ಗುರುನಾಥ ಗಾನಾಮೃತ
ನಿಸ್ಸಂಗಿಯಾಗು ಮನವೇ
ರಚನೆ: ಅಂಬಾಸುತ
ನಿಸ್ಸಂಗಿಯಾಗು ಮನವೇ
ಸತ್ಸಂಗದಿ ಪರಮಾನಂದವ ಪಡೆದೂ ||
ಬೆಟ್ಟ ಅಡವಿಯ ಹೊಕ್ಕು ಕೂರದೇ
ಜಪಮಾಲೆ ಕಾಷಾಯ ಭೂಷಣ ತೊಡದೇ
ಬಂಧು ಬಾಂಧವರಾ ನಡುವಿದ್ದೂ
ಭೋಗಭಾಗ್ಯದ ವಾಸನೆಗಳಾ ಸುಟ್ಟೂ ||೧||
ಸ್ವಂತವಿರದಾ ಸ್ವತಂತ್ರನಾಗೀ
ಸಾಧು ಸಂತರಾ ಸೇವಕ ನೀನಾಗೀ
ಸಮಚಿತ್ತದಿ ಸತ್ಯಾವ ಹುಡುಕೀ
ಅನಿತ್ಯಾದ ಬಯಕೆಗಳ ಬದಿಗೊತ್ತೀ ||೨||
ಸದ್ಗುರು ಪದ ಪಾದ ಪಿಡಿದೂ
ಸತ್ಚಿಂತನೆ ಇಂದಲಿ ಸಮಯ ಕಳೆದೂ
ಸಾಯುಜ್ಯ ಸಾಮೀಪ್ಯ ಸಾರೋಪ್ಯವೆಂಬಾ
ಪದದೊಳಡಗೀಹಾ ತತ್ವಾವ ಅರಿತೂ ||೩||
ಅಂಬಾಸುತನಾ ಅರಿಕೆ ಇದೂ
ಆದ್ಯಂತ ರಹಿತನೊಳು ಒಂದಾಗೂ
ಘನ ಸಖರಾಯನ ನಂಬೀ
ಜ್ಞಾನ ದೀವಿಗೆಯಾ ಮನದೊಳು ಪೊಂದೀ ||೪||