ಒಟ್ಟು ನೋಟಗಳು

Thursday, January 18, 2018

ಗುರುನಾಥ ಗಾನಾಮೃತ 
ನೀ ಪಾಲಿಸದಿರೆ ಗತಿಯೇನೋ
ರಚನೆ: ಅಂಬಾಸುತ 

ನೀ ಪಾಲಿಸದಿರೆ ಗತಿಯೇನೋ
ಅತಿ ಹೀನನಾಗೀ ನಾ ಅಳಿದೆನೋ ||

ಅಹಿತವ ಹಿತವೆಂದು ತಿಳಿದಿಹೆನೋ
ಕಹಿಯನ್ನು ಸಿಹಿಯೆಂದು ಸವಿದಿಹೆನೋ
ಕಾಮಿಸಿ ಕಾಂಚಾಣ ಪಡೆದಿಹೆನೋ
ಆ ಸೋಲನೆ ಗೆಲುವೆಂದೂ ಬೀಗಿಹಿನೋ ||೧||

ಹಿತಶತ್ರುಗಳು ಹಿಂದೆ ಮುಂದೆ
ಮುಖಸ್ತುತಿಯ ಮಾಡಿ ಮೆರೆಸಿಹರೋ
ನಿನ್ನ ತತ್ವಪದಗಳಾ ಮರೆಸಿಹರೋ
ನಾನೆಂಬುದನ್ನು ಬೆಳೆಸಿಹರೋ ||೨||

ಹೊನ್ನಿನ ಹಾಸಿಗೆ ಹೆಣ್ಣಿನ ಬಗಲು
ಕಣ್ಣಿಗೆ ಹಿಡಿಮಣ್ಣು ಹಾಕಿ ತಾವಿಹರೋ
ಸುಣ್ಣದ ಪಟ್ಟಿ ಇಟ್ಟು ಕಲೆಯಾ ಮುಚ್ಚಿಹರೋ
ದುಷ್ಟತನಕೆ ಶಿಷ್ಟ ಬಟ್ಟೆ ತೊಡಿಸಿಹರೋ ||೩||

ರಭಸದಿ ಇಳಿದಿಹೆನೋ ಪಾತಾಳ ಸೇರಿಹೆನೋ
ರಾಮ ರಾಮ ಎಂದು ಈಗಾ ಹಲುಬಿಹೆನೋ
ಅನ್ಯರ ಕಾಣೆನೋ ಗುರುವೇ ನಿನ್ನಾ ಬಿಟ್ಟು
ಈ ಅಂಬಾಸುತನ ಕರ ಪಿಡಿದೆತ್ತುವವರನೂ ||೪||
ಗುರುನಾಥ ಗಾನಾಮೃತ 
ಉಸಿರುಸಿರಿನ ಒಳಗೂ ಇರಲೀ ಗುರುವರ
ರಚನೆ: ಅಂಬಾಸುತ 

ಉಸಿರುಸಿರಿನ ಒಳಗೂ ಇರಲೀ ಗುರುವರ
ಅಳಿವುದು ನಿನ್ನಲಿನ ಅಹಂಕಾರ
ಆಗಲೇ ನಿನ್ನಾ ಆತ್ಮೋದ್ಧಾರ
ಅಳಿವುದು ಎಲ್ಲಾ ವಿಕಾರ ||

ಗುರುವಿನ ಭಾವ ಮನಕೇ ಹಿತಕರ
ಮುಮುಕ್ಷತ್ವಕ್ಕೆ ಇದೆ ಸಹಕಾರ
ಕಳೆವುದು ಮನದಾ ಅಂಧಕಾರ
ಮರೆವುದು ಲೋಕ ವ್ಯವಹಾರ ||

ಗುರುವು ತಾನೇ ಹರಿಹರ
ಗುರು ಚರಣಕ್ಕೆ ನಮಸ್ಕಾರ
ಗುರುವಿಂದಲೆ ದೊರೆವುದೂ ನಿಜವರ
ಗುರುವೇ ನಮಗೆ ಆಧಾರ ||

ಸದ್ಗುರುನಾಥ ಎಮ್ಮ ಗುರುವರ
ಸಖರಾಯಪುರದಾ ಸಾಹುಕಾರ
ಅಂಬಾಸುತಗೆ ಇವನೇ ಸುಖಕರ
ಶ್ರೀವೇಂಕಟಾಚಲ ಸದ್ಗುರುವರ ||

Tuesday, January 16, 2018

ಗುರುನಾಥ ಗಾನಾಮೃತ 
ಇಂದೇ ಅನುಗ್ರಹಿಸೆಂದು ನಾ ಬೇಡೆನಯ್ಯಾ
ರಚನೆ: ಅಂಬಾಸುತ 

ಇಂದೇ ಅನುಗ್ರಹಿಸೆಂದು ನಾ ಬೇಡೆನಯ್ಯಾ
ವೀಕ್ಷಿಸೆನ್ನನೂ ಪರೀಕ್ಷಿಸೆನ್ನನೂ
ನಿನ್ನ ಕರುಣೆಯೊಂದಿದ್ದರೆ ನಾ ಗೆಲ್ಲುವೇ
ನಿನ್ನ ಅನುಗ್ರಹವನೇ ಪಡೆವೆ
ಈ ಜನ್ಮವ ಸಾರ್ಥಕಪಡಿಸಿಕೊಳ್ಳುವೆನೋ
ಗುರುನಾಥ ಸಖರಾಯಪುರಾಧೀಶಾ ||

ಮರಣ ಸಮಯದಲಿ ನಿನ್ನ ಚರಣ ತೋರುತಲೀ
ಮರುಳ ಬಿಡಿಸಯ್ಯ ಮಹನೀಯಾ
ಆಸೆಗಳನಳಿಸೀ ನಿಜಾನಂದದೊಳಗೆನ್ನನಿರಿಸೋ
ಆಗ್ರಹಿಸಿ ಬೇಡುವೆನೂ 
ಶಿಶುವೂ ತಾಯಿಯಾ ಬೇಡಿದಂತೇ
ಗುರುನಾಥ ಸಖರಾಯಪುರಾಧೀಶಾ ||

ಅಹಂಭಾವವ ಅಳಿಸೀ ಸೋಹಂಭಾವವನಿರಿಸೋ
ಎನ್ನ ಸೋಲು ಗೆಲುವೆರಡೂ ನಿನ್ನದೇ
ಪಿಡಿದಿಹೇ ನಿನ್ನ ಪಾದ ಬೇಡಿ ದಾಸತ್ವವನು
ನೀಡದಿರದಿರೋ ಪ್ರಭುವೇ
ಅಂಬಾಸುತನಾ ಅಂತರಂಗದ ದೊರೆಯೇ
ಗುರುನಾಥ ಸಖರಾಯಪುರಾಧೀಶಾ ||
ಗುರುನಾಥ ಗಾನಾಮೃತ 
ಅವಧೂತನೆಂದರೆ ಇವನಮ್ಮಾ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಅವಧೂತನೆಂದರೆ ಇವನಮ್ಮಾ
ಅವಧೂತನೆಂದರೆ ಇವನೇ ಅಮ್ಮಾ ||

ಸತ್ಯದಲಿ ಸಿಗುವನು ಸುಳ್ಳಲಿ ದೊರಕನು

ಒಲಿದರೆ ಬಿಡನು ಬಿಟ್ಟರೆ ಸಿಗನು |
ಭಕ್ತರ ಬಿಡನು ಬಂಧನ ಕಳೆವನು 
ಅಂಕೆಗೆ ಸಿಗನು ಮುಗ್ಧತೆಗೆ ಒಲಿವನು || ೧ ||


ಸಾಧನೆಯಲಿ ನಲಿವನು ಸುಲಭಕೆ ಒಲಿಯನು
ಅರಿವ ನೀಡುವನು ತಮವ ಕಳೆವನು |
ಸಕಲವನು ಅರಿತವನು ಸರ್ವರಲೂ ನೆಲೆಸಿಹನು
ದುರಿತವ ಕಳೆವನು ಮುಕ್ತಿಯ ನೀಡುವನು || ೨ ||


ಗುರುನಾಥ ಗಾನಾಮೃತ 
ದತ್ತ ಬಂದ ಗುರುದತ್ತ ಬಂದಾ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ದತ್ತ ಬಂದ ಗುರುದತ್ತ ಬಂದಾ
ನಾಥ ಬಂದ ಗುರುನಾಥ  ಬಂದ ಇಂದು ಮನೆಗೆ || 

ಭಕುತರ ಬಾಳಿನ ಬೆಳಕಾಗಿ
ಸಾಧಕರ ಭಾಗ್ಯದ ನಿಧಿಯಾಗಿ |
ಆರ್ತರ ನಿತ್ಯ ಪೊರೆವವನಾಗಿ
ಬೇಡಿದ ಕೊಡುವ ಕಾಮಧೇನುವಾಗಿ || ೧ ||

ಮನದಿಂಗಿತ ಅರಿತವನಾಗಿ
ತಪ್ಪನು ತಿದ್ದುವ ಸಖನಾಗಿ |
ಕೈ ಹಿಡಿದು ನಡೆಸುವ ದೇವತೆಯಾಗಿ 
ಬಾಳಗುರಿಯ ತೋರುವ ಗುರುವಾಗಿ || ೨ ||

ಸುಖದುಃಖಗಳಲಿ ಜೊತೆಯಾಗಿ
ಮುಗ್ಧತೆಯ ಪ್ರತಿರೂಪವಾಗಿ |
ಎಲ್ಲರ ಒಳಿತ ಬಯಸುವವನಾಗಿ
ಪ್ರೇಮದಾ ನಿಧಿ ಬಂದವನಾಗಿ || ೩ ||

Sunday, January 14, 2018

ಗುರುನಾಥ ಗಾನಾಮೃತ 
ಎನ್ನ ಚಿತ್ತದೊಳಗೆ ನಿನ್ನ ಪಾದವನಿರಿಸೋ ಗುರುವೇ
ರಚನೆ: ಅಂಬಾಸುತ 

ಎನ್ನ ಚಿತ್ತದೊಳಗೆ ನಿನ್ನ ಪಾದವನಿರಿಸೋ ಗುರುವೇ
ಭಕ್ತಿ ಮೇಲಾಗಿಟ್ಟೂ ಭವಬಂಧನವಾ ಸುಟ್ಟೂ ||ಪ||

ಮುಚ್ಚಿದಾ ಕಣ್ಣೊಳೂ ಬೆಚ್ಚಗೆ ನೀನಿರೋ
ಬಿಟ್ಟ ಕಣ್ಣಾ ಮುಂದೇ ದಿಟ್ಟ ಪ್ರಭುವೇ ಕಾಣೋ
ನಾ ಕೇಳುವಾ ಪ್ರತಿ ಶಬ್ಧಕೆ ನಿನ್ನ ಧ್ವನಿಯಾ ಸೇರಿಸೋ
ಎನ್ನ ಮೌನದೊಳಗೇ ನೀ ಮಾತಾಗಿರೋ ||೧||

ನಾನಾಡುವಾ ಮಾತೊಳೂ ನಿನ್ನ ನಾಮವ ತುಂಬಿಡೋ
ನಾ ಸವಿಯುವಾ ಅನ್ನದೀ ನಿನ್ನ ಕರುಣಾರಸವಾ ಸೇರಿಸೋ
ನಾ ಮಾಡುವಾ ಕಾರ್ಯಕೇ ಕಾರಣ ನೀನಾಗೋ
ನಾ ಬರೆಯುವಾ ಪದಕೇ ಪೂರ್ಣತೆಯ ಫಲವಗೋ ||೨||

ಹೆಜ್ಜೆ ಇಟ್ಟರೆ ನಿನ್ನ ಸುತ್ತ ಲಜ್ಜೆ ಎನಗೆ ಏತಕೋ
ಕುಬ್ಜನನ್ನಾಗಿಸೋ ನಿನ್ನ ದಾಸರಾ ಬಳಿ ಸೇರಿಸೋ
ಉಸಿರು ನಿಂತರು ನಿನ್ನ ಹೆಸರಾ ಜಪಿಸುವಂತೇ ಹರಸೋ
ಕೊನೆಯುಸಿರಿಗೆ ಸಾಕ್ಷಿಯಾಗಿ ಕಣ್ಣ ಮುಂದೆ ನೀನಿರೋ ||೩||

ಸಖರಾಯಪುರಾಧೀಶಾ ಸದ್ಗುರು ಮಹಾದೇವಾ
ಸಂತತಾ ಸದ್ಭಕ್ತಪಾಲಕಾ ಅವಧೂತಾ
ಅಂಬಾಸುತನಾ ಮೊರೆಯ ಆಲಿಸೋ ಅಂತರಂಗದ ಪ್ರಭುವೇ
ತಡಮಾಡದೆ ಬಾರೋ ಬಳಲಿ ನಾ ಕಾದಿರುವೇ ||೪||
ಅವಧೂತ - ಅಸಮಾನ್ಯ - ಅಪ್ರಮೇಯ - ೨೪
ಸಂಗ್ರಹ : ಅಂಬಾಸುತ 

ಎಲ್ಲೇ ಹೋದರೂ ನನ್ನ ಗುರುನಾಥ ನನ್ನ ಜೊತೆಯಲ್ಲೇ ಇರುತ್ತಾನೆಂದು ನಂಬಿ ರಾಮೇಶ್ವರಕ್ಕೆ ತೆರಳಿದ ಯುವಭಕ್ತನಿಗೆ ರಾಮೇಶ್ವರ ದೇವಾಲಯದಲ್ಲಿ ಕಣ್ಣು ಮಿಟುಕಿಸುವಷ್ಟರಲ್ಲೇ ಆತನ ಸದ್ಗುರುಗಳು ದರ್ಶನ ನೀಡಿ ಕಾಣದಾಗುತ್ತಾರೆ. ಗಾಬರಿಯಿಂದ ಪುನಃ ಆತ ನೋಡಲು ಅಲ್ಲಿ ಕೆತ್ತನೆಯ ಶಿಲಾ ವಿಗ್ರಹವೊಂದಿದ್ದಿತು.ಕಣ್ತುಂಬಿಕೊಂಡ ಗುರುಮೂರ್ತಿಗೆ ಮನಸ್ಸಿನಲ್ಲೇ ನಮಿಸಿದ ಆ ಭಕ್ತ ನೀನೇ ನಿಜ ರಾಮೇಶ್ವರನೆಂದು ನಮಸ್ಕರಿಸುತ್ತಾನೆ. ಇದು ಆತನ ಭ್ರಮೆಯೋ ಅಥವಾ ನಿಜವಾಗಿಯೂ ಗುರುನಾಥನ ಕೃಪೆಯೋ ಆತನಿಗಂತೂ ಸ್ಪಷ್ಠತೆ ಇಲ್ಲ. ಏನೇ ಆದರೂ ಆತನ ಮನದಲ್ಲಿ ಗುರುದರ್ಶನ ಮಾಡಿದ ತೃಪ್ತಿ ಆನಂದವಂತೂ ಇತ್ತು. ಹೀಗೆ ಆ ಭಕ್ತನಿಗೆ ರಾಮೇಶ್ವರದಲ್ಲಿ ದರ್ಶನ ನೀಡಿ ತಾನೆಲ್ಲೆಡೆ ಇದ್ದೀನಿ ಎಂದು ತೋರಿಸಿದವರು - ಅವಧೂತರು.
ಗುರುನಾಥ ಗಾನಾಮೃತ 
ಹೋಗೋಣ್ ನಡೀ ತಂಗೀ
ರಚನೆ: ಅಂಬಾಸುತ 

ಹೋಗೋಣ್ ನಡೀ ತಂಗೀ
ಸಖರಾಯಪುರಕೇ
ಸದ್ಗುರುವರನ ದರುಷನಕೇ ||ಪ||

ದತ್ತನೇ ತಾನಿಲ್ಲೀ
ಅವತರಿಸಿಹನೂ ನೋಡಲ್ಲೀ
ನಾವೀಕ ತಾನಾಗುತಾ
ಭವಸಾಗರ ದಾಟ್ಸ್ಯಾನಲ್ಲೀ ||೧||

ದಟ್ಟಿ ಸುತ್ತಿದ ಗಟ್ಟಿಗಾ
ಇವ ದಿಟ್ಟ ಸಿಂಹನಂತೇ
ದುಷ್ಟಾರ ದುಷ್ಟತೆ ಸೀಳೀ
ದುಖಃ ಹರಿಸುವನೂ ಇಳೆಯಲ್ಲೀ ||೨||

ಮೈಲಿಗೆ ಕಳೆದೂ ನಡೀ
ನಿಮ್ಮಾ ಮನ ಅವನಡಿಯಲ್ಲಿಡೀ
ಒಪ್ಪಿಸಿಕೋ ತಂದೇ
ಒಪ್ಪವಾಗಿಸುತಲೀ ಎನ್ನೀ ||೩||

ಕಾಲಹರಣ ನೀಮಾಡಬ್ಯಾಡ್ವೇ
ಕಾಮಹರ ಗುರು ತಾನಲ್ಲಿದ್ದಾನೇ
ಕಾಮಿತಾರ್ಥವ ಕೊಡುತಾನೇ
ಕಾಮಧೇನು ತಾನೆನಿಸ್ಯಾನೇ ||೪||

ಅವಧೂತ ತಾನಾಗ್ಯಾನೇ
ಅತಿಷಯದಲಿ ನಿನ್ನ ಹರಸ್ಯಾನೇ
ಅಂಬಾಸುತನ ಪೊರೆದ್ಯಾನೇ
ನಿಜ ಆನಂದವ ನೀಡುತಾನೇ ||೫||
ಗುರುನಾಥ ಗಾನಾಮೃತ 
ನುಡಿಸು ತಂದೆ ಸವಿನುಡಿಯ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ನುಡಿಸು ತಂದೆ ಸವಿನುಡಿಯ
ನೋಯಿಸದಂತೆ ಯಾರ ಮನವ ||

ಮಾಡಿಸು ತಂದೆ ಕೆಲಸವ
ಮನದಿ ತುಂಬುತಾ ಧೈರ್ಯವ |
ಫಲಾಫಲಗಳು ನಿನ್ನದೇ ಪ್ರಭುವೇ 
‌ನಿಮಿತ್ತವೇ ನಾವಿಲ್ಲಿ ಗುರುವೇ ||

ಕಲಿಸು ತಂದೆ ಮನೋಭಾವನೆ
ಎಲ್ಲರಲೂ ನೀನಿಹೆಯೆಂಬ ಸಮಭಾವನೆ |
ಆಗಿರು ತಂದೆ ಸುಪ್ತಚೇತನ
ಮನದಲಿ ನಲಿವ ದಿವ್ಯಚೇತನ ।।

Friday, January 12, 2018

ಗುರುನಾಥ ಗಾನಾಮೃತ 
ಬೇಡುವೆ ನಿನ್ನನು ಬೇಗನೆ ಬಾರೋ
ರಚನೆ: ಅಂಬಾಸುತ 

ಬೇಡುವೆ ನಿನ್ನನು ಬೇಗನೆ ಬಾರೋ
ಭಾಗ್ಯದ ನಿಧಿ ನೀ ಗುರುವರ್ಯಾ
ಭಾವಿಕ ಮನವಿದು ಹಾತೊರೆದಿಹುದೂ
ಕಾಯಿಸ ಬೇಡವೋ ಗುರುವರ್ಯಾ ||

ಗತಿ ನೀ ಎನ್ನುವ ಮತಿಯ ಪಾಲಿಸುತಾ
ಗತಪಾಪ ಕಳೆಯೋ ಗುರುವರ್ಯಾ
ಹಿತವಾದ ನಿನ್ನೆರಡು ಪದಕುಸಮಗಳಾ
ಎನ್ನ ಮನದೊಳಗಿರಿಸೊ ಗುರುವರ್ಯಾ ||

ಅರಿತರಿಯದೆ ಮಾಡಿದ ಪಾಪಗಳಾ
ಅರಿ ಎಂದು ಸುಟ್ಟುಬಿಡೊ ಗುರುವರ್ಯಾ
ಅಂಬಿಗನು ನೀನಯ್ಯ ಪಯಣಿಗ ನಾನಯ್ಯ
ಭವಸಾಗರ ದಾಟಿಸೋ ಗುರುವರ್ಯಾ ||

ನೀ ತಂದೆ ತಾಯಿಯೂ ನೀ ಬಂಧು ಬಳಗವೂ
ನೀನೆನಗೆ ಸಕಲವು ಗುರುವರ್ಯಾ
ನೀ ತೋರೊ ಹಾದಿಯಲೇ ನಾನೆಂದೂ ನೆಡೆವೇ
ಎನ್ನ ಕರ ಬಿಡಲೆ ಬೇಡವೋ ಗುರುವರ್ಯಾ ||

ಸಖರಾಯಪುರಾಧೀಶಾ ಸದ್ಭಕ್ತಪಾಲಕ
ಕೃಪಾಸಮುದ್ರ ಗುರುವರ್ಯಾ
ಅಂಬಾಸುತನ ಅನವರತ ಪೋಷಿಸುತಿಹಾ
ಆದ್ಯಂತರಹಿತಾ ಗುರುವರ್ಯಾ ||
ಅವಧೂತ - ಅಸಮಾನ್ಯ - ಅಪ್ರಮೇಯ - ೨೩
ಸಂಗ್ರಹ : ಅಂಬಾಸುತ 

ಮಹಾಪುಣ್ಯ ಭೂಮಿ ಎನಿಸಿದ ಅಗಡಿ ಆನಂದವನಕ್ಕೆ ತೆರಳಿ ಅಲ್ಲಿ ಗುರುಮಾತೆಯನ್ನು,"ಮೂರುದಿನದ ಹಿಂದೆ ಮಾಡಿಟ್ಟ ರೊಟ್ಟಿಯನ್ನು ಅಡಿಗೆ ಮನೆ ಗಡಿಗೆಯೊಳಿಟ್ಟಿದ್ದೀರಲ್ಲ ತಂದು ಬಡಿಸಿ" ಎನಲು, ಗುರುಮಾತೆ " ಅದು ಮೂರು ದಿನ ಹಿಂದಿನದು" ಎಂದಾಗ " ಈ ಪುಣ್ಯಭೂಮಿನಾಗೆ ಏನೇ ಸಿಕ್ಕಿದರೂ ಅದೇ ಮಹಾಪ್ರಸಾದ ತಂದು ಕೊಡಿ" ಎಂದು ಪ್ರಸಾದ ಸ್ವೀಕರಿಸಿದವರು - ಅವಧೂತರು.

Thursday, January 11, 2018

ಗುರುನಾಥ ಗಾನಾಮೃತ 
ಸಖರಾಯಪುರವರಾಧೀಶಾ 
ರಚನೆ: ಅಂಬಾಸುತ 

ಸಖರಾಯಪುರವರಾಧೀಶಾ 
ಘನ ಸುಖವೀವಾ ನೀವೇ ಎಮಗೆ ಸರ್ವಸ್ವಾ ||ಪ||

ಎಮ್ಮ ಹೃದಯ ಮಂದಿರದಾ ಒಳಗೇ
ಅನವರತ ಆನಂದದಿಂದಿರುವವರೇ
ಬೋಧರೂಪವನ್ನೇ ಧರಿಸೀ
ಎಮ್ಮನುದ್ಧರಿಸುವಾ ನೀವೇ ನಿಜ ತಂದೇ ||೧||

ದುರಿತಗಳನ್ನೆಲ್ಲಾ ಹರಿಸೀ
ದಾನವತೆಯೆ ಮನದಿಂದ ಹೋಗಲಾಡಿಸೀ
ಸಾಧುಸಂತರ ಸೇವೆಯ ನೀಡೀ
ಸಾಧನಾ ಮಾರ್ಗ ತೋರಿದ ಸ್ವಾತ್ಮಾರಾಮಾ ||೨||

ಸಾಕಾರ ರೂಪ ತಾನಾಗೀ
ಆಕಾರ ರಹಿತನ ಅಂತರಂದಲಿರಿಸೀ
ಹಿತಕರ ಸುಖಕರ ತಾನಾಗೀ
ಲೋಕವ್ಯವಹಾರ ಮರೆಸಿದ ವಿರಾಗೀ ||೩||

ದತ್ತರೂಪಿ ಅವಧೂತಾ
ಶ್ರೀವೇಂಕಟಾಚಲ ನಾಮಾಂಕಿತಾ
ಅಂಬಾಸುತನ ಅರಿವಿನ ದೊರೆಯೀತಾ
ಸಾಧಕರ ಸಾಧನೆಯೊಳು ಅವಿತಾತಾ ||೪||
ಗುರುನಾಥ ಗಾನಾಮೃತ 
ಗುರುವೇ ನಿನ್ನ ಕರುಣೆ ಎನ್ನ ಮೇಲಿರಲೀ
ರಚನೆ: ಅಂಬಾಸುತ 

ಗುರುವೇ ನಿನ್ನ ಕರುಣೆ ಎನ್ನ ಮೇಲಿರಲೀ
ಕತ್ತಲೊಳಗೆ ಇಹೆನೋ ನಾನೂ 
ಜ್ಞಾನದ ಹಿಡಿ ಬೆಳಕಾ ನೀ ನೀಡು ||ಪ||

ನಿಜಸುಖವೆಂಬುದ ನಾನರಿಯೇ
ಧನಕನಕದ ಮೋಹದಿ ಸಿಲುಕಿರುವೇ
ಸೋಲು ಗೆಲುವುಗಳಾ ಬದುಕಲಿ ಹುಟ್ಟಿ ಸಾಯುತಲಿರುವೇ ||೧||

ಅರಿವಿನ ದೊರೆಯೂ ನೀನಂತೇ
ಅರಿಯದೆ ನಾ ಹೊಂದಿಹೆ ಚಿಂತೇ
ಅಂತರಂಗದೀ ನಿನ್ನ ನಾ ಅರಿಯದೇ ಬಯಲೊಳು ಹುಡುಕತಲಿಹೆನಂತೇ ||೨||

ಮಾತಿನ ಮನೆಯೊಳಗೇ ನಾನಿಂತೇ
ಮೌನದ ಅರಮನೆಗೇ ಹೊರಗಂತೇ
ನೀನಿಹೆಯಂತೆ ಮೌನದೊಳಗೇ ಮಾತಿನ ಹಂಗು ನಿನಗೇಕಂತೇ ||೩||

ವಿಪರೀತ ವಾದದಲೀ
ಬುದ್ದಿ ಬಹು ಮೊಂಡಾಗುವುದಂತೇ
ವಾದಕೆ ನಿಲುಕದವಾ ನೀನಂತೇ ಮೃದುವಾಣಿಗೆ ಓಡಿ ಬರುವೆಯಂತೇ ||೪||

Tuesday, January 9, 2018

ಗುರುನಾಥ ಗಾನಾಮೃತ 
ಎದ್ದು ಹೋಗುವೆ ನಾಳೆ
ರಚನೆ: ಅಂಬಾಸುತ 

ಎದ್ದು ಹೋಗುವೆ ನಾಳೆ
ಇದ್ದರಿದೇ ಕಡೆಯ ದಿನಾ
ಹೊದ್ದು ಮಲಗುವೆ ಏಕೇ
ಹರಿಯಾಣೆ ನಿನಗೇ ||ಪ||

ಪೊಳ್ಳಿನಲೇ ಕಳೆದೇ
ಭೂತಕಾಲವನೆಲ್ಲಾ
ಈ ವರ್ತಮಾನದಲೀ
ನೀ ಗಟ್ಟಿಗನಾಗೋ
ಮುಂದೆಂಬುದಿದೆಯೊ ಕಾಣೇ
ಮರೆ ನೀನೂ ಮರೆವನ್ನೂ
ಹರಿಗೋಲನೆತ್ತಿಕೋ
ನೀ ಹರಿಸ್ಮರಣೆ ಮಾಡುತಾ ||

ವಿಮುಖನಾಗದಿರೆಂದೂ
ವಿಶ್ವವೇ ಸುಮುಖವದೂ
ದೋಷವಿರುವಾ ದೃಷ್ಟಿಗೇ
ಕಾಂಬುದೆಲ್ಲಾ ದೋಷವೂ
ಅನ್ಯರೂ ನಿನಗೇನೂ
ಮಾಡಿಹರೆಂದು ಕೇಳದಿರೂ
ನೀನ್ಯರಿಗೆ ಏನೂ
ಮಾಡಿದೆ ಮೆಲುಕು ಹಾಕೂ ||

ಸಾವು ನೋವು ತಪ್ಪಿದ್ದಲ್ಲಾ
ವಿಧಿಯದಕೆ ಹೊಣೆಯಲ್ಲಾ
ನೀ ಮಾಡಿದಾ ಕರ್ಮಾ
ನಿನ್ನ ಸುತ್ತಿಹುದಲ್ಲಾ
ಗುರಿ ತೋರೋ ಗುರು ನಿನಗೇ
ಎದುರಲೇ ನಿಂತಿರಲೀ
ಗಾಢಾಂಧಕರವ ನೀ
ಅಪ್ಪಿ ನಿಂತಿಹೆಯಲ್ಲಾ ||

ಗುರುನಾಥ ಗಾನಾಮೃತ 
ತಪ್ಪು ಹುಡುಕವ ಬಹು ದುಷ್ಟ ಕುಬುದ್ದಿ
ರಚನೆ: ಅಂಬಾಸುತ 


ತಪ್ಪು ಹುಡುಕವ ಬಹು ದುಷ್ಟ ಕುಬುದ್ದಿ
ಎನ್ನೊಳೇಕೆ ತಂದೆಯೋ
ಅಪ್ಪ ನಿನ್ನಾ ಪಾದ ಪಿಡಿವೇ ಈ ಬಹು ದೊಡ್ಡ
ದೋಷವ ಹರಿಸೋ ||

ಅವರಿವರ ಅವಗುಣಗಳ 
ಎಣಿಸಿ ಕಾಲ ಕಳೆದೆನೋ
ಎನ್ನೊಳಿಹ ತಪ್ಪುಗಳ ಕಂದಕ
ಮರೆ ಮಾಚಿ ಮೆರೆಯುತಿಹೆನೋ||

ಎತ್ತಿ ಆಡಿ ಕಿರಿಯನಾಗುತಿಹೆ
ಕತ್ತಲೊಳಗೇ ಸುಖವೆಂದಿಹೇ
ಅನ್ಯರಾ ಮಾತಾಡಿ ಅವರಾ
ಪಾಪದ ಹೊರೆ ನಾ ಹೊರುತಿಹೆ ||

ತಪ್ಪು ಎನ್ನೊಳಗಿರಲು ಮಾತ್ರವೇ
ಅನ್ಯರಾ ತಪ್ಪು ಕಾಂಬುದೂ
ಅಹಂಕಾರದಿ ಮೆರೆದವನಿಗೆ
ಈ ಸತ್ಯ ತಿಳಿಯದೂ ||

ನಿರ್ಮಲಾತ್ಮಕ ಸದ್ಗುರುದೇವಾ
ಈ ದೋಷವ ನೀ ಹರಿಸೋ
ತಪ್ಪು ಕಾಂಬುವ ಕಣ್ಣುಗಳನು
ಬೇಗನೇ ಕುರುಡಾಗಿಸೋ ||