ಗುರುನಾಥ ಗಾನಾಮೃತ
ಎನಗಿನ್ಯಾರು ಗತಿ ಗುರುರಾಯ
ರಚನೆ: ಅಂಬಾಸುತ
ಎನಗಿನ್ಯಾರು ಗತಿ ಗುರುರಾಯ
ಸನ್ಮತಿ ಪಾಲಿಸಿ ಸಲಹೈ ಮಹನೀಯ ||ಪ||
ಮಾತಾ ಪಿತರು ಮುಂದ್ಹೋಗುವರು
ಮಾನಿನಿ ಮನೆಯೊಳಗೇ ಉಳಿಯುವಳು
ಸುತರೆಲ್ಲರು ಸತತ ಹಣದ ಹಿಂದಿರುವರು
ಸ್ನೇಹಿತರು ಸಮರೆಂದಿಗು ಇರರೂ ||೧||
ಕುಲ ದೇವರು ಕರ್ಮವ ಮಾಡೆನ್ನುವರು
ಕುಲಪತಿ ಕುಟುಕಿ ಕೊಡು ಕೊಡು ಎನ್ನುವರು
ಕುಲಗುರು ಧರ್ಮದಿ ನೆಡೆ ಎನ್ನುವರು
ಧಣಿ ದುಡಿದು ಮನೆ ಸೇರೆನ್ನುವನು ||೨||
ಕೂಡಿಟ್ಟದ್ದು ಕಳೆದ್ಹೋಗುವುದು
ಕಾನನ ವಾಸಕೆ ದಾರಿ ತೋರುವುದು
ಕಲಿತದ್ದೆಲ್ಲಾ ಮರೆತ್ಹೋಗುವುದು
ಕಲಿಯುಗದಾ ಫಲ ಇಂತಿಹುದು ||೩||
ಆತ್ಮಸಖ ಸಖರಾಯಪುರವರ
ಅಂಬಾಸುತನಾ ಅಂತರಂಗಕೆ ವರ
ಅಡಿಗಡಿಗೆರಗುವೆ ಎಮ್ಮನುದ್ಧರಿಸೊ
ಭವ ಕೆಡಿಸೊ ಬಂಧನವನೆ ಬಿಡಿಸೊ ||೪||
No comments:
Post a Comment