ಒಟ್ಟು ನೋಟಗಳು

Tuesday, April 25, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 47

 

ಒಂದು ಕ್ಯಾನ್ ನೀರಿಗೆ ತುಂಬಿ ಹರಿದ ಕೆರೆ ! 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಅದಾವ ಜನ್ಮದ ಪುಣ್ಯವೋ ಗುರುನಾಥರ ದರ್ಶನವಾಗುವುದರ ಜೊತೆಗೆ, ಪರಮ ಪೂಜ್ಯ ಚಂದ್ರಶೇಖರ ಭಾರತಿಗಳ ಪಾದುಕೆಗಳ ಸೇವೆ, ಆರತಿ ಎತ್ತುವ ಭಾಗ್ಯ ನಮ್ಮ ಗುರುಭಕ್ತರಾದ ನಾಗರಾಜ್ ದಂಪತಿಗಳಿಗೆ ದೊರಕಿತು. 

'ಎಲ್ಲರಿಗೂ ನಾವು ದೀಕ್ಷಿತರ ಮೊಮ್ಮಗಳೆಂದು ಗುರುನಾಥರು ಹೇಳಿದಂತೆ ಹೇಳಿದಾಗ ಎಲ್ಲ ಆದರೆ ಆತಿಥ್ಯಗಳು ಪೂಜಾ ಸೌಕರ್ಯವೂ ಒದಗಿ ಬಂದದ್ದು ನೆನೆದರೆ ಇಂದು ಆಶ್ಚರ್ಯವಾಗುತ್ತೆ. ಇದೇನು ನಿಜವೋ, ಕನಸೋ ಎಂದು ನಾನು ಆಗ ಚಿಂತಿಸತೊಡಗಿದ್ದೆ. ಏಕೆಂದರೆ ಗುರುನಾಥರ ದರ್ಶನ ಭಾಗ್ಯ ಸಿಕ್ಕರೆ ಸಾಕೆಂದು ಪರಿತಪಿಸುತ್ತಿದ್ದ ನಮಗೆ, ಗುರುನಾಥರ ಅಪಾರ ಕರುಣೆ ಮೂಕವಿಸ್ಮಿತವಾಗಿಸಿತ್ತು. ಇದರ ಜೊತೆಗೆ ಗುರುನಾಥರ ತಾಯಿ ನಮ್ಮ ಶ್ರೀಮತಿಯನ್ನು ಕೂರಿಸಿ ಒಬ್ಬ ಸುಮಂಗಲಿಗೆ ನೀಡುವ ಎಲ್ಲ ಆದರ ಆತಿಥ್ಯವನ್ನು ಮಾಡಿದ್ದರು. ಈ ಪರಿಯ ಗುರುಪ್ರೀತಿಗೆ ನಾವು ತತ್ತರಿಸಿಹೋದೆವು. ನಾಗರಾಜ್ ಅವರು ತಮ್ಮ ಅನುಭವವನ್ನು ಹಂಚಿಕೊಂಡರು. 

ಕೊಡುವವನು ಕೊಟ್ಟಾಗ ಕೋಡಿ ಹರಿಯುವಷ್ಟು ಕೊಡುತ್ತಾನೆಂಬ ಮಾತು ಇವರ ಜೀವನದಲ್ಲಿ ಅಂದು ಸತ್ಯವಾಗಿತ್ತು. 

ಒಬ್ಬ ವ್ಯಕ್ತಿಗೆ ಮಾತ್ರವಲ್ಲ, ಒಂದು ಸಮಷ್ಟಿಗೂ ದೊರೆತ ವಿಚಾರ ಕೇಳಿ, ಎಷ್ಟು ಅದ್ಭುತವಾಗಿದೆ !!

ಎಲ್ಲ ಊರುಗಳಂತೆ ಒಂದು ಊರು ಕಣಕಟ್ಟೆ, ಅಲ್ಲೊಂದು ಕೆರೆ. ಅದೇ ಬೆಳೆಗೆ, ಊರಿಗೆ ಆಧಾರ. ಆದರೆ ಪ್ರಕೃತಿ ವೈಪರೀತ್ಯದಿಂದ ನೀರಿಲ್ಲದೇ ಒಣಗಿ ಪ್ರಾಣಿ, ಪಕ್ಷಿ, ಮನುಷ್ಯರಾದಿಯಾಗಿ ತೊಂದರೆಯಲ್ಲಿ ಸಿಕ್ಕಾಗ ಕರುಣಾಳು ಗುರುನಾಥರ ದೃಷ್ಟಿ ಅತ್ತ ಹರಿಯಿತಂತೆ. ಊರವರ ಬೇಡಿಕೆ, ಪ್ರಾಣಿಮಾತ್ರರ ಹಿತಚಿಂತನೆಯ ಗುರುನಾಥರು ಜನಗಳ ಆಕಾಂಕ್ಷೆಯ ಮೇರೆಗೆ ಒಂದು ಕ್ಯಾನ್ ನೀರನ್ನು ಆ ಕೆರೆಗೆ ತಂದು ಸುರಿದರಂತೆ. ಕೆರೆ ಆ ವರ್ಷ ತುಂಬಿ ತುಳುಕಿ ಕೋಡಿ ಹರಿದು ಗುರುನಾಥರಿಂದ ಪ್ರಾಣಿ, ಪಕ್ಷಿ, ಇಳೆ, ಬೆಳೆ ಸಮೃದ್ಧವಾಯಿತಂತೆ. ಗುರುವಿಗೆ ಅಸಾಧ್ಯವಾದುದು ಏನಿದೆ ! ಗಂಗೆಯನ್ನು ಒಂದು ಆಪೋಶನದಲ್ಲಿ ಕುಡಿದ ಮುನಿಯಂತೆ, ಒಂದು ಕ್ಯಾನಿನ ನೀರಿನಿಂದ ಕೆರೆಯನ್ನು ತುಂಬಿ ಕೋಡಿ ಹರಿಸಿದ ಗುರುನಾಥರ ಮಹತ್ಕಾರ್ಯದ ಹಿಂದೆ ಅವರ ಅಪಾರ ಕರುಣೆಯೇ ಕಂಡುಬರುತ್ತದೆ. 

ಮತ್ತೊಮ್ಮೆ ಜಗದ್ಗುರುಗಳು ಬಂದಿದ್ದಾಗ ನಮ್ಮ ಗುರುಬಂಧು ನಾಗರಾಜ್ ಅವರು ಜಗದ್ಗುರುಗಳ ದರ್ಶನಕ್ಕೆ ಆದಷ್ಟು ಬೇಗ ಹೋಗಬೇಕೆಂದು ಪ್ರಯತ್ನಿಸಿದರಾದರೂ ಬಹಳ ತಡವಾಗಿಬಿಟ್ಟಿತು. ಆಗ ನಡೆದ ವಿಚಾರಗಳನ್ನು ಅವರ ಬಾಯಿಯಿಂದಲೇ ಕೇಳೋಣ. 

'ನಾವು ಬರುವಾಗಲೇ ತಡವಾಗಿತ್ತು. ನಾವು ತಂಡ ಭಿಕ್ಷೆಯನ್ನು ಜಗದ್ಗುರುಗಳಿಗೆ ಸಮರ್ಪಿಸುವ ಅವಕಾಶವನ್ನಂತೂ ಗುರುನಾಥರು ಕರುಣಿಸಿದರು. ಎಂಟು ಹತ್ತು ಸಾವಿರ ಜನಗಳಿಗೆ ಊಟ ಉಪಚಾರ. ಅಷ್ಟೆಲ್ಲಾ ದಣಿದಿದ್ದರೂ ಗುರುನಾಥರು ಬೀದಿಗೇ ಬಂದು ಕುರ್ಚಿ ಹಾಕಿಕೊಂಡು ಕುಳಿತುಬಿಟ್ಟರು. ಗುರುನಾಥರಿಗೆ ನಮಸ್ಕರಿಸಿ ಬೇಗ ಹೊರಡಬೇಕೆಂಬುದು ನನ್ನ ಯೋಚನೆ. ನಮ್ಮ ಶ್ರೀಮತಿಗೆ ಬೇಗ ಬಂದು ಗುರುನಾಥರಿಗೆ ನಮಸ್ಕರಿಸೆಂದು ತಿಳಿಸಲು ನೋಡಿದರೆ ಅಡಿಗೆ ಪಾತ್ರೆಗಳನ್ನು ತೆಗೆದುಕೊಂಡು ಹೋಗಿ ತೊಳೆಯುವುದರಲ್ಲಿ ಅವರು ಭಾಗಿಯಾಗಿದ್ದರು. ಇದರ ಮಧ್ಯೆ ಗುರುನಾಥರು 'ವಿಪ್ರವಾಹಿನಿಯವರು... ಬಂದಿಲ್ವೇ ನಿಮ್ಮ ಮನೆಯವರು?' ಎಂದು ಕೇಳಿದರು. ಅದೆಷ್ಟೋ ಹೊತ್ತಿನ ಮೇಲೆ, ಸೀರೆಯೆಲ್ಲಾ ಒದ್ದೆ ಮಾಡಿಕೊಂಡು ಮೈಬೆವರಿಳಿಸಿಕೊಂಡು ಇವಳು ಬಂದು ನಿಂತಾಗ, ಗುರುನಾಥರು ತಮಾಷೆ ಮಾಡುತ್ತಾ 'ಹಿಂಗೆ ಬೆವರಿಳಿಸಿಕೊಂಡು ಬಟ್ಟೆ ಒದ್ದೆ ಮಾಡಿಕೊಂಡು ಬಂದರೆ ನಾನದೆಲ್ಲಾ ಒಪ್ಪುವುದಿಲ್ಲ. ಒಳಗೆ ನಡೀರಿ, ನಡೀರಿ' ಎಂದರು. ಮತ್ತೆ ಬಂದವರಿಗೆ ಹೊಸದಾಗಿ ಅಡಿಗೆ ಆಗುತ್ತಲೇ ಇತ್ತು. ಬಡಿಸುವುದು ಸಾಗೇ ಇತ್ತು". 

ಗಲಾಟೆ ದೊಂಬಿಯಿಂದ ಬಚಾವು ಮಾಡಿದ ಗುರುನಾಥರು 

"ನಮ್ಮ ಅವಸರಕ್ಕಲ್ಲಿ ಬೆಲೆ ಇರಲಿಲ್ಲ. ರಾತ್ರಿ 8ರವರೆಗೆ ಸೇವೆಗೆ ಅವಕಾಶ ನೀಡಿದ ಗುರುನಾಥರು, ರಾತ್ರಿ ಒಂಬತ್ತೂಕಾಲಿಗೆ ಇನ್ನು ನೀವು ಊಟ ಮಾಡಿ ಹೊರಡಬಹುದು ಎಂದು, ಅದಾರಿಗೋ ಹೇಳಿ ಬಸ್ ಸ್ಟಾಂಡ್ ಗೆ ಬಿಡಿಸಿದರು. ಅಷ್ಟು ಹೊತ್ತಿನ ಮೇಲೆ ಹಾಸನ ತಲುಪಿ, ಮನೆ ತಲುಪುವುದು ಹೇಗೆ ಎಂದು ಚಿಂತಿಸುತ್ತಾ, ಹಾಸನ ತಲುಪಿದಾಗ ರಸ್ತೆಯಲ್ಲಿ ಗಾಜಿನ ಚೂರುಗಳು, ಬಿಕೋ ಎನ್ನುತ್ತಿದ್ದ ಹಾಸನ. ಒಂದು ರೀತಿಯ ಸ್ಮಶಾನಮೌನ ಆವರಿಸಿತ್ತು. ಪೊಲೀಸ್ ವ್ಯಾನುಗಳು ಓಡಾಡುತ್ತಿದ್ದವು. ಆ ಸರಿರಾತ್ರಿಯಲ್ಲಿ ಇಳಿದ ನಮ್ಮನ್ನು ಪೊಲೀಸರು ವಿಚಾರಿಸಿ ನಂತರ ಒಂದು ರಿಕ್ಷಾ ತರಿಸಿ, ಅದರ ನಂಬರ್ ಗಳನ್ನೆಲ್ಲಾ ಬರೆದುಕೊಂಡು ನಮ್ಮನ್ನು ಸುರಕ್ಷಿತವಾಗಿ ಮನೆ ತಲುಪಿಸಿದ್ದರು". 

"ಆಮೇಲೆ ನಮಗೆ ತಿಳಿದ ವಿಚಾರವೆಂದರೆ ಅಂದು ಮಧ್ಯಾನ್ಹ ಸಂಜೆ ಎಲ್ಲಾ ಹಾಸನದಲ್ಲಿ ಉದ್ವಿಗ್ನ ವಾತಾವರಣವಿದ್ದು, ಅನೇಕ ಅಮಾಯಕ ಜನರು ತೊಂದರೆಗೆ ಒಳಗಾಗಿದ್ದರು. ಗುರುನಾಥರು ಮಧ್ಯಾನ್ಹವೇ ಹೊರಡಲಿದ್ದ ನಮ್ಮನ್ನು ತಡೆದು ಈ ರೀತಿ ಸಂಕಟದಿಂದ ಪಾರು ಮಾಡಿದ್ದರು. ಹತ್ತಾರು ಸಾವಿರ ಜನಗಳ ಊಟ ತಿಂಡಿ ವ್ಯವಸ್ಥೆ ಜಗದ್ಗುರುಗಳ ಉಪಚಾರ, ಈ ಎಲ್ಲಾ ಗುರುತರ ಜವಾಬ್ದಾರಿಗಳ ಮಧ್ಯೆಯೂ ತಮ್ಮ ಪ್ರತಿಯೊಬ್ಬ ಭಕ್ತರ ಬಗ್ಗೆಯೂ ಚಿಂತಿಸುತ್ತಿದ್ದ ಆ ಕರುಣಾಳಿಯ ಪ್ರೀತಿಗೆ, ರಕ್ಷೆಗೆ, ನಾವೇನು ಕೊಡಲು ಸಾಧ್ಯ? ಒಂದು ನಮಸ್ಕಾರ, ನಿರಂತರ ಅವರ ಧ್ಯಾನ, ಅದೂ ಅವರ ಕೃಪೆಯಿಂದ ಮಾತ್ರಾ ಸಾಧ್ಯವಲ್ಲವೇ?" ಎನ್ನುತ್ತಾರೆ ನಾಗರಾಜ್ ಅವರು. 

ಇಂದು ಎಲ್ಲ ಕೆಲಸಕ್ಕೂ ಕಾರ್ಯಕಾರಣ ಸಂಬಂಧಗಳ ತಾಕಲಾಟದಲ್ಲಿ ಮುಳುಗಿದ ನಮಗೆ ಇಂತಹ ಸತ್ಪುರುಷರು ದೊರಕಿರುವುದು, ಅವರ ನಿತ್ಯ ಲೀಲೆಗಳನ್ನು ಕೇಳುವ ಸೌಭಾಗ್ಯ ದೊರಕಿರುವುದೇ ಭಾಗ್ಯವಲ್ಲವೇ? 

ಪ್ರಿಯ ಓದುಗ ಗುರುಬಾಂಧವರೇ, ಗುರುನಾಥರ ಕೋಟಿ ಕೋಟಿ ಮುಖಗಳ ಅನಾವರಣ ನಿಮಗಾಗಿ ಆಗುತ್ತಲಿದೆ. ನಾಳಿನ ಸತ್ಸಂಗಕ್ಕೂ ಬರುವಿರಲ್ಲಾ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

Monday, April 24, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 46

 

ಕಾಲ ಬರದೇ ಗುರುದರ್ಶನ ಅಸಾಧ್ಯ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


'1990ರಿಂದ ಸಖರಾಯಪಟ್ಟಣದ ಗುರುನಾಥರ ಬಗ್ಗೆ ಕೇಳಿದ್ದೆ... ಅವರೊಬ್ಬರು ಜ್ಯೋತಿಷ್ಕರು ಎಂದು ಕೆಲವರಂದಿದ್ದರು. ತಮ್ಮ ಬಳಿ ಬಂದವರಿಗೆಲ್ಲಾ ಹೋಗುವ ಚಾರ್ಜನ್ನು ಕೊಟ್ಟು ಕಳುಹಿಸುತ್ತಾರಂತೆ. ಅನೇಕ ಜನರಿಗೆ ಒಳ್ಳೆಯದಾಗಿದೆ' ಎಂದೆಲ್ಲಾ ಕೇಳಿದ್ದೆ. ಅತ್ಯಂತ ಕಷ್ಟದ ದಿನಗಳಲ್ಲಿ ನಾನಿದ್ದೆ. ಏನೂ ಮಾಡಿದರೂ ಕೈ ಹತ್ತುತ್ತಿರಲಿಲ್ಲ. ಒಂದು ಪತ್ರಿಕೆಯನ್ನು 1999ರಲ್ಲಿ ಪ್ರಾರಂಭಿಸಿದೆ. ಆಗಲೂ ಕಷ್ಟದಿಂದ ಹೊರಬರಲಾಗಲಿಲ್ಲ. ಅವಧೂತರನ್ನು ಹೋಗಿ ನೋಡಬೇಕೆಂದು ಮನಸ್ಸು ತುಡಿಯುತ್ತಿದ್ದರೂ ಸಖರಾಯಪಟ್ಟಣಕ್ಕೆ ಹೋಗಲಾಗದಂತಹ ಪರಿಸ್ಥಿತಿಗಳೇ ಬರುತ್ತಿದ್ದವು. ನಾನಂತೂ ಹೋಗಲಾಗಲಿಲ್ಲ. ನಮ್ಮ ಪತ್ರಿಕೆಯನ್ನಾದರೂ ಅವರಿಗೆ ತಲುಪಿಸೋಣವೆಂದು, ಗುರುನಾಥರ ವಿಳಾಸ ಪಡೆದು ನಮ್ಮ ಪತ್ರಿಕೆಗಳನ್ನು ಕಳಿಸುತ್ತಿದ್ದೆವು. ಆ ಪತ್ರಿಕೆ ಗುರುನಾಥರ ಕೈ ತಲುಪಿ, ಅವರ ಕಣ್ಣುಗಳು ಅದರ ಲೇಖನಗಳ ಮೇಲೆ ಹರಿದಿದ್ದರಿಂದ, ಒಂದು ರೀತಿ ನನ್ನ ತಾಪತ್ರಯಗಳು ಹರಿಯತೊಡಗಿದವೇನೋ? ಅವರನ್ನು ನೋಡುವ ಮನದಿಚ್ಛೆಯಂತೆ ಸಖರಾಯಪಟ್ಟಣಕ್ಕೂ ಹೊರಟೆವು. ಒಂದು ವೇಳೆ ಅವರು ಸಿಗದಿದ್ದರೆ ಏನು ಮಾಡುವುದು? ಅವರು ಅಷ್ಟು ಸುಲಭವಾಗಿ ಸಿಗುವುದಿಲ್ಲವಂತೆ.. ಎಂಬೆಲ್ಲಾ ವಿಚಾರಗಳು ಅದು ಹೇಗೆ ನನ್ನ ತಲೆಯೊಳಗೆ ಬಂದವೋ.... ನನಗೇ ತಿಳಿಯಲಿಲ್ಲ..... ಬಹುಶಃ ಗುರುನಾಥರನ್ನು ಕಾಣುವ, ಅವರ ಪಾದಗಳಿಗೆ ಎರಗಿ ನಮ್ಮದೆಲ್ಲಾ ಅರ್ಪಿಸಿ, ನಿಶ್ಚಿಂತರಾಗಿ, ಆ ಅಚಿಂತ್ಯನ ಪದತಲದೊಳಗೆ ಇರುವುದು ಅಷ್ಟು ಸುಲಭವಲ್ಲವೋ, ನನ್ನ ಕರ್ಮ ಹರಿದಿರಲಿಲ್ಲವೋ, ಗುರುವನ್ನು ಕಾಣುವ ಕಾಲ ಯಾವತ್ತೂ ಬರುವುದೋ ನನಗೇ ಅರಿಯಲಾಗಲಿಲ್ಲ ಆಗ' ಎಂದು ತಮ್ಮ ಅಳಲನ್ನು, ಗುರುನಾಥರ ದರ್ಶನವಾಗುವ ಮೊದಲಿಗೆ ಅವರಿದ್ದ ಸ್ಥಿತಿಗಳನ್ನು ನಮ್ಮ ನಿತ್ಯ ಸತ್ಸಂಗಕ್ಕೆ ಹಂಚಿಕೊಂಡವರು ವಿಪ್ರ ವಾಹಿನಿಯ, ಹಾಸನದ ಗುರುಭಕ್ತರಾದ ಶ್ರೀಯುತ ನಾಗರಾಜ್ ಅವರು. 

'ಅಂತೂ ಯಾರ್ಯಾರನ್ನೋ ಕರೆದೆವು.. ಕೊನೆಗೆ ನಾವಿಬ್ಬರೂ ಸಖರಾಯಪಟ್ಟಣಕ್ಕೆ ಬಂದು ಗುರುನಾಥರ ಮನೆಗೆ ಬಂದಾಗ, ಬಂದ ದಾರಿಗೆ ಸುಂಕವಿಲ್ಲವೆಂಬಂತೆ, ಗುರು ದರ್ಶನವಿಲ್ಲದೇ ಹೊರಡಬೇಕಾಯಿತು. ಮನಸ್ಸಿನ ರೀತಿ ನೋಡಿ ಎಷ್ಟು ವಿಚಿತ್ರವಾಗಿದೆ! ಎಂತಹ ಅಲ್ಪತೃಪ್ತರು ನಾವು, ಗುರುನಾಥರ ದರ್ಶನವಾಗಲಿಲ್ಲವೆನ್ನುವುದರ ಬಗ್ಗೆ ಆಳವಾಗಿ ಚಿಂತಿಸುವುದರ ಬದಲು ಐಯ್ಯನ ಕೆರೆ ನೋಡಲು ಹೋದೆವು... ನಮ್ಮ ಜೀವನದ ಮತ್ತೊಂದು ದಿನ ಹೀಗೆ ವ್ಯರ್ಥವಾಯಿತು. ಗುರುನಾಥರ ದರ್ಶನವಾಗದೇ- ಗುರು ಅಷ್ಟು ಸುಲಭವೇ? ದೊರಕಲು, ಐಯ್ಯನ ಕೆರೆಯ ಪ್ರವಾಸದಲ್ಲೇ ಮನ ಸಂತೃಪ್ತವಾಗಿತ್ತು. ಮನದಲ್ಲಿ ಭರಪೂರ ಭಾವವಿರಲಿಲ್ಲವೋ ಏನೋ? ಆಲ್ಟರ್ನೇಟ್ ಪ್ರೋಗ್ರಾಮ್ ಅನ್ನು ನಾವೇ ರೂಪಿಸಿಕೊಂಡಿದ್ದ ನಾವು, ಅಷ್ಟನ್ನೇ ಪಡೆದೆವು. ಅಂದು ಅವನು ಸಿಕ್ಕೇ ಸಿಗುತ್ತಾನೆಂಬ ದೃಢ ಭಾವ ಮನದಲ್ಲಿದ್ದಿದ್ದರೆ ಗುರುನಾಥರ ದರ್ಶನ ಅಂದೆ ಆಗುತ್ತಿತ್ತೇನೋ?'

ಹೀಗೆ ಗುರುನಾಥರ ದರ್ಶನದ ಹಿಂದಿನ ದಿನಗಳನ್ನು ಸಿಂಹಾವಲೋಕನ ಮಾಡಿದರು ನಾಗರಾಜ್ ಅವರು.


ದತ್ತ ದರ್ಶನವೂ ಗುರುಸಾನ್ನಿಧ್ಯವೂ 


ಗುರುಸಂಕೀರ್ತನವು ಮುಂದುವರೆಯಿತು. ಗುರುದರ್ಶನವಾದ ಸಂತಸ ನಾಗರಾಜ್ ಅವರ ಮಾತಿನಲ್ಲಿ ಪುಟಿದು ಕಾಣುತ್ತಿತ್ತು. 

'2002ರ ನವೆಂಬರ್ ತಿಂಗಳ ಒಂದು ದಿನ ಗುರುನಾಥರನ್ನು ಕಾಣಲೇಬೇಕೆಂಬ ಪ್ರಬಲ ಇಚ್ಛೆಯಿಂದ ನಾವು ಗುರುನಾಥರ ಮನೆ (ವಾಟರ್ ಟ್ಯಾಂಕ್ ಬಳಿ ಇದ್ದ ಮನೆಗೆ) ಯ ಒಳಗೆ ಭಯ ಭಕ್ತಿಯಿಂದ ಅಡಿ ಇಟ್ಟೆವು. 'ಗುರುನಾಥರಿದ್ದಾರೆ. ವಿಶ್ರಾಂತಿ ಪಡೆಯುತ್ತಿದ್ದಾರೆ' ಎಂಬ ಮಾತು ಕೇಳಿದಾಗ ಗುರುನಾಥರನ್ನು ಕಂಡಷ್ಟೇ ಸಂತಸವನ್ನು ಆ ಮಾತುಗಳು ನನಗೆ ನೀಡಿದ್ದವು. ಇದಕ್ಕೆ ಮೊದಲು ಕಣಿವೆ ಬಳಿ ದತ್ತನ ದರ್ಶನ ಮಾಡಬೇಕೆಂದುಕೊಂಡಾಗ, ಅದ್ಯಾರೋ 'ಅಲ್ಲಿ ನಿಮಗೆ ಏನೂ ಅನುಕೂಲವಾಗದು, ಬಾಗಿಲು ಮುಚ್ಚಿರುತ್ತೆ.. ಹಾಗೆ ಹೀಗೆ ಎಂದು' ಏನೇನೋ ಹೇಳಿದ್ದರು. ನಾವಂತೂ ಅಲ್ಲಿಳಿದು ಹೋದಾಗ ದತ್ತನ ದರ್ಶನವಾದುದಲ್ಲದೇ, ತುಂಬಾ ಆದರದಿಂದ ಅಲ್ಲಿನ ಜನ ನಮ್ಮೊಂದಿಗೆ ವರ್ತಿಸಿದರು. ಇದೆಲ್ಲಾ ಗುರುದರ್ಶನವಾಗುವುದಕ್ಕೆ ಪೂರ್ವ ಶುಭ ಲಕ್ಷಣಗಳಾಗಿದ್ದವು'. 

ಗುರುನಾಥರು ಹೊರಗೆ ಬಂದರು. ಇರುವೆ ಬೆಲ್ಲಕ್ಕೆ ಮುತ್ತುವಂತೆ ಜನ ಅದಾಗಲೇ ಗುರುನಾಥರ ಮನೆಯಲ್ಲಿ ಬಂದು ಸೇರಿಬಿಟ್ಟರು. ಗುರುನಾಥರೊಂದಿಗಾದ ಮಾತುಕತೆಯನ್ನು, ಪ್ರಿಯ ಗುರುಬಾಂಧವರೇ ಗುರುಭಕ್ತರಾದ ನಾಗರಾಜರೊಂದಿಗೇ ನೀವು ಕೇಳಿಕೊಳ್ಳಿ. 

"ನಮ್ಮ ಕಡೆ ನೋಡಿದ ಗುರುಗಳು 'ಏನು ಯಾರ್ಯಾರನ್ನೋ ಜೊತೆಗೆ ಕರೆದುಕೊಂಡು ಬಂದುಬಿಟ್ಟರೆ ಗುರು ಸಿಕ್ತಾನಾ, ಅವರಿಗೆ ಬೇಕಾದರೆ ಅವರೇ ಬರಬೇಕು. ಒತ್ತಾಯಿಸಿ ಕರೆತರುವುದಲ್ಲ'. ಗುರುನಾಥರು ಯಾರನ್ನು ಕುರಿತು ಮಾತನಾಡಿದರೋ, ನಮಗಂತೂ ಅದರ ಚಾಟಿ ಏಟು ತಲುಪಿತ್ತು. ಎಲ್ಲರಿಗೂ ಅವರವರ ಸಮಸ್ಯೆಗಳಿಗೆ ಉತ್ತರಿಸಿ ಕಳಿಸುತ್ತಿದ್ದರು. ನನ್ನ ಶ್ರೀಮತಿಯನ್ನು ಕುರಿತು 'ನಿನ್ನ ಹೆಸರು ಶಾಂತಾ ಅಲ್ಲವೇ? ಕಣಕಟ್ಟೆಯವರಲ್ಲವೇ? ನಿಮ್ಮ ಊರಿನ ಕೆರೆಗೆ ಒಂದು ಕ್ಯಾನ್ ನೀರು ಹಾಕಿ ಬಂದಿದ್ದೆ' ಎಂದರು. ಕೇವಲ ನಮ್ಮ ಮನೆಯಲ್ಲಿ ಕರೆಯುವ ಹೆಸರು ಗುರುನಾಥರಿಗೆ ಅದು ಹೇಗೆ ತಿಳಿದಿತ್ತೋ ನನ್ನನ್ನು ನೋಡುತ್ತಾ.... 'ನಿಮ್ಮ ವಿಪ್ರ ವಾಹಿನಿ ನನಗೆ ಬರುತ್ತಿದೆ. ನೀವು ಸ್ವಲ್ಪ ಹೊತ್ತು ಇರಿ. ಮಾರ್ಚ್ ವರೆಗೆ ಕಾಯಿರಿ ಎಲ್ಲ ಸರಿಯಾಗುತ್ತದೆ' ಎಂದರು. ಅದೇ ಸಮಯದಲ್ಲಿ ಒಬ್ಬ ಆಟೋದವರನ್ನು 'ನೀವು ರಸ್ತೆಯಲ್ಲಿ ಮುಖವೆಲ್ಲಾ ಸುಟ್ಟುಕೊಂಡವರೊಬ್ಬರನ್ನು ನೋಡಿ ಬಂದಿರಲ್ಲಾ' ಎಂದರು ಗುರುನಾಥರು. ಅಷ್ಟು ಹೊತ್ತಿಗೆ ಅಲ್ಲಿಗೆ ಮತ್ತೊಬ್ಬರು ಬಂದರು. ಅವರನ್ನು ನೋಡಿ ಗುರುನಾಥರು 'ಏನ್ಸಾರ್ ಏನೋ ತರಿಸ್ತೀನಿ ಅಂದಿದ್ದಿರಿ' ಎಂದಾಗ, ಅಲ್ಲಿ ಕುಳಿತಿದ್ದವರಿಗೆಲ್ಲ ಬಿಸಿ ಬಿಸಿ ಮಸಾಲೆ ದೋಸೆ ಸರಬರಾಜಾಯಿತು. ನಮ್ಮ ಕಡೆ ನೋಡುತ್ತಾ 'ನೀವು ಮನೆಗೆ ಹೋಗಿ. ಚಂದ್ರಶೇಖರ ಭಾರತೀ ಸ್ವಾಮಿಗಳ ಪಾದುಕೆಗೆ ಪೂಜೆ ಮಾಡಿ ಬನ್ನಿರಿ. ಅಲ್ಯಾರಾದರೂ ಏನಾದರೂ ನೀವ್ಯಾರೆಂದು ಕೇಳಿದರೆ, ದೀಕ್ಷಿತರ ಮೊಮ್ಮಗಳು ಎಂದು ಹೇಳಿರಿ' ಎಂದು ನಮ್ಮನ್ನು ಕಳಿಸಿದರು'. ನಾಗರಾಜ ಅವರು ತಮ್ಮ ಗುರುನಾಥರ ಆ ಮೊದಲ ಭೇಟಿಯನ್ನು ತಮ್ಮ ಮನಃಪಟಲದಲ್ಲಿ ಕಾಣುತ್ತಾ ಸುಮ್ಮನಾದರು. 

ಪ್ರಿಯ ಓದುಗ ಗುರುಬಾಂಧವರೇ, ಮೊದಲ ಭೇಟಿಯಲ್ಲಿಯೇ ಗುರುನಾಥರು ಈ ಬಂಧುಗಳಿಗೆ ಏನೆಲ್ಲಾ ನೀಡಿಬಿಟ್ಟರು. ಇದಕ್ಕೆ ಹೇಳುವುದು...... 'ಗುರುಪ್ರೀತಿ, ಕರುಣೆ ಎಂಬುದು ಹತ್ತು ತಾಯಿಯ, ಅಜ್ಜಿಯ ಪ್ರೀತಿಗಿಂತ ಮಿಗಿಲು' ಎಂದು. ಈ ಗುರುಬಂಧುಗಳ ಜೀವನದಲ್ಲಿ ಆ ದಿನ ಒಂದು ಮಹತ್ವದ ದಿನವಾಗಿತ್ತು. ಅಂತಹ ಗುರುಕರುಣೆ ನಮ್ಮ ಎಲ್ಲ ನಿತ್ಯಸತ್ಸಂಗದ ಬಂಧುಗಳಿಗೂ ಗುರುನಾಥರು ನೀಡಲಿ. ಮುಂದೇನಾಯಿತು ತಿಳಿಯಲು ನಾಳೆ ನಮ್ಮೊಂದಿಗಿರಿ ಪ್ರಿಯರೇ..... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 45

 

ಗುರು ಬಂದ, ಶಿವ ಬಂದ, ಹರ ಬಂದ ಮನೆಗೆ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


"ಗುರುನಾಥರು ನಮ್ಮ ಮನೆಗೆ ಬಂದುಬಿಟ್ಟರು. ಸಂಭ್ರಮ, ಆಶ್ಚರ್ಯ, ಆನಂದ ಎಲ್ಲಾ ಸೇರಿ ಕಿಂಕರ್ತವ್ಯ ಮೂಢಳಾಗಿದ್ದೆ. ಅದೇನೇನು ಮಾಡಿದೆನೋ? ಗುರುನಾಥರನ್ನು ಅಲ್ಲೇ ಒಳಗೆ ಕೂರಿಸಿ, ಹಾಡು ಹೇಳುತ್ತಾ ಅವರ ಪಾದ ತೊಳೆದೆ. ಭಸ್ಮವನ್ನು ತಂದು ಪಾದಗಳಿಗೆ ಹಚ್ಚಿದೆ. ಬಾಯಿಗೆ ಒಂಚೂರು ಹಾಲು ಕುಡಿಸಿದೆ. ಗೋಡಂಬಿ, ದ್ರಾಕ್ಷಿ, ಕಲ್ಲು ಸಕ್ಕರೆಗಳನ್ನು ಅರ್ಪಿಸಿದೆ. ಅಷ್ಟೇ ನನಗೆ ಹೊಳೆದದ್ದು. ಗುರುವಿನ ಪಾದ ತೊಳೆದದ್ದೇ ಪಾದಪೂಜೆ. ಆ ಭೋಳೇ ಶಂಕರ ನೀರು, ಬಿಲ್ವಪತ್ರೆಗಳಿಂದ ಸುಪ್ರೀತನಾದಂತೆ, ಆ ವಿನಾಯಕ ಕೇವಲ ದೂರ್ವಾಯುಗ್ಮಗಳಿಂದ ಪ್ರಸನ್ನನಾಗುವಂತೆ ನನ್ನ ಗುರುನಾಥ ಅತ್ಯಂತ ಸರಳ ಪಾದಪೂಜೆಯಲ್ಲಿ ತೃಪ್ತರಾದಂತೆ ಕಂಡಿತು. ಒಂದೈದು ನಿಮಿಷ ಕುಳಿತುಕೊಂಡರು. ನಂತರ ಗುರುನಾಥರು ಹೊರಟು ಕೆಳಗಿಳಿದು ಕಾರಿನ ಬಳಿ ಹೋದರು. ನಾವೂ ಹಿಂಬಾಲಿಸಿದೆವು. ಅವರೆಲ್ಲಾ ಸಖರಾಯಪಟ್ಟಣಕ್ಕೆ ಹೊರಟಿದ್ದರು. ಒಂದು ಕೋಡುಬಳೆ ಪ್ಯಾಕೆಟ್ ತೆಗೆದು ನನಗೆ ಕೊಡುತ್ತಾ 'ನೀವೂ ಅಣ್ಣನೂ ತಿನ್ನಿರಿ' ಎಂದು ಕೊಟ್ಟರು". 

"ಗೋಡಂಬಿ ಕಲ್ಲುಸಕ್ಕರೆ ಪ್ಯಾಕೆಟ್ ಗಳನ್ನು ಒಡೆದು ಅಲ್ಲಿದ್ದ ಎಲ್ಲರಿಗೂ ಹಂಚತೊಡಗಿದರು. ಅದೆಷ್ಟು ಜನ ಅಲ್ಲಿ ಸೇರಿದ್ದರೋ, ದಾರಿಯಲ್ಲಿ ಹೋಗಿ ಬರುವವರಾದಿಯಾಗಿ ಎಲ್ಲರಿಗೂ ಕೊಡುತ್ತಲೇ ಇದ್ದರು. ಅದು ಅಕ್ಷಯವಾಗತೊಡಗಿತು. ಹೀಗೆ ಅವರು ಹಂಚುತ್ತಿರುವಾಗ, ಜನ ಸೇರಿರುವುದನ್ನು ನೋಡಿದ - ಎದುರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ - ಏನೋ ಸಿಗುತ್ತದೆಂದು ಓಡಿ ಬಂದು ಕೈ ಒಡ್ಡಿದಳು. ಗುರುನಾಥರನ್ನು ನೋಡುತ್ತಿದ್ದಂತೆ ಅವಳ ಮನದಲ್ಲಿ ಏನು ಭಕ್ತಿ ಭಾವ ಬಂದಿತೋ, 'ಸಾರ್, ನಮ್ಮ ಮನೆಗೂ ಬನ್ನಿ ಸಾರ್' ಎಂದಳು. ಆಗ ಗುರುನಾಥರು 'ನಾನು ಇಲ್ಲಿಯೂ ಇರ್ತೀನಿ. ಕೋಮಾರನ ಹಳ್ಳಿಯಲ್ಲೂ ಇರ್ತೀನ, ಯಾವಾಗಲಾದರೂ ಅಲ್ಲಿಗೆ ಬಾ... ಇನ್ನೊಮ್ಮೆ ಬಂದಾಗ ಬರ್ತೀನಿ ' ಎಂದು ಹೊರಟುಬಿಟ್ಟರಂತೆ. ಮಧ್ಯಾನ್ಹ ಆ ಹುಡುಗಿ ಬಂದು 'ಅಮ್ಮಾ ನಿಮ್ಮನೆಗೆ ಬಂದವರು ಯಾರು? ನಮ್ಮನೆಗೂ ಬನ್ನಿ ಎಂದಾಗ ಕೋಮಾರನಹಳ್ಳಿಯಲ್ಲಿ ಇರ್ತೀನಿ ಅಂದ್ರು. ಆ ಊರು ಎಲ್ಲಿದೆ?' ಎಂದು ಕೇಳಿದಾಗ ನಾನು ವಿಭ್ರಾಂತಳಾಗಿ ಹೋದೆ. ನನ್ನ ಪರಮ ಗುರುವಾದ ಶ್ರೀ ಶ್ರೀ ಶಂಕರಲಿಂಗ ಭಗವಾನರ ರೂಪದಲ್ಲಿ ಗುರುನಾಥರು ನನಗೆ ಆ ದಿನ ಆಶೀರ್ವದಿಸಿದ್ದು ಹೀಗೆ". 

ಅಜ್ಜಿ ತಮ್ಮ ಮಾತನ್ನು ಕೆಲ ಕ್ಷಣಗಳಿಗೆ ನಿಲ್ಲಿಸಿದರು. ಗುರುಭಕ್ತರ ಭಾವಕ್ಕೆ, ಗುರುಭಕ್ತರ ಭಕುತಿಗೆ, ಗುರುಭಕ್ತರ ತೆರನಾಗಿ ಇರುತಿಹನು ಈ ಯೋಗಿ. ಶಿವನ ಭಕ್ತರಿಗೆ ಶಿವ, ಹರನ ಭಕ್ತರಿಗೆ ಹರ, ಶಂಕರಲಿಂಗನ ಭಕ್ತರಿಗೆ ಶಂಕರಲಿಂಗನಾಗಿ ಇರುತಿಹನು ಗುರುನಾಥ ಎಂಬುದಿನ್ನಿಲ್ಲಿ ಎಲ್ಲರಿಗೂ ವೇದ್ಯವಾಗಿಸಿದ್ದರು!


ಗುರುಕರುಣೆ ನಿರಂತರ 

"ಹೀಗೆ ಗುರುನಾಥರು ಆಗಾಗ್ಗೆ ಇಲ್ಲಿಗೆ ಬರುತ್ತಿದ್ದರು. ಅವರ ಅನುಜ್ಞೆ ಇಲ್ಲದೆ ಏನೂ ನಡೆಯದು ಎಂಬುದನ್ನು ಅನೇಕ ಉದಾಹರಣೆಗಳಿಂದ ಸ್ಪಷ್ಟಪಡಿಸಿದ್ದರು. ಗುರುವಿನ ಕಕ್ಷೆಗೆ ಒಮ್ಮೆ ಬಂದೆವೆಂದರೆ ಮುಗಿಯಿತು. ನಮ್ಮ ಮನೆಯಲ್ಲಿ ಮುಂದಾಗುವ ಭವಿಷ್ಯವನ್ನು ಬರೆದಿಟ್ಟಿದ್ದರು. ಅದನ್ನು ಒಬ್ಬರ ಕೈಯಲ್ಲಿ ಬರೆದುಕೊಟ್ಟು ಬಿಟ್ಟಿದ್ದರು. ಆ ಪತ್ರವಿದ್ದ ವ್ಯಕ್ತಿ ಕಟುಸತ್ಯವನ್ನು ತಿಳಿಸಲಾರದೆ ನನ್ನ ಕಣ್ಣು ಮರೆಸಿ ಓಡಾಡುತ್ತಿದ್ದರು. ಅನೇಕ ಬಾರಿ ಕೇಳಿದರೂ ಹೇಳದೆ ಏನೇನೋ ಸಬೂಬು ನುಡಿದಿದ್ದರು. ಎಲ್ಲ ಬಲ್ಲ ಗುರುನಾಥರಿಗೆ ಜನನ ಮರಣಗಳಾವ ಲೆಕ್ಕ! ಆದರೆ ಸಾಮಾನ್ಯ ಮನುಜರಾದ ನಾವು ಅವರಂತೆ ಇರಲು ಸಾಧ್ಯವೇ? ಹಾಗಾಗಿ ಭವಿಷ್ಯವನ್ನು ಮರೆಮಾಚಿದ್ದರು. ವಿಧಿನಿಯಮದಂತೆ ಎಲ್ಲಾ ಒಂದು ದಿನ ತಮ್ಮ ತಮ್ಮ ಆಟ ಮುಗಿಸಿ ಹೋಗುವುದು ಪ್ರಕೃತಿ ನಿಯಮ. ನಮ್ಮ ಮನೆಯವರು ನನ್ನ ಬಿಟ್ಟು ನಡೆದರು. ನಮ್ಮ ಮನೆಯವರು ಹೋದ ಹನ್ನೊಂದನೆಯ ದಿನ ಗುರುನಾಥರು ಬರೆದಿಟ್ಟ ಭವಿಷ್ಯದ ಪತ್ರ ನನ್ನ ಕೈ ಸೇರಿತು. ಮರಣದ ದಿನಾಂಕವನ್ನೂ ಬರೆದಿದ್ದರು. ನಾನೆಲ್ಲಿ ಅಧೀರಳಾಗುತ್ತೇನೋ, ನಾನೆಲ್ಲಿ ಭವಿಷ್ಯವನ್ನು ಬಾಯಿಬಿಟ್ಟು ಹೇಳಿಬಿಡುತ್ತೇನೋ ಎಂದು ಗುರುನಾಥರು ಅದನ್ನು ಮುಚ್ಚೇ ಇಟ್ಟಿದ್ದರು. ಯಾರನ್ನೂ ಬೇರೆ ಹಾದಿಗೆ ಹೋಗದಂತೆ ರಕ್ಷಿಸುವ, ಅವರ ಅನುಜ್ಞೆಯಿಲ್ಲದೆ ಏನೂ ನಡೆಯದೆಂಬುದನ್ನು ತೋರಿಸಿಬಿಟ್ಟಿದ್ದರು. ಇಂದು ಗುರು ಮಹಿಮೆ". 

ಕನಸು ಮನಸುಗಳಲ್ಲೂ ಗುರುನಾಥರು ಈ ಮಹಾತಾಯಿಗೆ ಮುಂದಾಗುವ ಅನೇಕ ವಿಚಾರಗಳನ್ನು ಪ್ರೇರಣೆ ನೀಡುತ್ತಿದ್ದರು. ಅದು ಕೇಳಿ, ಹೀಗಿದೆ..... 

"ಅಂದು ಬೆಳಗಿನ ಜಾವ ಐದು ಗಂಟೆ. ನಮ್ಮ ಮನೆಯವರು ಮಗುಟ ಉಟ್ಟು ತಟ್ಟೆ ಕೈಯಲ್ಲಿ ಹಿಡಿದು ನಿಂತಿದ್ದಾರೆ. ಗುರುನಾಥರು ಕಾವಿಯುಟ್ಟು ನಮ್ಮ ಈ ಮನೆಯ ಈ ಜಾಗದಲ್ಲಿ ಜ್ವಾಲೆಯಲ್ಲಿ ನಿಂತಿದ್ದಾರೆ. ಇದೇನಿದು ಗುರುನಾಥರು ಏಕೆ ಜ್ವಾಲೆಯಲ್ಲಿ ನಿಂತಿದ್ದಾರೆ ಎಂದು ಗಾಬರಿಯಾದ ನನಗೆ ಎಚ್ಚರವಾಯಿತು. ಏಳೂವರೆ ಗಂಟೆಗೆಲ್ಲಾ ಗುರುನಾಥರು ಏಳೆಂಟು ಜನ ಸಹಿತ ನಮ್ಮ ಮನೆಗೆ ಬಂದರು. ಸುಮ್ಮನಿರದ ನಾನು 'ಇದೇನು ಇವತ್ತು ಕಾವಿಯುಟ್ಟು ಜ್ವಾಲೆಯಲ್ಲಿ ನಿಂತಿದ್ದೀರಲ್ಲ?' ಎಂದು ಕೇಳಿಬಿಟ್ಟೆ. ಗುರುನಾಥರು ಅದಾರಿಗೋ ಹೇಳಿ ಎಲೆ ಅಡಿಕೆಯಲ್ಲಿ ನೂರು ರೂಪಾಯಿ ಇಡಿಸಿ ಕೊಟ್ಟರು. ನಾನು ಅದನ್ನು ದೇವರಗೂಡಿನಲ್ಲಿ ಇಟ್ಟೆ. ಅದು ಧರ್ಮಕಾರ್ಯಕ್ಕೆ ಎಂದು ತಿಳಿದಾಗ ಬಂದವರೆಲ್ಲರಿಂದ ದಕ್ಷಿಣೆ ಕೊಡಿಸಿದರು. ಮುಂದಿನ ಸಾರಿ ಅವರು ನಮ್ಮ ಮನೆಗೆ ಬಂದಾಗ ಮೇಲೆ ಷರಟು ಇರಲಿಲ್ಲ. ಕಾವಿ ಇಲ್ಲದೇ ಸನ್ಯಾಸಿಗಳಾಗಿಬಿಟ್ಟಿದ್ದರು". 

ಗುರುನಾಥರು ಸಂಸಾರಿಗಳಾಗಿದ್ದೇ, ಸನ್ಯಾಸಿಗಳನ್ನು ಮೀರಿದ ಮಹಾ ಸನ್ಯಾಸಿಗಳಾಗಿದ್ದರು. ಇದನ್ನು ತಮ್ಮ ಅತ್ಯಂತ ಪ್ರಿಯ ಶಿಷ್ಯೆ ಪಾರ್ವತಮ್ಮನವರಿಗೆ ಎಂದೋ ತೋರಿಸಿದ್ದ ರೀತಿ ಇದಾಗಿತ್ತು. ಕಾಷಾಯ ವಸ್ತ್ರ ಧರಿಸಿಯೇ ಸನ್ಯಾಸಿಯಾಗಬೇಕಿಲ್ಲ, ಆಶ್ರಮದಲ್ಲಿದ್ದೇ ಭಕ್ತರ ಉದ್ಧಾರ ಮಾಡಬೇಕಿಲ್ಲ, ಆ-ಶ್ರಮದ ಎಲ್ಲೇ ಮೀರಿ ಭಕ್ತರಿದ್ದಲ್ಲಿಗೇ ಹೋಗಿ ಅವರನ್ನು ಉದ್ಧರಿಸುತ್ತಿದ್ದ ಪರಿ ಅದು ಗುರುನಾಥರಿಗೆ ಮಾತ್ರ ಮೀಸಲು. ಹೀಗೆ ಮೊದಲಿನಿಂದ ಗುರುನಾಥರನ್ನು ವಿವಿಧ ಹಂತಗಳಲ್ಲಿ ಕಂಡ ಬೆಂಗಳೂರಿನ ಪಾರ್ವತಮ್ಮನವರಿಂದ ಗುರುಕಥಾಮೃತ ನಮಗೆ ಒದಗಿದ್ದಕ್ಕೆ ಅವರಿಗೊಂದು ದೀರ್ಘದಂಡ ನಮನ. 

ಗುರುಭಕ್ತರೇ, ನಾಳಿನ ಸತ್ಸಂಗದಲ್ಲಿ ಮತ್ಯಾವ ಮಹಾನುಭಾವರ ಅನುಭವ ವಾಣಿಯನ್ನು ಗುರುನಾಥರು ದಯಪಾಲಿಸುತ್ತಾರೋ ! ನಮ್ಮೊಂದಿಗೆ ಇರುವಿರಲ್ಲಾ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

Saturday, April 22, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 44

 

ಅವನು ಅಯೋಮಯ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಗುರುವಿನ ಹೆಸರು ಹೇಳಿಕೊಂಡು ಸತ್ಸಂಗ ಭಿಕ್ಷೆಗೆ ಹೊರಟಾಗ, ಅದೆಂತೆಂತಹ ಸುಗ್ರಾಹ್ಯ ವಿಚಾರಗಳನ್ನು ಗುರುನಾಥರು ಕರುಣಿಸಿದ್ದಾರೆ. ಎಂತೆಂತಹ ಸದ್ಭಕ್ತರ ದರ್ಶನ ಮಾಡಿಸಿದ್ದಾರೆ ಎಂದರೆ - ಕನಸು ಮನಸಿನಲ್ಲಿ ನಾನೆಂದೂ ಎಣಿಸಿರಲಿಲ್ಲ. 

ಮೊನ್ನೆ ಬೆಂಗಳೂರಿನಲ್ಲಿ ಶಂಕರಲಿಂಗ ಭಗವಾನರ ಅನನ್ಯ ಭಕ್ತರೂ, ಸಖರಾಯಪಟ್ಟಣದ ವೆಂಕಟಾಚಲ ಅವಧೂತರ ನಿಕಟವರ್ತಿಗಳೂ, ಗುರುಪ್ರೇಮಿಗಳೂ ಆದ ವಯೋವೃದ್ಧೆ, ಜ್ಞಾನವೃದ್ಧೆಯಾದ ಪಾರ್ವತಮ್ಮನವರ ದರ್ಶನ ಭಾಗ್ಯ ಸಿಕ್ಕಿತು. ಗುರುನಾಥರಲ್ಲಿ, ಶಂಕರಲಿಂಗ ಭಗವಾನರನ್ನೇ ಸಾಕ್ಷೀಕರಿಸಿಕೊಂಡ ಆ ತಾಯಿಯ ವಿಚಾರಗಳಿಂದು ನಮ್ಮ ನಿತ್ಯ ಸತ್ಸಂಗದ ಹೋಳಿಗೆಯ ಊಟ. ಆ ತಾಯಿ ಮಮತೆಯಿಂದ ಬಡಿಸಿದ್ದು, ಇದೋ ಗುರು ಬಂಧುಗಳೇ, ನಿಮಗಾಗಿಯೂ ಸಿದ್ಧವಿದೆ- ಗುರುಕಥಾಮೃತ ಪಾನ. 

'ನಾವು ಬೆಂಗಳೂರಿಗೆ ಬಂದಾಗಲೆಲ್ಲಾ ನಮ್ಮ ತಾಯಿ ಮತ್ತು ನಾನು ಗುರುನಾಥರ ದೊಡ್ಡಮ್ಮನನ್ನು ಕಂಡು ಸತ್ಸಂಗ ನಡೆಸಿ ಹೋಗುವುದು ವಾಡಿಕೆಯಾಗಿತ್ತು. ಹೀಗಾಗಿ ನಮ್ಮ ತಾಯಿಗೆ ಗುರುನಾಥರ ಪರಿಚಯವಾಯಿತು. ಆ ನಂತರ ನಾವು ಬೆಂಗಳೂರಿಗೆ ಬಂದು ನೆಲೆಸಿದಾಗ ಗುರುನಾಥರು ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ತಾಯಿ ಅವರೊಂದಿಗೆ ಗಂಟೆಗಟ್ಟಲೆ ಅದ್ವೈತ, ಗುರುಭಕ್ತಿಯ ಬಗ್ಗೆ ಮಾತನಾಡುತ್ತಿದ್ದರು. ನಮ್ಮ ತಾಯಿ ಇರುತ್ತಿದ್ದ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ಗುರುನಾಥರು ಬಂದಾಗ ಕಾಫಿಯನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಆ ದಿವ್ಯ ಸತ್ಪುರುಷರ ರೂಪ ಒಬ್ಬ ತೇಜಸ್ವಿ ತಪಸ್ವಿಯನ್ನು ನೆನಪಿಗೆ ತರುತ್ತಿತ್ತು. ಮನದಲ್ಲೇ ಗೌರವ ಭಾವ ಬೆಳೆದಿತ್ತು. ಆದರೆ ಅವರು ಯಾರು, ಏನು ಮಾತನಾಡುತ್ತಾರೆ ಇದೆಲ್ಲಾ ಅರಿಯದ ನಾನು ಒಂದು ದಿನ ನಮ್ಮ ತಾಯಿಯನ್ನು ಕೇಳಿದ್ದೆ - ಅದಕ್ಕವರ ಒಂದೇ ಉತ್ತರವೆಂದರೆ 'ಅಮ್ಮಾ, ಅವನು ಅಯೋಮಯ'. ಇಂದೂ ನನ್ನ ಕಿವಿಯಲ್ಲಿ ನನ್ನ ತಾಯಿ ಹೇಳಿದ, ನಿತ್ಯ ಸತ್ಯವಾದ ಗುರುನಾಥರ ಬಗ್ಗೆ ಕೇವಲ ನಾಲ್ಕೇ ಅಕ್ಷರಗಳಲ್ಲಿ ವರ್ಣಿಸಿದ ಮಾತುಗಳು ರಿಂಗಣವಾಗುತ್ತಿದೆ. ಮುಂದೆ ಅಯಾಚಿತವಾಗಿ ಅವಧೂತರ ಕೃಪೆ ನನಗಾಯಿತು. ನನ್ನ ತಾಯಿಯಾದರೋ ಗುರುವನ್ನು ಅರಸುತ್ತಾ ಕಂಡ ಕಂಡಲ್ಲಿ ಸದ್ಗುರುವಿಗಾಗಿ ಪರಿತಪಿಸುತ್ತಾ ತಿರುಗಿದ್ದರು. ಆದರೆ ನನಗೆ ಗುರುನಾಥರ ಕೃಪೆ ಅನಾಯಾಸವಾಗಿ ದೊರಕಿತು. ಇದು ನನ್ನ ಪೂರ್ವಜರ ಪುಣ್ಯವಿರಬೇಕು' ಎಂದು ಒಂದು ಹಂತದ ತಮ್ಮ ಅನುಭವವನ್ನು ಮೆಲುಕು ಹಾಕಿದರು. ಎಂಬತ್ತೈದನ್ನು ಮೀರಿದ ಆ ಮಹಾ ತಾಯಿ ಮರೆವಿನ ಮಸಿಯನ್ನು ಉಜ್ಜಿ ತೆಗೆಯುತ್ತಾ, ವೆಂಕಟಾಚಲ ಅವಧೂತರ ದಿವ್ಯ ಲೀಲೆಗಳನ್ನು ಮತ್ತೆ ಮನದಲ್ಲಿ ಕಂಡುಕೊಳ್ಳುವ ಪ್ರಯತ್ನ ಮಾಡತೊಡಗಿದರು. ಅವರ ತಾಯಿಯೂ ಒಂದು ರೀತಿಯಲ್ಲಿ ಸಾಧಕರು, ಜನ ಸಂಪರ್ಕದಿಂದ ದೂರವಿದ್ದರು. 

ಸರಳತನದ ಮಹಾನುಭಾವ: 

'ಮುಂದೆ ಗುರುನಾಥರ ಪರಿಚಯ ನಿಕಟವಾಯಿತು. ವಿಜಯಮ್ಮನ ಮನೆಗೆ ಬಂದಾಗಲೆಲ್ಲಾ ನಾನು ಹೋಗುತ್ತಿದ್ದೆ. ಭಜನೆ ಸತ್ಸಂಗಗಳಾಗುತ್ತಿತ್ತು. ಪಾದಪೂಜೆಗಳು ನಡೆಯುತ್ತಿತ್ತು. ಅದೆಂತಹ ಸರಳವಾದ ಪಾದ ಪೂಜೆಗಳು, ಆ ಮಹಾನುಭಾವರು ಭಕ್ತರ ಭಕ್ತಿಯ ಕುಸುಮವನ್ನು, ಅವರ ಪ್ರಿಯ ಸ್ನೇಹಜಲವನ್ನು, ಭಕ್ತರ ಮನದಾನಂದ ತುಳಸಿಯ ಹಾರವನ್ನು ಮಾತ್ರ ಸ್ವೀಕರಿಸುವ ಸರಳರಾಗಿದ್ದರು. ಇಂತಹವರ ಪಾದಪೂಜೆಯನ್ನು ನಾನೂ ಮಾಡಬೇಕೆಂಬ ಹಂಬಲ ದಿನದಿಂದ ದಿನಕ್ಕೆ ಅಧಿಕವಾಗತೊಡಗಿತ್ತು. 

'ಅವತ್ತು ವಿಜಯಮ್ಮನ ಮನೆಗೆ ಗುರುನಾಥರು ಬಂದಿದ್ದರು. ನನ್ನ ಆಸೆ ಈಡೇರುವ ಕಾಲ ಬಂದಿತ್ತೋ, ಗುರುನಾಥರು ನನಗೆ ಒಲಿದಿದ್ದರೋ, ವಿಜಯಮ್ಮನ ಬಳಿಗೆ ಹೋಗಿ, ನನ್ನ ಆಸೆಯನ್ನು ತಿಳಿಸಿದಾಗ ಅವರು 'ಅಯ್ಯಪ್ಪಾ ಅವರದೆಲ್ಲಾ ಇಷ್ಟಪಡೋಲ್ಲ.. ನಾನು ಹೇಗೆ ಹೇಳಲಿ ನೀವೇ ಕೇಳಿ' ಎಂದಾಗ ಧೈರ್ಯ ಮಾಡಿ ಗುರುನಾಥರು ಕುಳಿತಿದ್ದ ಬಳಿ ಬಂದೆ. ಮಂದಹಾಸ ಬೀರುವ ಗುರುವನ್ನು ಕಂಡೆ. ಆದರೂ ಮನದಲ್ಲಿ ಏನೋ ಭಯ. 'ನಮ್ಮ ಮನೆಗೂ ಬಂದು ಹೋಗಬೇಕು' ಎಂದು ಭಿನ್ನವಿಸಿಕೊಂಡೆ. ಅದಕ್ಕವರು 'ನನ್ನದೇನಿದೆ? ಸಾರಥಿ ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ' ಎಂದುಬಿಟ್ಟರು. ಆಕಾಶ ಮೂರೇ ಗೇಣು ಅನ್ನಿಸಿತು. ಕೆಳಗೆ ಹೋಗಿ ಅವರ ತಂಗಿ ಗಂಡ ಕಾರನ್ನು ತಂದಿದ್ದರು.  ಅವರ ಬಳಿಗೆ ಹೋಗಿ 'ಏನಪ್ಪಾ ಇದೇ ಮಾರ್ಗವಾಗಿ ಹೋಗುತ್ತಿದ್ದೀರಲ್ಲಾ. ಒಂದು ನಿಮಿಷ ನಮ್ಮ ಮನೆಗೂ ಬಂದು ಹೋಗುತ್ತೀರಾ' ಎಂದು ಕೇಳಿದೆ. ಅದೇನು ಉತ್ತರ ಬರುತ್ತದೋ ಎಂದು ಒದ್ದಾಡುತ್ತಿತ್ತು ಮನ. ಆದರೆ ಸುಯೋಗ ಬಂದಾಗ ಎಲ್ಲಾ ಕೂಡಿ ಬರುತ್ತದಂತೆ. ಅವರೂ 'ಆಯಿತಮ್ಮಾ' ಎಂದರು ವಿನಯದಿಂದ'. 

'ಪಾದ ಪೂಜೆ ಎಂದರೆ ಅರಿಶಿನ, ಕುಂಕುಮ, ಹೂವು, ಹಣ್ಣು ಹಂಪಲು, ಏನೇನೆಲ್ಲಾ ಬೇಕು, ಅದೇನೂ ತಯಾರಿಯೇ ಮಾಡಿಕೊಂಡಿಲ್ಲ. ಮನಸ್ಸಿನಲ್ಲಿ ಬಂತು ಕೇಳಿದೆ. ಒಪ್ಪಿದರು. ಮನೆಗೆ ದೌಡಾಯಿಸಿದೆ. ನಮ್ಮ ಯಜಮಾನರು ಅಂದು ಅದೇನೋ ಕೆಲಸವಿದೆ ಎಂದು ಮಲ್ಲೇಶ್ವರಕ್ಕೆ ಸ್ವಲ್ಪ ಹೊತ್ತಿನ ಮುಂಚೆ ಹೋಗಿದ್ದರು. ಮನೇಲಿ ಎಣ್ಣೆ ಬತ್ತಿ ಇತ್ತು. ಹಾಲಿತ್ತು. ಅರಿಶಿನ ಕುಂಕುಮವಿತ್ತು. ದೀಪದ ಕಂಬವಿತ್ತು. ಆರತಿ ಸೊಡಲುಗಳಿತ್ತು. ಬಾದಾಮಿ, ಗೋಡಂಬಿ, ಕಲ್ಲುಸಕ್ಕರೆ ಖಾಲಿಯಾಗಿತ್ತು. ಬಂದು ನೋಡಿದರೆ ಅದು ಯಾವಾಗಲೋ ಆ ಮಹಾನುಭಾವ ಸೃಷ್ಟಿ ಮಾಡಿದ್ದರು. ಒಂದು ದಕ್ಷಿಣೆ ತೆಗೆದುಕೊಡುವುದೋ, ಮನೆಯಲ್ಲಿದ್ದ ಒಂದು ವಸ್ತುವನ್ನು ಹೊಡೆಸುವುದೋ ಮಾಡೋಣವೆಂದರೆ ಆ ಗಡಿಬಿಡಿಯಲ್ಲಿ ಅದೂ ತೋಚಲಿಲ್ಲ. ಎಲ್ಲ ಅವನ ಮಾಯೆಯೇನೋ, ಲೀಲು, ವಿಜಯಮ್ಮ. ಲಲಿತ ಮೂರೇ ಜನ ಮೇಲೆ ಬಂದರು. ನಾವೆಲ್ಲಾ ಗುರುಬಂದ, ಹರಬಂದ, ಶಿವಬಂದ ಮನೆಗೆ ಎಂದು ಹಾಡತೊಡಗಿದೆವು' ಗುರುಪಾದಪೂಜೆಯ ಆ ದಿನದ ಉದ್ವೇಗ ಇಂದೂ ಅಜ್ಜಿಯ ಮುಖದಲ್ಲಿ ಎದ್ದು ಕಾಣುತ್ತಿತ್ತು. 

ಪ್ರಿಯ ಭಕ್ತರೇ, ಏನೂ ಸಲಕರಣೆಗಳಿಲ್ಲದ ಒಂಟಿ ಹೆಣ್ಣುಮಗಳು ಅದೇನು ಪಾದಪೂಜೆ ಮಾಡಿದರು. ಭಕ್ತಿಯಿಂದ ಅದೇನು ಅರ್ಪಿಸಿದರು. ಅಕಸ್ಮಾತ್ತಾಗಿ ನೆನೆದ ವಿಷಯ ಸತ್ಯ ಘಟನೆಯಾಗಿ ಬಂದಾಗ ಭಾವುಕ ಭಕ್ತರ ಮನದ ಉದ್ವೇಗಕ್ಕೆ ಸರಳತೆಯ ಪ್ರತಿರೂಪರಾದ ಗುರುನಾಥರು ಹೇಗೆ ಆಶೀರ್ವದಿಸಿದರು ಎಂಬುದನ್ನೆಲ್ಲಾ ತಿಳಿಯಲು ನಾಳಿನ ಸತ್ಸಂಗ ಪ್ರಶಸ್ತವಾದುದಿರಬಹುದು. ನಾಳೆಯೂ ನಮ್ಮೊಂದಿಗೆ ಇರುವಿರಲ್ಲಾ..... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

Friday, April 21, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 43

 

ನಿನಗೇ ಆ ಕೆಲಸವಾಗುತ್ತೆ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಒಂದು ಇಂಟರ್ ವ್ಯೂಗೆ ಹೋಗಬೇಕಿತ್ತು ಒಬ್ಬ ಗುರುಬಂಧುಗಳಿಗೆ. ಅಂದು ಅವರ ಮಾವನ ತಂದೆಯ ಶ್ರಾದ್ಧವಿತ್ತು. ಜೊತೆಗೆ ಇಂಟರ್ ವ್ಯೂಗೆ ಹೋಗಲು ದುಡ್ಡಿಲ್ಲ. ಒಳ್ಳೆಯ ಬಟ್ಟೆಗಳಿಲ್ಲ. ಮನೆಯಲ್ಲಿ ತಿಥಿಯ ಕಾರ್ಯವಿರುವುದರಿಂದ ಹೋಗಲೂ ಅಲಜಳಕು ಮನಸ್ಸು. ಅಂದು ಅವರ ಅದೃಷ್ಟವಿರಬೇಕು. ಗುರುನಾಥರು ಅವರ ಮನೆಗೆ ಬಂದವರು ಅವರ ಎಲ್ಲ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ನಿವಾರಿಸಿಬಿಟ್ಟರು. ಅವರ ಬಂಧುಗಳ ಶೂ, ಅವರ ಹೊಸ ಬಟ್ಟೆಗಳನ್ನೆಲ್ಲಾ ಕೇಳಿ ಕೊಡಿಸಿದರು. ಒಂದು ನೂರು ರೂಪಾಯಿನ ನೋಟನ್ನು ಕೊಟ್ಟು 'ಹೋಗಿಬಾರಯ್ಯಾ ಯಾಕೆ ಹೆದರುತ್ತಿ. ನಿನ್ನ ಕೆಲಸವಾಗುತ್ತಯ್ಯಾ' ಎಂದು ಆಶೀರ್ವದಿಸಿ ಕಳುಹಿಸಿಬಿಟ್ಟರು. 

ಇಂಟರ್ ವ್ಯೂಗೆ ಹೋದಾಗ ಸೆಲೆಕ್ಷನ್ ಮಾಡುವವರು, ತಮ್ಮ ಕಡೆಯ ನಾಲ್ಕು ಜನರನ್ನು ಅದಾಗಲೇ ಕರೆಸಿದ್ದರು. ಇಂಟರ್ ವ್ಯೂಗೆ ಅರ್ಜಿ ಹಾಕಿದ್ದ ಈ ಗುರುಬಂಧುಗಳನ್ನು ಹೇಗಾದರೂ ಇಂಟರ್ ವ್ಯೂಗೆ ಬರದಂತೆ ಮಾಡಿ ತಮ್ಮ ಕಡೆಯವರಿಗೇ ಕೆಲಸ ಕೊಡಿಸುವ ಎಲ್ಲ ಹುನ್ನಾರ ಅಲ್ಲಿ ನಡೆದಿತ್ತು. 

ಈ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಅರ್ಜಿ ಹಾಕಿದ ಗುರುಬಂಧುವನ್ನು ಮೊದಲು ಇಂಟರ್ ವ್ಯೂಗೆ ಕರೆದರಂತೆ. ಗುರುನಾಥರ ಕೃಪೆಯಿಂದ ಆ ಗುರುಬಂಧುವೇ ಪಾಸಾಗಿದ್ದು. ನೌಕರಿ ಅವರಿಗೇ ಸಿಕ್ಕಿತು. 'ಹೀಗೆ ಗುರುಬಂಧುಗಳ ಕಷ್ಟದ ಸಮಯದಲ್ಲಿ ಹಾಜರಾಗಿ, ಗುಡ್ಡವನ್ನು ಕಡ್ಡಿಯಾಗಿಸಿ ಕೃಪೆಗೈಯುತ್ತಿದ್ದರು. ಅವರ ಕರುಣೆ ಅಪಾರ. ಇಂದೂ ಸಹ ನಾವು ಅವರ ಹೆಸರು ಹೇಳಿಕೊಂಡು ಬದುಕುತ್ತಿದ್ದೇವೆ' ಎಂದು ಸ್ಮರಿಸುತ್ತಾ, ಅಲ್ಲದ್ದಕ್ಕೆ ಗುರುನಾಥರು ಹೇಗೆ ನೇರವಾಗಿ ಮುಖ ಮೋರೆ ನೋಡದೆ ಖಂಡಿಸುತ್ತಿದ್ದರೆಂಬುದಕ್ಕೆ ತಮ್ಮ ಮತ್ತೊಂದು ಅನುಭವವನ್ನು ಹಂಚಿಕೊಂಡರು. 

'ನಾನು ಆಗ ಕೆಲಸದಲ್ಲಿದ್ದೆ. ಚಿಕ್ಕಮಗಳೂರಿನಿಂದ ಕೆಲಸ ಮುಗಿಸಿಕೊಂಡು ಸಖರಾಯಪಟ್ಟಣದ ಅವರ ಮನೆಗೆ ಬರುತ್ತಿದ್ದೆ. ನನ್ನ ಜೊತೆ ನನ್ನ ಮತ್ತೊಬ್ಬ ಸಹೋದ್ಯೋಗಿಯೂ ನಮ್ಮ ಬಸ್ಸಿನಲ್ಲಿ ಬರುತ್ತಿದ್ದ. ನಾನು ಊರಿಗೆ ಬಂದು ಗುರುನಾಥರ ಮನೆಯ ಒಳಗೆ ಕಾಲಿಡುತ್ತಿದ್ದಂತೆ, ಗುರುನಾಥರು ನೇರವಾಗಿ ನಿಷ್ಠುರದ ನುಡಿಯಲ್ಲಿ 'ಏನಯ್ಯಾ ನೀನು ಹೀಗೆ ಮಾಡಬಹುದೇ? ಬೇರೆಯವರ ದುಡ್ಡನ್ನು ಮುಟ್ಟಿದ್ದು ಸರಿ ಏನಯ್ಯಾ' ಎಂದುಬಿಟ್ಟರು. 

ನನಗೆ ಕೂಡಲೇ ನಾನು ಮಾಡಿದ ತಪ್ಪಿನ ಅರಿವಾಯಿತು. ಗುರುನಾಥರ ಸಕಾಲಿಕವಾದ, ನೇರವಾದ ಎಚ್ಚರಿಕೆ ನನ್ನನ್ನು ತಿದ್ದಿತು. ಅಲ್ಲಿ ನಡೆದದ್ದು ಇಷ್ಟೇ: ನಾನು ನನ್ನ ಸ್ನೇಹಿತರು ಕುಳಿತಿದ್ದ ಮುಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರ ಜೇಬಿನಿಂದ ಕೆಲ ನೋಟುಗಳು ಕೆಳಗೆ ಉದುರಿದ್ದವು. ನಾನು ತೆಗೆದು ಪಕ್ಕದಲ್ಲಿದ್ದ ಮಿತ್ರನ ಕೈಗೆ ಕೊಟ್ಟಿದ್ದೆ. ಮಾರ್ಗಮಧ್ಯದಲ್ಲಿ, ಅವನ ಊರು ಬಂದಾಗ ಹಣದೊಂದಿಗೆ ಅವನು ಇಳಿದು ಹೋಗಿದ್ದ. ನಾನು ತೆಗೆದುಕೊಳ್ಳದಿದ್ದರೂ, ಅಪರಾಧಕ್ಕೆ ಸಹಕರಿಸಿದ್ದು ತಪ್ಪಾಗಿತ್ತು. 

ಎಲ್ಲ ಬಲ್ಲ ಗುರುನಾಥರು ಹೀಗೆ ತಮ್ಮ ಭಕ್ತರ ಮೇಲಿನ ಅಪಾರ ಪ್ರೀತಿಯಿಂದ ನೇರ ನುಡಿಗಳಲ್ಲಿ ತಿದ್ದಿ ತೀಡಿ ಉತ್ತಮರನ್ನಾಗಿಸುವ, ನಮ್ಮ ಅವಗುಣಗಳನ್ನು ತೊಳೆಯುವ ಮಹಾತ್ಮರಾಗಿದ್ದರು' ಎಂದರು. ಮುಂದವರು ಮನೆಯಲ್ಲಿ ಕ್ಷಮೆ ಯಾಚಿಸಿ ಗುರುಪಾದಕ್ಕೆ ಶರಣು ಹೋಗಿದ್ದರಂತೆ. 

ಬೇಗ ಗೃಹಪ್ರವೇಶ ಮಾಡಿ ಮುಗಿಸಿಬಿಡಿ 

ಗುರುಭಕ್ತರೊಬ್ಬರಿಗೆ ಗುರುನಾಥರ ನುಡಿಯೆಂದರೆ ಮುಗಿದುಯೋಯಿತು. ಗುರುಬಂಧುಗಳು ಮನೆ ಕಟ್ಟುತ್ತಿದ್ದರು. ಅದಿನ್ನೂ ಪೂರ್ತಿಯಾಗಿರಲಿಲ್ಲ. ಅಂದು ಅಲ್ಲಿಗೆ ಬಂದ ಗುರುನಾಥರು ಇದ್ದಕ್ಕಿದ್ದಂತೆ 'ಬೇಗ ಗೃಹಪ್ರವೇಶ ಮಾಡಿಬಿಡಿ' ಎಂದಷ್ಟೇ ಹೇಳಿದರು. ಯಾರನ್ನೂ ಕರೆಯಲಾಗಲಿಲ್ಲ. ಹತ್ತಿರದವರಿಗೆ ತಿಳಿಸಲೂ ಆಗಲಿಲ್ಲ. ಗುರುನಾಥರು ತಿಳಿಸಿದ ದಿನ ಗೃಹಪ್ರವೇಶ ನಡೆದೇ ಹೋಯಿತು. ಮನೆ ಅವರ ಸುಪರ್ದಿಗೆನೋ ಬಂದಿತು. ಆದರೆ ಬಂಧುಬಳಗ, ನೆಂಟರಿಷ್ಟರಿಂದ 'ಕರೆಯಲಿಲ್ಲ' ಎಂಬ ದೂರು. 'ಅದೇನು ಅವಸರವಿತ್ತು. ಇಷ್ಟು ಬೇಗ ಮನೆಕೆಲಸವೇ ಪೂರ್ಣವಾಗದೇ ಗೃಹಪ್ರವೇಶ ಮಾಡಿಬಿಟ್ಟೆಯಲ್ಲಾ?' ಎಂಬೆಲ್ಲಾ ಪ್ರಶ್ನೆಗಳು. ಈ ಮಧ್ಯದಲ್ಲಿ ಬಿಲ್ಡಿಂಗ್ ಕಂಟ್ರಾಕ್ಟರ್ ಕಡೆಯ ವಾಚ್ ಮನ್ ಅನ್ನು ಅವರು ಬಿಡಿಸಿ, ಮನೆಯ ಬಾಗಿಲನ್ನು ಮಾಡಿಸಿ, ಬೀಗವನ್ನೂ ಹಾಕಿಕೊಂಡು ಸುಪರ್ದಿಗೆ ತೆಗೆದುಕೊಂಡಿದ್ದರು. ಈ ಗೃಹಪ್ರವೇಶದ ಬಹುಪಾಲು ಕೆಲಸವನ್ನು ಗುರುನಾಥರೇ ನಿಂತು ಮಾಡಿಸಿದ್ದರೆಂಬುದು ಮತ್ತೂ ವಿಶೇಷ. 

'ಆಮೇಲೆ ಲೆಕ್ಕಾಚಾರ ಮಾಡುವಾಗ ತಿಳಿದ ವಿಷಯವೆಂದರೆ - ಒಂದು ಲಕ್ಷಕ್ಕೂ ಹೆಚ್ಚು ಹಣ ನುಂಗಿ, ಕಂಟ್ರಾಕ್ಟರ್ ಮೋಸ ಮಾಡಿದ್ದ. ಮನೆ ಕೊಡದೆ ಸತಾಯಿಸುವ ಯೋಜನೆ ಅವನದಾಗಿತ್ತು. ಆದರೆ ಗುರುನಾಥರ ಸಕಾಲಿಕ ಎಚ್ಚರಿಕೆಯ ಮಾತಿನಂತೆ ಗೃಹಪ್ರವೇಶ ನಡೆಸಿ, ಎಲ್ಲ ನಮ್ಮ ಕೈಗೆ ತೆಗೆದುಕೊಂಡಾಗ ಕಂಟ್ರಾಕ್ಟರ್ ಅಸಹಾಯಕನಾಗಿ ಬೆಪ್ಪಾಗಿದ್ದ. ತಮ್ಮ ಭಕ್ತರ ಜೀವನದಲ್ಲಿ ಮುಂಬರುವ ಅಪಾಯಗಳನ್ನು ಅರಿತ ಗುರುನಾಥರು, ಅದರಿಂದ ಮುಕ್ತವಾಗಿಸುವ ಘಟನೆಗಳನ್ನು ನೋಡಿ ಎಷ್ಟು ವಿಚಿತ್ರ - ಆದರೂ ಸತ್ಯವಾಗಿದೆ' ಎಂದು ಗುರುಬಂಧುಗಳು ತಮ್ಮ ಜೀವನದಲ್ಲಿ ನಡೆದ ಸತ್ಯ ಘಟನೆಗಳನ್ನು ಹಂಚಿಕೊಂಡರು. ಗುರುವಾಕ್ಯದ ಮಹಿಮೆಯನ್ನು ತಿಳಿಸಿದರು. 

ಪ್ರಿಯ ಗುರುಬಾಂಧವರೇ, ಕರೆಯದೇ ಬಂದು ಕಾಪಾಡುವ, ಗುರುಭಕ್ತರನ್ನು ಸಲಹುವ, ಗುರುನಾಥರ ಕೃಪೆ ಅಪಾರ - ಅನಂತ. ಹಾಗೆಯೇ ಈ ನಿತ್ಯ ಸತ್ಸಂಗವೂ ನಿರಂತರವಾಗಲೆಂಬುದೇ ನಮ್ಮ ಬಯಕೆ. ಇದಕ್ಕೆ ಗುರುನಾಥರೇ ಪ್ರೇರಕರು. ನೀವು ಗುರುಭಕ್ತರು ಪೂರಕ. ನಾಳೆಯೂ ನಮ್ಮೊಂದಿಗೆ ಇರುವಿರಲ್ಲವೇ..... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in