ಒಟ್ಟು ನೋಟಗಳು

Saturday, July 14, 2018

ಗುರುನಾಥ ಗಾನಾಮೃತ 
ಎನಗಿನ್ಯಾರು ಗತಿ ಗುರುರಾಯ
ರಚನೆ: ಅಂಬಾಸುತ 

ಎನಗಿನ್ಯಾರು ಗತಿ ಗುರುರಾಯ
ಸನ್ಮತಿ ಪಾಲಿಸಿ ಸಲಹೈ ಮಹನೀಯ ||ಪ||

ಮಾತಾ ಪಿತರು ಮುಂದ್ಹೋಗುವರು
ಮಾನಿನಿ ಮನೆಯೊಳಗೇ ಉಳಿಯುವಳು
ಸುತರೆಲ್ಲರು ಸತತ ಹಣದ ಹಿಂದಿರುವರು
ಸ್ನೇಹಿತರು ಸಮರೆಂದಿಗು ಇರರೂ ||೧||

ಕುಲ ದೇವರು ಕರ್ಮವ ಮಾಡೆನ್ನುವರು
ಕುಲಪತಿ ಕುಟುಕಿ ಕೊಡು ಕೊಡು ಎನ್ನುವರು
ಕುಲಗುರು ಧರ್ಮದಿ ನೆಡೆ ಎನ್ನುವರು
ಧಣಿ ದುಡಿದು ಮನೆ ಸೇರೆನ್ನುವನು ||೨||

ಕೂಡಿಟ್ಟದ್ದು ಕಳೆದ್ಹೋಗುವುದು
ಕಾನನ ವಾಸಕೆ ದಾರಿ ತೋರುವುದು
ಕಲಿತದ್ದೆಲ್ಲಾ ಮರೆತ್ಹೋಗುವುದು
ಕಲಿಯುಗದಾ ಫಲ ಇಂತಿಹುದು ||೩||

ಆತ್ಮಸಖ ಸಖರಾಯಪುರವರ
ಅಂಬಾಸುತನಾ  ಅಂತರಂಗಕೆ ವರ
ಅಡಿಗಡಿಗೆರಗುವೆ ಎಮ್ಮನುದ್ಧರಿಸೊ
ಭವ ಕೆಡಿಸೊ ಬಂಧನವನೆ ಬಿಡಿಸೊ ||೪||
ಗುರುನಾಥ ಗಾನಾಮೃತ 
ನುತಿಸುವೆ ಗುರುನಾಥ ಅನಾಥ ನಾಥ
ರಚನೆ: ಅಂಬಾಸುತ 

ನುತಿಸುವೆ ಗುರುನಾಥ ಅನಾಥ ನಾಥ
ನುತಿಸುವೆ ಗುರುನಾಥ ||ಪ||
ಸ್ಥಿತಿ ಗತಿ ನೀನೆಂದು ಸನ್ಮತಿಯ ಪಾಲಿಸೆಂದು
ಶ್ರುತಿ ವಾಕ್ಯಗಳು ಪೊಗಳಿದ ನಿನ್ನ ||ಅ.ಪ||

ಶಕುತಿಯ ವಿರಕುತಿಯ ಮುಕುತಿಯ ಧಾತ
ಆರುತಿಯನೆ ಎತ್ತಿ ಅತಿ ಭಕುತಿಯಿಂದ ||೧||

ನಾಲ್ಮೊಗನ ನಾಗಾಹಾರನ ನಾಗಶಯನನ
ಏಕ ರೂಪನ ಅನೇಕ ವಿಧದಿ ಅತಿಷಯದಿಂದ ||೨||

ಲೌಕಿಕ ಅಲೌಕಿಕ ಆಧ್ಯಾತ್ಮಿಕಾದಿ ಸರ್ವದಲ್ಲೂ
ಆನಂದ ಹೊಂದುವ ಮಾರ್ಗವ ತೋರಿದೆ ||೩||

ಮಾತಾ ಪಿತಾ ಬಂಧು ಸಖ ಸರ್ವಸ್ವ ನೀನೇ
ಅಂಬಾಸುತನ ಅಂತರಂಗದ ದೊರೆ ಎಂದು ||೪||

Tuesday, July 10, 2018

ಗುರುನಾಥ ಗಾನಾಮೃತ 
ದತ್ತ ಚರಿತ ಸುಂದರ
ರಚನೆ: ಅಂಬಾಸುತ 

ದತ್ತ ಚರಿತ ಸುಂದರ
ಕೇಳೆ ಮನವು ಮಂದಿರ
ದತ್ತನಾಗುವನು ಸಾಕಾರ
ಅದರಿಂದಲೇ ಆತ್ಮೋದ್ಧಾರ ||

ಭಕ್ತಿ ಜ್ಞಾನ ಕರ್ಮದಾ
ಬೋಧರೂಪ ಈ ತರ
ಆನಂದದ ಭಂಡಾರ
ಅಮೃತತ್ವದ ಆಹಾರ ||

ಮುಖ ಮೂರು ಕರ ಆರರಾ
ಮೋಹಕ ಸಾಕ್ಷಾತ್ಕಾರ
ಯತಿವರ್ಯರ ನಿರ್ಧಾರ
ಲೋಕಕಲ್ಯಾಣ ಇಲ್ಲಿ ಸ್ಥಿರ ||

ಶ್ರೀಪಾದ ವಲ್ಲಭರ
ನೃಸಿಂಹ ಸರಸ್ವತಿಯರ
ಜೀವನದ ತತ್ವಸಾರ
ಮುಕುತಿಗದೇ ಆಧಾರ ||

ಪವಾಡಗಳೆಲ್ಲ ದೂರ
ಅದರೊಳಗಿನ ಅರಿವೆ ಸಾರ
ಅರಿತಾಗಲೇ ಸಂಸಾರ
ಆಗದು ದುಸ್ಸಾರ ||

ಫಲ ಕರ್ಮಾನುಸಾರ
ಪ್ರಾಯಶ್ಚಿತ ನಮಸ್ಕಾರ
ತಿಳಿಸಿದನಾ ಗಾಣಗಾಪುರ
ಒಡೆಯ ದತ್ತ ಚಂದಿರ ||

ಅಂಬಾಸುತಗಂಕುರ
ಭಕ್ತಿ ಭಾವ ಈ ತರ
ತೋರಿದನು ಗುರುವರ
ಸಖರಾಯಪುರವರಾ ||

Monday, July 9, 2018

ಗುರುನಾಥ ಗಾನಾಮೃತ 
ನುಡಿದಾನೆ ನೋಡೇ ವೇದಗಳಾ ನರಹರಿ
ರಚನೆ: ಅಂಬಾಸುತ 

ನುಡಿದಾನೆ ನೋಡೇ ವೇದಗಳಾ ನರಹರಿ
ನುಡಿದಾನೆ ನೋಡೇ ವೇದಗಳಾ ||ಪ||
ತಾಯಿ ಭಿಕ್ಷೆಯಾ ನೀಡುತಾ ಪೇಳಲು
ವಟುವಾಗಿ ನಿಂತ ದತ್ತನವತಾರಿ ||ಅ.ಪ||

ಹುಟ್ಟಿದಾರಭ್ಯ ಮೂಕನಂತಿದ್ದು
ಓಂಕಾರವನ್ನೇ ಜಪಿಸುತಲಿದ್ದು
ಅಂಬಾ ಮಾಧವ ದಂಪತಿಗಳಂದು
ಮೌಂಜಿ ಬಂಧನ ಮಾಡಿಸೇ ಮಗುವಿಗೆ ||೧||

ಮೊದಲ ಭಿಕ್ಷೆಗೆ ಋಗ್ವೇದ ಪೇಳೆನಲು
ಎರಡನೆ ಭಿಕ್ಷೆಗೆ ಯಜುರ್ವೇದವಾ
ಮೂರನೆ ಭಿಕ್ಷೆಗೆ ಸಾಮವೇದವಾ
ನಾಲ್ಕನೆ ಭಿಕ್ಷೆಗೆ ಅಥರ್ವಣವೇದವಾ ||೨||

ತಾಯಿ ಹರುಷದಿ ಕಂಬನಿಗೈದಿರಲು
ತಂದೆ ಪ್ರೇಮದಿ ತಲೆ ನೇವರಿಸಿರಲು
ಬಂಧು ಬಾಂಧವರು ವಿಸ್ಮಯಗೊಂಡಿರಲು
ಭಗವಂತ ಇವನೆಂದು ಕೊಂಡಾಡಿರಲು ||೩||

ಗಾಣಾಗಪುರದಿ ನಿಂತ ಮಹಾಯೋಗಿ
ಅಂಬಾಸುತನ ಸದ್ಗುರು ವಿರಾಗಿ ||೪||
ಗುರುನಾಥ ಗಾನಾಮೃತ 
ಹೇಳಿದ ಗುರುನಾಥ ಕೇಳಿದ ಗುರುನಾಥ
ರಚನೆ: ಅಂಬಾಸುತ 


ಹೇಳಿದ ಗುರುನಾಥ ಕೇಳಿದ ಗುರುನಾಥ
ಕಾಲ ಕಳೆದೇಯಲ್ಲ ಏನ ನೀ ಕಂಡೆ ಎಂದು ||ಪ||

ಯಾರಿಗೆ ಸುಖವಿತ್ತೆ ಯಾರಿಂದ ಸುಖ ಕಿತ್ತೆ
ಯಾರ ಮಾತಿಗೆ ನೀ ಮಾತ ಸೇರಿಸಿದೆ
ನಾನರಿತೆ ನಿನ್ನನು ಎನ್ನುವ ಗೂಢನೇ
ನೀನ್ಯಾರು ಎಂಬುದ ಅರಿತೇಯ ಮೂಢನೇ ||೧||

ಗುರುವೆಂದು ನಡೆದೆ ಗುರುವೆಂದು ದುಡಿದೆ
ಒಳಗೊಳಗೆ ಗುರು ಗುರುಗುಟ್ಟುತ್ತ ನಿಂತೆ
ಗುರುವೆಂದು ಉಂಡೆ ಗುರುವೆಂದು ಕಂಡೆ
ಗುರುತರ ಭಾಗ್ಯವು ಇದೆ ಎಂದೆಯಲ್ಲಾ ||೨||

ಕಣ್ಮುಚ್ಚಿ ಕುಳಿತರೆ ಕಾಣನು ಬ್ರಹ್ಮನು
ಪ್ರಾಸದಿ ಗೀಚಿದರೆ ಬಾರನು ಅವನು
ಹಿಡಿಯಬೇಕೊ ಅರಿವಿನ ಜಾಡನ್ನು ಅರಿತು
ನೆಡೆಯಬೇಕೊ ಗುರು ನುಡಿಯನ್ನು ಕಲಿತು ||೩||

ಸಖರಾಯಪುರವಾಸ ಸುಖವೀಯೊ ಮಹನೀಯಾ
ಹೇಳಿ ಕೇಳಿ ಮಾಡಿದ ತನ್ನ ಭಕ್ತನ
ಅಂಬಾಸುತನಂತರಂಗದಿ ಅನವರತ ನಗುವಾತ
ಅರಿವಿನರಮನೆಯಾ ಹಾದಿಯ ತೋರಿಸುತ ||೪||
ಗುರುನಾಥ ಗಾನಾಮೃತ 
ಬರುವುದೆಲ್ಲ ಬರಲೆಂದು ಕಣ್ಮುಚ್ಚಿ ಕುಳಿತೆ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ಬರುವುದೆಲ್ಲ ಬರಲೆಂದು ಕಣ್ಮುಚ್ಚಿ ಕುಳಿತೆ ಗುರುವೇ 
ಎನ್ನ ಬಿಡಲೊಲ್ಲೇ ಎಂಬ ಬಾವದೊಳಿರುವೆ ಗುರುವೇ|

ಚಿಂತೆಯಾ ಸಂತೆಯೊಳು ಮುಳುಗಿಹೆನು ಗುರುವೇ
ಅಂತೆ ಕಂತೆಗಳ ಮಾತಿನ ವ್ಯವಹಾರ ಸಾಕು ಗುರುವೇ

ಬರುವುದೆಲ್ಲಾ ಒಳಿತಿಗೆಂದು ನಂಬಿರುವೆ ಗುರುವೇ
ನಾ ನಡೆವ ಬದುಕು ನೀ ಒಪ್ಪುವಂತಿರಲಿ ಗುರುವೇ|

ಬಾಳು ನಡೆಸಲು ನಿನ್ನೆರಳಲ್ಲಿ ಆಸರೆ ನೀಡು ಗುರುವೇ
ನಿನ್ನ ಕರುಣೆಯ ರಕ್ಷಣೆಯ ಬೇಲಿ ಸಾಕೆನಗೆ ಗುರುವೇ|

ಬೇಡೆಂದರೂ ಮಾಯೆಯ ಸುಳಿಯೊಳು ಮನವಿದೆ 
ಗೊಂದಲದ ಗುಡಿಯು ಈ ನನ್ನ ಮನವು ಗುರುವೇ|

ಈ  ಬಣ್ಣದ ಜಗದೊಳು ಹಾದಿ ಕಾಣದು ಗುರುವೇ
ನಿನ್ನೆಡೆಗೆ ನಡೆದಾಗ ಎಲ್ಲೆಲ್ಲೂ ನೆಮ್ಮದಿಯು ಗುರುವೇ|

Sunday, July 8, 2018

ಗುರುನಾಥ ಗಾನಾಮೃತ 
ಹುಚ್ಚನೆಂದಾರಲ್ಲೋ ಗುರುವೇ ನಿನ್ನ
ರಚನೆ: ಅಂಬಾಸುತ 

ಹುಚ್ಚನೆಂದಾರಲ್ಲೋ ಗುರುವೇ ನಿನ್ನ
ಜಗವರಿಯೊ ಅರಿವನ್ನೀಯೊ ಪ್ರಭುವೇ ನಿನ್ನ ||ಪ||
ಕೊಚ್ಚೆಯೊಳಾಡುತಾ ಇದೆ ಹಿತವೆನ್ನುತ್ತಾ
ಜೊಳ್ಳು ಸಿರಿಸಂಸಾರದ ಮನೆಯೊಳು ಕುಳಿತು ||ಅ.ಪ||

ಬಡ ಬಡ ಬಡಾಯಿಸುವನು ಅವನು
ನಕ್ಕಾನು ಒಮ್ಮೆ ಸಿಟ್ಟಾಗುವನೊಮ್ಮೆ
ಕಟ್ಟಾಳೆ ಹೇಳುವನು ಕಳವಳಪಡಿಸುವನು
ಕೂಡಿಟ್ಟದ್ದನ್ನೆಲ್ಲಾ ಕೊಡಿರೆಂದು ಪೇಳಿದಾ ||೧||

ನಾಲ್ವರ ಮುಂದೆ ಮನಮಾತ ಹೇಳುವನು
ಪ್ರತಿ ನಾಡಿಮಿಡಿತವ ಕಂಡು ಹಿಡಿವನು
ಪರಮಾತ್ಮ ಪರಬ್ರಹ್ಮ ಎಂದೆಲ್ಲ ಉಸುರಿ
ಪರಿಪರಿ ಪ್ರಶ್ನೆಗಳ ಕೇಳುತಲಿರುವಾ ||೨||

ದಟ್ಟಿಯೊಂದನೆ ಸುತ್ತಿಕೊಂಡಂತವನವನು
ಮಾನಾಭಿಮಾನವ ಬಿಟ್ಟವನವನು
ಎಲ್ಲೆಂದರಲ್ಲೇ ಜನರ ಕೂಡಿರುವನು
ಬಾಯ್ತೆರದರೆ ಗುರು ಗುರು ಎನ್ನುತ್ತಲಿರುವಾ ||೩||

ಸಖರಾಯಪುರದಲ್ಲಿ ಸುಖದಿಂದಿರುವನು
ಶ್ರೀವೇಂಕಟಾಚಲ ಎಂಬ ಹೆಸರಿನವನು
ಅಂಬಾಸುತನಾ ಪ್ರತಿ ಪದಕೆ ಪ್ರೇರಣೆಯಾಗಿ
ಗುರುವಾಗಿ ಅಂತರಂಗದ ಅರಿ ನಿಗ್ರಹಿಸುವ ||೪||

Saturday, July 7, 2018

ಗುರುನಾಥ ಗಾನಾಮೃತ 
ಮುಕ್ತನಾದೆ ನಾನು ಗುರುವ ನಂಬಿ ಸಂತೃಪ್ತನಾದೆನು
ರಚನೆ: ಆನಂದರಾಮ್, ಶೃಂಗೇರಿ  


ಮುಕ್ತನಾದೆ ನಾನು ಗುರುವ ನಂಬಿ ಸಂತೃಪ್ತನಾದೆನು
ಗುರುವಿನಲಿ ಬವಬಂದನ ದಾಟುವ ನಾವೆ ಕಂಡೆನು |

ಹರಿಹರರ ಹುಡುಕುತ ಎಲ್ಲೋ ಕಳೆದು ಹೋದೆನು
ಗುರುವೇ ಅವರೆಂದು ಅರಿಯದೇ ಮರುಳನಾದೆನು|

ನಾನು ಎಂಬ ಮಾಯೆಯಲ್ಲಿ  ಮುಸುಕಿ ಹೋದೆನು |
ಅವನಿಂದಲೇ  ಎಂಬ ಅರಿವಿಲ್ಲದೆ ಮೂಡನಾದೆನು|

ಬದುಕು ಕಟ್ಟುವ ಬರದಿ ಭ್ರಮೆಯ ಅರಸಿ ಬಂದೆನು
ನಿಜವ ಅರಿಯಲು ನಿನ್ನ ಮುಂದೆ ಮೂಕನಾಗಿಹೆನು|

ಮಾತು ಮರೆತು ಬದುಕ ನಡೆಸಿ ಏಲ್ಲೂ ಸಲ್ಲದಾದೆನು
ನಿನ್ನ ಅರಸಿ ಬಂದು ಎನ್ನ ಕಾಯೋ ಗುರುವೆ ಎಂದೆನು|

ಮೂರು ದಿನದ ಬದುಕಿಗಾಗಿ  ನಿನ್ನ ಬೇಡಿ ಬಂದೆನು
ಎನ್ನ ಹರಸಿ ಮುಕ್ತ ಗೊಳಿಸಿ ಎನ್ನ ಸಲಹು ಎಂದೆನು|

Friday, July 6, 2018

ಗುರುನಾಥ ಗಾನಾಮೃತ 
ನೋಡುತಾ ನಿಂತಾನೆ ನೋಡೆ ನಗುತ ಎನ್ನ ಗುರುವರ
ರಚನೆ: ಅಂಬಾಸುತ 

ನೋಡುತಾ ನಿಂತಾನೆ ನೋಡೆ ನಗುತ ಎನ್ನ ಗುರುವರ
ನಾ ಹಾಡುವುದನು ಆಡುವುದನು ಕಾಡುವುದನು ಕಾಣುತಾ ||ಪ||

ವಸ್ತ್ರವೇಕ ನಡುವಲಿ ಉಪವೀತ ಬಗಲಲಿ
ಕೇಸರಗಳು ವದನದಲ್ಲಿ ರವಿಶಶಿಯರು ನೇತ್ರದಲ್ಲಿ ||೧||

ಪಾದಪದುಮದ ಮೇಲೆ ಪದುಮದಳಗಳಿಂದ ಪೂಜೆಗೊಂಡು
ಪರಮಪದಕೆ ಕೊಂಡೊಯ್ಯೋ ಪದ ಪ್ರಸಾದವ ನೀಡಲು ||೨||

ಮುಷ್ಠಿ ಹಿಡಿದ ಕರದಿ ನೋಡು ಸಮಷ್ಠಿಯ ಸುಂದರ
ಪ್ರೇಮವೃಷ್ಠಿಯ ಹರಿಪ ಇವನು ನಿತ್ಯ ಸತ್ಯ ಮಂದಿರ ||೩||

ಸಖರಾಯಪುರದಿ ಈ ಸಂತ ಸಂತಸದಿಂದ
ಅಂಬಾಸುತನಾ ಅಂತರಂಗವ ಅಣಿಗೊಳಿಸೆ ಆನಂದದಿ ||೪||

ಗುರುನಾಥ ಗಾನಾಮೃತ 
ಎನ್ನ ಸದ್ಗುರು ಶ್ರೀವೇಂಕಟಾಚಲನ ಮನೆಗೆ  ಹೋಗೋಣ ಬಾರೇ ತಂಗಿ
ರಚನೆ: ಅಂಬಾಸುತ 

ಎನ್ನ ಸದ್ಗುರು ಶ್ರೀವೇಂಕಟಾಚಲನ 
ಮನೆಗೆ  ಹೋಗೋಣ ಬಾರೇ ತಂಗಿ ||ಪ||
ತಂಗೋಣ ಬಾರೇ ತಂಗಿ ಅಲ್ಲೇ
ಸದ್ಗುರು ಪಾದದಡಿಯಲ್ಲೇ ||ಅ.ಪ||

ಕಾಯವ ಹಣ್ಣಾಗಿಸಿ ತಂಗಿ
ಮನದ ಮಲ್ಲಿಗೆಯನ್ನರಳಿಸಿ
ಮೋಹ ದಾಹವ ಬಿಟ್ಟು ಮಡಿಯುಟ್ಟು ತಂಗಿ
ಆನಂದಿಂದ ಆನಂದದ ನಿಲಯಕ್ಕೆ ||೧||

ಆರು ಮೆಟ್ಟಿಲ ಮೆಟ್ಟಿ ತಂಗಿ
ಹದಿನಾರು ಚಿಂತೆಯ ಬಿಗಿದು ಕಟ್ಟಿ
ಮೂರನು ಮೀರಿದವನ ಪಾದವ ಮುಟ್ಟಲು ತಂಗಿ
ನೇತ್ರಾರತಿ ಮುಂದಿಟ್ಟುಕೊಂಡು ಮುದದಿ ||೨||

ಬಹುದೂರವಿಲ್ಲವೇ ತಂಗಿ
ಗುರುಮನೆ ಮೆರೆದಿಹುದು ನಿಜಸೌಖ್ಯ ರಂಗದಿ
ಆತ್ಮಸಖನ ಪುರದೊಳಗೇ ತಂಗಿ
ಅಂಬಾಸುತ ಈ ಪದ ಕೂಗಳತೆ ದೂರದಲ್ಲಿ ||೩||

Wednesday, July 4, 2018

ಗುರುನಾಥ ಗಾನಾಮೃತ 
ದಿಟ್ಟ ನೋಟ ಹೊತ್ತು ದಟ್ಟಿಯುಟ್ಟು ಬಂದ ಗುರುವರ
ರಚನೆ: ಅಂಬಾಸುತ 

ದಿಟ್ಟ ನೋಟ ಹೊತ್ತು ದಟ್ಟಿಯುಟ್ಟು ಬಂದ ಗುರುವರ
ಅಂತರಂಗದರಿವು ಪೇಳುತಿಹುದು ಇವನೆ ಜ್ಞಾನ ಭಾಸ್ಕರ ||ಪ||

ಶಾರದಮ್ಮ ಶ್ರೀನಿವಾಸ ಹಡೆದ ಕೂಸು ಸುಂದರ
ವೇಂಕಟಾಚಲನೆಂಬ ನಾಮ ಹೊತ್ತ ಪೂರ್ಣ ಚಂದಿರ ||೧||

ಭುವಿಗೆ ಭಾಗ್ಯ ಇವನ ಗಮನ ಧರ್ಮದ ಸಿಹಿ ಹೂರಣ
ಉಣಿಸುವನಿವ ತಣಿಸುವನಿವನಿಂದಲೆ ಜಗಕಲ್ಯಾಣ ||೨||

ಪದುಮಪ್ರಿಯನು ಪರಮಪದನು ಪಾಪ ದಹಿಸುವವನು
ಪಾದಕಿಂತ ಪದಪೂಜೆಯ ಮಾಡಿರೆಂದು ಪೇಳಿದವನು ||೩||

ಗದರಿ ಘನ್ನದೋಷ ಹರಿಸಿ ಗುಣಪೂರ್ಣತೆ ನೀಡುತ
ಭವಸಾಗರ ದಾಟಿಸೆ ನಿಂತ ನಾವೀಕನಾಗುತ ||೪||

ದತ್ತನಿವನು ಶಕ್ತನಿವನು ಮುಕ್ತಿ ನೀಡುವಾತನು
ವಿರಕ್ತತೆಯ ನೀಡಿ ವಾಣಿಯಾಗಿ ಜ್ಞಾನ ನೀಡುವನು ||೫||

ಧನಿಕತೆಗೆ ದೊರೆಯದವ ದೊರೆತನಕಿವ ಬಾಗದವ
ಆರ್ದ್ರತೆಯ ಭಾವದಿ ಕೂಗಿ ಕರೆಯೆ ಬಾರದಿವ ||೬||

ಸಖರಾಯಪುರದಿಹ ಭಕ್ತರ ಆತ್ಮಸಖನಾಗಿಹ
ಅಂಬಾಸುತನೆದೆಯೊಳು ಆನಂದದಿ ಮೆರೆದಿಹ ||೭||

Tuesday, July 3, 2018

ಗುರುನಾಥ ಗಾನಾಮೃತ 
ಈ ಸಂತ ಸುಮ್ಮನಿರಲಿಲ್ಲ
ರಚನೆ: ಅಂಬಾಸುತ 

ಈ ಸಂತ ಸುಮ್ಮನಿರಲಿಲ್ಲ
ಪರಬೊಮ್ಮನ ತೋರಿಸೆ ತಾ ನಿಂತನಲ್ಲಾ ||ಪ||

ಪರಮಾತ್ಮನೆನಿಸಿಹನಲ್ಲಾ
ಪರತರ ಮುಕ್ತಿಯ ಕೊಡುತಾನಲ್ಲಾ ||ಅ.ಪ||

ಕಾಷಾಯವನ್ನುಡಲಿಲ್ಲಾ
ದಂಡಕಮಂಡಲ ಪಿಡಿದು ಕಣ್ಮುಚ್ಚಿ ಕೂಡಲಿಲ್ಲ
ಅಧರ್ಮವ ಖಂಡಿಸಿ ನಿಂತನಲ್ಲಾ
ರುದ್ರನಂತೆ ಪಾಪಗಳನ್ನೆಲ್ಲಾ ಸುಟ್ಟನಲ್ಲ ||೧||

ತನದು ತನಗೆಂದು ನುಡಿಯಲಿಲ್ಲ
ಧನ ಕನಕವನೆಂದಿಗು ಮುಟ್ಟಲಿಲ್ಲಾ
ಆಶ್ರಯವೆಂದು ಆಶ್ರಮವಾ ಕಟ್ಟಲಿಲ್ಲಾ
ಪೀಠವಿಟ್ಟು ಪಟದಿ ನಿಂತು ಮೆರೆಯಲಿಲ್ಲಾ ||೨||

ಹಿಂದೆ ಮುಂದೆನ್ನದೆ ಹೇಳಿಹನಲ್ಲಾ
ಸಂಧಿಯೊಳಗಣ ತಪ್ಪ ಹುಡುಕಿಹನಲ್ಲ
ಗದರಿಸಿ ಗಮನವ ಸರಿಗೊಳಿಸಿಹನಲ್ಲ
ಸತ್ಯವಂತರಿಗೆ ತಾಯಂತಿಹನಲ್ಲ ||೩||

ಗುರು ಹೀಗಿರಬೇಕೆಂದಿಹನಲ್ಲ
ಗುಣಪೂರ್ಣತೆಯ ಬೋಧೆ ಮಾಡಿಹನಲ್ಲ
ಚಾತುರ್ಥಾಶ್ರಮ ಮೀರಿ ಕುಳಿತಿಹನಲ್ಲ
ಜಗದ್ಗುರುವಿಂದ ಸರಿ ಎಂದೆನಿಸಿಹನಲ್ಲ ||೪||
ಗುರುನಾಥ ಗಾನಾಮೃತ 
ಬಂದು ನೆಲೆಸಬಾರದೇ ಗುರು
ರಚನೆ: ಅಂಬಾಸುತ 

ಬಂದು ನೆಲೆಸಬಾರದೇ ಗುರು
ಎನ್ನ ಮನಮಂದಿರದಿ ನೀ ತ್ವರಿತದಿ ||ಪ||
ಕುಂದನು ಎಣಿಸದೆ ಕಂದ ಇವನೆನುತಾ
ಆನಂದದಿ ಎನ್ನ ಮೊರೆ ಕೇಳಿ ಬೇಗ ||ಅ.ಪ||

ಆಕಾರ ರಹಿತನೆ ಆಮೋದರೂಪನೆ
ಲೋಕವ್ಯಾಪಕನಾದ  ಅನಂತ ಮಹಿಮನೆ ||೧||

ನೀ ಅಜ ನೀ ಹರ ನೀ ಹರಿ ಎಂದು
ನಂಬಿ ನಿನ್ನನ್ನೆ ಮನತುಂಬಿ ಭಜಿಸುವಾಗ ||೨||

ಕರೆಯಲು ಪ್ರೇರಣೆ ನೀ ತಾನೆ ಕರುಣದಿ
ಪೊರೆಯಲು ಈ ಪಾಮರನ ಪ್ರೇಮದಿ ||೩||

ನೀ ಬಂದರೆ ತಾನೆ ಅರಿ ಹಾರಿ ಪೋಪುದು
ಅರಿವಿನ ಸೊಡಲಾರದೆ ಬೆಳಗುವುದು ||೪||

ಸಖರಾಯಪುರದ ಸದ್ಗುರುನಾಥನೇ ಈಗ
ಅಂಬಾಸುತನ ಅಂತರಂಗದರಮನೆಗೆ ||೫||

Monday, July 2, 2018

ಗುರುನಾಥ ಗಾನಾಮೃತ 
ಆನಂದವನರಸುವೆ ಏಕೆ ಹೊರಗೆ
ರಚನೆ: ಅಂಬಾಸುತ 

ಆನಂದವನರಸುವೆ ಏಕೆ ಹೊರಗೆ
ಅಡಗಿಹುದದು ನಿನ್ನಯ ಒಳಗೆ ||ಪ||

ಕಳ್ಳನೊಯ್ವ ಒಡವೆಗಳಿಂದೇನೊ ಆನಂದ
ಹರಿದು ಪೋಗುವ ಹಣದಿಂದೇನೊ ಆನಂದ
ಬರದಿ ಬಾಯ್ಬಿಡೊ ಭೂಮಿಯಿಂದೆನೊ ಆನಂದ
ಸವೆದುಹೋಗುವ ವಸ್ತ್ರದಿಂದೆನೊ ಆನಂದ ||೧||

ಕಲಹಕೆ ಬರೊ ಸತಿ ಇಂದೇನೊ ಆನಂದ
ಸಾಧನೆಗೆ ಬಿಡದಾ ಪಿತರಿಂದೇನೊ ಆನಂದ
ದುರ್ಮಾರ್ಗವ ತೋರೊ ಸಖರಿಂದೇನಾನಂದ
ಸುಳ್ಳಾಡಿಸೊ ಸುತರಿಂದೇನೊ ಆನಂದ ||೨||

ಸ್ವಾತ್ಮಾರಾಮ ಎನ್ನ ಸದ್ಗುರು ಶ್ರೀ
ವೇಂಕಟಾಚಲನ ಮನದೊಳಗಿರೆಸಿ
ಜಗವ ಪಾಲಿಪ ಜಗದಂಬೆಯ ಸ್ಮರಿಸಿ
ನಿನ್ಬೊಳಗೆ ನೀ ಕಾಣ್ವುದೆ ನಿಜಾನಂದ ||೩||
ಗುರುನಾಥ ಗಾನಾಮೃತ 
ಬಂದು ನೋಡಿರೋ ಗುರುವರನ ಬಂದು ಬೇಡಿರೊ
ರಚನೆ: ಆನಂದರಾಮ್, ಶೃಂಗೇರಿ  


ಬಂದು ನೋಡಿರೋ ಗುರುವರನ ಬಂದು ಬೇಡಿರೊ
 ಸಕರಾಯಪುರದ ಬೃಂದಾವನದಿ ಬಂದು ಸೇರಿರೊ|

ದೀಪ ಹಚ್ಚಿರೋ ಮನದ ಕತ್ತಲ ದೂರ ಮಾಡಿರೋ
ಭಜನೆ ಮಾಡಿರೋ ಭವಬಂಧನ ಕಳಚಿಕೊಳ್ಳಿರೋ|

ಸೇವೆ ಮಾಡಿರೋ ಗುರುವರನ ಹಾಡಿ ಹೊಗಳಿರೋ
ಮನದಿ ಬೇಡಿರೋ ಮನದ ಕಲ್ಮಶ ದೂರ ಮಾಡಿರೋ|

ಹೂವ ನೀಡಿರೋ ಗುರುವಿಗೆ ಹೂಮಾಲೆ ಹಾಕಿರೋ
ಹರನ ಬೇಡಿಕೊಳ್ಳಿರೋ ಗುರುಮಹದೇವ ಎನ್ನಿರೋ|

ಪಾದ ಸ್ಮರಿಸಿರೋ ಗುರು ಪಾದ  ಹಿಡಿದುಕೊಳ್ಳಿರೋ
ಕಾಮ ಕ್ರೋಧ ಮೋಹವನ್ನು ಬಹು ದೂರ ತಳ್ಳಿರೋ |

ಅರಿತು ಕೊಳ್ಳಿರೋ ಗುರುವಿನರಿವ ತಿಳಿದುಕೊಳ್ಳಿರೊ
ಮೈ ಮರೆತು ಭಜಿಸಿರೋ ಗುರುವೇ ಸರ್ವ ಎನ್ನಿರೋ|
ಗುರುನಾಥ ಗಾನಾಮೃತ 
ಸಾಲದಂತೆ ಸಾಲದಂತೆ ಸಾವಿರ ನಾಲಿಗೆ
ರಚನೆ: ಅಂಬಾಸುತ 

ಸಾಲದಂತೆ ಸಾಲದಂತೆ ಸಾವಿರ ನಾಲಿಗೆ
ಸದ್ಗುರುವಿನ ನಾಮ ಜಪಿಸಲು
ಅವನ ಮಹಿಮೆ ಪೇಳಲು ||

ಕಾಣದಂತೆ ಮರೆಯಾದವಂತೆ ಭಾವದೊಳಗಿನ ಪದಗಳು
ಸದ್ಗುರುವನು ವರ್ಣಿಸಲು
ರಾಗಭಾವವಿಟ್ಟು ಪಾಡಲು ||

ಕಾದಿಹವಂತೆ ಅರಳಿಹವಂತೆ ಭಕ್ತರೆಲ್ಲರ ನೇತ್ರಗಳು
ಸದ್ಗುರುವನು ಕಾಣಲು
ಆ ಭಗವಂತನ ಕಣ್ತುಂಬಿಕೊಳ್ಳಲು ||

ಸೋಲದಂತೆ ಸೇವೆಗೈದಿಹವಂತೆ ತನು ಮನಗಳು
ಸದ್ಗುರುವನು ಸೇವಿಸಲು
ಸದಾ ಅವನಡಿಯೊಳೇ ಇರಲು ||

ಮುಗಿಯದಂತೆ ಮರೆಯದಂತೆ ಅಂಬಾಸುತನ ಪದಗಳು
ಸದ್ಗುರುವನು ಭಜಿಸಲು
ಜೀವನ ಸಾರ್ಥಕಗೊಳಿಸಲು ||

Sunday, July 1, 2018

ಗುರುನಾಥ ಗಾನಾಮೃತ 
ನಾನು ನನದೆಂಬುವ ಈ ಜೀವ ನಿನ್ನ ಭಜಿಸಿ ಫಲವೇನು
ರಚನೆ: ಆನಂದರಾಮ್, ಶೃಂಗೇರಿ  


ನಾನು ನನದೆಂಬುವ ಈ ಜೀವ ನಿನ್ನ ಭಜಿಸಿ ಫಲವೇನು
ನೀನೇ ಎಲ್ಲವೂ ಎಂಬ ಅರಿವು ಮೂಡದೇ ಸುಖ ಉಂಟೇನು|

ನಾನು ಹಾಡಿದೆನೆಂದು ಗುರುವೇ ಓಡಿ ಬರುವಿಯ  ನೀನು 
ಹಾಡಿನಲಿ ಬರೀ ನಾನೇಎಂಬ ಭಾವ ತುಂಬಿದೆ ಏನು|

ಮನಸು ಮಲಿನವಿರಲು ಮಡಿ ಮಾಡಿದರೇನು ನಾನು
ನಿನ್ನ ಸನಿಹ ಬರಲು ಭಾವ ಶುದ್ಧಿ  ಇರಬೇಕಲ್ಲವೇನು|

ತೋರಿಕೆಯ ಆದರದ ಮಾತುಗಳು  ನಾಲಿಗೆ ಮೇಲೆ
ಕಪಟ ಭಕುತಿಯ ವೇಷ ಧರಿಸಿ ಬೇಡುವೆನು ನಾನು|

ಬರುವ ಭಕುತರ ಭಕುತಿಯ ಅರಿಯದಾದೆ ನಾನು
ಭಕುತಿ ತೋರುವ ಬರದಿ ನಿಜವ ಕಾಣದಾದೆ ನಾನು|

ಭಾವ ಶುದ್ದಿ ಭಕುತಿಗೆ ಒಲಿವ ಗುರುವಲ್ಲವೇ ನೀನು
ನಾನು ಎಂಬ ಹಮ್ಮಿನೊಳು ನಿನ್ನ ಬೇಡಿದೆನು ನಾನು|

ಗುರಿ ಕಾಣದೆ ಅಲೆಯುತಿಹೆ ದಾರಿ ತೊರೆನಗೆ ನೀನು
ಗೊಂದಲದ ಗೂಡಾಗಿದೆ ಈ ಮನ ನಿನ್ನದಲ್ಲವೇನು|