ಒಟ್ಟು ನೋಟಗಳು

Friday, April 21, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 43

 

ನಿನಗೇ ಆ ಕೆಲಸವಾಗುತ್ತೆ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


ಒಂದು ಇಂಟರ್ ವ್ಯೂಗೆ ಹೋಗಬೇಕಿತ್ತು ಒಬ್ಬ ಗುರುಬಂಧುಗಳಿಗೆ. ಅಂದು ಅವರ ಮಾವನ ತಂದೆಯ ಶ್ರಾದ್ಧವಿತ್ತು. ಜೊತೆಗೆ ಇಂಟರ್ ವ್ಯೂಗೆ ಹೋಗಲು ದುಡ್ಡಿಲ್ಲ. ಒಳ್ಳೆಯ ಬಟ್ಟೆಗಳಿಲ್ಲ. ಮನೆಯಲ್ಲಿ ತಿಥಿಯ ಕಾರ್ಯವಿರುವುದರಿಂದ ಹೋಗಲೂ ಅಲಜಳಕು ಮನಸ್ಸು. ಅಂದು ಅವರ ಅದೃಷ್ಟವಿರಬೇಕು. ಗುರುನಾಥರು ಅವರ ಮನೆಗೆ ಬಂದವರು ಅವರ ಎಲ್ಲ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ನಿವಾರಿಸಿಬಿಟ್ಟರು. ಅವರ ಬಂಧುಗಳ ಶೂ, ಅವರ ಹೊಸ ಬಟ್ಟೆಗಳನ್ನೆಲ್ಲಾ ಕೇಳಿ ಕೊಡಿಸಿದರು. ಒಂದು ನೂರು ರೂಪಾಯಿನ ನೋಟನ್ನು ಕೊಟ್ಟು 'ಹೋಗಿಬಾರಯ್ಯಾ ಯಾಕೆ ಹೆದರುತ್ತಿ. ನಿನ್ನ ಕೆಲಸವಾಗುತ್ತಯ್ಯಾ' ಎಂದು ಆಶೀರ್ವದಿಸಿ ಕಳುಹಿಸಿಬಿಟ್ಟರು. 

ಇಂಟರ್ ವ್ಯೂಗೆ ಹೋದಾಗ ಸೆಲೆಕ್ಷನ್ ಮಾಡುವವರು, ತಮ್ಮ ಕಡೆಯ ನಾಲ್ಕು ಜನರನ್ನು ಅದಾಗಲೇ ಕರೆಸಿದ್ದರು. ಇಂಟರ್ ವ್ಯೂಗೆ ಅರ್ಜಿ ಹಾಕಿದ್ದ ಈ ಗುರುಬಂಧುಗಳನ್ನು ಹೇಗಾದರೂ ಇಂಟರ್ ವ್ಯೂಗೆ ಬರದಂತೆ ಮಾಡಿ ತಮ್ಮ ಕಡೆಯವರಿಗೇ ಕೆಲಸ ಕೊಡಿಸುವ ಎಲ್ಲ ಹುನ್ನಾರ ಅಲ್ಲಿ ನಡೆದಿತ್ತು. 

ಈ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಅರ್ಜಿ ಹಾಕಿದ ಗುರುಬಂಧುವನ್ನು ಮೊದಲು ಇಂಟರ್ ವ್ಯೂಗೆ ಕರೆದರಂತೆ. ಗುರುನಾಥರ ಕೃಪೆಯಿಂದ ಆ ಗುರುಬಂಧುವೇ ಪಾಸಾಗಿದ್ದು. ನೌಕರಿ ಅವರಿಗೇ ಸಿಕ್ಕಿತು. 'ಹೀಗೆ ಗುರುಬಂಧುಗಳ ಕಷ್ಟದ ಸಮಯದಲ್ಲಿ ಹಾಜರಾಗಿ, ಗುಡ್ಡವನ್ನು ಕಡ್ಡಿಯಾಗಿಸಿ ಕೃಪೆಗೈಯುತ್ತಿದ್ದರು. ಅವರ ಕರುಣೆ ಅಪಾರ. ಇಂದೂ ಸಹ ನಾವು ಅವರ ಹೆಸರು ಹೇಳಿಕೊಂಡು ಬದುಕುತ್ತಿದ್ದೇವೆ' ಎಂದು ಸ್ಮರಿಸುತ್ತಾ, ಅಲ್ಲದ್ದಕ್ಕೆ ಗುರುನಾಥರು ಹೇಗೆ ನೇರವಾಗಿ ಮುಖ ಮೋರೆ ನೋಡದೆ ಖಂಡಿಸುತ್ತಿದ್ದರೆಂಬುದಕ್ಕೆ ತಮ್ಮ ಮತ್ತೊಂದು ಅನುಭವವನ್ನು ಹಂಚಿಕೊಂಡರು. 

'ನಾನು ಆಗ ಕೆಲಸದಲ್ಲಿದ್ದೆ. ಚಿಕ್ಕಮಗಳೂರಿನಿಂದ ಕೆಲಸ ಮುಗಿಸಿಕೊಂಡು ಸಖರಾಯಪಟ್ಟಣದ ಅವರ ಮನೆಗೆ ಬರುತ್ತಿದ್ದೆ. ನನ್ನ ಜೊತೆ ನನ್ನ ಮತ್ತೊಬ್ಬ ಸಹೋದ್ಯೋಗಿಯೂ ನಮ್ಮ ಬಸ್ಸಿನಲ್ಲಿ ಬರುತ್ತಿದ್ದ. ನಾನು ಊರಿಗೆ ಬಂದು ಗುರುನಾಥರ ಮನೆಯ ಒಳಗೆ ಕಾಲಿಡುತ್ತಿದ್ದಂತೆ, ಗುರುನಾಥರು ನೇರವಾಗಿ ನಿಷ್ಠುರದ ನುಡಿಯಲ್ಲಿ 'ಏನಯ್ಯಾ ನೀನು ಹೀಗೆ ಮಾಡಬಹುದೇ? ಬೇರೆಯವರ ದುಡ್ಡನ್ನು ಮುಟ್ಟಿದ್ದು ಸರಿ ಏನಯ್ಯಾ' ಎಂದುಬಿಟ್ಟರು. 

ನನಗೆ ಕೂಡಲೇ ನಾನು ಮಾಡಿದ ತಪ್ಪಿನ ಅರಿವಾಯಿತು. ಗುರುನಾಥರ ಸಕಾಲಿಕವಾದ, ನೇರವಾದ ಎಚ್ಚರಿಕೆ ನನ್ನನ್ನು ತಿದ್ದಿತು. ಅಲ್ಲಿ ನಡೆದದ್ದು ಇಷ್ಟೇ: ನಾನು ನನ್ನ ಸ್ನೇಹಿತರು ಕುಳಿತಿದ್ದ ಮುಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರ ಜೇಬಿನಿಂದ ಕೆಲ ನೋಟುಗಳು ಕೆಳಗೆ ಉದುರಿದ್ದವು. ನಾನು ತೆಗೆದು ಪಕ್ಕದಲ್ಲಿದ್ದ ಮಿತ್ರನ ಕೈಗೆ ಕೊಟ್ಟಿದ್ದೆ. ಮಾರ್ಗಮಧ್ಯದಲ್ಲಿ, ಅವನ ಊರು ಬಂದಾಗ ಹಣದೊಂದಿಗೆ ಅವನು ಇಳಿದು ಹೋಗಿದ್ದ. ನಾನು ತೆಗೆದುಕೊಳ್ಳದಿದ್ದರೂ, ಅಪರಾಧಕ್ಕೆ ಸಹಕರಿಸಿದ್ದು ತಪ್ಪಾಗಿತ್ತು. 

ಎಲ್ಲ ಬಲ್ಲ ಗುರುನಾಥರು ಹೀಗೆ ತಮ್ಮ ಭಕ್ತರ ಮೇಲಿನ ಅಪಾರ ಪ್ರೀತಿಯಿಂದ ನೇರ ನುಡಿಗಳಲ್ಲಿ ತಿದ್ದಿ ತೀಡಿ ಉತ್ತಮರನ್ನಾಗಿಸುವ, ನಮ್ಮ ಅವಗುಣಗಳನ್ನು ತೊಳೆಯುವ ಮಹಾತ್ಮರಾಗಿದ್ದರು' ಎಂದರು. ಮುಂದವರು ಮನೆಯಲ್ಲಿ ಕ್ಷಮೆ ಯಾಚಿಸಿ ಗುರುಪಾದಕ್ಕೆ ಶರಣು ಹೋಗಿದ್ದರಂತೆ. 

ಬೇಗ ಗೃಹಪ್ರವೇಶ ಮಾಡಿ ಮುಗಿಸಿಬಿಡಿ 

ಗುರುಭಕ್ತರೊಬ್ಬರಿಗೆ ಗುರುನಾಥರ ನುಡಿಯೆಂದರೆ ಮುಗಿದುಯೋಯಿತು. ಗುರುಬಂಧುಗಳು ಮನೆ ಕಟ್ಟುತ್ತಿದ್ದರು. ಅದಿನ್ನೂ ಪೂರ್ತಿಯಾಗಿರಲಿಲ್ಲ. ಅಂದು ಅಲ್ಲಿಗೆ ಬಂದ ಗುರುನಾಥರು ಇದ್ದಕ್ಕಿದ್ದಂತೆ 'ಬೇಗ ಗೃಹಪ್ರವೇಶ ಮಾಡಿಬಿಡಿ' ಎಂದಷ್ಟೇ ಹೇಳಿದರು. ಯಾರನ್ನೂ ಕರೆಯಲಾಗಲಿಲ್ಲ. ಹತ್ತಿರದವರಿಗೆ ತಿಳಿಸಲೂ ಆಗಲಿಲ್ಲ. ಗುರುನಾಥರು ತಿಳಿಸಿದ ದಿನ ಗೃಹಪ್ರವೇಶ ನಡೆದೇ ಹೋಯಿತು. ಮನೆ ಅವರ ಸುಪರ್ದಿಗೆನೋ ಬಂದಿತು. ಆದರೆ ಬಂಧುಬಳಗ, ನೆಂಟರಿಷ್ಟರಿಂದ 'ಕರೆಯಲಿಲ್ಲ' ಎಂಬ ದೂರು. 'ಅದೇನು ಅವಸರವಿತ್ತು. ಇಷ್ಟು ಬೇಗ ಮನೆಕೆಲಸವೇ ಪೂರ್ಣವಾಗದೇ ಗೃಹಪ್ರವೇಶ ಮಾಡಿಬಿಟ್ಟೆಯಲ್ಲಾ?' ಎಂಬೆಲ್ಲಾ ಪ್ರಶ್ನೆಗಳು. ಈ ಮಧ್ಯದಲ್ಲಿ ಬಿಲ್ಡಿಂಗ್ ಕಂಟ್ರಾಕ್ಟರ್ ಕಡೆಯ ವಾಚ್ ಮನ್ ಅನ್ನು ಅವರು ಬಿಡಿಸಿ, ಮನೆಯ ಬಾಗಿಲನ್ನು ಮಾಡಿಸಿ, ಬೀಗವನ್ನೂ ಹಾಕಿಕೊಂಡು ಸುಪರ್ದಿಗೆ ತೆಗೆದುಕೊಂಡಿದ್ದರು. ಈ ಗೃಹಪ್ರವೇಶದ ಬಹುಪಾಲು ಕೆಲಸವನ್ನು ಗುರುನಾಥರೇ ನಿಂತು ಮಾಡಿಸಿದ್ದರೆಂಬುದು ಮತ್ತೂ ವಿಶೇಷ. 

'ಆಮೇಲೆ ಲೆಕ್ಕಾಚಾರ ಮಾಡುವಾಗ ತಿಳಿದ ವಿಷಯವೆಂದರೆ - ಒಂದು ಲಕ್ಷಕ್ಕೂ ಹೆಚ್ಚು ಹಣ ನುಂಗಿ, ಕಂಟ್ರಾಕ್ಟರ್ ಮೋಸ ಮಾಡಿದ್ದ. ಮನೆ ಕೊಡದೆ ಸತಾಯಿಸುವ ಯೋಜನೆ ಅವನದಾಗಿತ್ತು. ಆದರೆ ಗುರುನಾಥರ ಸಕಾಲಿಕ ಎಚ್ಚರಿಕೆಯ ಮಾತಿನಂತೆ ಗೃಹಪ್ರವೇಶ ನಡೆಸಿ, ಎಲ್ಲ ನಮ್ಮ ಕೈಗೆ ತೆಗೆದುಕೊಂಡಾಗ ಕಂಟ್ರಾಕ್ಟರ್ ಅಸಹಾಯಕನಾಗಿ ಬೆಪ್ಪಾಗಿದ್ದ. ತಮ್ಮ ಭಕ್ತರ ಜೀವನದಲ್ಲಿ ಮುಂಬರುವ ಅಪಾಯಗಳನ್ನು ಅರಿತ ಗುರುನಾಥರು, ಅದರಿಂದ ಮುಕ್ತವಾಗಿಸುವ ಘಟನೆಗಳನ್ನು ನೋಡಿ ಎಷ್ಟು ವಿಚಿತ್ರ - ಆದರೂ ಸತ್ಯವಾಗಿದೆ' ಎಂದು ಗುರುಬಂಧುಗಳು ತಮ್ಮ ಜೀವನದಲ್ಲಿ ನಡೆದ ಸತ್ಯ ಘಟನೆಗಳನ್ನು ಹಂಚಿಕೊಂಡರು. ಗುರುವಾಕ್ಯದ ಮಹಿಮೆಯನ್ನು ತಿಳಿಸಿದರು. 

ಪ್ರಿಯ ಗುರುಬಾಂಧವರೇ, ಕರೆಯದೇ ಬಂದು ಕಾಪಾಡುವ, ಗುರುಭಕ್ತರನ್ನು ಸಲಹುವ, ಗುರುನಾಥರ ಕೃಪೆ ಅಪಾರ - ಅನಂತ. ಹಾಗೆಯೇ ಈ ನಿತ್ಯ ಸತ್ಸಂಗವೂ ನಿರಂತರವಾಗಲೆಂಬುದೇ ನಮ್ಮ ಬಯಕೆ. ಇದಕ್ಕೆ ಗುರುನಾಥರೇ ಪ್ರೇರಕರು. ನೀವು ಗುರುಭಕ್ತರು ಪೂರಕ. ನಾಳೆಯೂ ನಮ್ಮೊಂದಿಗೆ ಇರುವಿರಲ್ಲವೇ..... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment