ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 47
ಒಂದು ಕ್ಯಾನ್ ನೀರಿಗೆ ತುಂಬಿ ಹರಿದ ಕೆರೆ !
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
ಅದಾವ ಜನ್ಮದ ಪುಣ್ಯವೋ ಗುರುನಾಥರ ದರ್ಶನವಾಗುವುದರ ಜೊತೆಗೆ, ಪರಮ ಪೂಜ್ಯ ಚಂದ್ರಶೇಖರ ಭಾರತಿಗಳ ಪಾದುಕೆಗಳ ಸೇವೆ, ಆರತಿ ಎತ್ತುವ ಭಾಗ್ಯ ನಮ್ಮ ಗುರುಭಕ್ತರಾದ ನಾಗರಾಜ್ ದಂಪತಿಗಳಿಗೆ ದೊರಕಿತು.
'ಎಲ್ಲರಿಗೂ ನಾವು ದೀಕ್ಷಿತರ ಮೊಮ್ಮಗಳೆಂದು ಗುರುನಾಥರು ಹೇಳಿದಂತೆ ಹೇಳಿದಾಗ ಎಲ್ಲ ಆದರೆ ಆತಿಥ್ಯಗಳು ಪೂಜಾ ಸೌಕರ್ಯವೂ ಒದಗಿ ಬಂದದ್ದು ನೆನೆದರೆ ಇಂದು ಆಶ್ಚರ್ಯವಾಗುತ್ತೆ. ಇದೇನು ನಿಜವೋ, ಕನಸೋ ಎಂದು ನಾನು ಆಗ ಚಿಂತಿಸತೊಡಗಿದ್ದೆ. ಏಕೆಂದರೆ ಗುರುನಾಥರ ದರ್ಶನ ಭಾಗ್ಯ ಸಿಕ್ಕರೆ ಸಾಕೆಂದು ಪರಿತಪಿಸುತ್ತಿದ್ದ ನಮಗೆ, ಗುರುನಾಥರ ಅಪಾರ ಕರುಣೆ ಮೂಕವಿಸ್ಮಿತವಾಗಿಸಿತ್ತು. ಇದರ ಜೊತೆಗೆ ಗುರುನಾಥರ ತಾಯಿ ನಮ್ಮ ಶ್ರೀಮತಿಯನ್ನು ಕೂರಿಸಿ ಒಬ್ಬ ಸುಮಂಗಲಿಗೆ ನೀಡುವ ಎಲ್ಲ ಆದರ ಆತಿಥ್ಯವನ್ನು ಮಾಡಿದ್ದರು. ಈ ಪರಿಯ ಗುರುಪ್ರೀತಿಗೆ ನಾವು ತತ್ತರಿಸಿಹೋದೆವು. ನಾಗರಾಜ್ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.
ಕೊಡುವವನು ಕೊಟ್ಟಾಗ ಕೋಡಿ ಹರಿಯುವಷ್ಟು ಕೊಡುತ್ತಾನೆಂಬ ಮಾತು ಇವರ ಜೀವನದಲ್ಲಿ ಅಂದು ಸತ್ಯವಾಗಿತ್ತು.
ಒಬ್ಬ ವ್ಯಕ್ತಿಗೆ ಮಾತ್ರವಲ್ಲ, ಒಂದು ಸಮಷ್ಟಿಗೂ ದೊರೆತ ವಿಚಾರ ಕೇಳಿ, ಎಷ್ಟು ಅದ್ಭುತವಾಗಿದೆ !!
ಎಲ್ಲ ಊರುಗಳಂತೆ ಒಂದು ಊರು ಕಣಕಟ್ಟೆ, ಅಲ್ಲೊಂದು ಕೆರೆ. ಅದೇ ಬೆಳೆಗೆ, ಊರಿಗೆ ಆಧಾರ. ಆದರೆ ಪ್ರಕೃತಿ ವೈಪರೀತ್ಯದಿಂದ ನೀರಿಲ್ಲದೇ ಒಣಗಿ ಪ್ರಾಣಿ, ಪಕ್ಷಿ, ಮನುಷ್ಯರಾದಿಯಾಗಿ ತೊಂದರೆಯಲ್ಲಿ ಸಿಕ್ಕಾಗ ಕರುಣಾಳು ಗುರುನಾಥರ ದೃಷ್ಟಿ ಅತ್ತ ಹರಿಯಿತಂತೆ. ಊರವರ ಬೇಡಿಕೆ, ಪ್ರಾಣಿಮಾತ್ರರ ಹಿತಚಿಂತನೆಯ ಗುರುನಾಥರು ಜನಗಳ ಆಕಾಂಕ್ಷೆಯ ಮೇರೆಗೆ ಒಂದು ಕ್ಯಾನ್ ನೀರನ್ನು ಆ ಕೆರೆಗೆ ತಂದು ಸುರಿದರಂತೆ. ಕೆರೆ ಆ ವರ್ಷ ತುಂಬಿ ತುಳುಕಿ ಕೋಡಿ ಹರಿದು ಗುರುನಾಥರಿಂದ ಪ್ರಾಣಿ, ಪಕ್ಷಿ, ಇಳೆ, ಬೆಳೆ ಸಮೃದ್ಧವಾಯಿತಂತೆ. ಗುರುವಿಗೆ ಅಸಾಧ್ಯವಾದುದು ಏನಿದೆ ! ಗಂಗೆಯನ್ನು ಒಂದು ಆಪೋಶನದಲ್ಲಿ ಕುಡಿದ ಮುನಿಯಂತೆ, ಒಂದು ಕ್ಯಾನಿನ ನೀರಿನಿಂದ ಕೆರೆಯನ್ನು ತುಂಬಿ ಕೋಡಿ ಹರಿಸಿದ ಗುರುನಾಥರ ಮಹತ್ಕಾರ್ಯದ ಹಿಂದೆ ಅವರ ಅಪಾರ ಕರುಣೆಯೇ ಕಂಡುಬರುತ್ತದೆ.
ಮತ್ತೊಮ್ಮೆ ಜಗದ್ಗುರುಗಳು ಬಂದಿದ್ದಾಗ ನಮ್ಮ ಗುರುಬಂಧು ನಾಗರಾಜ್ ಅವರು ಜಗದ್ಗುರುಗಳ ದರ್ಶನಕ್ಕೆ ಆದಷ್ಟು ಬೇಗ ಹೋಗಬೇಕೆಂದು ಪ್ರಯತ್ನಿಸಿದರಾದರೂ ಬಹಳ ತಡವಾಗಿಬಿಟ್ಟಿತು. ಆಗ ನಡೆದ ವಿಚಾರಗಳನ್ನು ಅವರ ಬಾಯಿಯಿಂದಲೇ ಕೇಳೋಣ.
'ನಾವು ಬರುವಾಗಲೇ ತಡವಾಗಿತ್ತು. ನಾವು ತಂಡ ಭಿಕ್ಷೆಯನ್ನು ಜಗದ್ಗುರುಗಳಿಗೆ ಸಮರ್ಪಿಸುವ ಅವಕಾಶವನ್ನಂತೂ ಗುರುನಾಥರು ಕರುಣಿಸಿದರು. ಎಂಟು ಹತ್ತು ಸಾವಿರ ಜನಗಳಿಗೆ ಊಟ ಉಪಚಾರ. ಅಷ್ಟೆಲ್ಲಾ ದಣಿದಿದ್ದರೂ ಗುರುನಾಥರು ಬೀದಿಗೇ ಬಂದು ಕುರ್ಚಿ ಹಾಕಿಕೊಂಡು ಕುಳಿತುಬಿಟ್ಟರು. ಗುರುನಾಥರಿಗೆ ನಮಸ್ಕರಿಸಿ ಬೇಗ ಹೊರಡಬೇಕೆಂಬುದು ನನ್ನ ಯೋಚನೆ. ನಮ್ಮ ಶ್ರೀಮತಿಗೆ ಬೇಗ ಬಂದು ಗುರುನಾಥರಿಗೆ ನಮಸ್ಕರಿಸೆಂದು ತಿಳಿಸಲು ನೋಡಿದರೆ ಅಡಿಗೆ ಪಾತ್ರೆಗಳನ್ನು ತೆಗೆದುಕೊಂಡು ಹೋಗಿ ತೊಳೆಯುವುದರಲ್ಲಿ ಅವರು ಭಾಗಿಯಾಗಿದ್ದರು. ಇದರ ಮಧ್ಯೆ ಗುರುನಾಥರು 'ವಿಪ್ರವಾಹಿನಿಯವರು... ಬಂದಿಲ್ವೇ ನಿಮ್ಮ ಮನೆಯವರು?' ಎಂದು ಕೇಳಿದರು. ಅದೆಷ್ಟೋ ಹೊತ್ತಿನ ಮೇಲೆ, ಸೀರೆಯೆಲ್ಲಾ ಒದ್ದೆ ಮಾಡಿಕೊಂಡು ಮೈಬೆವರಿಳಿಸಿಕೊಂಡು ಇವಳು ಬಂದು ನಿಂತಾಗ, ಗುರುನಾಥರು ತಮಾಷೆ ಮಾಡುತ್ತಾ 'ಹಿಂಗೆ ಬೆವರಿಳಿಸಿಕೊಂಡು ಬಟ್ಟೆ ಒದ್ದೆ ಮಾಡಿಕೊಂಡು ಬಂದರೆ ನಾನದೆಲ್ಲಾ ಒಪ್ಪುವುದಿಲ್ಲ. ಒಳಗೆ ನಡೀರಿ, ನಡೀರಿ' ಎಂದರು. ಮತ್ತೆ ಬಂದವರಿಗೆ ಹೊಸದಾಗಿ ಅಡಿಗೆ ಆಗುತ್ತಲೇ ಇತ್ತು. ಬಡಿಸುವುದು ಸಾಗೇ ಇತ್ತು".
ಗಲಾಟೆ ದೊಂಬಿಯಿಂದ ಬಚಾವು ಮಾಡಿದ ಗುರುನಾಥರು
"ನಮ್ಮ ಅವಸರಕ್ಕಲ್ಲಿ ಬೆಲೆ ಇರಲಿಲ್ಲ. ರಾತ್ರಿ 8ರವರೆಗೆ ಸೇವೆಗೆ ಅವಕಾಶ ನೀಡಿದ ಗುರುನಾಥರು, ರಾತ್ರಿ ಒಂಬತ್ತೂಕಾಲಿಗೆ ಇನ್ನು ನೀವು ಊಟ ಮಾಡಿ ಹೊರಡಬಹುದು ಎಂದು, ಅದಾರಿಗೋ ಹೇಳಿ ಬಸ್ ಸ್ಟಾಂಡ್ ಗೆ ಬಿಡಿಸಿದರು. ಅಷ್ಟು ಹೊತ್ತಿನ ಮೇಲೆ ಹಾಸನ ತಲುಪಿ, ಮನೆ ತಲುಪುವುದು ಹೇಗೆ ಎಂದು ಚಿಂತಿಸುತ್ತಾ, ಹಾಸನ ತಲುಪಿದಾಗ ರಸ್ತೆಯಲ್ಲಿ ಗಾಜಿನ ಚೂರುಗಳು, ಬಿಕೋ ಎನ್ನುತ್ತಿದ್ದ ಹಾಸನ. ಒಂದು ರೀತಿಯ ಸ್ಮಶಾನಮೌನ ಆವರಿಸಿತ್ತು. ಪೊಲೀಸ್ ವ್ಯಾನುಗಳು ಓಡಾಡುತ್ತಿದ್ದವು. ಆ ಸರಿರಾತ್ರಿಯಲ್ಲಿ ಇಳಿದ ನಮ್ಮನ್ನು ಪೊಲೀಸರು ವಿಚಾರಿಸಿ ನಂತರ ಒಂದು ರಿಕ್ಷಾ ತರಿಸಿ, ಅದರ ನಂಬರ್ ಗಳನ್ನೆಲ್ಲಾ ಬರೆದುಕೊಂಡು ನಮ್ಮನ್ನು ಸುರಕ್ಷಿತವಾಗಿ ಮನೆ ತಲುಪಿಸಿದ್ದರು".
"ಆಮೇಲೆ ನಮಗೆ ತಿಳಿದ ವಿಚಾರವೆಂದರೆ ಅಂದು ಮಧ್ಯಾನ್ಹ ಸಂಜೆ ಎಲ್ಲಾ ಹಾಸನದಲ್ಲಿ ಉದ್ವಿಗ್ನ ವಾತಾವರಣವಿದ್ದು, ಅನೇಕ ಅಮಾಯಕ ಜನರು ತೊಂದರೆಗೆ ಒಳಗಾಗಿದ್ದರು. ಗುರುನಾಥರು ಮಧ್ಯಾನ್ಹವೇ ಹೊರಡಲಿದ್ದ ನಮ್ಮನ್ನು ತಡೆದು ಈ ರೀತಿ ಸಂಕಟದಿಂದ ಪಾರು ಮಾಡಿದ್ದರು. ಹತ್ತಾರು ಸಾವಿರ ಜನಗಳ ಊಟ ತಿಂಡಿ ವ್ಯವಸ್ಥೆ ಜಗದ್ಗುರುಗಳ ಉಪಚಾರ, ಈ ಎಲ್ಲಾ ಗುರುತರ ಜವಾಬ್ದಾರಿಗಳ ಮಧ್ಯೆಯೂ ತಮ್ಮ ಪ್ರತಿಯೊಬ್ಬ ಭಕ್ತರ ಬಗ್ಗೆಯೂ ಚಿಂತಿಸುತ್ತಿದ್ದ ಆ ಕರುಣಾಳಿಯ ಪ್ರೀತಿಗೆ, ರಕ್ಷೆಗೆ, ನಾವೇನು ಕೊಡಲು ಸಾಧ್ಯ? ಒಂದು ನಮಸ್ಕಾರ, ನಿರಂತರ ಅವರ ಧ್ಯಾನ, ಅದೂ ಅವರ ಕೃಪೆಯಿಂದ ಮಾತ್ರಾ ಸಾಧ್ಯವಲ್ಲವೇ?" ಎನ್ನುತ್ತಾರೆ ನಾಗರಾಜ್ ಅವರು.
ಇಂದು ಎಲ್ಲ ಕೆಲಸಕ್ಕೂ ಕಾರ್ಯಕಾರಣ ಸಂಬಂಧಗಳ ತಾಕಲಾಟದಲ್ಲಿ ಮುಳುಗಿದ ನಮಗೆ ಇಂತಹ ಸತ್ಪುರುಷರು ದೊರಕಿರುವುದು, ಅವರ ನಿತ್ಯ ಲೀಲೆಗಳನ್ನು ಕೇಳುವ ಸೌಭಾಗ್ಯ ದೊರಕಿರುವುದೇ ಭಾಗ್ಯವಲ್ಲವೇ?
ಪ್ರಿಯ ಓದುಗ ಗುರುಬಾಂಧವರೇ, ಗುರುನಾಥರ ಕೋಟಿ ಕೋಟಿ ಮುಖಗಳ ಅನಾವರಣ ನಿಮಗಾಗಿ ಆಗುತ್ತಲಿದೆ. ನಾಳಿನ ಸತ್ಸಂಗಕ್ಕೂ ಬರುವಿರಲ್ಲಾ....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment