ಒಟ್ಟು ನೋಟಗಳು

Thursday, October 29, 2020

ಎಲ್ಲಿ ಎಡವಿದೆನೋ ಅರಿಯೆ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಎಲ್ಲಿ ಎಡವಿದೆನೋ ಅರಿಯೆ ಬೆನ್ ತಟ್ಟಿ ಎಬ್ಬಿಸಿ  ಗುರುವು ಎಚ್ಚರಿಸಿದನೋ
ಹುಂಬತನವ ಬಿಡೆನುತ ಕಷ್ಟದಾ ಹಾದಿಯಾದರು ಆಸೆ ಪಡದಿರದೆಂದನೋ|

ಅಂತರಂಗದಲಿ ಹುದುಗಿಹ ಆಸೆಗಳಾ ಗೋಪುರವ ಬುಡಮೇಲು ಮಾಡಿದನೋ
ಎಟುಕುವ ಬದುಕು ನಡೆಸಿ ಗುಟುಕಾದರು ಬೇಸರಿಸದೆ ಮುಂದಡಿ ಇಡೆಂದನೋ|

ತುಂಬಿದಾ ಸಭೆಯೊಳು ಮಾನ ಉಳಿಸಿ ನಿತ್ಯ ಸತ್ಯದರಿವು ನೀಡುವನೋ
ಅನ್ಯರಾ ಬದುಕಿನ ವಿಷಯಾಸಕ್ತಿಗೆ ಮೂಗು ತೂರಿಸದೆ ಸುಮ್ಮನಿರೆಂದನೋ|

ಮನದಂಗಳದಿ ಮೂಡುವ ಕಾಮನೆಗಳಾಟವ ಹತ್ತಿಕ್ಕಿ ಬಕುತಿಯಲಿ ಬೇಡೆಂದನೋ
ಬದುಕು ನಡೆವ ಹಾದಿಯೊಳು ಬರುವ ಬವಣೆಗಳ ಬದಿಗಿಟ್ಟು ಕಾಯ್ವನೆಂದನೋ|

ಹಂಬಲಿಸುವ ನಿಜ ಬಕುತನ ಮನದಾಳದ ಭಕುತಿಯ ಅರಿತು ಹರಸುವನೋ
ಹುಂಬತನದಿ ಮೆರೆವ ಅಲ್ಪಮತಿಯ ಆಡಂಬರದ ಆಟಕೆ ತಾ ಒಲಿಯನೋ|

ಇನ್ನೆಗೆ  ಬಣ್ಣಿಸಲಿ ಸಖರಾಯ ಪುರದ ನನ್ನೊಡೆಯನಾ ಮನದಣಿಯ ಭಜಿಸುವೆನೋ
ಸಾಲಿನಲಿ ತುದಿಯ ಬಕುತನು ನಾನು ನಿನ್ನ ನೋಟಕೆ ಹಂಬಲಿಸಿ ಕಾಯುತಿಹೆನೋ|

1 comment:

  1. Guru venkatachala om tatsat. Nimma paadagalige nanna poojya namanagalu.

    ReplyDelete