ಗುರುನಾಥ ಗಾನಾಮೃತ
ನನ್ನತನವೇನಿಲ್ಲ ನಿನ್ನದಹುದಿಹುದೆಲ್ಲ
ರಚನೆ: ಅಂಬಾಸುತ
ನನ್ನತನವೇನಿಲ್ಲ ನಿನ್ನದಹುದಿಹುದೆಲ್ಲ
ನಾ ನಿನ್ನ ದಾಸನೋ ಸದ್ಗುರುರಾಯಾ ||ಪ||
ನೀನಿಟ್ಟ ಹಾಗಿರುವೇ ನಿನ್ನನೇ ನಂಬಿರುವೆ
ನೀ ತೋರ್ದ ದಾರಿಯಲ್ಲೇ ನಾ ನೆಡೆವೆನಯ್ಯಾ ||ಅ ಪ||
ಕಣಕಣದಲೂ ನಿನ್ನ ಕಾಣುವಾ ಕಾತುರತೆ
ಎನ್ನಲ್ಲಿ ಮೂಡಿಹುದೋ ಸದ್ಗುರುರಾಯಾ
ನಿನ್ನ ಪದಗಳೇ ಸದಾ ಎನ್ನ ಕಿವಿಯೊಳಗಿರಲಿ
ನಿನ್ನ ಪಾದಧೂಳೆನ್ನ ಶಿರದ ಮೇಲಿರಲಯ್ಯಾ ||೧||
ನಾ ಮಾಡುವಾ ಕರ್ಮ ನಿನಗೆ ಪ್ರಿಯವಾಗಿರಲಿ
ನೀ ಒಪ್ಪುವಂತಿರಲಿ ಸದ್ಗುರುರಾಯಾ
ನಾ ನುಡಿವ ಮಾತಿನಲಿ ನಿನ್ನ ನಾಮ ಬೆರತಿರಲಿ
ನನ್ನುಸುರಿನಾ ಹೆಸರು ನಿನದಾಗಲಯ್ಯಾ ||೨||
ನಿನ್ನುಚ್ಚಿಷ್ಟವೇ ಎನಗೆ ಅನ್ನವಾಗಿರಲಿ
ಪ್ರಾಣಕಾರಣವದೇ ಸದ್ಗುರುರಾಯಾ
ಎನ್ನ ಮೈ ಸೋಕುವ ತಿಳಿಗಾಳಿ ಎಂದಿಗೂ
ನಿನ್ನ ಪಾದಸೇವಕರ ಉಸಿರಾಗಿ ಇರಲಯ್ಯಾ ||೩||
ಸಖರಾಯಪುರವಾಸ ಗುರುನಾಥ ಅವಧೂತಾ
ಸದ್ಭಕ್ತಪಾಲಕ ಸದ್ಗುರುರಾಯಾ
ಅಂಬಾಸುತನ ಈ ಪದ ಪದವು ನಿನಗಯ್ಯಾ
ಒಪ್ಪಿಸುವೆ ಸ್ವೀಕರಿಸೋ ಓ ಎನ್ನ ಜೀಯಾ ||೪||
No comments:
Post a Comment