ಒಟ್ಟು ನೋಟಗಳು

Wednesday, July 24, 2024

ನನ್ನೊಳಗಿಹ ನಿನ್ನ ಅರಿಯದೇ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

 ನನ್ನೊಳಗಿಹ ನಿನ್ನ ಅರಿಯದೇ ಮರುಳನಂತೆ ಇನ್ನೆಲ್ಲೋ ಹುಡುಕುತಿಹೆನೋ ಗುರುವೇ

ಇರುವಿನರಿವು ಮೂಡಲು ಇನ್ನೆಷ್ಟು ಕಾಡಿ ಬೇಡಬೇಕೋ ತಿಳಿಯನು ನನ್ನ ದೊರೆಯೇ.

ನಿನ್ನಿರುವ ಮರೆತು ಮನ ತೋರಿದೊಡೆ ಓಡುವ ಬದುಕಿಗೆ ಅರ್ಥವಿದೆಯಾ ಗುರುವೇ
ತೋರುವರ್ಯಾರೋ ಸರಿ ದಾರಿಯ ಮಂಕನಂತೆ ತಿರುಗಿ ಬಸವಳಿದೆ ಪ್ರಭುವೇ.

ಯೋಗ್ಯನಲ್ಲ ನಾನು ನಿನ್ನ ಪ್ರೀತಿ ಗಳಿಸಲು ಸೋತು ಸುಣ್ಣವಾಗಿ ಅಸಹಾಯಾಕನಾದೆನೋ 
ಬೇಡಲು ಮನ ಒಪ್ಪದು ಮಾಡಿದಾ ಕರ್ಮವದು ಬಲು ಕಾಡುತಿಹದೋ ದೊರೆಯೇ.

ನಿನ್ನೆದುರು ನಿಂತು ಬೇಡಲಾರದೆ ಅನ್ಯರಿಗೆ ಶರಣಾಗಿ ಅಂಗಲಾಚಿದೆ ನಿನ್ನ ಕರುಣೆಗಾಗಿ
ಕಾರುಣ್ಯಸಿಂದು ಎಂದು ಬಿರುದು ಹೊತ್ತವ ನೀನು ಪಾಮರನ ಕೂಗು ಆಲಿಸದಾದೆಯಾ.

ಸಹಜ ಬದುಕು ಬಳಲಾರದೆ ಬಣ್ಣ ಬಳಿದು ವೇಷ ಧರಿಸಿ ನಿಂತರೆ ಅರಿಯಲಾರೆಯಾ
ಎಲ್ಲದಕೂ ಕ್ಷಮೆ ಇರಲಿ ಮುನಿಸು ತೋರಬೇಡ ನನ್ನ
ಸಖರಾಯಪುರದ ಮಹಾದೇವನೇ.

ನಂಬಿಹೆ ನಿನ್ನನು ಗುರುದೇವ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

 ನಂಬಿಹೆ ನಿನ್ನನು ಗುರುದೇವ ಎನ್ನ ಜೊತೆಯಲಿ ಸಾಗೋ  ಮಹಾದೇವ

ಶರಣೆಂಬಗೆ ಮತಿಯನೀಡಿ ಸರಿ ದಾರಿ ತೋರೋ ನಮ್ಮೊಲುಮೆಯ ಗುರುದೇವ.

ಮನಸೆಂಬ ಕುದುರೆಯ ಏರಿ ಕಂಡಲ್ಲಿ ಸಾಗುತ ದಾರಿ ಮೂಡನಾದೆ ಗುರುವೇ
ನನ್ನದಲ್ಲದ ಬಾಳ ಬದುಕಿ  ಎಲ್ಲಾ ಅರಿವಿದೆಯೆಂಬ ಬ್ರಮೆಯೊಳು ಬಿದ್ದೆನು ದೊರೆಯೇ.

ನೀನಿಲ್ಲದ ಕ್ಷಣವ ಒಂದಿನಿತೂ ಊಹಿಸಲಾರೆ ಬಂಡ ಬದುಕು ಸಾಕಾಗಿದೆ ಪ್ರಭುವೇ
ನಿನ್ನ ನೆರಳಲಿ ಒಂದಾಗದಿದ್ದರೂ ಬೇಡ ನಿನ್ನ ಪಾದ ದೂಳಿಯ ಮಾಡೋ ಗುರುವೇ.

ನನ್ನಿಷ್ಟದ ಬದುಕು ಬೇಡ ನೀ ನೀಡುವ ಕರುಣೆಯ ಬದುಕು ಬೇಡುವೆ ದೊರೆಯೇ
ಶುದ್ಧ ಭಾವವ ನೀಡಿ ಒಳ ಹೊರಗೂ ಬೇಧವಿಲ್ಲದ ಮನವ ನೀಡೋ ಗುರುವೇ.

ಅರಿವಿದೆ ನನಗೆ ನನ್ನ ಕೂಗು ಬರೀ ಕಪಟ ಮನದ ಮಲಿನ ಭಾವವೆಂದು
ನಿನ್ನ ಮೊರೆ ಹೋಗುವ ವಿವಿಧ ಪರಿಯ ಕಂಡು ಮುನಿಸು ಬೇಡ ಸಖಾರಾಯ ಪ್ರಭುವೇ.

ನಿಲ್ಲಿಸಲಾರೆ ಎನ್ನ ಮನವ ನಿನ್ನ ನಾಮ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

 ನಿಲ್ಲಿಸಲಾರೆ ಎನ್ನ ಮನವ ನಿನ್ನ ನಾಮ ನೆನೆದರೂ ಹಳಿ ತಪ್ಪಿದ ಬಂಡಿಯಂತೆ ಓಡುತಿಹದೋ 

ಕರ್ಮದ ಸುಳಿಯೊಳು ಸಿಲುಕಿ ನಲುಗಿ ನಲುಗಿ ಕೂಗುತಿಹದೋ ನನ್ನ ಗುರುವೇ.

ಮನವು ಹಿoಡಿ ಹಿಪ್ಪೆಯಾಗಿದೆ ಮುದುಡಿ ಮರುಗಿ ನಿನ್ನ  ಕೂಗುತಿದೆ ಕರುಣೆಗಾಗಿ
ಕಾಣದವನಂತೆ ನಟಿಸಿ ನಗುತ ನಿಂತು ಆಟ ನೋಡಬೇಡವೋ ಕೂಗುತಿಹೆ ಬದುಕಿಗಾಗಿ.

ಕಾಡಿ ಬೇಡಿಹುದೆಲ್ಲ ನೀಡಿ ಅಹಂ ಒಡಗೂಡಿ ನನ್ನ ಬದುಕಿನ ಆಟ ನೋಡಿದೆಯಾ
ಅಡಿಗಡಿಗೂ ಎಚ್ಚರಿಕೆ ನೀಡುತ ಜೊತೆ ಜೊತೆಗೂ ನಡೆಯುತ ಬದುಕು ಕಲಿಸುವೆಯಾ.

ಯಾರಿಗೂ ಆಪ್ತನಾಗಲಿಲ್ಲ  ಎಲ್ಲೂ ಸಲ್ಲಲಿಲ್ಲ ನಾನು ಎಂದೂ ನನ್ನ ಕೈ ಬಿಡಬೇಡವೋ
ಎಲ್ಲವೂ ಶಿರದಿಂದ ಎಂದೆ  ಇನ್ಯಾಕೆ ತಡಮಾಡಲಿ ಶಿರವಿಟ್ಟು ಬೇಡುವೆ ಸಖರಾಯ ಪ್ರಭುವೇ.