ಗುರುನಾಥ ಗಾನಾಮೃತ
ನಿನ್ನ ಕಾರುಣ್ಯಕೇ ಎಣೆಯುಂಟೆ ಗುರುವೇ
ರಚನೆ: ಅಂಬಾಸುತ
ನಿನ್ನ ಕಾರುಣ್ಯಕೇ ಎಣೆಯುಂಟೆ ಗುರುವೇ
ನೀ ತಾಯಿ ನಾ ಕಂದ ನಿನಗಿಂತ ಮಿಗಿಲುಂಟೇ ||ಪ||
ಜನುಮ ಜನುಮಾಂತರದ ಈ ಸಂಬಂಧದೊಳು
ನಾ ಸುಖವಾಗಿಹೆ ಮತ್ತೆ ಮತ್ತೆ ನಿನ್ನೇ ಬೇಡಿಹೇ
ಮುಕ್ತಿಯ ನೀಡದಿರೋ ಇದ ಕೊನೆಗಾಣಿಸದಿರೋ
ನಿನ್ನ ಪದತಲದಲ್ಲೇ ಎನಗಾನಂದ ಗುರುವೇ ||೧||
ನಾ ಮಾಡಿದಾ ತಪ್ಪುಗಳನೆಲ್ಲಾ ಮನ್ನಿಸಿದೇ
ಅನ್ನ ನೀರನು ನೀಡಿ ಎನ್ನ ಸಲಹುತಲಿರುವೇ
ಬೇಡಿಸೀಕೊಳ್ಳದೇ ನೀಡಿದೇ ಎನಗೆ ವರವಾ
ನಾ ಧೇಹಿ ಎನಲೂ ಬಿಡದೇ ಓ ಗುರುವೇ ||೨||
ಜ್ಞಾನಹೀನನು ನಾನು ಭಕ್ತಿಹೀನನೂ ನಾನೂ
ನಾನು ನಾನೆಂಬುದಾ ತುಂಬಿಕೊಂಡಿಹವನು ನಾನೂ
ನಾನತ್ವವನು ಕಳೆಯೆ ನೀ ಎನ್ನ ಮುಂದಿರುವೇ
ನಿನ್ನ ದಾಸತ್ವವನು ನೀಡಿ ಪೊರೆಯೋ ಗುರುವೇ ||೩||
ಸಚ್ಚಿದಾನಂದಾ ಸಖರಾಯಪುರಾಧೀಶನೇ
ಶ್ರೀವೇಂಕಟಾಚಲ ನಾಮಾಂಕಿತನೇ
ಕಾಯೋ ಎನ್ನಲು ನಾನ್ಯಾರೋ
ಅನವರತ ಅಂಬಾಸುತನಾ ನೀ ಕಾಯುತಿರಲೂ ||೪||
No comments:
Post a Comment