ಒಟ್ಟು ನೋಟಗಳು

Wednesday, November 28, 2018

ಗುರುನಾಥ ಗಾನಾಮೃತ 
ಎಲ್ಲಾ ಅರಿತಿರುವ ನಿನ್ನನು ನಾ ಬೇಡುವುದೆಂತೋ
ರಚನೆ: ಆನಂದರಾಮ್, ಶೃಂಗೇರಿ  


ಎಲ್ಲಾ ಅರಿತಿರುವ ನಿನ್ನನು ನಾ ಬೇಡುವುದೆಂತೋ
ನಿನ್ನರಿವಿಗೆ ಬಾರದೆ ನಾ ಬದುಕು ನಡೆಸುವುದೆಂತೋ|

ಕಪಟ ತುಂಬಿದ ಮನವಿದು ಹಿಡಿತಕೇ ಬಾರದೆ ಓಡುವುದೋ
ನಿನ್ನ ನೆನೆದಾಗ ಮಾಡಿದ ತಪ್ಪಿನ ಅರಿವಾಗಿ ಮರುಗುವುದೋ|

ಎನ್ನ ಮನ್ನಿಸೆಂದು ಎಷ್ಟು ಸಾರಿ ಕೂಗಿ ಬೇಡುವುದೋ ಅರಿಯಲಾರೆ
ನೀ ಕರುಣದಿ ಮನ್ನಿಸಿದರೂ ಸ್ವಾರ್ಥದ ಬೆನ್ನತ್ತಿ ಓಡದೆ ಇರಲಾರೆ|

ನಿನ್ನ ಅಂಗಳದಲಿ ನಿಂತ ಎನಗೆ ಮೇಲೂ ಕೀಳೆಂಬ ಭಾವವಿಲ್ಲಾ
ಅಂತರಾಳದಲಿ ತುಂಬಿದ ಬೇರೆ ಎಂಬ ಭಾವದಲಿ ನಾ  ಸೋತೆನಲ್ಲಾ|

ನಾನು ಎಂಬುದು ಎನ್ನ ಬಿಡದೆ ಕಾಡಿದೆಯಲ್ಲಾ ಗುರುವೇ
ಎಲ್ಲಾ ನೀನೆಂಬ ಭಾವ ಮನದಿ ತುಂಬಿ ಎನ್ನ ಹರಸು ಗುರುವೇ|

Wednesday, November 21, 2018

ಗುರುನಾಥ ಗಾನಾಮೃತ 
ಹೊರಟಿಹೆನು ನಾನು ಗಾಣಗಾಪುರವೆಂಬ ಭೂ ಕೈಲಾಸಕೆ 
ರಚನೆ: ಆನಂದರಾಮ್, ಶೃಂಗೇರಿ  


ಹೊರಟಿಹೆನು ನಾನು ಗಾಣಗಾಪುರವೆಂಬ ಭೂ ಕೈಲಾಸಕೆ
ಸಕರಾಯಧೀಶನ  ಅನುಮತಿ ಬೇಡಿ ಮುನ್ನಡೆದಿಹೆನು ಪುಣ್ಯ ಲೋಕಕೆ|

ಇಲ್ಲೇ ಬಾ ಎಂದಿಹನು ಹರಸುವನು ಕಳೆಯುವನು ಕರ್ಮವನು 
ಭವ  ಬಂಧನವ ಕಳೆವನು ಮುಕುತಿಯ ದಾರಿಯ ತೋರುವನು|

ಸುಲಭದಿ ದೊರೆವುದಿಲ್ಲಾ ಗುರುವಿನ ಕರುಣೆಯು ನೀ  ಅರಿಯೊ
ನೀಡಿಹನು ಸಕರಾಯಧೀಶನು ಒಂದವಕಾಶವನು ಮಹಾದೇವನು|

ಬರೀ ಬೇಡುವುದೊಂದೆ ಕಾಯಕವಲ್ಲಾ ನೀಡುತ  ಬದುಕೆಂದನು 
ದಿವ್ಯ ಗುರು ಸನ್ನಿಧಿಯಿದು ಮಲಿನ ಮನವ  ಹಸನು ಮಾಡಿ ಬದುಕೆಂದನು |
ಗುರುನಾಥ ಗಾನಾಮೃತ 
ಎಂದು ಬರುವೆ ಗುರುನಾಥ 
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಎಂದು ಬರುವೆ ಗುರುನಾಥ
ನಮ್ಮ ಮನೆಯ ಅಂಗಳದೊಳಗೆ |
ಎಂದು ನೆಲೆಸುವೆ ಗುರುನಾಥ
ನಮ್ಮ ಮನಸಿನ ಗುಡಿಯೊಳಗೆ ||

ಹೊರಗಣ್ಣ ಜ್ಯೋತಿಯಲಿ 
ಒಳಗಣ್ಣ ಕಾಂತಿಯಲಿ
ನೋಡುವೆನೊಮ್ಮೆ ನಿನ್ನ ದಿವ್ಯಮೂರ್ತಿಯ |
ಬಹಿರಂಗದ ಮಾತಿನಲಿ 
ಅಂತರಂಗದ ಮೌನದಲಿ
ಕಾಣುವೆನೊಮ್ಮೆ ನಿನ್ನ ಭವ್ಯಮೂರ್ತಿಯ || ೧ ||

ಸುಂದರ ಸಗುಣ ರೂಪದಲಿ
ನಿರಾಕಾರ ನಿರ್ಗುಣ ಸ್ವರೂಪದಲಿ
ದರ್ಶಿಪನೊಮ್ಮೆ ನಿನ್ನ ತೇಜೋಮೂರ್ತಿಯ |
ಅಂತರ್ಮುಖಿಯ ಸ್ತಬ್ಧತೆಯಲಿ
ಬಹಿರ್ಮುಖಿಯ ಚೇತನದಲಿ
ಕಾಣುವೆನೊಮ್ಮೆ ನನ್ನ ಜೀವದೊಡೆಯನಾ || ೨ ||

Friday, November 9, 2018

ಗುರುನಾಥ ಗಾನಾಮೃತ 
ಬಂದೆನೋ ಬೃಂದಾವನಕೆ ಸಕರಾಯಧೀಶನ ಆಸ್ಥಾನಕೆ 
ರಚನೆ: ಆನಂದರಾಮ್, ಶೃಂಗೇರಿ  


ಬಂದೆನೋ ಬೃಂದಾವನಕೆ  ಸಕರಾಯಧೀಶನ ಆಸ್ಥಾನಕೆ 
ಬಕುತರ ಅನುದಿನ ಸಲಹುವ ಮಹಾದೇವನ ಮನೆಯಂಗಳಕೆ|

ಮನವು ಕಂಡಿತು ಅನುಪಮ ಶಾಂತಿಯ ಅವನ ಸನಿಹ ಬಂದಾಗ
ಮೂಡಿತು ಮನದಿ ಮುದದ ಅನುಭವ  ಬೃಂದಾವನ
ಕಂಡಾಗ| 

ಹೊತ್ತು ಬಂದಾಗ ಬವಣೆಗಳ ಕಂತೆ ನಿರಾಳವಾಯಿತು ಗುರುವ ಕಂಡಾಗ
ಮುಸುಕಿದ  ಮಂಜು ಕರಗಿದಂತೆ ಮನದ ನೋವು ಅಳಿಸಿ ಹೋದಾಗ|

ಮಂತ್ರ ವೇದಗಳ  ಪಠಿಸದೆ ಒಲಿವನು ಗುರುವು ಮನ ಶುದ್ದಿಯಾದಾಗ
ಹರಸುವನು ಗುರುವು ಹೃದಯದಲಿ ಹಂಬಲದ ಭಕ್ತಿ ತೋರಿದಾಗ|

ಎಲ್ಲರೊಳು ಅವನ ಕಂಡಾಗ  ನಾನೆಂಬ ಬಾವ ಕರಗಿ ಹೋದಾಗ
ಅರಿವಿಲ್ಲದೆ ಬಕುತರ ಸಲಹುವನು ಕಷ್ಟ ಬಂದು ಮರುಗಿದಾಗ|
ಗುರುನಾಥ ಗಾನಾಮೃತ 
ಏನೂ ಅರಿಯದಾದೆನೋ ಗುರುವೇ ಏನೂ ತಿಳಿಯದಾದೆನೋ
ರಚನೆ: ಆನಂದರಾಮ್, ಶೃಂಗೇರಿ  


ಏನೂ ಅರಿಯದಾದೆನೋ ಗುರುವೇ ಏನೂ ತಿಳಿಯದಾದೆನೋ
ನಿನ್ನ ಬಜಿಸುವ ಪರಿ ತಿಳಿಯದಾದೆನೋ  ದಾರಿ ತೋರಿ ಹರಸು ಎನ್ನನು|

ಮನವ  ನಿಲ್ಲಿಸಿ ನಿನ್ನ ನೆನೆವ ರೀತಿ ಎನಗೆ ತಿಳಿಯದಾಯಿತೋ
ಕೂಗಿ ಕರೆವ ಬಕುತಿ ತೋರಿ ನಿನ್ನ ಬಜಿಸಲಾರೆನೋ ಗುರುವೇ|

ಆಡಂಬರದ ಬಕುತಿ ತೋರಲಾರೆನೋ ನಿಜ ಬಕುತಿಯ ಅರಿಯಲಾರೆನೋ
ಮಲಿನ ಮನವ ಶುದ್ದಿ ಮಾಡಿ ನಿನ್ನ ಬಜಿಸುವ ಶುದ್ದ ಮನವ ನೀಡಲಾರೆಯಾ|

ಕಾಮ ಮೋಹ ತುಂಬಿ ತನುವು ಮನವು ಹಳಸಿ ಹೋಗಿದೆ
ಕಪಟ ಕುಹುಕ ಬಾವ ತುಂಬಿ ಹೃದಯ ಬಲು ಬಾರವಾಗಿದೆ|

ಮಂದ ಮತಿಯು ನಾನು ಪೊಳ್ಳು ಮಾತುಗಳ ಆಡುತಿಹೆನೋ
ಪಾಮರನು ನಾನು ನಿತ್ಯ ಬದುಕ ಬವಣೆ ಮೀರಿ ನಿಲ್ಲಲಾರೆನೋ|

ಎಲ್ಲರ ಸಲಹುವ ಗುರುವೇ ನಮ್ಮ ಮಹಾದೇವ ನೀನಲ್ಲಾವೇನು|
ಸಕರಾಯಪುರದ ಅರಸನು ನೀನು ಕರುಣಿಸಿ ಹರಸು ಎನ್ನನು|

Sunday, November 4, 2018

ಗುರುನಾಥ ಗಾನಾಮೃತ 
ತುಸು ಸಾದಿಸಿದೆ ಎಂಬ ಹಂಬಿನಲಿ ನಿನ್ನ ನೆನೆವುದ ಮರೆತೆ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ತುಸು ಸಾದಿಸಿದೆ ಎಂಬ ಹಂಬಿನಲಿ ನಿನ್ನ ನೆನೆವುದ ಮರೆತೆ ಗುರುವೇ
ಬದುಕಿನ ಹಾದಿಯೊಳು ಬರುವ ಕಂದಕದಲಿ ಬಿದ್ದಾಗ ನಿನ್ನ ನೆನೆದೆ ಗುರುವೇ|

ಆಡುವ ಮಾತಿನೊಳು ಹಿಡಿತವಿಲ್ಲದೆ ಮನ ನೋಯಿಸಿ ಬದುಕಿದೆ
ನೋಡುವ ನೋಟದಲೂ ಕಪಟ ತುಂಬಿ ಮನ ಮಲಿನವಾಗಿ ನಲುಗಿದೆ ಗುರುವೇ|

ಬಕುತಿಯ ಮಾಡದೇ ನಿನ್ನ ಬೇಡಿ ಬರುತಿಹೆನು ಗುರುವೇ
ನಿಸ್ಸಹಾಯಾಕನು ನಾನು ಮೋಹದ ಬಲೆಯೊಳು ಸಿಲುಕಿ ಹೋದೆನು ಗುರುವೇ|

ನಾನು ನಾನೆಂಬ ಬಾವದೊಳು ಶೂನ್ಯ ಸಾದನೆಯು ನನ್ನದು ಗುರುವೇ
ನಿನ್ನ ಅರಿವ ಪಡೆವ ಬರದಲಿ ಇಡುವ ಹೆಜ್ಜೆಯು ಸರಿ ಇಲ್ಲ ಗುರುವೇ|

ನಿತ್ಯ ನಿರಂತರ ನಿನ್ನ ಸೇವಿಸಿ ಬದುಕು ನಡೆಸುವ ಪರಿ ತಿಳಿಸೋ ಗುರುವೇ
ನಿನ್ನ ಹೊರತು ಬೇರೇನೂ ಬೇಡೆ0ಬ ಬಾವವು ನನ್ನಲಿ ತುಂಬು ನೀ ಗುರುವೇ|
ಗುರುನಾಥ ಸ್ತೋತ್ರ  ಕುಸುಮಾಂಜಲಿ 



ದೇಹೋ ದೇವಾಲಯಃ ಪ್ರೋಕ್ತಃ
ಆತ್ಮಾ ತು ದೇವತಾ ಪೂಜ್ಯಃ |
ದೇಹೋ ಪೀಡ್ಯತೇ ರೋಗೇಣ
ಸಃ ದೀಪ್ಯತೇ ಸಾಧನಯಾ ||

ಪಂಚಭೂತಾತ್ಮಕವಾದ ಈ ಶರೀರವೇ ದೇಗುಲ. ಇದರಲ್ಲಿರುವ ದೇವತೆಯೇ ಆತ್ಮ.ದೇಹಕ್ಕೆ ಆಧಿವ್ಯಾಧಿಗಳಿಂದ ಬಾಧಕವಿದ್ದರೆ ಆತ್ಮವು ನಿರಂತರ ಸಾಧನೆಯಿಂದ ಪ್ರಕಾಶಮಾನವಾಗಿ ಬೆಳಗುತ್ತದೆ.

.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು