ಹತ್ತಿಕ್ಕುವ ಹಂಬಲದಲಿ ಮನವ ಹುಡುಕಿ ಹೊರಟೆ ನೆನೆಯುತ ಗುರುವೇ ನಿನ್ನ ನಾನು
ಬಾಹ್ಯ ಬದುಕಿನ ವಾಸನೆಯೊಳು ಹುದುಗಿ ಹೋದ ಮನವ ಹೇಗೆ ಹುಡುಕಲಿ ನಾನು|
ಬುದ್ಧಿಯ ಅರಿವಿಗೆ ಬರುವ ಮೊದಲೇ ಮನ ತನ್ನಾಟವ ತೋರುತಿಹದೋ ಪ್ರಭುವೇ
ಮಾಯೆಯ ಮುಸುಕೊಳು ಎಲ್ಲಾ ಸೇರಿಹುದೋ ಸರಿ ತಪ್ಪಿನ ಅರಿವಾಗಲಿಲ್ಲ ದೊರೆಯೇ|
ಇಡುವ ಹೆಜ್ಜೆ ತಪ್ಪೆನಿಸುತಿದೆ ಬುದ್ದಿಗೆ ಕೇಳದಾಗಿದೆ ಮನವು ಹಿಂದಡಿಯಿಡಲು ಗುರುವೇ
ಅಲ್ಪ ಸುಖದ ಅನಂದಕೆ ಹಾತೊರೆಯುವ ಮನವು ನಾಳಿನ ಕರ್ಮದ ಫಲ ತಿಳಿಯದೇ|
ನಿನ್ನನೇ ಭಯದಿ ಕೇಳಲು ಮನವು ಇನ್ನೆಷ್ಟು ದಿವಸ ಕಾಯಿಸುವೆ ಸೋತಿದೆ ಜೀವವು
ನಿನ್ನವನಲ್ಲದಿರೆ ನಿನ್ನನೇ ನೆನೆವ ಭಜಿಸುವ ಮನವೇಕೆ ನೀಡಿದೆ ನನ್ನ ದೊರೆಯೇ|
ನೀನಿರುವ ಬೃಂದಾವನದ ದರುಶನಕೆ ಓಡೋಡಿ ಬಂದೆ ಬಳಲಿಹಾ ಮನಕೆ ಆನಂದ ನೀಡೋ
ಸಖರಾಯಪುರದ ಒಡೆಯ ಗುರುನಾಥ ನೀನೆನುತ ಹಂಬಲದಿ ಬೇಡಿಹೆನು ಕರುಣೆಯಾ ತೋರೋ|
No comments:
Post a Comment