ಇನ್ಯಾವ ಭಕುತಿಗೆ ಒಲಿಯುವೆ ನೀನು ಅನನ್ಯ ಬಕುತಿಯ ಅರಿತಿಲ್ಲ ನಾನೂ
ಬಕುತನಂತೆ ನಟಿಸುವೆನು ನಾನು ಪರಿಶುದ್ದಗೊಳಿಸೋ ಎನ್ನ ಮನವನು|
ಬುದ್ದಿಹೀನನು ನಾನು ಬದುಕುವ ಪರಿ ಅರಿತಿಲ್ಲ ಇವನು ದಾರಿ ತೋರೋ ನೀನು
ಜ್ಞಾನವೆಂಬುದು ಏನೋ ಈ ಮನಕೆ ತಿಳಿವಲ್ಲದು ಅಜ್ಞಾನಿಯಾದರೂ ಹರಸೆನ್ನನು|
ಅರ್ಥವಿಲ್ಲದ ಆಚರಣೆಯೊಳು ಮನ ಮುಳುಗೆ ನಿನ್ನನೇ ಮರೆತೆನೋ
ಗುರುವೆಂದರೆ ಯಾರೆಂದು ಅರಿಯದೆ ಮೂಡನಂತೆ ಸಮಯ ಕಳೆದೆನೋ|
ಅಷ್ಟು ಮಾಡಿದೆನೆಂದು ಇನ್ನಷ್ಟು ಮಾಡುವೆನೆಂದು ಪೊಳ್ಳು ಬಕುತಿಯ ತೋರಿದೆನೋ
ನನ್ನಿಷ್ಟದಂತೆ ನಿನ್ನ ಭಜಿಸಿ ನಿನ್ನಿಷ್ಟವ ಅರಿಯದೆ ಸಮಯ ವ್ಯರ್ಥ ಮಾಡಿದೆನೋ|
ಭಕುತಿಗೆ ವಿದವುಂಟೆ ಸೇವೆಗೆ ಸಮಯವುಂಟೆ ಸರ್ವವ್ಯಾಪಿ ನೀನು ಅರಿಯದಾದೆನೋ
ಎನ್ನ ಒಳ ಹೊರಗು ಬಲ್ಲವ ನೀನು ನಾನ್ಯಾರು ನಿನ್ನ ಮುಂದೆ ತೃಣವಿನ ಸಮಾನನೋ|
ಮಳ್ಳ ಮನಸಿನ ಪೊಳ್ಳು ಬಕುತನು ನಾನು ನಿನ್ನ ಪಡೆಯಲು ಹೊರಟಿಹೆನೋ
ಸಖರಾಯಪುರದ ಮಹಾದೇವನು ನೀನು ಒಮ್ಮೆ ಕಣ್ಣಾಯಿಸಿ ಎನ್ನ ನೋಡಿವೆಯೇನು|
No comments:
Post a Comment