ಒಟ್ಟು ನೋಟಗಳು

Friday, November 10, 2017

ಗುರುನಾಥ ಗಾನಾಮೃತ 
ಎಲ್ಲಿ ನಿಲುವೆ ಎಂದು ಬರುವೆ ಗುರುವೆ ನಮ್ಮ ಮನೆಯಲಿ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಎಲ್ಲಿ ನಿಲುವೆ ಎಂದು ಬರುವೆ ಗುರುವೆ ನಮ್ಮ ಮನೆಯಲಿ
ಎಂತು ನಲಿವೆ ಹೇಗೆ ನುಡಿವೆ ಗುರುವೆ ನಮ್ಮ ಮನದಲಿ || ಪ ।।


ನಿನ್ನ ನೋಡುವ ಕಾತರ
ನೀಗಿಸಿತು ನಮ್ಮೆಲ್ಲಾ ಬೇಸರ‌ ‌
ಹೊತ್ತಿಸಿ ಹೃದಯದಿ ಕಿರುದೀಪ
ಕಾಣುವೆ ಎಲ್ಲೆಲ್ಲೂ  ನಿನ್ನ  ದಿವ್ಯರೂಪ ।। ೧ ।।


ಸ್ವಾತ್ಮಾರಾಮದ ಆ ಬಿಂಬ
ಮೂಡಿದೆ ಮನದಲದರ ಪ್ರತಿಬಿಂಬ
ಕರ್ಮವಶಪ್ರಾಪ್ತಿಯ ಜೀವನ
ನಿನ್ನ ಸ್ಮರಣೆಯಿಂದ ಪಾವನ ।। ೨ ।।


ಜೀವನವೇ ನೀನಿತ್ತ ಭಿಕ್ಷೆ
ಅದುವೇ ನಮ್ಮ ಬಾಳಿಗೆ ಶ್ರೀರಕ್ಷೆ 
ಜನ್ಮಜನ್ಮದ ಅನುಬಂಧ
ತಿಳಿಯದರ ಋಣಾನುಬಂಧ ।। ೩ ।।
ಗುರುನಾಥ ಗಾನಾಮೃತ 
ನೀ ಎನ್ನ ಆತ್ಮಬಂಧೂ ಗುರುವೇ
ರಚನೆ: ಅಂಬಾಸುತ 


ನೀ ಎನ್ನ ಆತ್ಮಬಂಧೂ ಗುರುವೇ
ಕರುಣದೀ ಕಾಯೋ ಹೇ ಕೃಪಾಸಿಂಧೋ ||ಪ||

ಮೂಢತನದಾ ಮರೆವಾ ಅಳಿಸೋ
ಜ್ಞಾನವೆಂಬೋ ದೀವಿಗೆಯಾ ಚಿತ್ತದೊಳು ಬೆಳಗಿಸೋ

ಅನುಭವ ಮಂಟಪಕೆ ಒಯ್ಯೋ ಎನಗೆ
ಮೌನಾದ ಮುತ್ತಿನಾ ಹಾರವ ತೊಡಿಸೋ ||೧||


ಕಾದಾಟ ಮೇಲಾಟ ಎಂದೂ
ಕಟಕಟ ಕಡಿವಾ ಎನ್ನ ಹಲ್ಲನ್ನು ಮುರಿಸೋ
ವ್ಯರ್ಥವಾಗಿಹ ಈ ಜನುಮಕ್ಕೇ
ಅರ್ಥವ ನೀಡೋ ಸ್ವಾರ್ಥವ ಕಳೆಯೋ ||೨||

ಸುಮ್ಮನೇ ಹೋಗಾದು ಮೋಹಾ
ಬಲು ಹೆಮ್ಮಿಗೆ ಅದಕಿದೇ ಅದರಿಂ ಎನಗೇ ದ್ರೋಹಾ
ಅರಿವಿನಾ ಔಷಧಿ ಗುರು ಕೊಡಲೂ
ಮೋಹಾವು ಮಾಯಾ ಕಾಯವೂ ಮಾಯಾ ||೩||

ಸಖರಾಯಪುರವರಾಧೀಶಾ
ಅಂಬಾಸುತನಾ ಅಂತರಂಗದಾ ಸರ್ವೇಶಾ ||೪||

Thursday, November 9, 2017

ಗುರುನಾಥ ಗಾನಾಮೃತ 
ಹಿಂದೆ ಕಣ್ಮುಚ್ಚಿಸಿದವ ನೀನೇ
ರಚನೆ: ಅಂಬಾಸುತ 


ಹಿಂದೆ ಕಣ್ಮುಚ್ಚಿಸಿದವ ನೀನೇ
ಇಂದು ಕಣ್ತೆರೆಯಿಸುತಿರುವವ ನೀನೇ
ಹಿಂದೆ ಮೂಕನ ಮಾಡಿದವ ನೀನೇ
ಇಂದು ಮಾತು ಕಲಿಸುತಿರುವವ ನೀನೇ
ಎನ್ನೊಳಿತು ನೀನೇ ಕೆಡುಕು ನೀನೇ
ಮಿತ್ರ ನೀನೇ ಕ್ರೂರ ಶತ್ರುವೂ ನೀನೇ
ಜನನದಾ ನಗು ನೀನೇ ಮರಣದಾ ಅಳುವೂ ನೀನೇ ||

ಇಷ್ಟಾದ ಮೇಲೆ ಈ ಜಗದೊಳು
ನಿನ್ನ ಹೊರತು ಇನ್ಯಾರನು ನಾ ಕಾಣಲಯ್ಯಾ
ಸಖರಾಯಪುರವರಾಧೀಶ್ವರಾ ||
ಗುರುನಾಥ ಗಾನಾಮೃತ 
ಹಾಕಿದ ಈ ಪ್ರದಕ್ಷಿಣೇ
ರಚನೆ: ಅಂಬಾಸುತ 


ಹಾಕಿದ ಈ ಪ್ರದಕ್ಷಿಣೇ
ಅವಧೂತ ನಿನಗೇ ಅರ್ಪಣೇ
ಬೇಡುವೆ ನೀಡೋ ಕ್ಷಮಾಪಣೇ
ನಾ ಮಾಡಿದೆಲ್ಲ ಅಪರಾಧಕೇ ||ಪ||

ಹೆಜ್ಜೆ ಹೆಜ್ಜೆಗೂ ನಿನ್ನ ನಾಮವಾ ಜಪಿಸುತಾ
ಏಕ ಮನದಲ್ಲಿ ಗುರು ನೀನೇ ಗತಿ ಎನ್ನುತಾ ||೧||

ಚೈತನ್ಯ ನೀನೆನಗೇ ಚಿನುಮಯ ರೂಪನೇ
ಚಿತ್ತದೊಳಗೆ ಬಂದು ಬೇಗ ನೆಲೆಸೋ ಎನುತಾ ||೨||

ಅಂಜಲಿಬದ್ದನಾಗೀ ಭವದಾ ಅಂಜಿಕೆ ತೊರೆದೂ
ಅಚ್ಯುತ ನೀನಗೇ ಅರ್ಚನೆ ಮಾಡುವೆನೆನುತಾ ||೩||

ಇದ್ದೂ ಇಲ್ಲಾದಂತಿರೊ ಪಾಠವ ಕಲಿಸೆನುತಾ
ಮಾತು ಮರೆಸೀ ಮೌನದೊಳಗೆನ್ನ ಇರಿಸೆನುತಾ ||೪||

ಸಖರಾಯಪುರವಾಸಾ ಅಂಬಾಸುತನ ಧಾತಾ
ಅಡಿಗಡಿಗೆ ನಮಿಪೇ ಅತಿಷಯದಿ ಕಾಯೋ ಎನುತಾ ||೫|

Wednesday, November 8, 2017

ಗುರುನಾಥ ಗಾನಾಮೃತ 
ಗಿಡ್ಡಾಗಿ ಹೋಗೋಣಾ
ರಚನೆ: ಅಂಬಾಸುತ 


ಗಿಡ್ಡಾಗಿ ಹೋಗೋಣಾ
ಗಡ್ಡದಯ್ಯನ ಮನಿಗೇ
ಶಾನೆ ಫಲಗಳಾ ಕೊಡುತಾನಂತೇ
ಶಾನೇ ಫಲಗಳಾ ಕೊಡುತಾನೆ ಗಡದಯ್ಯ
ಶಿವನೇ ಇವನಾಗೀ ಕುಳಿತಾನಂತೇ ||

ನಕ್ಕಾರೆ ಹರಿಯಂತೇ
ಸಿಟ್ಟಾದರೆ ಹರನಂತೇ
ಹುಟ್ಟು ಸಾವುಗಳಾ ತಿಳಿದಾ ಬೊಮ್ಮಾನಂತೇ
ಹುಟ್ಟು ಸಾವುಗಳಾ ತಿಳಿದೋನೇ ಗಡ್ಡದಯ್ಯಾ
ಶ್ರೀಗಂಧ ತಾನಾಗೀ ನಲಿದಾನಂತೇ ||

ಬಿಟ್ಟ ಕೈಯನು
ತಾ  ಹಿಡಿದೂ ನೆಡೆಸಾನಂತೇ
ದಿಟ್ಟ ಸಿಂಹದಂತೇ ಕಾಣುತಾನೇ
ದಿಟ್ಟ ಸಿಂಹದಂತೇ ಕಾಣುತಾನೇ ಗಡ್ಡದಯ್ಯಾ
ದಟ್ಟಿಯೊಂದನು ಸುತ್ತಿಕೊಂಡಾನಂತೇ ||

ಬೇಡಿ ಬಂದೋರಿಗೇ
ಬೊಗಸೇಲಿ ವರ ನೀಡೀ
ವ್ಯಸನಗಳನೆಲ್ಲಾ ಕಳೆದಾನಂತೇ
ವ್ಯಸನಾಗಳನೆಲ್ಲಾ ಕಳೆವಂಥಾ ಗಡ್ಡದಯ್ಯಾ
ವಸುಧೆಯೊಳು ಗುರುವಾಗೀ ನಿಂತಾನಂತೇ ||

ಸಖರಾಯಪುರದೊಳಗೇ
ಸುಖ ನೀಡುತ ನಿಂತೋನೇ
ಅಂಬಾಸುತನಾ ಅರಿವೂ ಇವನಂತೇ
ಅಂಬಾಸುತನಾ ಅರಿವೂ ಇವನಂತೇ ಗಡ್ಡದಯ್ಯಾ
ಅವಧೂತನಾಗೀ ಕುಳಿತಾನಂತೇ ||
ಗುರುನಾಥ ಗಾನಾಮೃತ 
ಬಾಣಾವಾರವೇ ಸದ್ಗುರುತವರು
ರಚನೆ: ಅಂಬಾಸುತ 


ಬಾಣಾವಾರವೇ ಸದ್ಗುರುತವರು
ಬರುವರು ಸಾವಿರಾರುಜನರು
ನೆಲೆಸಿಹುದು ಚೈತನ್ಯದ ಬೇರು
ಭಕ್ತರಿಗಿದು ಜ್ಞಾನದ ಚಿಗುರು

ಜೋಳಿಗೆ ಬಿಕ್ಷೆಯ ಹಿಡಿಸೇರು
ಉಣ್ಣುವ ಭಕ್ತರು ಸಾವಿರಾರು
ಇಲ್ಲ ಯಾವುದೇ ತಕರಾರು 
ಕಾರಣ ಇದು ಸದ್ಗುರು ದರ್ಬಾರು

ನಾಮಸ್ಮರಣೆಯೇ ಇಲ್ಲಿಯ ಉಸಿರೂ
ಪ್ರತಿ ಮನದಲ್ಲೂ ಗುರು ತಾ ಹಸಿರೂ
ದೊರಕದೆ ಇರದೂ ಅನ್ನ ನೀರೂ
ಭಾವಿಕ ಬಕುತರಿಗಿದೇ ನಿಜ ಸೂರು||

ಭಜನೆಯ ಝೇಂಕಾರ ಇಲ್ಲಿ ಬಲು ಜೋರೂ
ಸಾಕ್ಷಿ ಸ್ವರೂಪನು ತಾನಿಲ್ಲಿ ಸದ್ಗುರು
ಇಲ್ಲಿಗೆ ಬಂದರೆ ಭವಬಂಧನದಿಂ ಪಾರೂ
ಪಡೆವಂತೆ ಸ್ವರ್ಗವ ಹೂವಿನಿಂ ನಾರೂ ||
ಗುರುನಾಥ ಗಾನಾಮೃತ 
ಬಂದಾ ಬಂದಾ ಸದ್ಗುರುರಾಯಾ
ರಚನೆ: ಅಂಬಾಸುತ 


ಬಂದಾ ಬಂದಾ ಸದ್ಗುರುರಾಯಾ
ಸಖರಾಯಪುರದಿಂದಾ
ನಿಂದಾ ನಿಂದಾ ಎನ್ನ ಮನಮಂದಿರದೊಳೂ ||ಪ||

ದಟ್ಟಿಯೊಂದನು ಸುತ್ತಿಕೊಂಡೂ
ವಿಭೂತಿ ಪಟ್ಟೆಯಾ ಧರಿಸೀಕೊಂಡೂ
ಹೆಗಲಲ್ಲಿ ಯಜ್ಞೋಪವೀತಾ ಇರಿಸೀ
ಭಕುತಾ ಜನರಾ ಹರಸೀ ಹರಸೀ ||೧||

ನಸುನಗುತಾ ಒಮ್ಮೇ ಹುಸಿಕೋಪದೊಳು ಒಮ್ಮೇ
ಹಸಿದಾ ಹೊಟ್ಟೆಗೇ ಮೃಷ್ಟಾನ್ನವೀಯುತಾ
ಮಾತಿನಾ ಮಂಥನದೊಳೂ
ಪರಮಾರ್ಥ ಹೇಳುತಾ ಹೇಳುತಾ ||೨||

ಕೆದರಿದಾ ಕೂದಲೂ ಮಿಂಚಿನಾ ಕಣ್ಗಳೂ
ಸಿಂಹದಾ ತೆರನಾಗೀ ಸುರಮುನಿಯಂತೇ ವೇಂಕಟಾಚಲನೆಂಬೋ ನಾಮವ ಧರಿಸೀ
ಅಂಬಾಸುತನಾ ಅನವರತಾ ಪೋಷಿಸೇ ||೩||
ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಅಂತರಂಗೇ ಚಿತ್ತಶುದ್ಧಿಃ
ಬಹಿರಂಗೇ ಭಾವಶುದ್ಧಿಃ ।
ಪ್ರಸೀದ ಸದ್ಗುರೋ ಸದಾ 
ಹೃದಿ ತೇ ನಾಮಕೀರ್ತನಮ್ ।।

ಅಂತರಂಗದಲ್ಲಿ ಚಿತ್ತಶುದ್ಧಿಯ ಮಾಡಿ ಬಹಿರಂಗದಲ್ಲಿ ಭಾವದ ಶುದ್ಧಿಯ ಮಾಡಿ..ಹೇ ಸದ್ಗುರುವೇ...ನಮ್ಮ ಹೃದಯದಲ್ಲಿ ಯಾವಾಗಲೂ ನಿಮ್ಮ ನಾಮಸ್ಮರಣೆಯೇ ತುಂಬಿರುವಂತೆ ಅನುಗ್ರಹಿಸು...

ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಗುರುನಾಥ ಗಾನಾಮೃತ 
ನಿನ್ನ ಕಾರುಣ್ಯಕೇ ಎಣೆಯುಂಟೆ ಗುರುವೇ
ರಚನೆ: ಅಂಬಾಸುತ 


ನಿನ್ನ ಕಾರುಣ್ಯಕೇ ಎಣೆಯುಂಟೆ ಗುರುವೇ
ನೀ ತಾಯಿ ನಾ ಕಂದ ನಿನಗಿಂತ ಮಿಗಿಲುಂಟೇ ||ಪ||

ಜನುಮ ಜನುಮಾಂತರದ ಈ ಸಂಬಂಧದೊಳು
ನಾ ಸುಖವಾಗಿಹೆ ಮತ್ತೆ ಮತ್ತೆ ನಿನ್ನೇ ಬೇಡಿಹೇ
ಮುಕ್ತಿಯ ನೀಡದಿರೋ ಇದ ಕೊನೆಗಾಣಿಸದಿರೋ
ನಿನ್ನ ಪದತಲದಲ್ಲೇ ಎನಗಾನಂದ ಗುರುವೇ ||೧||

ನಾ ಮಾಡಿದಾ ತಪ್ಪುಗಳನೆಲ್ಲಾ ಮನ್ನಿಸಿದೇ
ಅನ್ನ ನೀರನು ನೀಡಿ ಎನ್ನ ಸಲಹುತಲಿರುವೇ
ಬೇಡಿಸೀಕೊಳ್ಳದೇ ನೀಡಿದೇ ಎನಗೆ ವರವಾ
ನಾ ಧೇಹಿ ಎನಲೂ ಬಿಡದೇ ಓ ಗುರುವೇ ||೨||

ಜ್ಞಾನಹೀನನು ನಾನು ಭಕ್ತಿಹೀನನೂ ನಾನೂ
ನಾನು ನಾನೆಂಬುದಾ ತುಂಬಿಕೊಂಡಿಹವನು ನಾನೂ
ನಾನತ್ವವನು ಕಳೆಯೆ ನೀ ಎನ್ನ ಮುಂದಿರುವೇ
ನಿನ್ನ ದಾಸತ್ವವನು ನೀಡಿ ಪೊರೆಯೋ ಗುರುವೇ ||೩||

ಸಚ್ಚಿದಾನಂದಾ ಸಖರಾಯಪುರಾಧೀಶನೇ
ಶ್ರೀವೇಂಕಟಾಚಲ ನಾಮಾಂಕಿತನೇ
ಕಾಯೋ ಎನ್ನಲು ನಾನ್ಯಾರೋ
ಅನವರತ ಅಂಬಾಸುತನಾ ನೀ ಕಾಯುತಿರಲೂ ||೪||