ಒಟ್ಟು ನೋಟಗಳು

Thursday, December 13, 2018

ಗುರುನಾಥ ಗಾನಾಮೃತ 
ಕುಳಿತಿಹರು ಗುರುವರರು ಮರದ ನೆರಳಲಿ ಮಂದ ಹಾಸ ಬೀರುತ ಹರಸುತ
ರಚನೆ: ಆನಂದರಾಮ್, ಶೃಂಗೇರಿ  


ಕುಳಿತಿಹರು ಗುರುವರರು ಮರದ ನೆರಳಲಿ ಮಂದ ಹಾಸ ಬೀರುತ ಹರಸುತ
ಬಂದ ಬಕುತರ ಬವಣೆ ತೀರಿಸುತ ಮಹಾದೇವನೇ ತಾನಾಗಿ ತೋರುತ|

ನೀಡುವ ಅಭಯದೊಳು ಪ್ರೀತಿ ತುಂಬಿ ಮನವ ತುಂಬುವರು
ಜೊತೆ ನಾನಿರುವೆ ಸತ್ಯದ ಹಾದಿಯಲಿ  ನಡೆದು ಬದುಕೆನ್ನುವರು|

ಬಕುತಿಯಲಿ ಆಡಂಬರ ಮಾಡದೆ ನಡೆದರೆ ನಿನ್ನ  ಒಪ್ಪುವರು
ನಾನು ಎಂಬುದ ಮರೆತು ಬಜಿಸುತಿರೆ ನಿನ್ನ ಸಂಗಡ ಗುರು ಇರುವರು|

ನಿನ್ನ ಬಕುತಿಯ ರೀತಿ ತಿಳಿಯಲು  ನಿನ್ನ ಮನ ಹೊಕ್ಕು ನೋಡುವರು
ಕಂಡೂ ಕಾಣದಂತಿದ್ದು ನೀ ಎಡವದಂತೆ ಜೊತೆ ಇದ್ದು ಕಾಯುವರು|

ಎಲ್ಲರಲೂ ನೀ ಗುರು ಕಂಡಾಗ ನಿನ್ನ0ತರಂಗದ ಕದವ ತೆರೆವರು
ನಿನ್ನೆಲ್ಲಾ ಸಾಧನೆ ಅವನದು ಎಂದು ಅರ್ಪಿಸಲು ನಿನ್ನ ಉದ್ದರಿಸುವರು|

Monday, December 10, 2018

ಗುರುನಾಥ ಗಾನಾಮೃತ 
ಎಲ್ಲರೂ ನೋಡಲಿ ಎಂದು ಭಕ್ತಿ ತೋರುವುದಿಲ್ಲಾ ನಾನು
ರಚನೆ: ಆನಂದರಾಮ್, ಶೃಂಗೇರಿ  


ಎಲ್ಲರೂ ನೋಡಲಿ ಎಂದು ಭಕ್ತಿ ತೋರುವುದಿಲ್ಲಾ ನಾನು
ನೀನು ಅರಿತರೆ ಸಾಕು ಗುರುವೇ ಅನ್ಯರ ಗೊಡವೆ ಬೇಡ ಎನ್ನುವೆನು|

ಮೌನದಲಿ ಹೃದಯದಲಿ ಹಂಬಲಿಸುತ  ನಿನ್ನನೇ ಕೂಗುವೆನು
ದಯೆ ತೋರಿ ಹರಸು ಗುರುದೇವ ಬೇಡೆನು ಬೇರೆ ಇನ್ನೇನು|

ಬೇಡುವ ಪರಿಯಲಿ ಬೇರೆ ದಾರಿಯನು ನಾ ಕಾಣದಾದೆನು
ಬಾರವಾದ ಮನಹೊತ್ತು ಎದೆಯಾಳದಿ ಬಯಕೆ ತುಂಬಿ ಬಂದು ನಿಂತಿಹೆನು|

ಎಲ್ಲರನು ಹರಸುವ ನೀನು ಎನ್ನನೇತಕೆ ದೂರ ನಿಲ್ಲಿಸಿ ಮೌನವಾದೆ 
ಭಕುತಿ ತೋರಲು ಬಾರದೇ ಪಾಮರನಂತೆ  ನಿನ್ನ ಪದ ತಳದಿ ನಿಂತಿಹೆನು|

ಲಾಕಿಕದ  ಲೋಕದಲಿ ಆಸೆಮೀರಿ ಬದುಕ ನಡೆಸುವ ಹಾದಿ  ತೋರು
ಎನ್ನ ನಂಬಿರುವ ಜೀವಗಳ ಬಯಕೆ ತೀರಿಸಿ ಎನ್ನನು ಮುಕ್ತ ಮಾಡು|

Thursday, December 6, 2018

ಗುರುನಾಥ ಗಾನಾಮೃತ 
ಎಂದು ದಯಮಾಡುವೆಯೋ ಗುರುವೇ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಎಂದು ದಯಮಾಡುವೆಯೋ ಗುರುವೇ 
ಎಂದು ದಯೆತೋರುವೆಯೋ ||

ನೀನಿಲ್ಲಿ ಬರುವ ದಿನವೇ ಸುದಿನ
ಸ್ಮರಿಸುವೆ ಅದನು ನಾ ಅನುದಿನ |
ನೀ ನೆಡೆದಾಡುವ ನೆಲವೇ ಪಾವನ 
ಆ ಪದಧೂಳಿಯ ಮಾಡುವೆ ನಾ ಜತನ || ೧ ||

ನೀನಾಡುವ ಮಾತೇ ಸುಧಾಸಿಂಚನ 
ನೆನೆಯುತ ಸಂತಸಗೊಂಡಿದೆ ಈ ಮನ |
ನೀನೀಡುವ ಕೈ ತುತ್ತೇ ಚೈತನ್ಯಭಿಕ್ಷೆ
ಅದರಲಿ ತುಂಬಿದೆ ಜೀವನ ರಕ್ಷೆ || ೨ ||
ಗುರುನಾಥ ಗಾನಾಮೃತ 
ನಾದವಿರದ ಕೊಳಲು ನಾವು 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ನಾದವಿರದ ಕೊಳಲು ನಾವು
ನಿಮ್ಮನೇ ನಂಬಿಹ ಕೊರಳು ನಾವು |
ಭಕ್ತಿಸುಧೆ ಹೊಮ್ಮಿಸೋ ಈ ಕೊರಳಲಿ
ಗಾನಾಮೃತ ಹರಿಸೋ ಈ ಕೊಳಲಲಿ ||

ನಿನ್ನ ನಾಮಸ್ಮರಣೆಯಾ ಉಸಿರಲಿ
ನುಡಿಸಿರಿಯಾ ತಾಳದಲಿ |
ಆತ್ಮಾನಂದದ ಭಾವದಲಿ
ಸತ್ಕೀರ್ತನೆಯ ನುಡಿಸಿರಿ ಗುರುದೇವ || ೧ ||

ನಿರ್ಮಲಭಕ್ತಿಯಾ ಅಲೆಯಲಿ
ನಿನ್ನ ಪದಸೇವೆಯಾ ಸ್ತುತಿಯಲಿ |
ಚೈತನ್ಯಪ್ರಭೆಯ ಅನುಭಾವದಲಿ 
ಗಾನಾಮೃತವ ನುಡಿಸಿರಿ ಗುರುದೇವ || ೨ ||

ಆತ್ಮನಿವೇದನೆಯ ರಾಗದಲಿ
ಭಕ್ತಿಭಾವದ ಆಲಾಪದಲಿ |
ನಾದಶುದ್ಧಿಯಾ ಝೇಂಕಾರದಲಿ
ಸತ್ಕೀರ್ತನೆಯಾ ಸದಾ ನುಡಿಸಿರಿ ಗುರುದೇವ ||  ೩ ||
ಗುರುನಾಥ ಗಾನಾಮೃತ 
ಗುರುವ ಹೊರಗೆ ಅರಸುವರೇಕಯ್ಯಾ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಗುರುವ ಹೊರಗೆ ಅರಸುವರೇಕಯ್ಯಾ 
ಸದ್ಗುರುವ ಹೊರಗೆ ಅರಸುವುದೇಕಯ್ಯಾ ||

ಹೃದಯದಲಿ ಗುರುವೇ ಇರುವ
ಅವನೆಲ್ಲ ನೋಡುತಿರುವ |
ಮಾಡುವ ಕರ್ಮಗಳ ತೂಗುತಿರುವ
ಅದರ ಫಲಗಳನಿಲ್ಲೇ ನೀಡುತಿರುವ || ೧ ||

ಮಾತಿನಲ್ಲಿ ಗುರುವೇ ಇರುವ
ಕೈಯ ಹಿಡಿದು ನಡೆಸುತಿರುವ |
ಜ್ಞಾನಾಮೃತವ ಉಣಿಸುತಿರುವ 
ಕಾಲಕಾಲಕೆಲ್ಲ ಒದಗಿಸುತಲಿರುವ || ೨ ||

ಚಿತ್ತದಲಿ ಗುರುವೇ ನೆಲೆಸಿರುವ
ನಾಮಸ್ಮರಣೆಯ ಮಾಡಿಸುತಿರುವ |
ಭಕ್ತಿಗಂಗೆಯಲಿ ಮೀಯಿಸುತಿರುವ 
ಸಾಯುಜ್ಯಪದವಿಯ ತೋರಿಸುತಿರುವ || ೩ ||