ಒಟ್ಟು ನೋಟಗಳು

Thursday, October 29, 2020

ಎಲ್ಲಿ ಎಡವಿದೆನೋ ಅರಿಯೆ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಎಲ್ಲಿ ಎಡವಿದೆನೋ ಅರಿಯೆ ಬೆನ್ ತಟ್ಟಿ ಎಬ್ಬಿಸಿ  ಗುರುವು ಎಚ್ಚರಿಸಿದನೋ
ಹುಂಬತನವ ಬಿಡೆನುತ ಕಷ್ಟದಾ ಹಾದಿಯಾದರು ಆಸೆ ಪಡದಿರದೆಂದನೋ|

ಅಂತರಂಗದಲಿ ಹುದುಗಿಹ ಆಸೆಗಳಾ ಗೋಪುರವ ಬುಡಮೇಲು ಮಾಡಿದನೋ
ಎಟುಕುವ ಬದುಕು ನಡೆಸಿ ಗುಟುಕಾದರು ಬೇಸರಿಸದೆ ಮುಂದಡಿ ಇಡೆಂದನೋ|

ತುಂಬಿದಾ ಸಭೆಯೊಳು ಮಾನ ಉಳಿಸಿ ನಿತ್ಯ ಸತ್ಯದರಿವು ನೀಡುವನೋ
ಅನ್ಯರಾ ಬದುಕಿನ ವಿಷಯಾಸಕ್ತಿಗೆ ಮೂಗು ತೂರಿಸದೆ ಸುಮ್ಮನಿರೆಂದನೋ|

ಮನದಂಗಳದಿ ಮೂಡುವ ಕಾಮನೆಗಳಾಟವ ಹತ್ತಿಕ್ಕಿ ಬಕುತಿಯಲಿ ಬೇಡೆಂದನೋ
ಬದುಕು ನಡೆವ ಹಾದಿಯೊಳು ಬರುವ ಬವಣೆಗಳ ಬದಿಗಿಟ್ಟು ಕಾಯ್ವನೆಂದನೋ|

ಹಂಬಲಿಸುವ ನಿಜ ಬಕುತನ ಮನದಾಳದ ಭಕುತಿಯ ಅರಿತು ಹರಸುವನೋ
ಹುಂಬತನದಿ ಮೆರೆವ ಅಲ್ಪಮತಿಯ ಆಡಂಬರದ ಆಟಕೆ ತಾ ಒಲಿಯನೋ|

ಇನ್ನೆಗೆ  ಬಣ್ಣಿಸಲಿ ಸಖರಾಯ ಪುರದ ನನ್ನೊಡೆಯನಾ ಮನದಣಿಯ ಭಜಿಸುವೆನೋ
ಸಾಲಿನಲಿ ತುದಿಯ ಬಕುತನು ನಾನು ನಿನ್ನ ನೋಟಕೆ ಹಂಬಲಿಸಿ ಕಾಯುತಿಹೆನೋ|

ಗುರುವೇ ಬದುಕು ಜಗದಲಿ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ಗುರುವೆಂಬ ಬೆಳಕು ಜಗದಲಿ
ಜೀವರಾಶಿಯ ಬೆಸೆದಿಹ ಜ್ಯೋತಿಯಲಿ |
ಆಸರೆಯಾಗಿಹುದು ಇಹದಲಿ
ದಾರಿ ತೋರುವುದು ಪರದಲಿ ||

ಜ್ಞಾನವೆಂಬ ಮಣ್ಣನು ತಂದು
ಸತ್ಯವೆಂಬ ಕುಲುಮೆಯಲಿ ಬೆಂದು |
ಪ್ರಜ್ಞಾನವೆಂಬ ಹಣತೆಯ ಮಾಡಿ
ಶುದ್ಧತೆಯ ತೈಲವನೆ ಸುರಿದು || 1 ||

ಭಕ್ತಿಯೆಂಬ ಹತ್ತಿಯ ಹೊಸೆದು
ಕಾಂತಿಯೆಂಬ ಎಳೆಯನು ಬೆಸೆದು |
ಅದ್ವೈತತತ್ತ್ವದಲಿ ಬೆಳೆದು
ಅರಿವೆಂಬ ಜ್ಯೋತಿಯು ಹೊಳೆದು || 2 ||

ಬದುಕ ಗಮ್ಯವು ತೋರಲಿ  
ದ್ವಂದ್ವದ ಭಾವವು ಕಳೆಯಲಿ !
ಆಶೆಯ ತಮವು ಕರಗಲಿ 
ಮುಕ್ತಿಯ ದೀಪ್ತಿಯು ಬೆಳಗಲಿ || 3 ||

||ಸರ್ವದಾ ಸದ್ಗುರುನಾಥೋ ವಿಜಯತೇ ||
29-10-2020

Sunday, October 18, 2020

ಮನವು ಬಯಸಿದೆ ನಿತ್ಯ ಸುಖವು - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಮನವು ಬಯಸಿದೆ ನಿತ್ಯ ಸುಖವು ನಿನ್ನ ಭಜಿಸದೆ ಅದೆಲ್ಲಿ ದೊರೆವುದು ಹೇಳು ಗುರುವೇ
ಮಿಥ್ಯಎಂಬ ಬ್ರಮೆಯೊಳು ಮನವು ಮಿಂದು ಲೌಕಿಕದ  ಕೂಪದೊಳು ನಿಂತೆನಲ್ಲವೇ|

ನೋವು ಬೇಡ ಹಸಿವು ಬೇಡ ಮಲಿನ ಮನವು ಸೌಖ್ಯ ಬಯಸಿದೆ
ಒಮ್ಮೆ ನಿನ್ನ ಸಂಗ ಬಯಸಿ ಬದುಕು ನಡೆವ ಹಾದಿ ದಿಕ್ಕ ಬದಲಿಸಲಾಗದೇ|

ಏನೋ ಬಯಸಿ ವೇಷಧರಿಸಿ  ಮನದ ತುಂಬ ಆಸೆ ಇರಿಸಿ ನಿನ್ನ ಕಾಣ ಬಂದೆನೋ
ಅಂತರಾತ್ಮ  ಶುದ್ಧವಿಲ್ಲ ಶಬ್ದದಲ್ಲೂ ಬಕುತಿಯಿಲ್ಲ ಇನ್ನು ನಿನ್ನ ಹೇಗೆ ಪಡೆವೆನೋ|

ಮನದ ತುಂಬ ಕಾಮ ಹೊತ್ತು ತೋರಿಕೆಯ ಭಕುತಿ ಬೀರಿ ನಿನ್ನ ಮುಂದೆ ನಿಂತೆನೋ
ನಾಲ್ಕು ಸಾಲು ಪದವ ಗೀಚಿ ಮಳ್ಳ ಮನದ ಆಸೆ ಅದುಮಿ ನಿನಗೆ ಶರಣು ಎಂದೆನೋ|

ನಿತ್ಯ ಬದುಕಿನಲ್ಲಿ ಸ್ವಾರ್ಥದ ಬೆನ್ನೇರಿ  ನಿನ್ನ ಸೇವೆಗೈವ ವೇಷದರಿಸಿಹೆನೋ
ಪಾಪ ಪುಣ್ಯಗಳ ಅರಿವಿದ್ದರೂ ಬಲು ಹುಂಬತನದಿ ಮೆರೆಯುತಿಹೆನೋ|

ಇನ್ಯಾವ ರೀತಿಯಲಿ ಭಜಿಸಿ ಪೂಜಿಸಲಿ ನಿನ್ನ ಎನ್ನ ಮನ್ನಿಸಿ ಕರುಣಿಸುವ ಮನ ಬಂದಿಲ್ಲವೇ
ಸಖರಾಯಪುರದ ಸರದಾರ ನೀನು ಒಮ್ಮೆ ತುಂಬು ಮನದಿ ಎನ್ನ  ಹರಸಬಾರದೇ|

Sunday, October 4, 2020

ನನ್ನೊಳಗಿಹ ನಾನು ನಾನೆಂಬ ಭಾವವ ನೀ - ರಚನೆ:ಶ್ರೀ. ಆನಂದ ರಾಮ್, ಶೃಂಗೇರಿ

ನನ್ನೊಳಗಿಹ ನಾನು ನಾನೆಂಬ ಭಾವವ ನೀ ಕಾಣದಾದೆಯಾ ಗುರುವೇ
ಇನ್ಯಾರ ಭಜಿಸಲಿ ನಾನು ಇದ ತ್ಯಜಿಸಿ ಬದುಕಲು ನೀ ಹೇಳೋ ಸಖರಾಯ ಪ್ರಭುವೇ|

ಎಲ್ಲರೊಡಗೂಡಿ ನಿನ್ನ ಸೇವೆಯ ಮಾಡಲು ನಿನ್ನ ಅಂಗಳಕೆ ಬಂದೆನೋ
ನಾನೆಂಬ ಮುಖವಾಡ ಧರಿಸಿ ನಿಜ ಬಕುತನಂತೆ ನಟಿಸಿ ನಿನ್ನೆದುರು ನಿಂತೆನೋ|

ಎಲ್ಲವನೂ ತ್ಯಜಿಸಿದಂತೆ ನಟಿಸಿ ಇಲ್ಲದನು ಹುಡುಕಿ ಮತಿಹೀನನಂತೆ  ಬಾಳಿದೆನೋ
ಎಲ್ಲರ ಸಂಗದಲಿ ನಾನೊಬ್ಬ ಬೇರೆ ಎನುತ ಪೊಳ್ಳು  ಬಕುತಿಯ ತೋರಿ ಬದುಕಿಹೆನೋ|

ನಿನ್ನ ಚರಿತವ ಪಾಡುವ ನಿಜ ಬಕುತರ ಮುಂದೆ ನಾನೊಬ್ಬ ಮಳ್ಳನಂತೆ ನಿಂತಿಹೆನೋ
ಆರು ಅರಿಗಳು ಮನತುಂಬಿ ಕುಳಿತಿರಲು ಶುದ್ದನಂತೆ ತೋರುತ ವಂಚಿಸಿಹೆನೋ|

ತಾಮಸಿಕ ಭಾವಗಳ ನಡುವಿನ ತೊಳಲಾಟದಲಿ ಸೋತು ನಿಂತಿಹೆ ಗುರುವೇ
ಸಾತ್ವಿಕರ ಒಡನಾಟ ಕುಲೀನ ಸಂಗವ ನೀಡಿ ಎನ್ನ ಉದ್ಧರಿಸೋ ಸಖರಾಯ ಪ್ರಭುವೇ|