ಒಟ್ಟು ನೋಟಗಳು

Saturday, March 31, 2018

ಗುರುನಾಥ ಗಾನಾಮೃತ 
ಏನೆಂದು ಬೇಡಲಯ್ಯಾ ಸದ್ಗುರುನಾಥ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಏನೆಂದು ಬೇಡಲಯ್ಯಾ ಸದ್ಗುರುನಾಥ
ಏನೆಲ್ಲಾ ಬೇಡಲಯ್ಯಾ !

ನನಗರಿಯದೆ ಪೊರೆಯುತಿಹೆ ನೀನು
ನಾ ಬೇಡದೆ ಕೊಡುತಿರುವೆ ನೀನು !
ಯೋಗ್ಯವಾದದೆ ನೀಡುತಿಹೆ ನೀನು 
ಬೇಡಲಿನ್ನೇನು ಉಳಿಸಿಹೆ ನೀನು !! ೧ !!

ನೀ ಜೊತೆಗಿರೆ ಮರೆಯಾಗುವುದು ನೋವು
ನೀ ಒಲಿದರೆ ಬರುವುದು ಗೆಲುವು !
ನಿನ್ನ ಕೃಪೆಯಿರೆ ಕಳೆವುದು ಕರ್ಮ
ನಿನ್ನ ದಯೆಯಿರೆ ಉಳಿವುದು ಧರ್ಮ !! ೨ !!

ಕಷ್ಟದಲಿದ್ದಾಗ ನೀನೇ ಬಂದು ಸಲಹಿದೆ 
ಪ್ರೇಮಾಮೃತವ ಹರಿಸಿ ಉದ್ಧರಿಸಿದೆ !
ಮೇರೆ ಮೀರಿದೆ ಧನ್ಯತೆಯ ಭಾವಸಿಂಚನ
ಪಾದದಿ ಶರಣಾಗತಿಯೊಂದೇ 
ಜನ್ಮಪಾವ‌ನ !! ೩ !!

ಭಕ್ತಿಮಾರ್ಗದಿ ನೆಡೆಸುವೆ ನೀನು
ಜ್ಞಾನದೀವಿಗೆಯ ಹಚ್ಚಿಹೆ ನೀನು !
ಸಮತ್ವಭಾವವ ಕಲಿಸಿಹೆ ನೀನು
ಕೊಡುಗೈ ದಾತಾರನಾಗಿಹೆ ನೀನು !! ೪ !!
ಗುರುನಾಥ ಗಾನಾಮೃತ 
ಜಯ ಜಯ ಸದ್ಗುರು ಶ್ರೀವೇಂಕಟಾಚಲ
ರಚನೆ: ಅಂಬಾಸುತ 


ಜಯ ಜಯ ಸದ್ಗುರು ಶ್ರೀವೇಂಕಟಾಚಲ
ಜಯ ಜಯ ಸದ್ಗುರು ಶ್ರೀವೇಂಕಟಾಚಲ
ಜಯ ಜಯ ಸದ್ಗುರು ಶ್ರೀವೇಂಕಟಾಚಲ
ಜಯ ಜಯ ಸದ್ಗುರು ಶ್ರೀವೇಂಕಟಾಚಲ ||ಪ||

ಸ್ಥಿತಿ ಕಾರಣ ನೀ ಶ್ರೀವೇಂಕಟಾಚಲ
ಸನ್ಮತಿದಾಯಕ ಶ್ರೀವೇಂಕಟಾಚಲ
ಸದ್ಗತಿಪ್ರದಾಯಕ ಶ್ರೀವೇಂಕಟಾಚಲ
ಕ್ಷಿತಿ ಉದ್ಧಾರಕ ಶ್ರೀವೇಂಕಟಾಚಲ ||೧||

ಬೋಧರೂಪಾ ಶ್ರೀವೇಂಕಟಾಚಲ
ಭಾಗ್ಯವಿಧಾತ ಶ್ರೀವೇಂಕಟಾಚಲ
ಅನುಭವ ವೇದ್ಯ ಶ್ರೀವೇಂಕಟಾಚಲ
ಅನಂತ ಮಹಿಮ ಶ್ರೀವೇಂಕಟಾಚಲ ||೨||

ಸ್ವಾತ್ಮಾರಾಮ ಶ್ರೀವೇಂಕಟಾಚಲ
ನಿಜಾನಂದದಾಯಕ ಶ್ರೀವೇಂಕಟಾಚಲ
ಶೋಕನಿವಾರಕ ಶ್ರೀವೇಂಕಟಾಚಲ
ಧರ್ಮ ಮೂರ್ತಿ ಶ್ರೀವೇಂಕಟಾಚಲ ||೩||

ಅಜಹರಿಹರ ನೀ ಶ್ರೀವೇಂಕಟಾಚಲ
ಆನಂದ ರೂಪ ಶ್ರೀವೇಂಕಟಾಚಲ
ಅಗಣಿತ ಗುಣ ಮಹಿಮ ಶ್ರೀವೇಂಕಟಾಚಲ
ಅಕ್ಷರ ಅನಂತ ಶ್ರೀವೇಂಕಟಾಚಲ ||೪||

ಕರುಣಾಸಾಗರ ಶ್ರೀವೇಂಕಟಾಚಲ
ಕಾರುಣ್ಯಮೂರುತಿ ಶ್ರೀವೇಂಕಟಾಚಲ
ಕೃಪಾನಿಧಿ ನೀ ಶ್ರೀವೇಂಕಟಾಚಲ
ಕರ್ಮಫಲಪ್ರದ ಶ್ರೀವೇಂಕಟಾಚಲ ||೫||

ಶಾಂತಸ್ವರೂಪ ಶ್ರೀವೇಂಕಟಾಚಲ
ದುಷ್ಟರಿಗೆ ಉಗ್ರರೂಪ ಶ್ರೀವೇಂಕಟಾಚಲ
ಶಿಷ್ಟಪರಿಪಾಲಕ ಶ್ರೀವೇಂಕಟಾಚಲ
ಶರಣಾಗತ ಪಾಲಕ ಶ್ರೀವೇಂಕಟಾಚಲ ||೬||

ಘನ್ನ ಮಹಿಮ ಶ್ರೀವೇಂಕಟಾಚಲ
ವಾದಿಭಯಂಕರ ಶ್ರೀವೇಂಕಟಾಚಲ
ಕೃಷ್ಣಯೋಗೀಂದ್ರ ಶ್ರೀವೇಂಕಟಾಚಲ
ಶಾರದಾ ತನಯಾ ಶ್ರೀವೇಂಕಟಾಚಲ ||೭||

ಸಖರಾಯಪುರಾಧೀಶ ಶ್ರೀವೇಂಕಟಾಚಲ
ಅಂಬಾಸುತನ ಪ್ರಿಯ ಶ್ರೀವೇಂಕಟಾಚಲ
ಶರಣಂ ಶರಣಂ ಶ್ರೀವೇಂಕಟಾಚಲ
ಶರಣಂ ಶರಣಂ ಶ್ರೀವೇಂಕಟಾಚಲ ||೮||
ಗುರುನಾಥ ಗಾನಾಮೃತ 
ಆರಡಿಯ ಈ ದೇಹ
ರಚನೆ: ಅಂಬಾಸುತ 


ಆರಡಿಯ ಈ ದೇಹ
ಹಿಡಿ ಬೂದಿ ಕೊನೆಗರಿಯೋ
ಇದನು ತಡೆವವರ್ಯಾರಿಲ್ಲ
ಕೊನೆವರೆಗು ಬಂದೂ ||

ಹೆತ್ತವರು ಮುಂದೆ ಹೋಗುವರು
ಸತಿ ಸುತರು ನಿನ್ನ ಹಿಂದೆ
ಸಖರ ಪಾಡೇನೆಂದು ನೀನರಿಯೆಯೋ
ಕೂಡಿಟ್ಟ ಧನಕನಕ 
ಪೆಟ್ಟಿಗೆಯ ಬಿಟ್ಟು ಬಾರದು
ಕಟ್ಟಕಡೆಯಲಿ ನೀ ಒಂಟಿ ಅರಿಯೋ ||

ಹಾಲನ್ನ ತಿಂದ ಬಾಯಿಗೆ
ಹಿಡಿಹರಳು ಅಕ್ಕಿ ಹಾಕೀ
ಕಣ್ಣೀರ ಸುರಿಸೀ ನಿನ್ನ ಕಳಿಸುವರೋ
ಒಪ್ಪತ್ತು ಇಡರೋ
ಒಪ್ಪ ಬೇಗ ಮಾಡಬೇಕೆಂಬರೋ
ಹೆಣವಿದೂ ಕೆಟ್ಟು ನಾರುವುದು ಎನ್ನುವರೋ ||

ಸತ್ಕರ್ಮ ಮಾಡಿದರೇ
ನಾಲ್ಕುಜನ ಸೇರುವರೋ
ದುಷ್ಟ ನೀನಾದರೇ ದುರುಳ ಹೋಗೆನ್ನುವರೋ
ಹನ್ನೆರಡು ದಿನ ಕಳೆಯೇ
ಭಕ್ಷ್ಯ ಪಾಯಸ ಉಂಡು
ನಿನ್ನ ಮರೆವರೊ ನೀನೇ ಮರೆಯಾದೆ ಎನ್ನುವರೋ ||

ಹುಟ್ಟಿ ಬಂದದ್ದಾಗಿದೆ
ನಾಳೆ ಪೋಪುದಿದ್ದೇ ಇದೆ
ಪುಣ್ಯಕಾರ್ಯವ ಮಾಡೋ ಕೈಲಾದ ತೆರದಿ
ಪರಮ ಪಾವನ ನಮ್ಮಾ
ಗುರುನಾಥನಾ ಸ್ಮರಿಸೋ
ಉದ್ಧಾರವಾಗೋ ಮತ್ತೆ ಹುಟ್ಟದಾಂಗೇ ||
ಗುರುನಾಥ ಗಾನಾಮೃತ 
ನೀನೆನಗೆ ರಾಮಾ ಗುರುವೇ
ರಚನೆ: ಅಂಬಾಸುತ 

ನೀನೆನಗೆ ರಾಮಾ ಗುರುವೇ
ನೀನೆನಗೆ ಕೃಷ್ಣಾ ಗುರುವೇ
ನೀನೆನಗೆ ಹರನೂ ಗುರುವೇ
ನೀನೇ ಪರಬ್ರಹ್ಮನೂ ಗುರುವೇ ||ಪ||

ಆದಿ ಅಂತ್ಯ ನೀ ಗುರುವೆ
ಆಗಮ ನಿಗಮದೊಳೂ ನೀನಿರುವೆ
ಆನಂದ ಆಮೋದ ನೀ ಗುರುವೆ
ಅಚಿಂತ್ಯ ಅನಂತ ನೀನಾಗಿರುವೆ ||೧||

ಸ್ಥಿತಿಯೂ ಗತಿಯೂ ನೀ ಗುರುವೆ
ಸಚ್ಚಿದಾನಂದ ನೀನಾಗಿರುವೆ
ಸಂಧರ್ಭ ಸಂಬಂಧ ನೀ ಗುರುವೆ
ಸೂಕ್ಷ್ಮತೆಯೊಳಗೆ ನೀನಡಗಿರುವೆ ||೨||

ಪ್ರಕೃತಿ ಪುರುಷ ನೀ ಗುರುವೆ
ಅಜ್ಞಾನ ಅಳಿಸುವವ ನೀನಾಗಿರುವೆ
ವೇದ ವಿಜ್ಞಾನ ನೀ ಗುರುವೆ
ವಿನಮ್ರತೆಯಾ ನೀ ಕಲಿಸಿರುವೆ ||೩||

ಆತ್ಮವು ದೇಹವು ನೀ ಗುರುವೆ
ಅಂತರಂಗದೊಳು ನೀನಿರುವೆ
ಜೀವ ನಿರ್ಜೀವ ನೀ ಗುರುವೆ
ಸಂಜೀವಿನಿಯಾಗಿ ನೀ ಬರುವೆ ||೪||

ಬೋಧರೂಪನು ನೀ ಗುರುವೆ
ಭಾಗ್ಯ ವಿಧಾತ ನೀನಾಗಿರುವೆ
ಬಾರೋ ಬಾರೋ ಗುರುವೆ
ಎನ್ನರಿವಿನಾ ದೊರೆ ನೀ ಗುರುವೆ ||೫||

ಸಖರಾಯಪುರವಾಸಿ ಗುರುವೇ
ಸದ್ಭಕ್ತ ಪಾಲಕ ಗುರುವೇ
ಅಂಬಾಸುತನಾ ಸದ್ಗುರುವೇ
ಶ್ರೀವೇಂಕಟಾಚಲ ಪ್ರಭುವೇ ||

Sunday, March 25, 2018

ಗುರುನಾಥ ಗಾನಾಮೃತ 
ಎನ್ನಾತ್ಮಬಂಧು ಗುರುದೇವ ಗುರುದೇವ
ರಚನೆ: ಅಂಬಾಸುತ 

ಎನ್ನಾತ್ಮಬಂಧು ಗುರುದೇವ ಗುರುದೇವ
ಸನ್ಮತಿಯ ನೀಡುತಾ ಪೋರೆಯುವಾ ಮಹಾದೇವ ||ಪ||

ಸ್ಥಿತಿಯಿಹುದು ನಿನ್ನಿಂದ ಸದ್ಗತಿಯು ನಿನ್ನಿಂದಾ
ಈ ಸ್ತುತಿಯು ನೀನಿತ್ತ ಮತಿಯಿಂದಲೆ
ಅತಿದೀನ ನಾನಾಗೀ ಬೇಡಿಹೆನೊ ತಂದೆ
ನಿನ್ನಡಿಯಲೇ ಆನಂದವಿಹುದೆಂದು ಬಂದೆ||೧||

ಎಷ್ಟು ಜನ್ಮದ ಪುಣ್ಯದ ಫಲವೊ ಅರಿಯೆ
ನಿನ್ನ ನಾಮ ನಾಲಿಗೆಯಲಿ ನಾ ಹೊತ್ತಿರುವೆ
ಅದುವೆ ನಿನ್ನಯ ಕರುಣೆ ನಾನೆಂದು ಮರೆಯೆ
ಕರುಣಾಸಾಗರನೆಂಬಾ ಬಿರುದಿನಾ ದೊರೆಯೆ ||೨||

ಒಡಲಾಳದಾ ಮಾತು ಒಂದೇ ಗುರು ನೀನೆಂದೆ
ಉತ್ತಮೋತ್ತಮ ನಿನ್ನ ಮಹಿಮೆ ಅನುಭವಿಸಿದೆ
ಉತ್ತರೋತ್ತರದ ಚಿಂತೆ ಬಿಟ್ಟು ನಾ ಬಂದೆ
ಹತ್ತಿರಕೆ ಸೆಳೆದೆನ್ನ ನೀ ಮುದ್ದಿಸಿದೆ ||೩||

ಸಖರಾಯಪುರಾಧೀಶ ಶ್ರೀಸದ್ಗುರುನಾಥ
ಶ್ರೀವೇಂಕಟಾಚಲ ನಾಮದಾ ಅವಧೂತ
ಪಾದಸೇವೆಯ ಬಯಸಿ ಬಂದಿಹೆ ನಾ ಅಂಬಾಸುತ
ನಿಜಾನಂದ ನೀಡಯ್ಯ ನಿನ್ನ ಮನದೊಳಗಿರಿಸುತಾ ||೪||

ಗುರುನಾಥ ಸ್ತೋತ್ರ  ಕುಸುಮಾಂಜಲಿ 


ಸುಖೇ ಯೇ ಸ್ಮರಂತಿ ಗುರುಂ
ನಾನುಭವಂತಿ ತೇ ಕಷ್ಟಮ್ |
ಸುಖೇ ಯೇ ವಿಸ್ಮರಂತಿ ತಂ
ನೂನಂ ತೇ ಪತಂತಿ ಕಷ್ಟೇ ||

ಯಾರು ಸುಖದಲ್ಲಿ ಗುರುವನ್ನು ಸ್ಮರಿಸುತ್ತಾನೋ ಅವನು ಕಷ್ಟವನ್ನು ಅನುಭವಿಸುವುದಿಲ್ಲ.ಆದರೆ ಸುಖದಲ್ಲಿ ಯಾರು ಗುರುಸ್ಮರಣೆಯನ್ನು ಮರೆಯುತ್ತಾನೋ ಅವನಿಗೆ ಸಂಕಟದ ಸರಮಾಲೆಯೇ ಬರುತ್ತದೆ‌..

.ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು

Thursday, March 22, 2018

ಗುರುನಾಥ ಗಾನಾಮೃತ 
ಏನೆಂದು ಪೂಜಿಸಲಿ ನಾ ನಿನ್ನ ಗುರುನಾಥ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಏನೆಂದು ಪೂಜಿಸಲಿ ನಾ ನಿನ್ನ ಗುರುನಾಥ
ಏನೆಂದು ಭಜಿಸಲಿ ನಾ ನಿನ್ನ ||

ದೇಹವು ನೀನೇ ಪ್ರಾಣವೂ ನೀನೇ
ಮೌನವೂ ನೀನೇ ಮಾತೂ ನೀ‌ನೇ |
ಕಾಣದೆ ನಿನ್ನ ದಣಿದಿಹೆನಯ್ಯಾ 
ಪಾರುಮಾಡೆನ್ನ 
ಕಾರುಣ್ಯಸಿಂಧುವೇ || ೧ ||

ಚಿತ್ತವೂ ನೀನೇ ಚೇತನನೂ ನೀನೇ
ಮತಿಯೂ ನೀನೇ ಗತಿಯೂ ನೀನೇ |
ಅರಿವು ಕಾಣದೇ ಕೊರಗಿಹೆನಯ್ಯಾ
ದಾರಿತೋರೆಯಾ ಮಾರ್ಗಬಂಧುವೇ || ೨ ||

ಕಾಂತಿಯು ನೀನೇ ಶಾಂತಿಯು ನೀ‌ನೇ
ಅಣುವೂ ನೀನೇ ಮಹಿಮನೂ ನೀನೇ !
ದೇಹಭಾವದಿ ಬಳಲಿಹೆನಯ್ಯಾ 
ಆತ್ಮದರ್ಶನವ ಮಾಡಿಸು ನನ್ನಾತ್ಮಬಂಧುವೇ || ೩ ||
ಗುರುನಾಥ ಗಾನಾಮೃತ 
ಘನ್ನ ಮಹಿಮ ಸದ್ಗುರುನಾಥ
ರಚನೆ: ಅಂಬಾಸುತ 

ಘನ್ನ ಮಹಿಮ ಸದ್ಗುರುನಾಥ
ಭಕುತರ ಅವಗುಣಗಳ ಅಳಿಸೆ ಅವತರಿಸಿದವಧೂತ ||ಪ||

ಕಲ್ಲೆದೆಯೊಳು ಹೂವ ಅರಳಿಸುವಾ
ಕಾಮ ಕಾಂಚಾಣಗಳ ವ್ಯಾಮೋಹವಾ ಅಳಿಸುವಾ ||೧||

ಬಿಟ್ಟು ಹಿಡಿದಿಟ್ಟುಕೊಳ್ಳುವಾ ನಮ್ಮಾ
ಮನದಾ ಹುಚ್ಚು ಕುದುರೆಯಾ ಪಳಗಿಸುವ  ||೨||

ಸಜ್ಜನರಾ ಸಂಘವ ನೀಡಿ ಪೊರೆವಾ
ದುರ್ಜನರಾ ತೋರಿ ಹೀಗಿರಬೇಡಿ ಎನುವಾ ||೩||

ನಗುಮೊಗದ ನಾರಸಿಂಹನಿವಾ
ದುಷ್ಟತನವಾ ಕಳೆದು ಶಿಷ್ಟರನ್ನಾಗಿಸುವಾ ||೪||

ಬೋಧರೂಪನಾಗಿ ಬ್ರಹ್ಮನ ತೋರ್ವಾ
ತಾನೇ ಬ್ರಹ್ಮನಾಗಲು ದಾರಿಯ ಪೇಳ್ವಾ ||೫||

ಸಖರಾಯಪುರವಾಸಿ ಸಂತ
ಅಂಬಾಸುತನಾ ಅಂತರಂಗದೊಳಿವ ಬಹು ಶಾಂತ ||೬||

Tuesday, March 20, 2018

ಗುರುನಾಥ ಗಾನಾಮೃತ 
ಅರಿಯಲಾದೀತೇ ನಿನ್ನ ಅರಿವಿನಾ ದೊರೆಯೇ
ರಚನೆ: ಅಂಬಾಸುತ 

ಅರಿಯಲಾದೀತೇ ನಿನ್ನ ಅರಿವಿನಾ ದೊರೆಯೇ
ಅವಧೂತ ಅಸಾಮಾನ್ಯ ಅಪ್ರಮೇಯಾ ||ಪ||

ಅನಾಥರಾ ನಾಥ ದೀನಬಂಧು ಕೃಪಾಸಿಂಧೋ
ಆದಿ ಅಂತ್ಯ ರಹಿತಾ ನಿಜ ಆತ್ಮಬಂಧೋ ||೧||

ಅಕ್ಷರ ನೀನಂತೇ ಕುಕ್ಷಿಯಾ ಪಾಲಿಸುವನಂತೆ
ಶಿಕ್ಷೆ ನೀಡದ ರಕ್ಷಕನಂತೇ ಅಕ್ಷಿ ನಿನ್ನ ಸಾಧನವಂತೆ ||೨||

ಮಂಗಳಕರ ಮಂದಹಾಸದ ಮಹಾಯೋಗಿ 
ಭಸ್ಮಭೂಷಿತ ಭಾಸ್ಕರನೇತ್ರ ಭಾಗ್ಯದಾ ವಿಧಾತ ||೩||

ಬೋಧರೂಪ ಮಹಾಪ್ರತಾಪ ಪರಮವೈರಾಗಿ
ಸೋಹಂ ಎಂಬುದ ಹೇಳಿಕೊಟ್ಟ ನಿರ್ಮೋಹಿ ||೪||

ಸಖರಾಯಪುರಾಧೀಶಾ ಸದ್ಭಕ್ತ ಪರಿಪಾಲಕ
ಅಂಬಾಸುತನ ಅಂತರಂಗದ ಆನಂದ ಒಡೆಯಾ ||೫||

Monday, March 19, 2018

ಗುರುನಾಥ ಗಾನಾಮೃತ 
ಜ್ಞಾನಮಾರ್ಗದ ಕಾಂತಿಯಲ್ಲಿ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 


ಜ್ಞಾನಮಾರ್ಗದ ಕಾಂತಿಯಲ್ಲಿ
ಅಜ್ಞಾನವೆಂದೂ ಇರದು |
ಆತ್ಮಜ್ಞಾನದ ಪ್ರಕಾಶದಲ್ಲಿ
ಸೂರ್ಯತೇಜಕೂ ಕುಂದು || ೧ ||

ಸದ್ಗುರುವಿನ ವಚನಾಮೃತದಲ್ಲಿ
ಅಡಗಿದೆ ವೇದಗಳ ಸಾರ |
ಅರಿತು ನೆಡೆದರೆ ಈ ದಾರಿಯಲ್ಲಿ
ದಾಟಿಸಬಲ್ಲದು ಭವಸಾಗರ || ೨ ||

ನಾನೆಂಬ ಭಾವ ಅಳಿದು
ಗುರುವೇ ಸಕಲೆಂದು ಬಲಿದು !
ನಾಮಸ್ಮರಣೆಯೇ ಉಸಿರಾಗಿ
ಬದುಕಾಗಲಿ ಸ್ಥಿರವಾಗಿ || ೩ ||

ಭೋಗವೆಲ್ಲವೂ ಕೃತಕ   
 ಅಲಂಕಾರವೆಲ್ಲವೂ ಕ್ಷಣಿಕ |
ಗುರುಪದಪೂಜೆಯೇ ಜೀವಿಕ
ಜೀವನವಾಗಲೀ ಸಾರ್ಥಕ || ೪ ||
ಗುರುನಾಥ ಗಾನಾಮೃತ 
ನಾನೇನ ಮಾಡಲಯ್ಯಾ
ರಚನೆ: ಅಂಬಾಸುತ 

ನಾನೇನ ಮಾಡಲಯ್ಯಾ
ಜ್ಞಾನವಿರದ ಅತಿ ಹೀನ ಮಾನವ ನಾನು ||

ಉದಯದೊಳೇಳಲಿಲ್ಲಾ
ಕಣ್ತೆರೆದು ನಿನ್ನ ನೋಡಲಿಲ್ಲಾ
ನಿತ್ಯ ಅನುಷ್ಠಾನವ ಎನ್ನ ಕರ್ಮ ಎಂದೆನಲ್ಲಾ
ಮರ್ಮವ ತಿಳಿಯದೇ ಮೂಢನಾದೆನಲ್ಲಾ ||

ಹೆತ್ತವರ ಸೇವಿಸಲಿಲ್ಲಾ
ಗುರುಹಿರಿಯರ ಮಾತು ಕೇಳಲಿಲ್ಲಾ
ವಿದ್ಯೆ ನೈವೇದ್ಯವು ಬುದ್ದಿ ಅತಿ ಮಂದವು
ಗೊಡ್ಡು ಎಮ್ಮೆಯಂತಾದೆನಲ್ಲಾ ||

ಪುಸ್ತಕ ಹಿಡಿಯಲಿಲ್ಲಾ
ಮಸ್ತಕದೊಳು ಒಳಿತೆಂಬುದೇ ಇಲ್ಲಾ
ಸತ್ಯಕೆ ಶತ್ರುವಾದೆ ದುರುಳರ ಮಿತ್ರನಾದೆ
ಅಸುರನಂತಾದೆನಲ್ಲಾ ||

ಕಾಮಕಾಂಚಾಣ ಬಯಸಿದೆ
ಕ್ರೋಧದಿ ಕತ್ತಿ ಹಿಡಿದಿಹೆ
ನಿಜಕುಲಕೇ ನಾ ಕಂಟಕನಾದೇ
ಇದಕೆಲ್ಲ ಕಾರಣ ನೀನೆಂದೇ ||

ಪುಟ್ಟಿಸಿದವ ನೀನೂ
ಎನ್ನ ತಪ್ಪಿಗೆ ಕಾರಣವು ನೀನೂ
ಒಪ್ಪವಾಗಿರಿಸದೆ ಹೀಗೇಕೆ ಎನ್ನ ಮಾಡಿದೆ
ಉತ್ತರಿಸೊ ಗುರುನಾಥಾ ||