ಗುರುನಾಥ ಗಾನಾಮೃತ
ಎಷ್ಟು ತಪಸಿನ ಪುಣ್ಯವೋ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು
ಎಷ್ಟು ತಪಸಿನ ಪುಣ್ಯವೋ
ಯಾವ ಹಿರಿಯರ ಭಾಗ್ಯವೋ |
ಲಭಿಸಿತೆಮಗೆ
ಸದ್ಗುರುವ ಕಾಣುವ ಸೌಭಾಗ್ಯವು ||
ಹೊಸಿಲಲಿ ಗುರುವಿನ
ಪಾದಧೂಳಿಯ ಸ್ಪರ್ಷ |
ನೊಸಲಿಗೆ ಹಚ್ಚಿದೊಡೆ
ವಿನೂತನ ಹರ್ಷ ||
ಮನೆಯಂಗಳದಲ್ಲಿ ಅವರು
ನೆಡೆದಾಡಿದ ಪದಧೂಳಿ |
ಮನದಂಗಳದಲ್ಲಿ ಉಳಿಯಿತು
ಅಚ್ಚಳಿಯದ ಗುರುಮೂರ್ತಿ ||
ಪ್ರೀತಿಯಿಂದ ಹರಸಿದ
ಅಮೂಲ್ಯ ಸ್ವರಸಿಂಚನ |
ಅನುರಣಿಸಿತ್ತು ಹೃದಯದಲಿ
ಅಪೂರ್ವ ಸಿರಿಚಂದನ ||
ಪರಿತಪಿಸಿತ್ತು ಮನವು
ಈ ಅಮೃತಘಳಿಗೆಗೆ |
ಕರುಣಿಸಿದನು ಗುರುವು
ದೀನರಾ ಈ ಕೋರಿಕೆಗೆ ||
ಮನವನಾವರಿಸಿತ್ತು
ಅನಿರ್ವಚನೀಯ ಭಾವನೆ |
ಮಾತು ಬಾರದೇ ನಮಿಸಿತ್ತು
ಮನದಲೇ ಗುರುಪಾದಕೆ ||
No comments:
Post a Comment