ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 44
ಅವನು ಅಯೋಮಯ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಗುರುವಿನ ಹೆಸರು ಹೇಳಿಕೊಂಡು ಸತ್ಸಂಗ ಭಿಕ್ಷೆಗೆ ಹೊರಟಾಗ, ಅದೆಂತೆಂತಹ ಸುಗ್ರಾಹ್ಯ ವಿಚಾರಗಳನ್ನು ಗುರುನಾಥರು ಕರುಣಿಸಿದ್ದಾರೆ. ಎಂತೆಂತಹ ಸದ್ಭಕ್ತರ ದರ್ಶನ ಮಾಡಿಸಿದ್ದಾರೆ ಎಂದರೆ - ಕನಸು ಮನಸಿನಲ್ಲಿ ನಾನೆಂದೂ ಎಣಿಸಿರಲಿಲ್ಲ.
ಮೊನ್ನೆ ಬೆಂಗಳೂರಿನಲ್ಲಿ ಶಂಕರಲಿಂಗ ಭಗವಾನರ ಅನನ್ಯ ಭಕ್ತರೂ, ಸಖರಾಯಪಟ್ಟಣದ ವೆಂಕಟಾಚಲ ಅವಧೂತರ ನಿಕಟವರ್ತಿಗಳೂ, ಗುರುಪ್ರೇಮಿಗಳೂ ಆದ ವಯೋವೃದ್ಧೆ, ಜ್ಞಾನವೃದ್ಧೆಯಾದ ಪಾರ್ವತಮ್ಮನವರ ದರ್ಶನ ಭಾಗ್ಯ ಸಿಕ್ಕಿತು. ಗುರುನಾಥರಲ್ಲಿ, ಶಂಕರಲಿಂಗ ಭಗವಾನರನ್ನೇ ಸಾಕ್ಷೀಕರಿಸಿಕೊಂಡ ಆ ತಾಯಿಯ ವಿಚಾರಗಳಿಂದು ನಮ್ಮ ನಿತ್ಯ ಸತ್ಸಂಗದ ಹೋಳಿಗೆಯ ಊಟ. ಆ ತಾಯಿ ಮಮತೆಯಿಂದ ಬಡಿಸಿದ್ದು, ಇದೋ ಗುರು ಬಂಧುಗಳೇ, ನಿಮಗಾಗಿಯೂ ಸಿದ್ಧವಿದೆ- ಗುರುಕಥಾಮೃತ ಪಾನ.
'ನಾವು ಬೆಂಗಳೂರಿಗೆ ಬಂದಾಗಲೆಲ್ಲಾ ನಮ್ಮ ತಾಯಿ ಮತ್ತು ನಾನು ಗುರುನಾಥರ ದೊಡ್ಡಮ್ಮನನ್ನು ಕಂಡು ಸತ್ಸಂಗ ನಡೆಸಿ ಹೋಗುವುದು ವಾಡಿಕೆಯಾಗಿತ್ತು. ಹೀಗಾಗಿ ನಮ್ಮ ತಾಯಿಗೆ ಗುರುನಾಥರ ಪರಿಚಯವಾಯಿತು. ಆ ನಂತರ ನಾವು ಬೆಂಗಳೂರಿಗೆ ಬಂದು ನೆಲೆಸಿದಾಗ ಗುರುನಾಥರು ನಮ್ಮ ಮನೆಗೆ ಬರುತ್ತಿದ್ದರು. ನಮ್ಮ ತಾಯಿ ಅವರೊಂದಿಗೆ ಗಂಟೆಗಟ್ಟಲೆ ಅದ್ವೈತ, ಗುರುಭಕ್ತಿಯ ಬಗ್ಗೆ ಮಾತನಾಡುತ್ತಿದ್ದರು. ನಮ್ಮ ತಾಯಿ ಇರುತ್ತಿದ್ದ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ಗುರುನಾಥರು ಬಂದಾಗ ಕಾಫಿಯನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಆ ದಿವ್ಯ ಸತ್ಪುರುಷರ ರೂಪ ಒಬ್ಬ ತೇಜಸ್ವಿ ತಪಸ್ವಿಯನ್ನು ನೆನಪಿಗೆ ತರುತ್ತಿತ್ತು. ಮನದಲ್ಲೇ ಗೌರವ ಭಾವ ಬೆಳೆದಿತ್ತು. ಆದರೆ ಅವರು ಯಾರು, ಏನು ಮಾತನಾಡುತ್ತಾರೆ ಇದೆಲ್ಲಾ ಅರಿಯದ ನಾನು ಒಂದು ದಿನ ನಮ್ಮ ತಾಯಿಯನ್ನು ಕೇಳಿದ್ದೆ - ಅದಕ್ಕವರ ಒಂದೇ ಉತ್ತರವೆಂದರೆ 'ಅಮ್ಮಾ, ಅವನು ಅಯೋಮಯ'. ಇಂದೂ ನನ್ನ ಕಿವಿಯಲ್ಲಿ ನನ್ನ ತಾಯಿ ಹೇಳಿದ, ನಿತ್ಯ ಸತ್ಯವಾದ ಗುರುನಾಥರ ಬಗ್ಗೆ ಕೇವಲ ನಾಲ್ಕೇ ಅಕ್ಷರಗಳಲ್ಲಿ ವರ್ಣಿಸಿದ ಮಾತುಗಳು ರಿಂಗಣವಾಗುತ್ತಿದೆ. ಮುಂದೆ ಅಯಾಚಿತವಾಗಿ ಅವಧೂತರ ಕೃಪೆ ನನಗಾಯಿತು. ನನ್ನ ತಾಯಿಯಾದರೋ ಗುರುವನ್ನು ಅರಸುತ್ತಾ ಕಂಡ ಕಂಡಲ್ಲಿ ಸದ್ಗುರುವಿಗಾಗಿ ಪರಿತಪಿಸುತ್ತಾ ತಿರುಗಿದ್ದರು. ಆದರೆ ನನಗೆ ಗುರುನಾಥರ ಕೃಪೆ ಅನಾಯಾಸವಾಗಿ ದೊರಕಿತು. ಇದು ನನ್ನ ಪೂರ್ವಜರ ಪುಣ್ಯವಿರಬೇಕು' ಎಂದು ಒಂದು ಹಂತದ ತಮ್ಮ ಅನುಭವವನ್ನು ಮೆಲುಕು ಹಾಕಿದರು. ಎಂಬತ್ತೈದನ್ನು ಮೀರಿದ ಆ ಮಹಾ ತಾಯಿ ಮರೆವಿನ ಮಸಿಯನ್ನು ಉಜ್ಜಿ ತೆಗೆಯುತ್ತಾ, ವೆಂಕಟಾಚಲ ಅವಧೂತರ ದಿವ್ಯ ಲೀಲೆಗಳನ್ನು ಮತ್ತೆ ಮನದಲ್ಲಿ ಕಂಡುಕೊಳ್ಳುವ ಪ್ರಯತ್ನ ಮಾಡತೊಡಗಿದರು. ಅವರ ತಾಯಿಯೂ ಒಂದು ರೀತಿಯಲ್ಲಿ ಸಾಧಕರು, ಜನ ಸಂಪರ್ಕದಿಂದ ದೂರವಿದ್ದರು.
ಸರಳತನದ ಮಹಾನುಭಾವ:
'ಮುಂದೆ ಗುರುನಾಥರ ಪರಿಚಯ ನಿಕಟವಾಯಿತು. ವಿಜಯಮ್ಮನ ಮನೆಗೆ ಬಂದಾಗಲೆಲ್ಲಾ ನಾನು ಹೋಗುತ್ತಿದ್ದೆ. ಭಜನೆ ಸತ್ಸಂಗಗಳಾಗುತ್ತಿತ್ತು. ಪಾದಪೂಜೆಗಳು ನಡೆಯುತ್ತಿತ್ತು. ಅದೆಂತಹ ಸರಳವಾದ ಪಾದ ಪೂಜೆಗಳು, ಆ ಮಹಾನುಭಾವರು ಭಕ್ತರ ಭಕ್ತಿಯ ಕುಸುಮವನ್ನು, ಅವರ ಪ್ರಿಯ ಸ್ನೇಹಜಲವನ್ನು, ಭಕ್ತರ ಮನದಾನಂದ ತುಳಸಿಯ ಹಾರವನ್ನು ಮಾತ್ರ ಸ್ವೀಕರಿಸುವ ಸರಳರಾಗಿದ್ದರು. ಇಂತಹವರ ಪಾದಪೂಜೆಯನ್ನು ನಾನೂ ಮಾಡಬೇಕೆಂಬ ಹಂಬಲ ದಿನದಿಂದ ದಿನಕ್ಕೆ ಅಧಿಕವಾಗತೊಡಗಿತ್ತು.
'ಅವತ್ತು ವಿಜಯಮ್ಮನ ಮನೆಗೆ ಗುರುನಾಥರು ಬಂದಿದ್ದರು. ನನ್ನ ಆಸೆ ಈಡೇರುವ ಕಾಲ ಬಂದಿತ್ತೋ, ಗುರುನಾಥರು ನನಗೆ ಒಲಿದಿದ್ದರೋ, ವಿಜಯಮ್ಮನ ಬಳಿಗೆ ಹೋಗಿ, ನನ್ನ ಆಸೆಯನ್ನು ತಿಳಿಸಿದಾಗ ಅವರು 'ಅಯ್ಯಪ್ಪಾ ಅವರದೆಲ್ಲಾ ಇಷ್ಟಪಡೋಲ್ಲ.. ನಾನು ಹೇಗೆ ಹೇಳಲಿ ನೀವೇ ಕೇಳಿ' ಎಂದಾಗ ಧೈರ್ಯ ಮಾಡಿ ಗುರುನಾಥರು ಕುಳಿತಿದ್ದ ಬಳಿ ಬಂದೆ. ಮಂದಹಾಸ ಬೀರುವ ಗುರುವನ್ನು ಕಂಡೆ. ಆದರೂ ಮನದಲ್ಲಿ ಏನೋ ಭಯ. 'ನಮ್ಮ ಮನೆಗೂ ಬಂದು ಹೋಗಬೇಕು' ಎಂದು ಭಿನ್ನವಿಸಿಕೊಂಡೆ. ಅದಕ್ಕವರು 'ನನ್ನದೇನಿದೆ? ಸಾರಥಿ ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ' ಎಂದುಬಿಟ್ಟರು. ಆಕಾಶ ಮೂರೇ ಗೇಣು ಅನ್ನಿಸಿತು. ಕೆಳಗೆ ಹೋಗಿ ಅವರ ತಂಗಿ ಗಂಡ ಕಾರನ್ನು ತಂದಿದ್ದರು. ಅವರ ಬಳಿಗೆ ಹೋಗಿ 'ಏನಪ್ಪಾ ಇದೇ ಮಾರ್ಗವಾಗಿ ಹೋಗುತ್ತಿದ್ದೀರಲ್ಲಾ. ಒಂದು ನಿಮಿಷ ನಮ್ಮ ಮನೆಗೂ ಬಂದು ಹೋಗುತ್ತೀರಾ' ಎಂದು ಕೇಳಿದೆ. ಅದೇನು ಉತ್ತರ ಬರುತ್ತದೋ ಎಂದು ಒದ್ದಾಡುತ್ತಿತ್ತು ಮನ. ಆದರೆ ಸುಯೋಗ ಬಂದಾಗ ಎಲ್ಲಾ ಕೂಡಿ ಬರುತ್ತದಂತೆ. ಅವರೂ 'ಆಯಿತಮ್ಮಾ' ಎಂದರು ವಿನಯದಿಂದ'.
'ಪಾದ ಪೂಜೆ ಎಂದರೆ ಅರಿಶಿನ, ಕುಂಕುಮ, ಹೂವು, ಹಣ್ಣು ಹಂಪಲು, ಏನೇನೆಲ್ಲಾ ಬೇಕು, ಅದೇನೂ ತಯಾರಿಯೇ ಮಾಡಿಕೊಂಡಿಲ್ಲ. ಮನಸ್ಸಿನಲ್ಲಿ ಬಂತು ಕೇಳಿದೆ. ಒಪ್ಪಿದರು. ಮನೆಗೆ ದೌಡಾಯಿಸಿದೆ. ನಮ್ಮ ಯಜಮಾನರು ಅಂದು ಅದೇನೋ ಕೆಲಸವಿದೆ ಎಂದು ಮಲ್ಲೇಶ್ವರಕ್ಕೆ ಸ್ವಲ್ಪ ಹೊತ್ತಿನ ಮುಂಚೆ ಹೋಗಿದ್ದರು. ಮನೇಲಿ ಎಣ್ಣೆ ಬತ್ತಿ ಇತ್ತು. ಹಾಲಿತ್ತು. ಅರಿಶಿನ ಕುಂಕುಮವಿತ್ತು. ದೀಪದ ಕಂಬವಿತ್ತು. ಆರತಿ ಸೊಡಲುಗಳಿತ್ತು. ಬಾದಾಮಿ, ಗೋಡಂಬಿ, ಕಲ್ಲುಸಕ್ಕರೆ ಖಾಲಿಯಾಗಿತ್ತು. ಬಂದು ನೋಡಿದರೆ ಅದು ಯಾವಾಗಲೋ ಆ ಮಹಾನುಭಾವ ಸೃಷ್ಟಿ ಮಾಡಿದ್ದರು. ಒಂದು ದಕ್ಷಿಣೆ ತೆಗೆದುಕೊಡುವುದೋ, ಮನೆಯಲ್ಲಿದ್ದ ಒಂದು ವಸ್ತುವನ್ನು ಹೊಡೆಸುವುದೋ ಮಾಡೋಣವೆಂದರೆ ಆ ಗಡಿಬಿಡಿಯಲ್ಲಿ ಅದೂ ತೋಚಲಿಲ್ಲ. ಎಲ್ಲ ಅವನ ಮಾಯೆಯೇನೋ, ಲೀಲು, ವಿಜಯಮ್ಮ. ಲಲಿತ ಮೂರೇ ಜನ ಮೇಲೆ ಬಂದರು. ನಾವೆಲ್ಲಾ ಗುರುಬಂದ, ಹರಬಂದ, ಶಿವಬಂದ ಮನೆಗೆ ಎಂದು ಹಾಡತೊಡಗಿದೆವು' ಗುರುಪಾದಪೂಜೆಯ ಆ ದಿನದ ಉದ್ವೇಗ ಇಂದೂ ಅಜ್ಜಿಯ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಪ್ರಿಯ ಭಕ್ತರೇ, ಏನೂ ಸಲಕರಣೆಗಳಿಲ್ಲದ ಒಂಟಿ ಹೆಣ್ಣುಮಗಳು ಅದೇನು ಪಾದಪೂಜೆ ಮಾಡಿದರು. ಭಕ್ತಿಯಿಂದ ಅದೇನು ಅರ್ಪಿಸಿದರು. ಅಕಸ್ಮಾತ್ತಾಗಿ ನೆನೆದ ವಿಷಯ ಸತ್ಯ ಘಟನೆಯಾಗಿ ಬಂದಾಗ ಭಾವುಕ ಭಕ್ತರ ಮನದ ಉದ್ವೇಗಕ್ಕೆ ಸರಳತೆಯ ಪ್ರತಿರೂಪರಾದ ಗುರುನಾಥರು ಹೇಗೆ ಆಶೀರ್ವದಿಸಿದರು ಎಂಬುದನ್ನೆಲ್ಲಾ ತಿಳಿಯಲು ನಾಳಿನ ಸತ್ಸಂಗ ಪ್ರಶಸ್ತವಾದುದಿರಬಹುದು. ನಾಳೆಯೂ ನಮ್ಮೊಂದಿಗೆ ಇರುವಿರಲ್ಲಾ.....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment