ಗುರುನಾಥ ಗಾನಾಮೃತ
ಎನ್ನ ಚಿತ್ತದೊಳಗೆ ನಿನ್ನ ಪಾದವನಿರಿಸೋ ಗುರುವೇ
ರಚನೆ: ಅಂಬಾಸುತ
ಎನ್ನ ಚಿತ್ತದೊಳಗೆ ನಿನ್ನ ಪಾದವನಿರಿಸೋ ಗುರುವೇ
ಭಕ್ತಿ ಮೇಲಾಗಿಟ್ಟೂ ಭವಬಂಧನವಾ ಸುಟ್ಟೂ ||ಪ||
ಮುಚ್ಚಿದಾ ಕಣ್ಣೊಳೂ ಬೆಚ್ಚಗೆ ನೀನಿರೋ
ಬಿಟ್ಟ ಕಣ್ಣಾ ಮುಂದೇ ದಿಟ್ಟ ಪ್ರಭುವೇ ಕಾಣೋ
ನಾ ಕೇಳುವಾ ಪ್ರತಿ ಶಬ್ಧಕೆ ನಿನ್ನ ಧ್ವನಿಯಾ ಸೇರಿಸೋ
ಎನ್ನ ಮೌನದೊಳಗೇ ನೀ ಮಾತಾಗಿರೋ ||೧||
ನಾನಾಡುವಾ ಮಾತೊಳೂ ನಿನ್ನ ನಾಮವ ತುಂಬಿಡೋ
ನಾ ಸವಿಯುವಾ ಅನ್ನದೀ ನಿನ್ನ ಕರುಣಾರಸವಾ ಸೇರಿಸೋ
ನಾ ಮಾಡುವಾ ಕಾರ್ಯಕೇ ಕಾರಣ ನೀನಾಗೋ
ನಾ ಬರೆಯುವಾ ಪದಕೇ ಪೂರ್ಣತೆಯ ಫಲವಗೋ ||೨||
ಹೆಜ್ಜೆ ಇಟ್ಟರೆ ನಿನ್ನ ಸುತ್ತ ಲಜ್ಜೆ ಎನಗೆ ಏತಕೋ
ಕುಬ್ಜನನ್ನಾಗಿಸೋ ನಿನ್ನ ದಾಸರಾ ಬಳಿ ಸೇರಿಸೋ
ಉಸಿರು ನಿಂತರು ನಿನ್ನ ಹೆಸರಾ ಜಪಿಸುವಂತೇ ಹರಸೋ
ಕೊನೆಯುಸಿರಿಗೆ ಸಾಕ್ಷಿಯಾಗಿ ಕಣ್ಣ ಮುಂದೆ ನೀನಿರೋ ||೩||
ಸಖರಾಯಪುರಾಧೀಶಾ ಸದ್ಗುರು ಮಹಾದೇವಾ
ಸಂತತಾ ಸದ್ಭಕ್ತಪಾಲಕಾ ಅವಧೂತಾ
ಅಂಬಾಸುತನಾ ಮೊರೆಯ ಆಲಿಸೋ ಅಂತರಂಗದ ಪ್ರಭುವೇ
ತಡಮಾಡದೆ ಬಾರೋ ಬಳಲಿ ನಾ ಕಾದಿರುವೇ ||೪||
No comments:
Post a Comment