ಒಟ್ಟು ನೋಟಗಳು

Monday, April 24, 2017

ಶ್ರೀ ಸದ್ಗುರುನಾಥ ಲೀಲಾಮೃತ  - 2 

 

   ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)  

 

  ನಿತ್ಯ ಸತ್ಸಂಗ  - 45

 

ಗುರು ಬಂದ, ಶಿವ ಬಂದ, ಹರ ಬಂದ ಮನೆಗೆ 


 

।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।

।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।



ಸ್ವಾತ್ಮಾ ರಾಮಂ  ನಿಜಾನಂದಂ । ಶೋಕ ಮೋಹ ವಿವರ್ಜಿತಂ ।। 
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।


"ಗುರುನಾಥರು ನಮ್ಮ ಮನೆಗೆ ಬಂದುಬಿಟ್ಟರು. ಸಂಭ್ರಮ, ಆಶ್ಚರ್ಯ, ಆನಂದ ಎಲ್ಲಾ ಸೇರಿ ಕಿಂಕರ್ತವ್ಯ ಮೂಢಳಾಗಿದ್ದೆ. ಅದೇನೇನು ಮಾಡಿದೆನೋ? ಗುರುನಾಥರನ್ನು ಅಲ್ಲೇ ಒಳಗೆ ಕೂರಿಸಿ, ಹಾಡು ಹೇಳುತ್ತಾ ಅವರ ಪಾದ ತೊಳೆದೆ. ಭಸ್ಮವನ್ನು ತಂದು ಪಾದಗಳಿಗೆ ಹಚ್ಚಿದೆ. ಬಾಯಿಗೆ ಒಂಚೂರು ಹಾಲು ಕುಡಿಸಿದೆ. ಗೋಡಂಬಿ, ದ್ರಾಕ್ಷಿ, ಕಲ್ಲು ಸಕ್ಕರೆಗಳನ್ನು ಅರ್ಪಿಸಿದೆ. ಅಷ್ಟೇ ನನಗೆ ಹೊಳೆದದ್ದು. ಗುರುವಿನ ಪಾದ ತೊಳೆದದ್ದೇ ಪಾದಪೂಜೆ. ಆ ಭೋಳೇ ಶಂಕರ ನೀರು, ಬಿಲ್ವಪತ್ರೆಗಳಿಂದ ಸುಪ್ರೀತನಾದಂತೆ, ಆ ವಿನಾಯಕ ಕೇವಲ ದೂರ್ವಾಯುಗ್ಮಗಳಿಂದ ಪ್ರಸನ್ನನಾಗುವಂತೆ ನನ್ನ ಗುರುನಾಥ ಅತ್ಯಂತ ಸರಳ ಪಾದಪೂಜೆಯಲ್ಲಿ ತೃಪ್ತರಾದಂತೆ ಕಂಡಿತು. ಒಂದೈದು ನಿಮಿಷ ಕುಳಿತುಕೊಂಡರು. ನಂತರ ಗುರುನಾಥರು ಹೊರಟು ಕೆಳಗಿಳಿದು ಕಾರಿನ ಬಳಿ ಹೋದರು. ನಾವೂ ಹಿಂಬಾಲಿಸಿದೆವು. ಅವರೆಲ್ಲಾ ಸಖರಾಯಪಟ್ಟಣಕ್ಕೆ ಹೊರಟಿದ್ದರು. ಒಂದು ಕೋಡುಬಳೆ ಪ್ಯಾಕೆಟ್ ತೆಗೆದು ನನಗೆ ಕೊಡುತ್ತಾ 'ನೀವೂ ಅಣ್ಣನೂ ತಿನ್ನಿರಿ' ಎಂದು ಕೊಟ್ಟರು". 

"ಗೋಡಂಬಿ ಕಲ್ಲುಸಕ್ಕರೆ ಪ್ಯಾಕೆಟ್ ಗಳನ್ನು ಒಡೆದು ಅಲ್ಲಿದ್ದ ಎಲ್ಲರಿಗೂ ಹಂಚತೊಡಗಿದರು. ಅದೆಷ್ಟು ಜನ ಅಲ್ಲಿ ಸೇರಿದ್ದರೋ, ದಾರಿಯಲ್ಲಿ ಹೋಗಿ ಬರುವವರಾದಿಯಾಗಿ ಎಲ್ಲರಿಗೂ ಕೊಡುತ್ತಲೇ ಇದ್ದರು. ಅದು ಅಕ್ಷಯವಾಗತೊಡಗಿತು. ಹೀಗೆ ಅವರು ಹಂಚುತ್ತಿರುವಾಗ, ಜನ ಸೇರಿರುವುದನ್ನು ನೋಡಿದ - ಎದುರು ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿ - ಏನೋ ಸಿಗುತ್ತದೆಂದು ಓಡಿ ಬಂದು ಕೈ ಒಡ್ಡಿದಳು. ಗುರುನಾಥರನ್ನು ನೋಡುತ್ತಿದ್ದಂತೆ ಅವಳ ಮನದಲ್ಲಿ ಏನು ಭಕ್ತಿ ಭಾವ ಬಂದಿತೋ, 'ಸಾರ್, ನಮ್ಮ ಮನೆಗೂ ಬನ್ನಿ ಸಾರ್' ಎಂದಳು. ಆಗ ಗುರುನಾಥರು 'ನಾನು ಇಲ್ಲಿಯೂ ಇರ್ತೀನಿ. ಕೋಮಾರನ ಹಳ್ಳಿಯಲ್ಲೂ ಇರ್ತೀನ, ಯಾವಾಗಲಾದರೂ ಅಲ್ಲಿಗೆ ಬಾ... ಇನ್ನೊಮ್ಮೆ ಬಂದಾಗ ಬರ್ತೀನಿ ' ಎಂದು ಹೊರಟುಬಿಟ್ಟರಂತೆ. ಮಧ್ಯಾನ್ಹ ಆ ಹುಡುಗಿ ಬಂದು 'ಅಮ್ಮಾ ನಿಮ್ಮನೆಗೆ ಬಂದವರು ಯಾರು? ನಮ್ಮನೆಗೂ ಬನ್ನಿ ಎಂದಾಗ ಕೋಮಾರನಹಳ್ಳಿಯಲ್ಲಿ ಇರ್ತೀನಿ ಅಂದ್ರು. ಆ ಊರು ಎಲ್ಲಿದೆ?' ಎಂದು ಕೇಳಿದಾಗ ನಾನು ವಿಭ್ರಾಂತಳಾಗಿ ಹೋದೆ. ನನ್ನ ಪರಮ ಗುರುವಾದ ಶ್ರೀ ಶ್ರೀ ಶಂಕರಲಿಂಗ ಭಗವಾನರ ರೂಪದಲ್ಲಿ ಗುರುನಾಥರು ನನಗೆ ಆ ದಿನ ಆಶೀರ್ವದಿಸಿದ್ದು ಹೀಗೆ". 

ಅಜ್ಜಿ ತಮ್ಮ ಮಾತನ್ನು ಕೆಲ ಕ್ಷಣಗಳಿಗೆ ನಿಲ್ಲಿಸಿದರು. ಗುರುಭಕ್ತರ ಭಾವಕ್ಕೆ, ಗುರುಭಕ್ತರ ಭಕುತಿಗೆ, ಗುರುಭಕ್ತರ ತೆರನಾಗಿ ಇರುತಿಹನು ಈ ಯೋಗಿ. ಶಿವನ ಭಕ್ತರಿಗೆ ಶಿವ, ಹರನ ಭಕ್ತರಿಗೆ ಹರ, ಶಂಕರಲಿಂಗನ ಭಕ್ತರಿಗೆ ಶಂಕರಲಿಂಗನಾಗಿ ಇರುತಿಹನು ಗುರುನಾಥ ಎಂಬುದಿನ್ನಿಲ್ಲಿ ಎಲ್ಲರಿಗೂ ವೇದ್ಯವಾಗಿಸಿದ್ದರು!


ಗುರುಕರುಣೆ ನಿರಂತರ 

"ಹೀಗೆ ಗುರುನಾಥರು ಆಗಾಗ್ಗೆ ಇಲ್ಲಿಗೆ ಬರುತ್ತಿದ್ದರು. ಅವರ ಅನುಜ್ಞೆ ಇಲ್ಲದೆ ಏನೂ ನಡೆಯದು ಎಂಬುದನ್ನು ಅನೇಕ ಉದಾಹರಣೆಗಳಿಂದ ಸ್ಪಷ್ಟಪಡಿಸಿದ್ದರು. ಗುರುವಿನ ಕಕ್ಷೆಗೆ ಒಮ್ಮೆ ಬಂದೆವೆಂದರೆ ಮುಗಿಯಿತು. ನಮ್ಮ ಮನೆಯಲ್ಲಿ ಮುಂದಾಗುವ ಭವಿಷ್ಯವನ್ನು ಬರೆದಿಟ್ಟಿದ್ದರು. ಅದನ್ನು ಒಬ್ಬರ ಕೈಯಲ್ಲಿ ಬರೆದುಕೊಟ್ಟು ಬಿಟ್ಟಿದ್ದರು. ಆ ಪತ್ರವಿದ್ದ ವ್ಯಕ್ತಿ ಕಟುಸತ್ಯವನ್ನು ತಿಳಿಸಲಾರದೆ ನನ್ನ ಕಣ್ಣು ಮರೆಸಿ ಓಡಾಡುತ್ತಿದ್ದರು. ಅನೇಕ ಬಾರಿ ಕೇಳಿದರೂ ಹೇಳದೆ ಏನೇನೋ ಸಬೂಬು ನುಡಿದಿದ್ದರು. ಎಲ್ಲ ಬಲ್ಲ ಗುರುನಾಥರಿಗೆ ಜನನ ಮರಣಗಳಾವ ಲೆಕ್ಕ! ಆದರೆ ಸಾಮಾನ್ಯ ಮನುಜರಾದ ನಾವು ಅವರಂತೆ ಇರಲು ಸಾಧ್ಯವೇ? ಹಾಗಾಗಿ ಭವಿಷ್ಯವನ್ನು ಮರೆಮಾಚಿದ್ದರು. ವಿಧಿನಿಯಮದಂತೆ ಎಲ್ಲಾ ಒಂದು ದಿನ ತಮ್ಮ ತಮ್ಮ ಆಟ ಮುಗಿಸಿ ಹೋಗುವುದು ಪ್ರಕೃತಿ ನಿಯಮ. ನಮ್ಮ ಮನೆಯವರು ನನ್ನ ಬಿಟ್ಟು ನಡೆದರು. ನಮ್ಮ ಮನೆಯವರು ಹೋದ ಹನ್ನೊಂದನೆಯ ದಿನ ಗುರುನಾಥರು ಬರೆದಿಟ್ಟ ಭವಿಷ್ಯದ ಪತ್ರ ನನ್ನ ಕೈ ಸೇರಿತು. ಮರಣದ ದಿನಾಂಕವನ್ನೂ ಬರೆದಿದ್ದರು. ನಾನೆಲ್ಲಿ ಅಧೀರಳಾಗುತ್ತೇನೋ, ನಾನೆಲ್ಲಿ ಭವಿಷ್ಯವನ್ನು ಬಾಯಿಬಿಟ್ಟು ಹೇಳಿಬಿಡುತ್ತೇನೋ ಎಂದು ಗುರುನಾಥರು ಅದನ್ನು ಮುಚ್ಚೇ ಇಟ್ಟಿದ್ದರು. ಯಾರನ್ನೂ ಬೇರೆ ಹಾದಿಗೆ ಹೋಗದಂತೆ ರಕ್ಷಿಸುವ, ಅವರ ಅನುಜ್ಞೆಯಿಲ್ಲದೆ ಏನೂ ನಡೆಯದೆಂಬುದನ್ನು ತೋರಿಸಿಬಿಟ್ಟಿದ್ದರು. ಇಂದು ಗುರು ಮಹಿಮೆ". 

ಕನಸು ಮನಸುಗಳಲ್ಲೂ ಗುರುನಾಥರು ಈ ಮಹಾತಾಯಿಗೆ ಮುಂದಾಗುವ ಅನೇಕ ವಿಚಾರಗಳನ್ನು ಪ್ರೇರಣೆ ನೀಡುತ್ತಿದ್ದರು. ಅದು ಕೇಳಿ, ಹೀಗಿದೆ..... 

"ಅಂದು ಬೆಳಗಿನ ಜಾವ ಐದು ಗಂಟೆ. ನಮ್ಮ ಮನೆಯವರು ಮಗುಟ ಉಟ್ಟು ತಟ್ಟೆ ಕೈಯಲ್ಲಿ ಹಿಡಿದು ನಿಂತಿದ್ದಾರೆ. ಗುರುನಾಥರು ಕಾವಿಯುಟ್ಟು ನಮ್ಮ ಈ ಮನೆಯ ಈ ಜಾಗದಲ್ಲಿ ಜ್ವಾಲೆಯಲ್ಲಿ ನಿಂತಿದ್ದಾರೆ. ಇದೇನಿದು ಗುರುನಾಥರು ಏಕೆ ಜ್ವಾಲೆಯಲ್ಲಿ ನಿಂತಿದ್ದಾರೆ ಎಂದು ಗಾಬರಿಯಾದ ನನಗೆ ಎಚ್ಚರವಾಯಿತು. ಏಳೂವರೆ ಗಂಟೆಗೆಲ್ಲಾ ಗುರುನಾಥರು ಏಳೆಂಟು ಜನ ಸಹಿತ ನಮ್ಮ ಮನೆಗೆ ಬಂದರು. ಸುಮ್ಮನಿರದ ನಾನು 'ಇದೇನು ಇವತ್ತು ಕಾವಿಯುಟ್ಟು ಜ್ವಾಲೆಯಲ್ಲಿ ನಿಂತಿದ್ದೀರಲ್ಲ?' ಎಂದು ಕೇಳಿಬಿಟ್ಟೆ. ಗುರುನಾಥರು ಅದಾರಿಗೋ ಹೇಳಿ ಎಲೆ ಅಡಿಕೆಯಲ್ಲಿ ನೂರು ರೂಪಾಯಿ ಇಡಿಸಿ ಕೊಟ್ಟರು. ನಾನು ಅದನ್ನು ದೇವರಗೂಡಿನಲ್ಲಿ ಇಟ್ಟೆ. ಅದು ಧರ್ಮಕಾರ್ಯಕ್ಕೆ ಎಂದು ತಿಳಿದಾಗ ಬಂದವರೆಲ್ಲರಿಂದ ದಕ್ಷಿಣೆ ಕೊಡಿಸಿದರು. ಮುಂದಿನ ಸಾರಿ ಅವರು ನಮ್ಮ ಮನೆಗೆ ಬಂದಾಗ ಮೇಲೆ ಷರಟು ಇರಲಿಲ್ಲ. ಕಾವಿ ಇಲ್ಲದೇ ಸನ್ಯಾಸಿಗಳಾಗಿಬಿಟ್ಟಿದ್ದರು". 

ಗುರುನಾಥರು ಸಂಸಾರಿಗಳಾಗಿದ್ದೇ, ಸನ್ಯಾಸಿಗಳನ್ನು ಮೀರಿದ ಮಹಾ ಸನ್ಯಾಸಿಗಳಾಗಿದ್ದರು. ಇದನ್ನು ತಮ್ಮ ಅತ್ಯಂತ ಪ್ರಿಯ ಶಿಷ್ಯೆ ಪಾರ್ವತಮ್ಮನವರಿಗೆ ಎಂದೋ ತೋರಿಸಿದ್ದ ರೀತಿ ಇದಾಗಿತ್ತು. ಕಾಷಾಯ ವಸ್ತ್ರ ಧರಿಸಿಯೇ ಸನ್ಯಾಸಿಯಾಗಬೇಕಿಲ್ಲ, ಆಶ್ರಮದಲ್ಲಿದ್ದೇ ಭಕ್ತರ ಉದ್ಧಾರ ಮಾಡಬೇಕಿಲ್ಲ, ಆ-ಶ್ರಮದ ಎಲ್ಲೇ ಮೀರಿ ಭಕ್ತರಿದ್ದಲ್ಲಿಗೇ ಹೋಗಿ ಅವರನ್ನು ಉದ್ಧರಿಸುತ್ತಿದ್ದ ಪರಿ ಅದು ಗುರುನಾಥರಿಗೆ ಮಾತ್ರ ಮೀಸಲು. ಹೀಗೆ ಮೊದಲಿನಿಂದ ಗುರುನಾಥರನ್ನು ವಿವಿಧ ಹಂತಗಳಲ್ಲಿ ಕಂಡ ಬೆಂಗಳೂರಿನ ಪಾರ್ವತಮ್ಮನವರಿಂದ ಗುರುಕಥಾಮೃತ ನಮಗೆ ಒದಗಿದ್ದಕ್ಕೆ ಅವರಿಗೊಂದು ದೀರ್ಘದಂಡ ನಮನ. 

ಗುರುಭಕ್ತರೇ, ನಾಳಿನ ಸತ್ಸಂಗದಲ್ಲಿ ಮತ್ಯಾವ ಮಹಾನುಭಾವರ ಅನುಭವ ವಾಣಿಯನ್ನು ಗುರುನಾಥರು ದಯಪಾಲಿಸುತ್ತಾರೋ ! ನಮ್ಮೊಂದಿಗೆ ಇರುವಿರಲ್ಲಾ.... 

ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು..... 

ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ. 

।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ  ।।


For more info visit :  http://srivenkatachalaavadhoota.blogspot.in

No comments:

Post a Comment