ಗುರುನಾಥ ಗಾನಾಮೃತ
ದಟ್ಟಿಯ ಸುತ್ತಿಕೊಂಡವನಂತೆ
ರಚನೆ: ಅಂಬಾಸುತ
ದಟ್ಟಿಯ ಸುತ್ತಿಕೊಂಡವನಂತೆ
ದಿಟ್ಟನಿವ ಗಡ್ಡಾಧಾರಿಯಂತೆ
ನಗುತಲೇ ನರರಾ ಉದ್ಧರಿಸುವವನಂತೆ
ಸಖರಾಯಪಟ್ಟಣದ ಅವಧೂತನಿವನಂತೆ||
ಧರ್ಮದ ಹಾದಿ ತೋರುವನಂತೆ
ಅಧರ್ಮಿಗೆ ಬಲು ಘೋರನಿವನಂತೆ
ಆಡುಮಾತಿನಲ್ಲೇ ಮಂತ್ರಾರ್ಥ ಪೇಳ್ವನಂತೆ
ಸಖರಾಯಪಟ್ಟಣದ ಅವಧೂತನಿವನಂತೆ ||
ಬಂಜೆಯರ ಮಡಿಲೊಳು ಮಗುವಾದವನಂತೆ
ದಿಕ್ಕೆಟ್ಟ ಮಕ್ಕಳಾ ತಾಯ್ತಂದೆ ಇವನಂತೆ
ಗುರುಮನೆಯ ತವರು ಮನೆಯಾಗಿಸಿದವನಂತೆ
ಸಖರಾಯಪಟ್ಟಣದ ಅವಧೂತನಿವನಂತೆ ||
ಆಶ್ರಮದಾ ಶ್ರಮ ಬೇಡ ಎಂದವನಂತೆ
ಹೆತ್ತವರಾ ಹಿರಿತನವಾ ಸಾರಿ ನಿಂತವನಂತೆ
ವಿತ್ತದಾಸೆಯ ಅಳಿಸಿ ಚಿತ್ತದೊಳಿಹನಂತೆ
ಸಖರಾಯಪಟ್ಟಣದ ಅವಧೂತನಿವನಂತೆ ||
ದೇಹಭಾವವ ಅಳಿಸಿ ಆತ್ಮತೋರಿದನಂತೆ
ಪರಮಹಂಸರ ಪಾದ ಸೇವಿಸಿರೆಂದವನಂತೆ
ಪರತರ ಪರಬ್ರಹ್ಮ ಗುರು ಎಂದವನಂತೆ
ಸಖರಾಯಪಟ್ಟಣದ ಅವಧೂತನಿವನಂತೆ ||
ಕಟ್ಟುಪಾಡುಗಳಾ ಮೀರಿದವನಂತೆ
ಗೀತೆ ಬೋಧಿಸಿದಾ ಕೃಷ್ಣ ಇವನಂತೆ
ಭಕುತರ ಮನಸಂಚಾರಿಯೂ ಅಂತೆ
ಸಖರಾಯಪಟ್ಟಣದ ಅವಧೂತನಿವನಂತೆ ||
ಕರ್ಮದ ಹಿಂದಿನ ಮರ್ಮ ತಿಳಿಸಿದವನಂತೆ
ಕಣ್ಣಲ್ಲೇ ಕಾರುಣ್ಯ ತುಂಬಿಕೊಂಡವನಂತೆ
ಅಷ್ಟಸಿದ್ದಿಗಳಾ ಬಲಹೊಂದಿರುವವನಂತೆ
ಸಖರಾಯಪಟ್ಟಣದ ಅವಧೂತನಿವನಂತೆ ||
ಆದ್ಯಂತರಹಿತ ಪರಿಪೂರ್ಣನಿವನಂತೆ
ಆನಂದರೂಪಿ ಅಪ್ರಮೇಯನಂತೆ
ಅಂಬಾಸುತನಾ ಸದ್ಗುರು ಇವನಂತೆ
ಸಖರಾಯಪಟ್ಟಣದ ಅವಧೂತನಿವನಂತೆ ||
No comments:
Post a Comment