ನನಗೆ ತಿಳುವಳಿಕೆ ಬಂದಾಗಿನಿಂದ, ನಾನರಿತಂತೆ, ಆ ಬಾಲ್ಯದ ದಿನಗಳು, ನಾನು ಶಾಲೆಗೆ ಹೋಗುತ್ತಿದ್ದಾಗ ನಾನವರ ಮನೆಯ ಮುಂದೆ ಹೋಗುತ್ತಿದ್ದೆ. ಆಗ ಅವರು ಯಾವಾಗಲೂ ಶ್ವೇತ ವಸ್ತ್ರ ಧರಿಸಿರುತ್ತಿದ್ದರು. ಶುಭ್ರವಾದ ಶುದ್ಧ ಸ್ಪಟಿಕ ಬಿಳಿಯ ಪಂಚೆ ಮತ್ತು ಬಿಳಿಯ ಇಸ್ತ್ರಿ ಮಾಡಿದ ಶರಟು ಧರಿಸುತ್ತಿದ್ದರು. ನನ್ನ ಮನಸ್ಸಿನಲ್ಲಿ ಮೂಡಿದ ನೆನಪುಗಳನ್ನು ಜ್ಞಾಪಿಸಿಕೊಂಡರೆ, ಅವರ ಮಂದಹಾಸದ ದುಂಡು ಮುಖ ಮತ್ತು ಅವರ ಹಣೆಯ ಮೇಲಿದ್ದ ತಾಳಿ ಮುದ್ರೆ ಕಣ್ಣ ಮುಂದೆ ನಿಲ್ಲುತ್ತದೆ. ದಾರಿಯಲ್ಲಿ ಸಿಕ್ಕಾಗ ಮಾತನಾಡಿಸುತ್ತಿದ್ದರು. ತಮ್ಮ ಮನೆಯೊಳಗೆ ಕರೆದುಕೊಂಡು ಹೋಗುತ್ತಿದ್ದರು. ಪ್ರೀತಿಯಿಂದ ಮಾತನಾಡಿಸಿ ಏನಾದರೂ ಸಿಹಿ ತಿನಿಸುಗಳನ್ನು ತಿನ್ನಿಸುತ್ತಿದ್ದರು.
ಆಗಿನಿಂದ ವಿವಿಧ ಹಂತಗಳಲ್ಲಿ ಒಂದೊಂದೇ ಬಾಹ್ಯ ಮತ್ತು ಅಂತರಂಗದ ಆವರಣಗಳನ್ನು ಕಳಚಿ, ತುಂಡು ಬಟ್ಟೆಯನ್ನುಟ್ಟು, ಮೇಲೆ ಹೊದೆಯದೆ ಬಿಟ್ಟು, ದೇಹ ರಕ್ಷಣೆಗೆ ಬೇಕಾಗುವಷ್ಟು ಅತ್ಯಲ್ಪ ಅಹಂಕಾರವನ್ನು ಧರಿಸಿ, ನಿರಹಂಕಾರಿಗಳಾಗಿ, ಜಗದ್ವಿಖ್ಯಾತ ಅವಧೂತರೆನಿಸಿ, ಜೀವನ್ಮುಕ್ತರಾಗಿ, ತಮಗೆ ಬಂದ ಖ್ಯಾತಿಗೆ ಬೆನ್ನು ಮಾಡಿ, ತಾವು ಹುಟ್ಟಿ ಬೆಳೆದ ತಾಯಿ ನೆಲವಾದ ಸಖರಾಯಪಟ್ಟಣದ ಖ್ಯಾತಿಯನ್ನು ಜಗತ್ತಿನಾದ್ಯಂತ ಪಸರಿಸಿದರು. ದೇಶ-ವಿದೇಶದ ಮೂಲೆ ಮೂಲೆಗಳಿಂದ ಬಂದ ಜನರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಿ, ಸಾಂತ್ವನ ನೀಡಿದರು. ಬರೀ ಮನುಷ್ಯ ಮಾತ್ರರಿಗಲ್ಲದೆ, ಸಕಲ ಪ್ರಾಣಿ, ಪಕ್ಷಿ ಮತ್ತು ಪರಿಸರಗಳಲ್ಲಿ ದಯೆವುಳ್ಳವರಾಗಿ, ಪಂಡಿತ-ಪಾಮರರಿಗೆ, ಯತಿ-ಭಿಕ್ಷುಗಳಿಗೆ, ಗೃಹಸ್ಥರಿಗೆ, ಬಡವ-ಬಲ್ಲಿದರಿಗೆ, ಹಿರಿಯ-ಕಿರಿಯರಿಗೆ, ಜಾತಿ, ಮತ, ಪಂಥಗಳ ಭೇದವೆಣಿಸದೆ, ಸಕಲರಿಗೂ ಸಾಂತ್ವನ ನೀಡಿದರು. ಯಾರೊಬ್ಬರಿಗೂ ನೀತಿ ಭೋದಿಸದೆ ಮನ ನೋಯಿಸದೆ, ಸರಿ-ತಪ್ಪಗಳನ್ನು ಎಣಿಸದಲೇ, ತಿದ್ದಿ ಬುದ್ಧಿ ಹೇಳದೇ ತಾವೇನೆಡದು ತೋರಿದ ಮಹಾನ್ ಚೇತನ.
ದೇಹಧಾರಿಯಾಗಿ ನಮ್ಮಗಳ ಜೊತೆ ಇದ್ದಾಗಿಗಿಂತ, ಮುಕ್ತರಾದ ಮೇಲೆ ಸ್ಥೂಲ ದೇಹವನ್ನು ಕಳಚಿ, ಸೂಕ್ಷ್ಮಾತಿ ಸೂಕ್ಷ್ಮ ಚೈತನ್ಯ ಸ್ವರೂಪಿಗಳಾಗಿ, ಮೊದಲಿಗಿಂತಲೂ ಸಹಸ್ರ ಪಟ್ಟು ಪ್ರಸ್ತುತವಾಗಿ ಎಲ್ಲಾ ಶಿಷ್ಯರ ಹೃನ್ಮನಗಳಲ್ಲಿ ಸದಾ ಹಚ್ಚ ಹಸಿರಾಗಿ ವಾಸ ಮಾಡುತ್ತಿರುವ ಅಜರಾಮರರಾಗಿದ್ದಾರೆ.
ಸದಾ ಆತ್ಮಾನಂದದಲ್ಲಿ ತಲ್ಲೀನರಾಗಿ ನಿಜ ಆನಂದವನ್ನು ಹಂಚುತ್ತಾ, ಯಾವ ಜಾತಿ-ಪಂಥಗಳಿಗೂ ಸೇರದೆ. ಯಾವ ನಿಧಿ-ನಿಷೇದ ಹಾಗೂ ಕಟ್ಟು ಪಾಡುಗಳಿಗೆ ಬದ್ಧನಾಗದೇ, ಶೋಕ, ಮೋಹ ವಿವರ್ಚಿತನಾಗಿ, ತನ್ನಲ್ಲಿಗೆ ಬಂದವರ ಶೋಕ, ಮೋಹ, ಭವ-ಬಂಧನಗಳನ್ನು ದೂರ ಮಾಡಿದವರು. ಜೀವನದಲ್ಲಿ ಬಳಲಿ ಬೆಂಡಾದವರಿಗೆ ಸಾಂತ್ವನ ನೀಡಿ, ಧೈರ್ಯ ತುಂಬಿ, ಆತ್ಮ ವಿಶ್ವಾಸವನ್ನು ತುಂಬಿ,
ಜೀವನೋಲ್ಲಾಸವನ್ನು ಜಾಗೃತಗೊಳಿಸಿ, ಸರಳ, ಹಾಗೂ ಸುಲಭೋಪಾಯವನ್ನು ನೀಡುತ್ತಿದ್ದರು. ಗುರುನಾಥರಲ್ಲಿ ಅವರ ಹೆಜ್ಜೆಯನ್ನು ಗುರುತಿಸುವಂತಹಾ ಯಾವುದೇ ಲಕ್ಷಣಗಳಿರಲಿಲ್ಲ. ವಿಲಕ್ಷಣತೆಯೇ ಅವರ ಸ್ವರೂಪ. ಅವರದು ಇಂತಹಾ ಉಡುಪು, ಇಂಥಹಾ ನೆಡೆ, ಇಂಥಹಾ ನುಡಿ, ಇಂಥಹಾ ಚಿಹ್ನೆ ಎಂದು ಹೇಳಲು ಸಾಧ್ಯವೇ ಇಲ್ಲ. ಅವರ ನೆಡೆ, ನುಡಿ ಎಲ್ಲವೂ ಅನಿರೀಕ್ಷಿತ ಹಾಗೂ ನಿಗೂಢ.
ಅವಧೂತ ಪರಂಪರೆ ಒಂದು ಪಂಥವಲ್ಲ. ಅದೊಂದು ಚಿತ್ತ ಸ್ಥಿತಿ. ಯಾರ ಹಂಗೂ ಇಲ್ಲದೆ, ಯಾರನ್ನೂ ಮೆಚ್ಚಿಸುವ ಗೋಜಿಗೆ ನಿಲುಕದೆ, ಎಲ್ಲಾ ಬಂಧನಗಳನ್ನೂ ಕಳಚಿ, ಕುದುರೆ ಹೇಗೆ ತನ್ನ ಮೈ ಮೇಲಿನ ಧೂಳನ್ನು ಕೊಡವಿಕೊಳ್ಳುತ್ತದೋ ಹಾಗೆಯೇ ಎಲ್ಲಾ ಪ್ರಾಕೃತಿಕ, ಸಾಮಾಜಿಕ ಬಂಧನವನ್ನು ಕೊಡವಿಕೊಂಡು, ಇವೆಲ್ಲವುಗಳಿಂದ ಬಿಡುಗಡೆ ಹೊಂದಿದ್ದ ಜೀವನ್ಮುಕ್ತ ಸ್ಥಿತಿ ಅವರದು. ದೇಹ, ಇಂದ್ರಿಯ, ಮನಸ್ಸು, ಬುದ್ಧಿ, ಅಹಂಕಾರಾದಿ ಅಂತಃಕರಣಗಳ ಗುರುತುಗಳನ್ನು ಕಳೆದುಕೊಂಡು, ಅನಂತವಾದ ಜಗತ್ತಿನ ಮೂಲ ಚೈತನ್ಯದಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ಸಾಗುವುದೇ ಅವರ ಅನುದಿನದ ಹುಡುಕಾಟವಾಗಿತ್ತು.
ಶಬ್ದಗಳು ಕೇವಲ ಧ್ವನಿಯನ್ನುಂಟು ಮಾಡುತ್ತವೆ. ಆದರೆ ಅದನ್ನು ಮನಸ್ಸು ಇಂದ್ರಿಯ(ಕಿವಿ)ಗಳ ಮೂಲಕ ಗ್ರಹಿಸುತ್ತದೆ. ಬುದ್ದಿ ತನ್ನ ಅನುಭವದ ಮೂಲಕ ಅದಕ್ಕೆ ಅರ್ಥವನ್ನು ಕಲ್ಪಿಸುತ್ತದೆ. ಹಾಗಾಗಿ "ಶಬ್ದಗಳಿಂದುಂಟಾಗುವ ವಿಷಯಕ್ಕೆ ತಲೆ ಕೆಡಸಿಕೊಳ್ಳದೆ, ಅದರ ಹಿಂದಿರುವ ಭಾವಕ್ಕೆ ಬೆಲೆ ಕೊಡಯ್ಯ, ವಿಷಯಕ್ಕಿಂತ ಭಾವನೆಯೇ ಮುಖ್ಯ" ಎಂದು ಹೇಳುತ್ತಿದ್ದರು. ತಮ್ಮ ಕಿವಿಗೆ ಬೀಳುವ ಪ್ರತಿಯೊಂದು ಶಬ್ದವನ್ನು ಬಹಳ ಎಚ್ಚರಿಕೆಯಿಂದ ಜೋಪಾನವಾಗಿ ಆಲಿಸುತ್ತಿದ್ದರು. "ನಾನು ಸದಾ ಶಬ್ದ ಬ್ರಹ್ಮನನ್ನೇ ಆರಾಧನೆ ಮಾಡುತ್ತೇನೆ ಸಾರ್" ಎಂದು ಅನೇಕ ಸಂದರ್ಭದಲ್ಲಿ ನನ್ನಲ್ಲಿ ಹೇಳಿಕೊಂಡಿದ್ದರು. ಅವರ ಪ್ರತಿಯೊಂದು ನೆಡೆ-ನುಡಿಗಳಲ್ಲಿ ಎಷ್ಟೊಂದು ಸೂಕ್ಷ್ಮತೆ ಇತ್ತೆಂದರೆ, ಈ ಕೆಳಗಿನ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ತಿಳಿಯುತ್ತದೆ.
ಸಾಮಾನ್ಯವಾಗಿ ಬೆಳಗಿನ ಝಾವ ನಮ್ಮ ಮನೆಗೆ ಬರುತ್ತಿದ್ದರು. ಎಷ್ಟೋ ದಿನ ನಮ್ಮ ಮನೆ ಬಾಗಿಲು ತೆಗೆಯುವವರೆಗೂ ದೂರದ ರಂಗಮಂಟಪದಲ್ಲಿ ನಿಂತಿರುತ್ತಿದ್ದರು. ನಮ್ಮ ಅಮ್ಮ ಬಾಗಿಲು ತೆರೆದು ಕಸ ಗುಡಿಸಿ, ರಂಗೋಲಿ ಹಾಕಿದ ಮೇಲೆ ನಿಧಾನವಾಗಿ ಮನೆಗೆ ಬರುತ್ತಿದ್ದರು. ಅಮ್ಮ ಅವರನ್ನು ಮಾತನಾಡಿಸಿ, ಸೋಫಾ ಮೇಲೆ ಕೂರಿಸಿ ಉಪಚರಿಸುತ್ತಿದ್ದರು. ಅವರು ನಮ್ಮ ಮನೆಗೆ ಬರುತ್ತಿದ್ದದ್ದು ನಮ್ಮ (ನಾನು ಮತ್ತು ನನ್ನ ತಮ್ಮಂದಿರು) ಸಲುವಾಗಿ. ದಿನಾ ಬೆಳಗಿನ ಝಾವವೇ ಏಳುವ ನನಗೆ ಎಂದಿಲ್ಲದ ನಿದ್ದೆ ಅಂದು. ಅಮ್ಮ ನನ್ನನ್ನು ಎಬ್ಬಿಸುತ್ತೇನೆಂದರೂ ಬೇಡವೆಂದು ನಿರಾಕರಿಸುತ್ತಿದ್ದರು. ನಾನು ಎದ್ದು ಬರುವವರೆಗೆ ಕಾಯುತ್ತಿದ್ದರು. ನಾನು ಕಣ್ಮುಚ್ಚಿಕೊಂಡು ಬಂದು ನೋಡಿ ಗುರುಗಳೆಂದು ಅವರಿಗೆ ನಮಸ್ಕರಿಸಲು ಹೋದರೆ, "ಹೋಗಯ್ಯಾ ನಿನ್ನ ಎಲ್ಲಾ ನಿತ್ಯ ಕರ್ಮಗಳನ್ನು ಪೂರೈಸಿ ಬಾ, ನಾನು ಎಲ್ಲಿಗೂ ಹೋಗುವುದಿಲ್ಲ, ಇಲ್ಲೇ ಇರುತ್ತೇನೆ" ಎನ್ನುತ್ತಿದ್ದರು. ನಾನು "ಪರವಾಗಿಲ್ಲ ಗುರುವೇ" ಎಂದರೆ, "ನನ್ನ ಇರುವಿಕೆಯಿಂದ ಯಾರಿಗೂ ತೊಂದರೆ ಆಗಬಾರದು, ಹಾಗಿದ್ದರೆ ನಾನು ಹೊರಟೆ" ಎನ್ನುತ್ತಿದ್ದರು. ನಾನು ನಿತ್ಯ ಕರ್ಮಗಳನ್ನೆಲ್ಲಾ ಮುಗಿಸಿ ಬರುವವರೆಗೆ ಕಾಯುತ್ತಿದ್ದರು. ಅತಿ ವಿನಯ ಹಾಗೂ ಗೌರವದಿಂದ, ಮಾರ್ಮಿಕವಾಗಿ "ಈ ಹುಚ್ಚನ ಜೊತೆ ಸ್ವಲ್ಪ ದೂರ ಬರ್ತೀರಾ ಸಾರ್, ಬಲವಂತ ಇಲ್ಲ, ನಿಮ್ಮ ಮನಸ್ಸು ಹೇಗೆ ಹೇಳುತ್ತದೋ ಹಾಗೆ ಕೇಳಿ" ಎನ್ನುತ್ತಿದ್ದರು. ನಮ್ಮ ದೊಡ್ಡಪ್ಪ ವಯಸ್ಸಿನಲ್ಲಿ ಅವರಿಗಿಂತ ದೊಡ್ಡವರು. ಅವರು ಬಂದು ಕುಶಲೋಪರಿ ವಿಚಾರಿಸಿ, ಲೋಕಾರೂಢಿಯಂತೆ, "ಏಳಿ, ಎದ್ದೇಳಿ, ತಿಂಡಿ ರೆಡಿಯಾಗಿದೆ, ಒಳಗೆ ನೆಡೆಯಿರಿ" ಎಂದು ಮನೆಯ ಮುಂದಿನ ಹಾಲಿನಲ್ಲಿ ಕುಳಿತ ಗುರುಗಳಿಗೆ ಒಳಗೆ ತೊಟ್ಟಿಯ ಮೇಲಿದ್ದ ಊಟದ ಟೇಬಲ್ಲಿಗೆ ಕರೆದುಕೊಂಡು ಹೋಗಲು ಸೂಚಿಸಿದರು. ನನಗೂ "ನಿಮ್ಮ ಗುರುಗಳನ್ನು ತಿಂಡಿಗೆ ಎಬ್ಬಿಸೋ" ಎಂದರು. ಅಲ್ಲಿಯವರೆಗೂ ಶಾಂತಚಿತ್ತರಾಗಿ ಕುಳಿತಿದ್ದ ಗುರುಗಳು ವಿನಾಕಾರಣ ಎದ್ದು ಸೀದಾ ಮನೆಯಿಂದ ಹೊರಟು ಹೊರಗೆ ಹೋದರು. ನಮ್ಮ ದೊಡ್ಡಪ್ಪನವರಿಗೆ ಬಹಳ ಮುಜುಗರವಾಯಿತು. "ನಾವೆಲ್ಲಾ ಹೇಳಿದರೆ ನಿಮ್ಮ ಗುರುಗಳು ಏಕೆ ಬರುತ್ತಾರೆ" ಎಂದು ಗೊಣಗಿಕೊಂಡು ಒಳ ನೆಡೆದರು.
ನಾನು ಗುರುಗಳ ಹಿಂದೆ ಓಡಿ ಹೊರಬಂದೆ. ಅವರು ಹೊರ ಬಂದವರೇ ಸೀದಾ ನಮ್ಮ ಎದುರು ಮನೆಯ ಜಗುಲಿ ಮೇಲೆ ಕುಳಿತರು. ನಾನೂ ನಿಧಾನವಾಗಿ ಬಂದು ಅವರ ಪಕ್ಕ ಕುಳಿತೆ. ನನ್ನ ಮನಸ್ಸಿನಲ್ಲಿ ಏನೇನೋ ಯೋಚನೆಗಳು ಸುಳಿದು ಮಾಯವಾದವು. ನಾನು ಮನದಲ್ಲೇ, "ಏನು ಗುರುಗಳಪ್ಪಾ ಇವರು? ನಮ್ಮ ದೊಡ್ಡಪ್ಪ ಏನು ತಪ್ಪಿನ ಮಾತನಾಡಿದರು? ತಿಂಡಿ ರೆಡಿಯಾಗಿದೆ ಒಳಗೆ ಬನ್ನಿ ಅಂದ್ರು. ಅದಕ್ಕೆ ಎದ್ದು ಸೀದಾ ಹೊರಕ್ಕೆ ಬರುವುದೇ?" ಹೀಗೆ ಪುಂಖಾನು ಪುಂಖವಾಗಿ ಯೋಚನಾ ಲಹರಿಗಳು ಪುಟಿದೇಳುತ್ತಿದ್ದವು. ಆದರೆ ಏನೂ ಆಗಿಲ್ಲವೋ ಎಂಬಂತೆ ಮುಗುಳು ನಗುತ್ತಾ, ಓರೆ ದೃಷ್ಠಿಯಿಂದ ನನ್ನನ್ನು ದಿಟ್ಟಿಸುತ್ತಾ, ತೇಜಃ ಪುಂಜವಾದ ಅವರ ಓರೆಗಣ್ಣುಗಳಲ್ಲಿ ನನ್ನ ಮನದಾಳಕ್ಕಿಳಿದು, ನನ್ನ ಮನಸ್ಸಿನ ತುಮುಲವನ್ನರಿತು, ನನ್ನ ತಲೆ ಸವರಿ, "ಏಳಯ್ಯಾ ತಿಂಡಿ ತೆಗೆದುಕೊಂಡು ಬಾ, ಅದರ ಜೊತೆಗೆ ಕಾಫೀನೂ ತೆಗೆದುಕೊಂಡು ಬಾ. ಇಲ್ಲೇ ಒಟ್ಟಿಗೆ ತಿನ್ನೋಣ" ಎಂದರು. ನನ್ನ ಮನಸ್ಸಿನ ಯೋಚನಾ ಲಹರಿ ಅಲ್ಲಿಗೇ ನಿಲ್ಲಲಿಲ್ಲ. " ಈ ಕೆಲಸಾನ ಅಲ್ಲೇ ಮನೆ ಒಳಗೆ ಮಾಡಿದ್ರೆ
ಏನಾಗುತ್ತಿತ್ತು? ನಮ್ಮ ದೊಡ್ಡಪ್ಪನವರಿಗೂ ಸಮಾಧಾನ ಆಗಿರೋದು. ಅವರು ಸುಮ್ಮನೆ ಬೇಜಾರು ಮಾಡಿಕೊಂಡರು. ಈ ಗುರುಗಳು ಯಾಕೆ ಹೀಗೆ ಮಾಡಿದ್ರು??? ಎಂದು ಯೋಚಿಸುತ್ತಿದ್ದೆ. ಅಷ್ಟರಲ್ಲೇ "ಮಗೂ ಏಳು ಎಂದ ಮೇಲೆ ಒಳಗೇನು, ಹೊರಗೇನು? ಎದ್ದು ನೆಡೀತಿರಬೇಕು. ಒಳಗೆ ಕೊಟ್ಟರೆ ಸತ್ಕಾರ, ಹೊರಗೆ ಕೊಟ್ಟರೆ ಭಿಕ್ಷ ಅಷ್ಟೇನಯ್ಯಾ, ಹೋಗು ತಿಂಡಿ ತೆಗೆದುಕೊಂಡು ಬಾ..... ಹಾಗೇ ಒಂದು ಚೊಂಬು ಕಾಫೀನೂ ತೆಗೆದುಕೊಂಡು ಬಾ" ಎಂದರು. ಅಷ್ಟರಲ್ಲಿ ಅಲ್ಲಿಗೆ ನಾಲ್ಕಾರು ಜನ ಹಾಗೂ ಒಂದೆರಡು ನಾಯಿಗಳೂ ಬಂದವು. ಕೊಟ್ಟ ತಿಂಡಿಯನ್ನು ಅಲ್ಲಿದ್ದವರಿಗೆಲ್ಲಾ ಹಂಚಿ, ಆ ನಾಯಿಗಳಿಗೂ ಸ್ವಲ್ಪ ಹಾಕಿ, ಪ್ರಸಾದವೆಂಬಂತೆ ಒಂದು ಚೂರು ಬಾಯಿಗೆ ಹಾಕಿಕೊಂಡು, ಅಲ್ಲಿದ್ದವರಿಗೆಲ್ಲಾ ಕಾಫಿ ಕುಡಿಸಿದರು. ನಂತರ "ನೆಡೀರಿ ಸಾರ್ ಹೊರಡೋಣ" ಎಂದರು.
ಮನಸ್ಸಿನಲ್ಲಿ ಯಾವುದೇ ವಿಧವಾದ ಕಲ್ಮಶಗಳಿಲ್ಲದೆ, ರಾಗ-ದ್ವೇಷಗಳಿಲ್ಲದೆ ಸದಾ ಮನಸ್ಸನ್ನು ತಿಳಿಯಾಗಿ, ಸ್ವಚ್ಛವಾಗಿರಿಸಿಕೊಂಡಿದ್ದ ಅವರು ಸದಾ ಹಗುರವಾದ ಮನಸ್ಸು ಹೊಂದಿದವರಾಗಿ ಅತೀಂದ್ರಿಯವಾದ ಅಲೌಕಿಕ ಶಕ್ತಿ ಹೊಂದಿದ್ದು ಊಹಾತೀತವಾಗಿರುತ್ತಿದ್ದರು.
"ಅವಧೂತ" ಎಂಬ ನಾಲ್ಕು ಅಕ್ಷರಗಳ ಪೂರ್ಣರ್ಥಕ್ಕೆ ಅನ್ವರ್ಥವಾಗುವಂತೆ ಬಾಳಿ ಬದುಕಿದವರು.
"ಅ" ಅಂದರೆ, ಆನಂದದ ಶುದ್ಧ ನೆಲೆಯಲ್ಲಿ ಶಾಶ್ವತವಾಗಿ ನಿಂತ ಸ್ಥಿತಿ. ಎಲ್ಲಾ ತರಹದ ರಾಗ-ಭಾವಗಳಿಂದ ವಿರಾಗಿಗಳಾಗಿ, ತಮ್ಮ ಅಪರಿಮಿತವಾದ ಆನಂದದ ಕಾಂತ ಕ್ಷೇತ್ರವನ್ನು ನಿರ್ಮಿಸಿ, ತನ್ನ ಸಾಮ್ಯತೆಗೆ ಬಂದ ಪ್ರತಿಯೊಬ್ಬರನ್ನೂ (ಅಯಸ್ಕಾಂತಕ್ಕೆ ಅಂಟಿದ ಕಬ್ಬಿಣಕ್ಕೂ ಕಾಂತೀಯ ಗುಣ ಬರುವಂತೆ) ಆನಂದಾವಸ್ಥೆಗೆ ಕೊಂಡೊಯ್ಯುವ ಸ್ಥಿತಿ.
"ವ" ಅಂದರೆ, ಸಮಸ್ತ ಪ್ರಾಪಂಚಿಕ ವಾಸನಾ ವಿಶೇಷದಿಂದ ಮುಕ್ತವಾದ ಸ್ಥಿತಿ. ನಾವು ಮಾಡುವ ಪ್ರತೀ ಕರ್ಮಗಳೂ ಮನಸ್ಸಿನಲ್ಲಿ ಮುದ್ರಿತವಾಗಿ ಕೆಲವು ಪ್ರವೃತ್ತಿಗಳಾಗುತ್ತವೆ. ಉದಾಹರಣೆಗೆ, ಯಾವುದಾದರೂ ಸ್ಥಳಕ್ಕೆ ಹೋದರೆ ಹತ್ತು ಹಲವಾರು ವಾಸನೆಗಳು ನಮ್ಮ ಮೂಗಿಗೆ ಬಡಿಯುತ್ತವೆ. ಅವೆಲ್ಲವನ್ನೂ ಗ್ರಹಿಸದೆ, ಮುಖ್ಯವಾದದ್ದನ್ನು ಮನ ಗ್ರಹಿಸಿ, ಅದರ ಮೂಲವನ್ನು ಅರಿತು
ನೆನಪಿಟ್ಟುಕೊಳ್ಳುತ್ತದೆ. ಇದನ್ನು ವಾಸನೆ ಎನ್ನುತ್ತೇವೆ. ಅದೇ ರೀತಿ ನಮ್ಮ ನಿತ್ಯ ನೈಮಿತ್ತಿಕ ಕರ್ಮಗಳಿಂದುಂಟಾಗುವ ಪ್ರವೃತ್ತಿ ಮನಸ್ಸಿನಲ್ಲಿ ಮುದ್ರಿತವಾದಾಗ ಅದನ್ನು ವಾಸನೆ ಎನ್ನುತ್ತಾರೆ. ಈ ವಾಸನೆಯಿಂದ ಕರ್ಮ ಬಂಧನವಾಗುತ್ತದೆ. ಇದು ಮುಂದುವರೆದು ಆಗಮ, ಸಂಚಿತ ಮತ್ತು ಪ್ರಾರಬ್ಧ ರೂಪವಾಗಿ, ಜನನ-ಮರಣ, ಸುಖ-ದುಃಖ, ಜರಾ-ವ್ಯಾದಿ, ಜನ್ಮ ಜನ್ಮಾಂತರಗಳೆಂಬ ವಿಷ ವರ್ತುಲ ನಿರ್ಮಾಣವಾಗುತ್ತದೆ. ಇದರಿಂದ (ವಾಸನಾ ವಿಶೇಷದಿಂದ) ಮುಕ್ತವಾದರೆ ಜೀವನ್ಮುಕ್ತರಾದಂತೆ.
"ಧೂ" ಅಂದರೆ, ಬಾಹ್ಯಾಭ್ಯಂತರ ಶುಚಿ. ನವದ್ವಾರಗಳಿಂದ ಸದಾ ವಿಷ ವಸ್ತುಗಳನ್ನು ಹೊರ ಹಾಕುವ, ಮಲ ಮೂತ್ರಗಳ ಕೊಂಪೆ, ರಕ್ತ ಮಾಂಸಗಳ ಪಿಂಡವೆಂಬ ಶರೀರ ಮಲಿನವಾದಂತೆ ತೋರಿದರೂ, ಕುದುರೆ ತನ್ನ ಮೈಮೇಲಿನ ಧೂಳನ್ನು ಕೊಡವಿಕೊಂಡು ಮೇಲೇಳುವಂತೆ, ಅಂತರಂಗದ ಅಂತಃಕರಣದ ಧೂಳನ್ನು ಕೊಡವಿ ಕನ್ನಡಿಯಂತೆ ತಿಳಿಯಾದ ಅಂತಃಕರಣವನ್ನು ಹೊಂದಿದವರಾಗಿ ಬಳಿ ಬಂದವರ
ಕೈಗನ್ನಡಿಯಾಗಿರುವ ಸ್ಥಿತಿ.
"ತ" ಅಂದರೆ ತತ್ ಪದದಲ್ಲಿ ಎಂದಿಗೂ ಕುಂದದೇ ನಿಂತ ಸ್ಥಿತಿ. ಜಗತ್ಕಾರಣಕ್ಕೆ ಕಾರಣವಾದ ಮಹಾಕಾರಣ. ಜ್ಞಾನರೂಪವಾದ, ಜಗತ್ ಚೇತನವಾದ, ಶುದ್ಧ ಚೈತನ್ಯ ಯಾವುದೊಂದಿದೆಯೋ ಅದನ್ನು ಇದಮಿತ್ತಂ ಎಂದು ನಿಖರವಾಗಿ ಹೇಳಲಾಗದ, ಊಹೆಗೆ ಬಾರದ, ಬರಹಕ್ಕೆ ನಿಲುಕದ, ನಿರಾಕಾರ, ನಿರ್ವಿಕಲ್ಪ ಸೃಷ್ಠಿ ಸಂಕಲ್ಪವೇ "ತತ್"-'ಅದು". ಇದನ್ನೇ ಬ್ರಹ್ಮ, ವಿಷ್ಣು, ಮಹೇಶ್ವರ, ಪರಮಾತ್ಮ, ಪರಬ್ರಹ್ಮ, ಶಕ್ತಿ, ಇತ್ಯಾದಿ ಪರಿಮಿತ ಶಬ್ದಗಳಿಂದ ವ್ಯಾಖ್ಯೆ ಮಾಡಲು ಹೋಗಿ ಸೋತು ಸುಮ್ಮನಾಗಿ, ಅದು ಅದಾಗಿರಲಿ "ತತ್" ಎಂದು ಒಪ್ಪಿಕೊಂಡು ಆ ಪದದಲ್ಲಿ ನೆಲೆ ನಿಂತ ಸ್ಥಿತಿ.
ಶ್ರೀ ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು ಅವರ ಕಾಲದಲ್ಲಿ ಬಾಳಿ ಬದುಕಿದ್ದ, ಅವರು ಕಂಡ ಯಾವುದೇ ನಾಮಧೇಯವಿಲ್ಲದೇ ಮುಕುಂದೂರು ಸ್ವಾಮಿಗಳು ಎಂಬ ಮಹಾನ್ ಅವಧೂತರ ಬಗ್ಗೆ ಅವರ "ಯೋಗದಾಗೆ ಎಲ್ಲಾ ಐತೆ" ಎಂಬ ಪುಸ್ತಕ ಓದಿ ತಿಳಿದಿದ್ದೆ. ಅಂತಹದೇ ಒಂದು ಮಹಾನ್ ಚೇತನ ಅವಧೂತ ಶ್ರೀ ವೆಂಕಟಾಚಲ ಸದ್ಗುರುಗಳು. ಅವರು ಅವತರಿಸಿದ ಈ ಕಾಲ ಘಟ್ಟದಲ್ಲಿ ಆ ಮಹಾನ್ ಚೇತನದ ಜೊತೆ ಬಾಳಿ ಬದುಕಿ ಅವರ ಪಾದ ಪೂಜೆಗಿಂತ ಅವರ ಪದ ಪೂಜೆಯೇ ನನ್ನ ಜೀವನದ ಸಾರ್ಥಕ್ಯವೇಂದು ನಾನು ಭಾವಿಸುತ್ತೇನೆ.
ಸಂಗ್ರಹ :ಶ್ರೀ. ಕುಶಾಲ, ಬೆಂಗಳೂರು