ಬೇಡುತಾ ನಿಂತೆ ಹರಸಬಾರದೇನೋ|

Tuesday, February 22, 2022

ಮರೆತು ಹೋಯಿತು ನಿನ್ನ ಇರುವಿನ ಅರಿವು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಮರೆತು ಹೋಯಿತು ನಿನ್ನ ಇರುವಿನ ಅರಿವು ಹಾದಿ ತಪ್ಪಿತು ಎನ್ನ ಬದುಕಿನ ಗುರಿಯು
ತಾಳ ತಪ್ಪಿದ ಭಾವವಿಲ್ಲದ ಬರೀ ನೋವುಗಳ ಗೂಡಾಯಿತು ಎನ್ನ ಮನವು|

ಬಕುತನ ಸೋಗು ಧರಿಸಿ ಬಕುತಿಯ ವೇಷ ಧರಿಸಿ ನಿನ್ನ ಮುಂದೆ ನಿಲ್ಲುವುದುಂಟೆ ನಾನು
ಬರೀ ಒಣ ಪದಗಳ ಬಳಸಿ ನಿನ್ನ ಜಪಿಸುವೆನೆನುತ ಕಾಲ ಕಳೆದು ಮೂಡನಾದೆ ನಾನು|

ನೀನೇ ಎಲ್ಲವೂ ಎನುತ ನಿಜ ಬಕುತಿಯನೇ ಮರೆಯುತ ನಾಟಕವಾಡಿಹೆನು ನಾನು
ಕಳ್ಳ ಮನಸ್ಸಿನೊಳು ಪೊಳ್ಳು ಭಾವವ ತುಂಬಿ ಮಳ್ಳನಂತೆ ಬೇಡುತಿಹೆನು ನಾನು|

ಬದುಕಿನ ಬೇಗೆಯನು ತಾಳಲಾರದೆ ನಿಜ ಬಕುತಿಯ ಮಾಡದೆ ನಿನ್ನ ಕಾಡುತಿಹೆನೋ
ಅನ್ಯರ ಸಹಿಸದೇ ಸ್ವಾರ್ಥದಿ ದುರಾಸೆಯ ಬಲೆಯಲಿ ಸಿಲುಕಿ ಬಳಲಿಹೆ ನಾನು|

ಇನ್ನೆಷ್ಟು ಕಾಯಿಸುವೆ ಇನ್ನೆಷ್ಟು ದೂರ ಇಡುವೆ ಮನವ ಮರ್ದಿಸದೆ ಇನ್ನೆಷ್ಟು ಕಾಡುವೆ
ಓ ನನ್ನ ಪ್ರಭುವೇ ನೀನಲ್ಲದೇ ಇನ್ಯಾರು ಪೊರೆವರು ಎನ್ನನು ಮನ್ನಿಸೋ ಸಖರಾಯದೊರೆಯೇ|