ಬೆಳಕಾಗಿ ಜಗಕೆ ದಾರಿ ತೋರಿಹೆ ನೀನು ಗುರಿ ತೋರಿದರೆ ದಡ ಸೇರುವೆನು ನಾನು
ತಾಮಸಿಕನಾಗಿ ಅಲೆಮಾರಿಯಾಗಿ ಅಂಧನಂತೆ ಗುರುವೇ ಕೂಗುತಿಹೆನು ನಾನು|
ಶುದ್ಧವಿಲ್ಲವೋ ಎನ್ನ ಅಂತರಂಗ ಬಿಡದಾದೆನೋ ಬಾಹ್ಯ ಕ್ಷಣಿಕ ಬದುಕಿನ ಸುಖದ ಸಂಗವು
ಮರುಕಳಿಸಿ ಮಾಡಿದಾ ಕರ್ಮಗಳ ನೆನಪು ಭಯದಿ ನಿನ್ನ ಆಸರೆಯ ಬೇಡಿ ಬಂದಿದೆ ಮನವು|
ಇಲ್ಲೂ ಸಲ್ಲದೆ ಅಲ್ಲೂ ಸಲ್ಲದೆ ಮತಿಹೀನನಾಗಿ ಮಾತು ಬರದ ಮುಖನಾದೇನೋ
ಎನ್ನ ಮನವ ಅರಿವ ಗುರದೇವ ನಿನ್ನ ದರುಶನಕೆ ಮುಂದೆ ನಿಲ್ಲಲಾರದೆ ಅವಿತಿಹೆನೋ|
ಬದುಕು ಮೂರು ದಿನವು ಅರಿವಿದ್ದರೂ ಭ್ರಮೆಯಿಂದ ದೂರವಿರದು ಈ ನನ್ನ ಮನವು
ಅಲ್ಪನಲ್ಲವೇ ನಾನು ತಿಳಿಯದೇ ನಾ ನಡೆಸುವ ಬಾಳು ಕರುಣೆ ತೋರೆಯಾ ನೀ ಗುರುವು|
ನಿನ್ನನೇ ಸೇವಿಸುವ ನಿಜ ಬಕುತರ ನುಡಿಯ ಆಲಿಸಿ ನಿನ್ನ ಕಾಣ ಬಯಸಿತು ಜೀವವು
ಸಖರಾಯಪುರದ ದೇವನೇ ನಿನ್ನ ಹೊರತು ಇನ್ನ್ಯಾರು ಸಲಹುವರು ಎಂದಿತು ನನ್ನ ಮನವು|
No comments:
Post a Comment