ಒಟ್ಟು ನೋಟಗಳು

Wednesday, December 25, 2019

ನಿನ್ನಂಘ್ರಿಕಮಲವ ಪಿಡಿದೆನೋ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ನಿನ್ನಂಘ್ರಿಕಮಲವ ಪಿಡಿದೆನೋ
ಗುರುನಾಥನೇ
ನಿನ್ನಂಘ್ರಿಕಮಲವ ಬಿಡಲಾರೆನೋ !

ಅಹಂಕಾರವ ಬಿಡುತಲೀ
ಮಮಕಾರವ ಮರೆಯುತಲೀ !
ಚಿಂತೆಶೋಕಗಳ ಮೀರುತಲೀ
ಮೋಹಮಮತೆಯ ದಾಟುತಲೀ !! ೧ !!

ನಿನ್ನ ನುಡಿಯ ನೆನೆಯುತಲೀ
ನಿನ್ನ ನಾಮವ ಸ್ಮರಿಸುತಲೀ !
ನಿನ್ನ ಮಹಿಮೆಯ ಪಾಡುತಲೀ 
ನಿನ್ನ ಚರಣಕೆ ನಮಿಸುತಲೀ !! ೨ !!

ಉದ್ಧರಿಸೆಮ್ಮನು ಎಂದು ಬೇಡುತಲೀ
ನಮ್ಮ ದೈವವೇ ನೀನೆಂದು ತಿಳಿಯುತಲೀ !
ಸಾನಿಧ್ಯಭಿಕ್ಷೆ ನೀಡೆಂದು ಕೋರುತಲೀ
ದತ್ತನೇ ನೀನೆಂದು ಅರಿಯುತಲೀ !! ೩ !!

!! ಸರ್ವದಾ ಸದ್ಗುರುನಾಥೋ ವಿಜಯತೇ !!
೨೬-೧೨-೨೦೧೯

ಆಲಿಸೋ ಎನ್ನ ಮನದ ಮೊರೆಯ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಆಲಿಸೋ ಎನ್ನ  ಮನದ ಮೊರೆಯ, ಪರಿ ಹರಿಸೋ ಎನ್ನ ಬದುಕ ಬವಣೆಯ
ನಿತ್ಯ ನಿನ್ನ ಸೇವಿಪ ಬಕುತರಂತಲ್ಲ ನಾನು ಎಲ್ಲೋ ಹಾದಿ ತಪ್ಪಿದ ಪಾಮರನೋ|

ಎಲ್ಲಾ ಅರಿತರೂ ಏನೂ ಅರಿವಿಲ್ಲದಂತೆ ನಟಿಸಿ ಮನದ ಅಹಂ ಮುರಿಯುವೆ
ಎಲ್ಲವನೂ ನೀಡಿ ಇನ್ನೂ ಸಾಲದೆಂಬ ಮನವ ನೀಡಿ ಕಾಡಬೇಡವೋ|

ಎಲ್ಲ ನಿನ್ನದಾಗಿರುವಾಗ ನಾನು ಕೊಟ್ಟೆನೆಂಬ ಬಾವ ತುಂಬಿ ನುಡಿಸಬೇಡವೋ
ನಿನ್ನಣತಿಯಿಲ್ಲದೆ ಹುಲ್ಲು ಕಡ್ಡಿಯೂ ಅಲುಗದು ನಾ ಮಾಡಿದನೆಂಬ ಬಾವ ಬೇಡವೋ|

ನಾ ದೊಡ್ಡವನೆಂಬ ಭಾವ ತುಂಬಿ ಎನ್ನ ಆಡಿಸಿ ಬೀಳಿಸ ಬೇಡವೋ
ಎಲ್ಲವರಿಗಿಂತ ನಾ ಸಣ್ಣವನೆಂಬ ಭಾವ ಮೂಡಿಸಿ ಮನತುಂಬಿ  ಎನ್ನ ಹರಸೋ |

ಬಣ್ಣಗಳ  ಚಿತ್ತಾರ ಮನದಿ ಮೂಡಿಸಿ ನಿನ್ನ ನೆನೆವ ಮನದ  ಹಾದಿ ತಪ್ಪಿಸ ಬೇಡವೋ
ಮುನ್ನಡಿ ಇಡುವ ಮುನ್ನ ಎನ್ನ ಮನದಿ ನಿನ್ನ ನಾಮವು ಅಳಿಯದಂತೆ ನೋಡೋ|

Sunday, December 22, 2019

ಮೌನವೇ ಸಾಧನೆಯ ಶ್ರೀಕಾರ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ಮೌನವೇ ಸಾಧನೆಯ ಶ್ರೀಕಾರ I
ಶುದ್ಧತೆಯೇ ಗುರುಪ್ರಾಪ್ತಿಗೆ ಓಂಕಾರ II
ಗುರುಕೃಪೆಯೇ ಎಲ್ಲರ ಬಾಳಿಗಾಧಾರ I
ಗುರುಪದಸೇವೆಯಾಗಲಿ ನಮ್ಮ ದೃಢನಿರ್ಧಾರ II

ನಾ ಕಳ್ಳನೋ ಬಲು ಮಳ್ಳನೊ ನಿಜ ಬಕುತಿಯ ಅರಿಯದೇ ನಿನ್ನ ಬೇಡುವೆನೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನಾ ಕಳ್ಳನೋ ಬಲು ಮಳ್ಳನೊ ನಿಜ ಬಕುತಿಯ ಅರಿಯದೇ ನಿನ್ನ ಬೇಡುವೆನೋ
ಬಲು ನಮ್ರತೆಯ ಸೋಗಿನೊಳು ನಿನ್ನ ಬಜಿಸುವ ಮುಖವಾಡ ದರಿಸಿಹೆನೋ|

ಕಣ್ಣ ಮುಚ್ಚಿ ಬಕುತಿಯಲಿ ಮೈ ಮರೆತವನಂತೆ ನಟಿಸಿ ಇನ್ನೆಲ್ಲೋ ಮನ ನಿಲ್ಲಿಸಿಹೆನೋ
ನಿನ್ನಣತಿಯಿಲ್ಲದೆ ಬದುಕು ಸಾಗದೆಂದು ಅರಿತರೂ ಮೂಡನಂತೆ ಬದುಕಿಹೆನೋ|

ಏನನೋ ಬಯಸಿ ನಿನ್ನಪದತಳದಿ ಭಂಡನಂತೆ ನಿಂತು ಕೂಗುತಿಹೆನೋ
ಕೊಟ್ಟಿದ್ದು ಸಾಲದೆಂಬಂತೆ ನಿರಂತರ ಬೇಡುವ ಕಾಯಕ ಮಾಡಿ ಕೊಂಬಿಹೆನೋ|

ಹೊಲಸು ಬೇಡವೆಂದರೂ ಮನದ ಆಸೆಯ ತುಳಿಯದೆ ಸೋತು ನಿಂತಿಹೆನೋ
ಮತ್ತೆ ಮತ್ತೆ ಮನ್ನಿಸೆಂದು ನಿನ್ನ ಬೇಡುವ ನಾಟಕದಿ ಕಾಲ ಕಳೆದಿಹೆನೋ|

ನಿಜಬಕುತರೊಡನಾಟ  ಬಯಸಿ ಬರೀ ಬಾಹ್ಯಶುದ್ದಿಗೆ  ಗುರುವೆಲ್ಲಿ ಒಲಿವನೋ
ಎನ್ನ ಅಂತರಂಗ ಶುದ್ದಿಗೊಳಿಸದೇ ಗುರುವೇ ಇನ್ನ್ಯಾವ ದಾರಿ ನಾ ಕಾಣೆನೋ |

Monday, December 16, 2019

ನಿನ್ನಿಚ್ಛೆಯಂತೆ ಬದುಕ ನಡೆಸೊ - ರಚನೆ :ಶ್ರೀಮತಿ. ಶೈಲಜಾ ಕುಮಾರ್, ಮೈಸೂರು

ನಿನ್ನಿಚ್ಛೆಯಂತೆ ಬದುಕ ನಡೆಸೊ ಗುರುವೆ
ನನ್ನಿಚ್ಛೆಯನ್ನು ನೀ ಅರಿತಿಹೆ ಗುರುವೇ !
ನೀ ಬಯಸಿದಂತೆ ನಾ ನುಡಿವೆ ಗುರುವೇ 
ನೀ ತಿಳಿಸಿದಂತೆ ನಾ ನಡೆವೆ ಗುರುವೇ !!

ನಿನ್ನ ಇಂಗಿತದಂತೆ  ನಡೆವುದೆಲ್ಲವು ಪ್ರಭುವೆ
ನಿನ್ನ ಸಂಕಲ್ಪದಂತೆ ಜಗವು ನಡೆವುದು ಗುರುವೇ !
ನಿನ್ನ ಅಂಕಿತವಿಲ್ಲದೆ ನಡೆಯದೇನೂ ಪ್ರಭುವೇ
ನಿನ್ನ ಪದಸೇವೆ ನಮಗೆಂದಿಗೂ ಇರಲಿ ಗುರುವೇ !! ೧ !!

ನಮ್ಮ ಗತಿಯನು ನಡೆಸುವವನು ನೀನೇ ಗುರುವೇ
ನಮ್ಮ ಮತಿಯನು ಬೆಳಗಿಪನು ನೀನೇ ಗುರುವೇ
ನಮ್ಮ ಆತ್ಮಪ್ರಣತಿಯನು ಹಚ್ಚುವವನು ನೀನೇ ಗುರುವೇ 
ನಮ್ಮ ಹೃನ್ಮಂದಿರದಿ ನಲಿವನು ನೀನೇ ಗುರುವೇ !! ೨ !!

ನಮ್ಮ ಜಡದೇಹದ ಚೈತನ್ಯ ನೀನೇ ಪ್ರಭುವೇ 
ನಮ್ಮ ಮನಸಿನ ಒಡೆಯ ನೀನೇ ಪ್ರಭುವೇ
ನಮ್ಮಿಂದ ಕೆಲಸ ಮಾಡಿಸುವವ ನೀನೇ ಪ್ರಭುವೇ
ನಮ್ಮ ಮನದಲಿ ಧೀಶಕ್ತಿ ತುಂಬುವವ ನೀನೇ ಗುರುವೇ !! ೩ !!

!! ಸರ್ವದಾ ಸದ್ಗುರುನಾಥೋ ವಿಜಯತೇ !!
೧೭-೧೨-೨೦೧೯

Friday, December 13, 2019

ಧರೆಗವತರಿಸಿದ ಅವಧೂತ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಧರೆಗವತರಿಸಿದ ಅವಧೂತ ನಮ್ಮ ಸಖರಾಯಪುರದ ಗುರುನಾಥ
ನಿಜ ಭಕುತರ ಪೊರೆವಾತ ಭವ ಬಂಧನವ ಕಳೆವಾತ ನಮ್ಮ ಅವಧೂತ|

ಮನವಮರ್ದಿಸಿ ಮನೋ ಚಾಂಚಲ್ಯ ಮರೆಯಾಗಿಸೋ ಗುರುನಾಥ
ಮನವೆಂಬ ಭ್ರಮೆಯ ಲೋಕದಿಹ ಮಿಥ್ಯವ ಅಳಿಸಿ ಸತ್ಯವ ತೋರೋ ಅವಧೂತ|

ಪದಗಳಲಿ ನುಡಿಗಳಲಿ ತೋರುವ ಬಕುತಿಯ ನಿಜಗೊಳಿಸೋ ಗುರುನಾಥ
ತಂತ್ರ ಮಂತ್ರದ ಮನದ ಭಾವದ ಆಚೆ ಹೃದಯ ಕಮಲದ ನಡುವೆ ನೆಲೆ ನಿಲ್ಲೋ ಅವಧೂತ|

ಉಸಿರು ಉಸಿರಲೂ ನಿನ್ನ ಹೆಸರಿರಲಿ ಕೇಳುವ ಕಿವಿಗಳಿಗೆ ಮುದನೀಡಲಿ ಗುರುನಾಥ
ನೋಡುವ ಕಂಗಳಿಗೆ ಬೇರೇನೂ ತೋರದೇ ನಿನ್ನ ದರುಶನ ನೀಡೋ ಅವಧೂತ|

ನಾಳಿನ ಬದುಕಿನ ಬಗ್ಗೆ ಎನಗೆ ಭಯವಿರದೆ ನಿನ್ನ ಸೇವೆಯೇ ಮೊದಲಾಗಲಿ ಗುರುನಾಥ
ಇಂದು ನಿನ್ನದೆಂದು ನಂಬಿ ಸಂತಸದಿ ನಿನ್ನ ಪಾದಸೇವೆ ಕರುಣಿಸೋ ಅವಧೂತ|

Sunday, December 8, 2019

ನೀನೇ ನನ್ನ ದೊರೆಯೆಂದು - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ನೀನೇ ನನ್ನ ದೊರೆಯೆಂದು ನನ್ನ ಈ ಅಹವಾಲು ನೀಡುತಿಹೆನೋ
ಸರಿ ತಪ್ಪು ನಿರ್ಣಯಿಸಿ ನಿನ್ನ  ಮನೆಯಂಗಳದ ನ್ಯಾಯ ತಿಳುಸೋ ಗುರುವೇ|

ಏನೂ ಅರಿಯದ ನಾನು ನಿನ್ನ ಬಕುತನೆಂದು ಬೀಗುತಾ ಬದುಕುವುದು ಸರಿಯೇ
ಜನುಮಗಳ ಕರ್ಮದ ಹೂರೆ ಹೊತ್ತು ಸಲಹೆಂದು
ಮೊರೆ ಇಡುವುದು ಸರಿಯೇ|

ವಿಷಯದ ಬೆನ್ನತ್ತಿ ಬದುಕು ಕಳೆವ ನಾನು ನಿನ್ನ ನೆನೆವುದು ಸರಿಯೇ
ಪರರ ಸ್ವತ್ತಿಗೆ ಹಂಬಲಿಸುವ  ಮನ ದಾನ ಮಾಡಿದೆನೆಂದು ಬೀಗುವುದು ಸರಿಯೇ|

ಕರಗಳು ಮಲಿನಗೊಂಡಿರುವಾಗ ನಿನ್ನ ಪೂಜಿಸುವುದು ಸರಿಯೇ
ಕಲ್ಮಶ ತುಂಬಿದ ಮನ ಹೊತ್ತು ನಿನ್ನ ಬಜಿಸುವ ಪರಿಯು ಸರಿಯೇ|

ನೋಡುವ ನೋಟದಲಿ ಕಪಟ ತುಂಬಿಹುದು ನಿನ್ನ ದರುಶನ ಪಡೆವುದು ಸರಿಯೇ
ಶಿರದೊಳು ಬರೀ ಕಾಮವಾಸನೆ ಹೊತ್ತು ನಿನ್ನ ಪಾದಕೆ ಶಿರಭಾಗುವುದು ಸರಿಯೇ|

ಅನ್ಯರ ಕೂಳಿಗೆ ಕನ್ನ ಹಾಕುವ ಮನ ನಿನ್ನೊಳು ಸೇರುವುದು ಸರಿಯೇ
ನಿಜ ಬಕುತರ ಮನವನರಿಯದೇ ಅವರ ಭಕುತಿ ಜರಿವುದು ಸರಿಯೇ|

ಹೀಗೆಂದು ಮರುಗುವ ಮನವ ತಹಬಂದಿಗೆ ತಂದು ಹರಸೋ ನನ್ನ ದೊರೆಯೇ
ಸಖರಾಯಪುರದ ಅರಸನು ನೀನು ಇನ್ಯಾರನು ಬೇಡಲಿ ಹೇಳೋ ಗುರುವೇ|

Thursday, December 5, 2019

ದಯಾಮಯನೋ ಕರುಣಾಮಯನೋ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ದಯಾಮಯನೋ ಕರುಣಾಮಯನೋ ನನ್ನ ಗುರುನಾಥನು
ವಿಶ್ವ ಮಾನ್ಯನೋ ಸರ್ವ ಜನ ಪೂಜಿತಾನೋ ನನ್ನ ಮಹಾದೇವನು|

ಏನು ಬೇಡಲಿ ನಾನು ಅವನ ಮುಂದೆ ಬೇಡದಲೇ ಕಷ್ಟವ ನೀಗುವನೋ
ಲೌಕಿಕ ಜೀವನದ ಬೇಕು ಬೇಡಗಳ ನಡುವೆ ಒಮ್ಮೆ ಆತನ ಸ್ಮರಿಸುವೆನೋ|

ದರುಶನ ಸುಲಭವಲ್ಲವೋ ದೇವನ ಸಭೆಯೊಳು ಒಬ್ಬನಾದರೆ  ಬಹು ಪುಣ್ಯವೋ
ಪ್ರಸಾದ ದೊರೆತರೆ ನಿರಂತರ ಅನ್ನಪೂರ್ಣೆಯ ಕರುಣೆ ದೊರೆತಂತೆಯೋ|

ಸಭೆಯೊಳು ಗರ್ವಹರಣವಾದರೆ  ಧನ್ಯವೋ ಬಲು  ಪುಣ್ಯವೋ 
ಮುನಿಸಿನಿಂದ ನುಡಿಯ ಕೇಳ್ದರೆ ಎಲ್ಲಾ ಕರ್ಮದ ಹರಣವೋ ಬಲು ಭಾಗ್ಯಾವೋ|

ಮಗುವಂತೆ ಎಚ್ಚರಿಸಿ ಬಿರುನುಡಿಯಾಡದೆ ತಪ್ಪು ತಿದ್ದಿ ಸರಿ ದಾರಿತೋರುವನೋ
ಜಾತಿ ವಿಜಾತಿಗಳ ಎಲ್ಲೆಮೀರಿ ಸುಜ್ಞಾನಿಗಳ ಸಂಗದೊಳು ಕಾಣಿಸುವನೋ|

ಸಾದು ಸಂತರ ಚಿಂತೆ ದೂರ ಮಾಡುತಾ ಸರ್ವರ ಹಿತ ಕಾಯುವನೋ
ಗುರು ಹಿರಿಯರ ಸೇವೆಯೇ ಬದುಕೆನ್ನುತ ನಂಬಿದವರ ಪೊರೆಯುವನೋ|

Wednesday, December 4, 2019

ಯಾರೇ ಅವರು ನೋಡಮ್ಮ - ರಚನೆ :ಶ್ರೀ. ಆನಂದ ರಾಮ್, ಶೃಂಗೇರಿ

ಯಾರೇ ಅವರು ನೋಡಮ್ಮ ಯಾರೇ ಆ ಗುರುವರ ನೋಡಮ್ಮ
ಅವ ನಮ್ಮವನಲ್ಲವೇ  ಸಖರಾಯಪುರದ ಮಹಾದೇವನಲ್ಲವೇನಮ್ಮ|

ಗದರಿದರೂ  ಗುರಿ ತೋರುವ ಸದ್ಗುರು ಅವನಲ್ಲವೇನಮ್ಮ
ತೋರುವ ಪ್ರೀತಿಗೆ ಮಿಗಿಲಿಲ್ಲ ಅದ ಪಡೆದವ ಧನ್ಯನಲ್ಲವೇನಮ್ಮ|

ಯಾರ ಹಂಗಿಗೂ ಒಳಗಾಗದ ಮಹಾಸಾಧಕ ನಮ್ಮ ಸದ್ಗುರುವಲ್ಲವೇನಮ್ಮ
ಒಳ ಹೊರಗಿನ ಭಾವ ಒಂದಾದರೆ ಅವ ಒಪ್ಪಿ ಹರಸುವನಮ್ಮ|

ಆರು ಅರಿಗಳ ಮೆಟ್ಟಿ ನಿಂತ ಧೀಮಂತ ನೇರ ನುಡಿಗಳ ಶ್ರೀಮಂತನಮ್ಮ
ಅಹಂ ಅಳಿಯದ ಹೊರತು ಎಲ್ಲಾತೊರೆದ ಹೊರತು ದೊರೆಯನಮ್ಮ|

ಭವರೋಗ ವೈದ್ಯನಮ್ಮ  ಭವಬಂಧನವ ಕಳೆವ ಮಹಾ ಸಂತನಮ್ಮ
ನಂಬಿ ನಡೆದರೆ ಎಂದಿಗೂ ಯಾರನೂ ಕೈ ಬಿಡದೆ ಹರಸಿ ಸಲಹುವನಮ್ಮ|