ನನ್ನೊಳಗಿಹ ನಾನು ನಾನೆಂಬ ಭಾವವ ನೀ ಕಾಣದಾದೆಯಾ ಗುರುವೇ
ಇನ್ಯಾರ ಭಜಿಸಲಿ ನಾನು ಇದ ತ್ಯಜಿಸಿ ಬದುಕಲು ನೀ ಹೇಳೋ ಸಖರಾಯ ಪ್ರಭುವೇ|
ಎಲ್ಲರೊಡಗೂಡಿ ನಿನ್ನ ಸೇವೆಯ ಮಾಡಲು ನಿನ್ನ ಅಂಗಳಕೆ ಬಂದೆನೋ
ನಾನೆಂಬ ಮುಖವಾಡ ಧರಿಸಿ ನಿಜ ಬಕುತನಂತೆ ನಟಿಸಿ ನಿನ್ನೆದುರು ನಿಂತೆನೋ|
ಎಲ್ಲವನೂ ತ್ಯಜಿಸಿದಂತೆ ನಟಿಸಿ ಇಲ್ಲದನು ಹುಡುಕಿ ಮತಿಹೀನನಂತೆ ಬಾಳಿದೆನೋ
ಎಲ್ಲರ ಸಂಗದಲಿ ನಾನೊಬ್ಬ ಬೇರೆ ಎನುತ ಪೊಳ್ಳು ಬಕುತಿಯ ತೋರಿ ಬದುಕಿಹೆನೋ|
ನಿನ್ನ ಚರಿತವ ಪಾಡುವ ನಿಜ ಬಕುತರ ಮುಂದೆ ನಾನೊಬ್ಬ ಮಳ್ಳನಂತೆ ನಿಂತಿಹೆನೋ
ಆರು ಅರಿಗಳು ಮನತುಂಬಿ ಕುಳಿತಿರಲು ಶುದ್ದನಂತೆ ತೋರುತ ವಂಚಿಸಿಹೆನೋ|
ತಾಮಸಿಕ ಭಾವಗಳ ನಡುವಿನ ತೊಳಲಾಟದಲಿ ಸೋತು ನಿಂತಿಹೆ ಗುರುವೇ
ಸಾತ್ವಿಕರ ಒಡನಾಟ ಕುಲೀನ ಸಂಗವ ನೀಡಿ ಎನ್ನ ಉದ್ಧರಿಸೋ ಸಖರಾಯ ಪ್ರಭುವೇ|
Sarve jano sukinobavantu.
ReplyDeletePoojya avadootara aashirvaada sadaa yellara mele erali. Hari om tatsat.