ಶ್ರೀ ಸದ್ಗುರುನಾಥ ಲೀಲಾಮೃತ - 2
ಗ್ರಂಥ ರಚನೆ - ಶ್ರೀ.ಎಸ್.ದತ್ತಾತ್ರಿ (ಭಗವಾನ್)
ನಿತ್ಯ ಸತ್ಸಂಗ - 46
ಕಾಲ ಬರದೇ ಗುರುದರ್ಶನ ಅಸಾಧ್ಯ
।। ಓಂ ನಮೋ ಭಗವತೇ ಸದ್ಗುರು ಶ್ರೀ ಹನುಮನಾಥ ಅವಧೂತ ಆದಿಶೇಷಾಯ ನಮಃ ।।
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
।। ಶ್ರೀ ಮಹಾಗಣಪತಿ, ಸರಸ್ವತಿ, ಸದ್ಗುರುಭ್ಯೋ ನಮಃ ।।
ಸ್ವಾತ್ಮಾ ರಾಮಂ ನಿಜಾನಂದಂ । ಶೋಕ ಮೋಹ ವಿವರ್ಜಿತಂ ।।
ಸ್ಮರಾಮಿ ಮನಸಾ ನಿತ್ಯಂ । ವೆಂಕಟಾಚಲ ದೇಶಿಕಂ ।।
'1990ರಿಂದ ಸಖರಾಯಪಟ್ಟಣದ ಗುರುನಾಥರ ಬಗ್ಗೆ ಕೇಳಿದ್ದೆ... ಅವರೊಬ್ಬರು ಜ್ಯೋತಿಷ್ಕರು ಎಂದು ಕೆಲವರಂದಿದ್ದರು. ತಮ್ಮ ಬಳಿ ಬಂದವರಿಗೆಲ್ಲಾ ಹೋಗುವ ಚಾರ್ಜನ್ನು ಕೊಟ್ಟು ಕಳುಹಿಸುತ್ತಾರಂತೆ. ಅನೇಕ ಜನರಿಗೆ ಒಳ್ಳೆಯದಾಗಿದೆ' ಎಂದೆಲ್ಲಾ ಕೇಳಿದ್ದೆ. ಅತ್ಯಂತ ಕಷ್ಟದ ದಿನಗಳಲ್ಲಿ ನಾನಿದ್ದೆ. ಏನೂ ಮಾಡಿದರೂ ಕೈ ಹತ್ತುತ್ತಿರಲಿಲ್ಲ. ಒಂದು ಪತ್ರಿಕೆಯನ್ನು 1999ರಲ್ಲಿ ಪ್ರಾರಂಭಿಸಿದೆ. ಆಗಲೂ ಕಷ್ಟದಿಂದ ಹೊರಬರಲಾಗಲಿಲ್ಲ. ಅವಧೂತರನ್ನು ಹೋಗಿ ನೋಡಬೇಕೆಂದು ಮನಸ್ಸು ತುಡಿಯುತ್ತಿದ್ದರೂ ಸಖರಾಯಪಟ್ಟಣಕ್ಕೆ ಹೋಗಲಾಗದಂತಹ ಪರಿಸ್ಥಿತಿಗಳೇ ಬರುತ್ತಿದ್ದವು. ನಾನಂತೂ ಹೋಗಲಾಗಲಿಲ್ಲ. ನಮ್ಮ ಪತ್ರಿಕೆಯನ್ನಾದರೂ ಅವರಿಗೆ ತಲುಪಿಸೋಣವೆಂದು, ಗುರುನಾಥರ ವಿಳಾಸ ಪಡೆದು ನಮ್ಮ ಪತ್ರಿಕೆಗಳನ್ನು ಕಳಿಸುತ್ತಿದ್ದೆವು. ಆ ಪತ್ರಿಕೆ ಗುರುನಾಥರ ಕೈ ತಲುಪಿ, ಅವರ ಕಣ್ಣುಗಳು ಅದರ ಲೇಖನಗಳ ಮೇಲೆ ಹರಿದಿದ್ದರಿಂದ, ಒಂದು ರೀತಿ ನನ್ನ ತಾಪತ್ರಯಗಳು ಹರಿಯತೊಡಗಿದವೇನೋ? ಅವರನ್ನು ನೋಡುವ ಮನದಿಚ್ಛೆಯಂತೆ ಸಖರಾಯಪಟ್ಟಣಕ್ಕೂ ಹೊರಟೆವು. ಒಂದು ವೇಳೆ ಅವರು ಸಿಗದಿದ್ದರೆ ಏನು ಮಾಡುವುದು? ಅವರು ಅಷ್ಟು ಸುಲಭವಾಗಿ ಸಿಗುವುದಿಲ್ಲವಂತೆ.. ಎಂಬೆಲ್ಲಾ ವಿಚಾರಗಳು ಅದು ಹೇಗೆ ನನ್ನ ತಲೆಯೊಳಗೆ ಬಂದವೋ.... ನನಗೇ ತಿಳಿಯಲಿಲ್ಲ..... ಬಹುಶಃ ಗುರುನಾಥರನ್ನು ಕಾಣುವ, ಅವರ ಪಾದಗಳಿಗೆ ಎರಗಿ ನಮ್ಮದೆಲ್ಲಾ ಅರ್ಪಿಸಿ, ನಿಶ್ಚಿಂತರಾಗಿ, ಆ ಅಚಿಂತ್ಯನ ಪದತಲದೊಳಗೆ ಇರುವುದು ಅಷ್ಟು ಸುಲಭವಲ್ಲವೋ, ನನ್ನ ಕರ್ಮ ಹರಿದಿರಲಿಲ್ಲವೋ, ಗುರುವನ್ನು ಕಾಣುವ ಕಾಲ ಯಾವತ್ತೂ ಬರುವುದೋ ನನಗೇ ಅರಿಯಲಾಗಲಿಲ್ಲ ಆಗ' ಎಂದು ತಮ್ಮ ಅಳಲನ್ನು, ಗುರುನಾಥರ ದರ್ಶನವಾಗುವ ಮೊದಲಿಗೆ ಅವರಿದ್ದ ಸ್ಥಿತಿಗಳನ್ನು ನಮ್ಮ ನಿತ್ಯ ಸತ್ಸಂಗಕ್ಕೆ ಹಂಚಿಕೊಂಡವರು ವಿಪ್ರ ವಾಹಿನಿಯ, ಹಾಸನದ ಗುರುಭಕ್ತರಾದ ಶ್ರೀಯುತ ನಾಗರಾಜ್ ಅವರು.
'ಅಂತೂ ಯಾರ್ಯಾರನ್ನೋ ಕರೆದೆವು.. ಕೊನೆಗೆ ನಾವಿಬ್ಬರೂ ಸಖರಾಯಪಟ್ಟಣಕ್ಕೆ ಬಂದು ಗುರುನಾಥರ ಮನೆಗೆ ಬಂದಾಗ, ಬಂದ ದಾರಿಗೆ ಸುಂಕವಿಲ್ಲವೆಂಬಂತೆ, ಗುರು ದರ್ಶನವಿಲ್ಲದೇ ಹೊರಡಬೇಕಾಯಿತು. ಮನಸ್ಸಿನ ರೀತಿ ನೋಡಿ ಎಷ್ಟು ವಿಚಿತ್ರವಾಗಿದೆ! ಎಂತಹ ಅಲ್ಪತೃಪ್ತರು ನಾವು, ಗುರುನಾಥರ ದರ್ಶನವಾಗಲಿಲ್ಲವೆನ್ನುವುದರ ಬಗ್ಗೆ ಆಳವಾಗಿ ಚಿಂತಿಸುವುದರ ಬದಲು ಐಯ್ಯನ ಕೆರೆ ನೋಡಲು ಹೋದೆವು... ನಮ್ಮ ಜೀವನದ ಮತ್ತೊಂದು ದಿನ ಹೀಗೆ ವ್ಯರ್ಥವಾಯಿತು. ಗುರುನಾಥರ ದರ್ಶನವಾಗದೇ- ಗುರು ಅಷ್ಟು ಸುಲಭವೇ? ದೊರಕಲು, ಐಯ್ಯನ ಕೆರೆಯ ಪ್ರವಾಸದಲ್ಲೇ ಮನ ಸಂತೃಪ್ತವಾಗಿತ್ತು. ಮನದಲ್ಲಿ ಭರಪೂರ ಭಾವವಿರಲಿಲ್ಲವೋ ಏನೋ? ಆಲ್ಟರ್ನೇಟ್ ಪ್ರೋಗ್ರಾಮ್ ಅನ್ನು ನಾವೇ ರೂಪಿಸಿಕೊಂಡಿದ್ದ ನಾವು, ಅಷ್ಟನ್ನೇ ಪಡೆದೆವು. ಅಂದು ಅವನು ಸಿಕ್ಕೇ ಸಿಗುತ್ತಾನೆಂಬ ದೃಢ ಭಾವ ಮನದಲ್ಲಿದ್ದಿದ್ದರೆ ಗುರುನಾಥರ ದರ್ಶನ ಅಂದೆ ಆಗುತ್ತಿತ್ತೇನೋ?'
ಹೀಗೆ ಗುರುನಾಥರ ದರ್ಶನದ ಹಿಂದಿನ ದಿನಗಳನ್ನು ಸಿಂಹಾವಲೋಕನ ಮಾಡಿದರು ನಾಗರಾಜ್ ಅವರು.
ದತ್ತ ದರ್ಶನವೂ ಗುರುಸಾನ್ನಿಧ್ಯವೂ
ಗುರುಸಂಕೀರ್ತನವು ಮುಂದುವರೆಯಿತು. ಗುರುದರ್ಶನವಾದ ಸಂತಸ ನಾಗರಾಜ್ ಅವರ ಮಾತಿನಲ್ಲಿ ಪುಟಿದು ಕಾಣುತ್ತಿತ್ತು.
'2002ರ ನವೆಂಬರ್ ತಿಂಗಳ ಒಂದು ದಿನ ಗುರುನಾಥರನ್ನು ಕಾಣಲೇಬೇಕೆಂಬ ಪ್ರಬಲ ಇಚ್ಛೆಯಿಂದ ನಾವು ಗುರುನಾಥರ ಮನೆ (ವಾಟರ್ ಟ್ಯಾಂಕ್ ಬಳಿ ಇದ್ದ ಮನೆಗೆ) ಯ ಒಳಗೆ ಭಯ ಭಕ್ತಿಯಿಂದ ಅಡಿ ಇಟ್ಟೆವು. 'ಗುರುನಾಥರಿದ್ದಾರೆ. ವಿಶ್ರಾಂತಿ ಪಡೆಯುತ್ತಿದ್ದಾರೆ' ಎಂಬ ಮಾತು ಕೇಳಿದಾಗ ಗುರುನಾಥರನ್ನು ಕಂಡಷ್ಟೇ ಸಂತಸವನ್ನು ಆ ಮಾತುಗಳು ನನಗೆ ನೀಡಿದ್ದವು. ಇದಕ್ಕೆ ಮೊದಲು ಕಣಿವೆ ಬಳಿ ದತ್ತನ ದರ್ಶನ ಮಾಡಬೇಕೆಂದುಕೊಂಡಾಗ, ಅದ್ಯಾರೋ 'ಅಲ್ಲಿ ನಿಮಗೆ ಏನೂ ಅನುಕೂಲವಾಗದು, ಬಾಗಿಲು ಮುಚ್ಚಿರುತ್ತೆ.. ಹಾಗೆ ಹೀಗೆ ಎಂದು' ಏನೇನೋ ಹೇಳಿದ್ದರು. ನಾವಂತೂ ಅಲ್ಲಿಳಿದು ಹೋದಾಗ ದತ್ತನ ದರ್ಶನವಾದುದಲ್ಲದೇ, ತುಂಬಾ ಆದರದಿಂದ ಅಲ್ಲಿನ ಜನ ನಮ್ಮೊಂದಿಗೆ ವರ್ತಿಸಿದರು. ಇದೆಲ್ಲಾ ಗುರುದರ್ಶನವಾಗುವುದಕ್ಕೆ ಪೂರ್ವ ಶುಭ ಲಕ್ಷಣಗಳಾಗಿದ್ದವು'.
ಗುರುನಾಥರು ಹೊರಗೆ ಬಂದರು. ಇರುವೆ ಬೆಲ್ಲಕ್ಕೆ ಮುತ್ತುವಂತೆ ಜನ ಅದಾಗಲೇ ಗುರುನಾಥರ ಮನೆಯಲ್ಲಿ ಬಂದು ಸೇರಿಬಿಟ್ಟರು. ಗುರುನಾಥರೊಂದಿಗಾದ ಮಾತುಕತೆಯನ್ನು, ಪ್ರಿಯ ಗುರುಬಾಂಧವರೇ ಗುರುಭಕ್ತರಾದ ನಾಗರಾಜರೊಂದಿಗೇ ನೀವು ಕೇಳಿಕೊಳ್ಳಿ.
"ನಮ್ಮ ಕಡೆ ನೋಡಿದ ಗುರುಗಳು 'ಏನು ಯಾರ್ಯಾರನ್ನೋ ಜೊತೆಗೆ ಕರೆದುಕೊಂಡು ಬಂದುಬಿಟ್ಟರೆ ಗುರು ಸಿಕ್ತಾನಾ, ಅವರಿಗೆ ಬೇಕಾದರೆ ಅವರೇ ಬರಬೇಕು. ಒತ್ತಾಯಿಸಿ ಕರೆತರುವುದಲ್ಲ'. ಗುರುನಾಥರು ಯಾರನ್ನು ಕುರಿತು ಮಾತನಾಡಿದರೋ, ನಮಗಂತೂ ಅದರ ಚಾಟಿ ಏಟು ತಲುಪಿತ್ತು. ಎಲ್ಲರಿಗೂ ಅವರವರ ಸಮಸ್ಯೆಗಳಿಗೆ ಉತ್ತರಿಸಿ ಕಳಿಸುತ್ತಿದ್ದರು. ನನ್ನ ಶ್ರೀಮತಿಯನ್ನು ಕುರಿತು 'ನಿನ್ನ ಹೆಸರು ಶಾಂತಾ ಅಲ್ಲವೇ? ಕಣಕಟ್ಟೆಯವರಲ್ಲವೇ? ನಿಮ್ಮ ಊರಿನ ಕೆರೆಗೆ ಒಂದು ಕ್ಯಾನ್ ನೀರು ಹಾಕಿ ಬಂದಿದ್ದೆ' ಎಂದರು. ಕೇವಲ ನಮ್ಮ ಮನೆಯಲ್ಲಿ ಕರೆಯುವ ಹೆಸರು ಗುರುನಾಥರಿಗೆ ಅದು ಹೇಗೆ ತಿಳಿದಿತ್ತೋ ನನ್ನನ್ನು ನೋಡುತ್ತಾ.... 'ನಿಮ್ಮ ವಿಪ್ರ ವಾಹಿನಿ ನನಗೆ ಬರುತ್ತಿದೆ. ನೀವು ಸ್ವಲ್ಪ ಹೊತ್ತು ಇರಿ. ಮಾರ್ಚ್ ವರೆಗೆ ಕಾಯಿರಿ ಎಲ್ಲ ಸರಿಯಾಗುತ್ತದೆ' ಎಂದರು. ಅದೇ ಸಮಯದಲ್ಲಿ ಒಬ್ಬ ಆಟೋದವರನ್ನು 'ನೀವು ರಸ್ತೆಯಲ್ಲಿ ಮುಖವೆಲ್ಲಾ ಸುಟ್ಟುಕೊಂಡವರೊಬ್ಬರನ್ನು ನೋಡಿ ಬಂದಿರಲ್ಲಾ' ಎಂದರು ಗುರುನಾಥರು. ಅಷ್ಟು ಹೊತ್ತಿಗೆ ಅಲ್ಲಿಗೆ ಮತ್ತೊಬ್ಬರು ಬಂದರು. ಅವರನ್ನು ನೋಡಿ ಗುರುನಾಥರು 'ಏನ್ಸಾರ್ ಏನೋ ತರಿಸ್ತೀನಿ ಅಂದಿದ್ದಿರಿ' ಎಂದಾಗ, ಅಲ್ಲಿ ಕುಳಿತಿದ್ದವರಿಗೆಲ್ಲ ಬಿಸಿ ಬಿಸಿ ಮಸಾಲೆ ದೋಸೆ ಸರಬರಾಜಾಯಿತು. ನಮ್ಮ ಕಡೆ ನೋಡುತ್ತಾ 'ನೀವು ಮನೆಗೆ ಹೋಗಿ. ಚಂದ್ರಶೇಖರ ಭಾರತೀ ಸ್ವಾಮಿಗಳ ಪಾದುಕೆಗೆ ಪೂಜೆ ಮಾಡಿ ಬನ್ನಿರಿ. ಅಲ್ಯಾರಾದರೂ ಏನಾದರೂ ನೀವ್ಯಾರೆಂದು ಕೇಳಿದರೆ, ದೀಕ್ಷಿತರ ಮೊಮ್ಮಗಳು ಎಂದು ಹೇಳಿರಿ' ಎಂದು ನಮ್ಮನ್ನು ಕಳಿಸಿದರು'. ನಾಗರಾಜ ಅವರು ತಮ್ಮ ಗುರುನಾಥರ ಆ ಮೊದಲ ಭೇಟಿಯನ್ನು ತಮ್ಮ ಮನಃಪಟಲದಲ್ಲಿ ಕಾಣುತ್ತಾ ಸುಮ್ಮನಾದರು.
ಪ್ರಿಯ ಓದುಗ ಗುರುಬಾಂಧವರೇ, ಮೊದಲ ಭೇಟಿಯಲ್ಲಿಯೇ ಗುರುನಾಥರು ಈ ಬಂಧುಗಳಿಗೆ ಏನೆಲ್ಲಾ ನೀಡಿಬಿಟ್ಟರು. ಇದಕ್ಕೆ ಹೇಳುವುದು...... 'ಗುರುಪ್ರೀತಿ, ಕರುಣೆ ಎಂಬುದು ಹತ್ತು ತಾಯಿಯ, ಅಜ್ಜಿಯ ಪ್ರೀತಿಗಿಂತ ಮಿಗಿಲು' ಎಂದು. ಈ ಗುರುಬಂಧುಗಳ ಜೀವನದಲ್ಲಿ ಆ ದಿನ ಒಂದು ಮಹತ್ವದ ದಿನವಾಗಿತ್ತು. ಅಂತಹ ಗುರುಕರುಣೆ ನಮ್ಮ ಎಲ್ಲ ನಿತ್ಯಸತ್ಸಂಗದ ಬಂಧುಗಳಿಗೂ ಗುರುನಾಥರು ನೀಡಲಿ. ಮುಂದೇನಾಯಿತು ತಿಳಿಯಲು ನಾಳೆ ನಮ್ಮೊಂದಿಗಿರಿ ಪ್ರಿಯರೇ.....
ಹೆಚ್ಚಿನ ಮಾಹಿತಿಗಾಗಿ ಗುರು ಬಂಧುಗಳು ಶ್ರೀ ಸದ್ಗುರುನಾಥ ಲೀಲಾಮೃತ - 2 ಕನ್ನಡ ಗ್ರಂಥವನ್ನು ಪರಾಂಬರಿಸುವುದು.....
ಪುಸ್ತಕದ ಪ್ರತಿಗಳಿಗಾಗಿ ಮೊಬೈಲ್ ಸಂಖ್ಯೆ: 94482 53533 ಸಂಪರ್ಕಿಸಬಹುದಾಗಿದೆ.
।। ಓಂ ನಮೋ ಭಗವತೇ ಸದ್ಗುರು ಶ್ರೀ ವೆಂಕಟಾಚಲ ಅವಧೂತ ಗುರುನಾಥಾಯ ನಮಃ ।।
No comments:
Post a Comment