ಒಟ್ಟು ನೋಟಗಳು

Wednesday, July 24, 2024

ನನ್ನೊಳಗಿಹ ನಿನ್ನ ಅರಿಯದೇ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

 ನನ್ನೊಳಗಿಹ ನಿನ್ನ ಅರಿಯದೇ ಮರುಳನಂತೆ ಇನ್ನೆಲ್ಲೋ ಹುಡುಕುತಿಹೆನೋ ಗುರುವೇ

ಇರುವಿನರಿವು ಮೂಡಲು ಇನ್ನೆಷ್ಟು ಕಾಡಿ ಬೇಡಬೇಕೋ ತಿಳಿಯನು ನನ್ನ ದೊರೆಯೇ.

ನಿನ್ನಿರುವ ಮರೆತು ಮನ ತೋರಿದೊಡೆ ಓಡುವ ಬದುಕಿಗೆ ಅರ್ಥವಿದೆಯಾ ಗುರುವೇ
ತೋರುವರ್ಯಾರೋ ಸರಿ ದಾರಿಯ ಮಂಕನಂತೆ ತಿರುಗಿ ಬಸವಳಿದೆ ಪ್ರಭುವೇ.

ಯೋಗ್ಯನಲ್ಲ ನಾನು ನಿನ್ನ ಪ್ರೀತಿ ಗಳಿಸಲು ಸೋತು ಸುಣ್ಣವಾಗಿ ಅಸಹಾಯಾಕನಾದೆನೋ 
ಬೇಡಲು ಮನ ಒಪ್ಪದು ಮಾಡಿದಾ ಕರ್ಮವದು ಬಲು ಕಾಡುತಿಹದೋ ದೊರೆಯೇ.

ನಿನ್ನೆದುರು ನಿಂತು ಬೇಡಲಾರದೆ ಅನ್ಯರಿಗೆ ಶರಣಾಗಿ ಅಂಗಲಾಚಿದೆ ನಿನ್ನ ಕರುಣೆಗಾಗಿ
ಕಾರುಣ್ಯಸಿಂದು ಎಂದು ಬಿರುದು ಹೊತ್ತವ ನೀನು ಪಾಮರನ ಕೂಗು ಆಲಿಸದಾದೆಯಾ.

ಸಹಜ ಬದುಕು ಬಳಲಾರದೆ ಬಣ್ಣ ಬಳಿದು ವೇಷ ಧರಿಸಿ ನಿಂತರೆ ಅರಿಯಲಾರೆಯಾ
ಎಲ್ಲದಕೂ ಕ್ಷಮೆ ಇರಲಿ ಮುನಿಸು ತೋರಬೇಡ ನನ್ನ
ಸಖರಾಯಪುರದ ಮಹಾದೇವನೇ.

ನಂಬಿಹೆ ನಿನ್ನನು ಗುರುದೇವ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

 ನಂಬಿಹೆ ನಿನ್ನನು ಗುರುದೇವ ಎನ್ನ ಜೊತೆಯಲಿ ಸಾಗೋ  ಮಹಾದೇವ

ಶರಣೆಂಬಗೆ ಮತಿಯನೀಡಿ ಸರಿ ದಾರಿ ತೋರೋ ನಮ್ಮೊಲುಮೆಯ ಗುರುದೇವ.

ಮನಸೆಂಬ ಕುದುರೆಯ ಏರಿ ಕಂಡಲ್ಲಿ ಸಾಗುತ ದಾರಿ ಮೂಡನಾದೆ ಗುರುವೇ
ನನ್ನದಲ್ಲದ ಬಾಳ ಬದುಕಿ  ಎಲ್ಲಾ ಅರಿವಿದೆಯೆಂಬ ಬ್ರಮೆಯೊಳು ಬಿದ್ದೆನು ದೊರೆಯೇ.

ನೀನಿಲ್ಲದ ಕ್ಷಣವ ಒಂದಿನಿತೂ ಊಹಿಸಲಾರೆ ಬಂಡ ಬದುಕು ಸಾಕಾಗಿದೆ ಪ್ರಭುವೇ
ನಿನ್ನ ನೆರಳಲಿ ಒಂದಾಗದಿದ್ದರೂ ಬೇಡ ನಿನ್ನ ಪಾದ ದೂಳಿಯ ಮಾಡೋ ಗುರುವೇ.

ನನ್ನಿಷ್ಟದ ಬದುಕು ಬೇಡ ನೀ ನೀಡುವ ಕರುಣೆಯ ಬದುಕು ಬೇಡುವೆ ದೊರೆಯೇ
ಶುದ್ಧ ಭಾವವ ನೀಡಿ ಒಳ ಹೊರಗೂ ಬೇಧವಿಲ್ಲದ ಮನವ ನೀಡೋ ಗುರುವೇ.

ಅರಿವಿದೆ ನನಗೆ ನನ್ನ ಕೂಗು ಬರೀ ಕಪಟ ಮನದ ಮಲಿನ ಭಾವವೆಂದು
ನಿನ್ನ ಮೊರೆ ಹೋಗುವ ವಿವಿಧ ಪರಿಯ ಕಂಡು ಮುನಿಸು ಬೇಡ ಸಖಾರಾಯ ಪ್ರಭುವೇ.

ನಿಲ್ಲಿಸಲಾರೆ ಎನ್ನ ಮನವ ನಿನ್ನ ನಾಮ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

 ನಿಲ್ಲಿಸಲಾರೆ ಎನ್ನ ಮನವ ನಿನ್ನ ನಾಮ ನೆನೆದರೂ ಹಳಿ ತಪ್ಪಿದ ಬಂಡಿಯಂತೆ ಓಡುತಿಹದೋ 

ಕರ್ಮದ ಸುಳಿಯೊಳು ಸಿಲುಕಿ ನಲುಗಿ ನಲುಗಿ ಕೂಗುತಿಹದೋ ನನ್ನ ಗುರುವೇ.

ಮನವು ಹಿoಡಿ ಹಿಪ್ಪೆಯಾಗಿದೆ ಮುದುಡಿ ಮರುಗಿ ನಿನ್ನ  ಕೂಗುತಿದೆ ಕರುಣೆಗಾಗಿ
ಕಾಣದವನಂತೆ ನಟಿಸಿ ನಗುತ ನಿಂತು ಆಟ ನೋಡಬೇಡವೋ ಕೂಗುತಿಹೆ ಬದುಕಿಗಾಗಿ.

ಕಾಡಿ ಬೇಡಿಹುದೆಲ್ಲ ನೀಡಿ ಅಹಂ ಒಡಗೂಡಿ ನನ್ನ ಬದುಕಿನ ಆಟ ನೋಡಿದೆಯಾ
ಅಡಿಗಡಿಗೂ ಎಚ್ಚರಿಕೆ ನೀಡುತ ಜೊತೆ ಜೊತೆಗೂ ನಡೆಯುತ ಬದುಕು ಕಲಿಸುವೆಯಾ.

ಯಾರಿಗೂ ಆಪ್ತನಾಗಲಿಲ್ಲ  ಎಲ್ಲೂ ಸಲ್ಲಲಿಲ್ಲ ನಾನು ಎಂದೂ ನನ್ನ ಕೈ ಬಿಡಬೇಡವೋ
ಎಲ್ಲವೂ ಶಿರದಿಂದ ಎಂದೆ  ಇನ್ಯಾಕೆ ತಡಮಾಡಲಿ ಶಿರವಿಟ್ಟು ಬೇಡುವೆ ಸಖರಾಯ ಪ್ರಭುವೇ.

Tuesday, April 16, 2024

ಭಕ್ತನೆಂಬ ಬಿರುದು ಬೇಡವೋ ನನಗೆ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಭಕ್ತನೆಂಬ ಬಿರುದು ಬೇಡವೋ ನನಗೆ ನಾ ನಿನ್ನ ಬಕುತನಲ್ಲವೋ  ಗುರುವೇ
ಭವ ಬಂಧನದಿಂದ ಮುಕುತಿ ಬೇಡುವ ತಿರುಕ ನಾನು ಏನ್ನ ಕೈ ಬಿಡ ಬೇಡವೋ.

ಅಳೆದೂ ಸುರಿದು ಗುಣಿಸಿ ಎಣಿಸಿ ಬರೀ ಬಂಡ ಬದುಕು ನಡೆಸಿ ಸೋತಿತು ಜೀವವು
ಸೋಗು ದರಿಸಿ ಬೇಧ ಎಣಿಸಿ ದಿನವ ದೂಡಿ ಸಾಕು ಸಾಕಾಗಿ ಕೊರಗಿತು ಜೀವವು.

ಇನ್ನು ಸಾಕು ನಿನ್ನ ಲೀಲೆ ಕರುಣೆ ಬಾರದೇ ಗುರುವೇ ಎನ್ನ ಮೇಲೆ ಕಾದು ದಣಿವಾಗಿದೆ
ಮುoದೆ  ಇನ್ನೂ ಕಾಯಿಸಬೇಡ ಓರೆಗೆ ಹಚ್ಚಿ ನೋಡಬೇಡ ಒಮ್ಮೆ ಹರಸ ಬಾರದೆ.

ಕಪ್ಪು ಚುಕ್ಕಿ ಎನ್ನ ಬದುಕು ಒಮ್ಮೆ ಅಳಿಸಿ ಶುದ್ಧಗೊಳಿಸಿ ನಡೆಸಬಾರದೇ
ನಿನ್ನ ಒಂದು ನೋಟಕಾಗಿ ಕಾದು ಕುಳಿತು ಜೀವ ಬಳಲಿದೆ ಓರೆ ನೋಟ ಬೀರ ಬಾರದೇ.

ನಿನ್ನ ಕೃಪೆಗೆ ಭಕುತಿ ಎಷ್ಟು ಬೇಕೋ ನಿನ್ನ ಪಡೆಯಲು ಇನ್ನೆಷ್ಟು ಸಾಧಿಸ ಬೇಕೋ ಅರಿಯಾದಾಗಿದೆ
ಪಾಮರನು ನಾನು ತೊದಲುತಿಹೆನು ಸಖರಾಯಪುರದ ಮಹಾದೇವ ನೀನು ಹರಸಬಾರದೇ.

Wednesday, January 3, 2024

ಎಲ್ಲೂ ಸಲ್ಲದವನು ಎಲ್ಲಿಯಾದರೂ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಎಲ್ಲೂ ಸಲ್ಲದವನು ಎಲ್ಲಿಯಾದರೂ ಸಲ್ಲುವನೆನುತ ಎಲ್ಲೆಲ್ಲೋ ಹುಡುಕಿ ಹೊರಟೆನು 
ಬಳಲಿ ಬೆಂಡಾಗಿ ದಾರಿ ಸಾಗದಾಗಿ ಉಸಿರು ಚೆಲ್ಲುತ ದಾರಿ ಕಾಣದೇ ಕುಳಿತೆನೋ.

ಏನಿದು ಬದುಕಿನ ಮರ್ಮ ತಿಳಿಯದೆ ಚಡಪಡಿಸಿ ಕೈ ಚೆಲ್ಲಿ ಕುಳಿತೆನೋ
ಯಾರ ಸಂಗಮಾಡಲಿ ಹೇಗೆ ವಿಷಯ ಅರಿಯಲಿ ಅರ್ಥವಾಗದೆ ಗಲಿಬಿಲಿಯಾದೆನೋ.

ವೇಷಧರಿಸಿ ನಾಮಧರಿಸಿ ಅಡಂಬರದಿ ಮೆರೆದು ಸೋತು ನಿಂತೆನೋ
ನಿನ್ನ ಇರುವ ಅರಿಯದೇ ವ್ಯರ್ಥ ಬದುಕು ನಡೆಸಿ ಸಮಯ ಕಳೆದೆನೋ.

ನಿಜ ಬಕುತರ ಸಂಗ ಗಳಿಸದೆ ಬರೀ ಅಂತೆಕಂತೆಗಳ ಸಂತೆಯಲಿ ಕಳೆದು ಹೋದೆನೋ
ನಿನ್ನ ತತ್ವ ಅರಿಯದೇ ಬದುಕಿನರ್ಥ ತಿಳಿಯದೇ  ಅಲ್ಪಮತಿಯಾದೆನೋ.

ನಾನೇನು ನಿನ್ನ ಸೇವಕನೇ ಮೆಚ್ಚಿನ ಶಿಷ್ಯನೇ ನನ್ನ ಹರಸೆಂದು ಬೇಡಲು
 ಸಖರಾಯಪುರದ ಮಹಾದೇವನು ನೀನೇ ಬೇಕಲ್ಲವೇ ಇದಕುತ್ತರ ಹೇಳಲು.

Tuesday, January 2, 2024

ಬೇಡಿ ಬೇಡಿ ಸಾಕಾಯ್ತು ಪದಗಳಲಿ ಗುರುವೇ - ಕೃಪೆ :ಶ್ರೀ. ಆನಂದ ರಾಮ್, ಶೃಂಗೇರಿ

ಬೇಡಿ ಬೇಡಿ ಸಾಕಾಯ್ತು ಪದಗಳಲಿ ಗುರುವೇ ಕರುಣೆ ಬಾರದೇ ಇನ್ನೂ
ಮೌನ ಧರಿಸಿ ಬೇಡುವ ಪರಿ ಅರಿತಿಲ್ಲ ನಾನು ಮಲಿನ ಭಾವ ಕಳೆಚಿಲ್ಲ ಇನ್ನೂ.

ಯಾರೋ ಭಜಿಸಿದರೆಂದು ನಿನ್ನ ಬೇಡುವರೆಂದು ನಾನೂ ಬೇಡ ಹೊರಟೆನೋ
ಭಾವ ಅರಿಯದೇ ಭಕ್ತಿ ಬೆರಸದೇ ತೋರಿಕೆಯ ಭಕುತಿ ತೋರುತಿಹೆನೋ.

ಬೇಡಿದೊಡೆ ಕೊಡಲಿಲ್ಲ ನೀನೆಂದು ಭಕುತಿ ಬದಲಾಗಿ ಸುಮ್ಮನೆ ಕಾಲ ಕಳೆದೆನೋ
ಕರ್ಮ ಕಳೆಯದೆ ದಾರಿ ತೋರದು ಅರಿವಿದ್ದರೂ ಮೂರ್ಕನಂತೆ ಕೂಗುತಿಹೆನೋ.

ಎಲ್ಲೆಲ್ಲೋ ಹುಡುಕುತಿಹ ಈ ಮನಕೆ ನಿನ್ನ ಇರುವಿಕೆಯ ಅರಿವು ಬೇಕಾಗಿದೆ
ಬಾವ ಶುದ್ದಿ ಇಲ್ಲದ ಈ ಮನಕೆ ನಿನ್ನ ದರುಶನ ಬಾಗ್ಯ ಸಿಗಬೇಕಾಗಿದೆ ಗುರುವೇ.

ಸಾಕೆನ್ನುವ ಮೊದಲೇ ಸಾರ್ಥಕಗೊಳಿಸು ಬದುಕನ್ನು ಬೇಡುವೆನು ಪ್ರಭವೇ
ನಿರರ್ಥಕ ಬದುಕು ಸಾಕು ಮಾಡು ನಿಜವ ತಿಳಿಸಿ ಹರಸೆನ್ನ  ಸಖರಾಯಪ್ರಭುವೇ.