ಒಟ್ಟು ನೋಟಗಳು

Thursday, September 27, 2018

ಗುರುನಾಥ ಗಾನಾಮೃತ 
ಗುರುವೇ ಬೇಗ ಬಾರಯ್ಯಾ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಗುರುವೇ ಬೇಗ ಬಾರಯ್ಯಾ
ನಮ್ಮ ಮನೆಗೆ |
ಸದ್ಗುರುವೆ ಒಮ್ಮೆ ಬಾರಯ್ಯಾ
ನಮ್ಮ ಮನಕೆ ||

ಜ್ಞಾನದ ಹೆಜ್ಜೆಯನಿಡುತಾ
ಕರುಣೆಯ ದೃಷ್ಟಿಯ ಬೀರುತಾ |
ಭಕ್ತಿಯ ರಸವಾ ಚೆಲ್ಲುತಾ
ಮಂದದ ನಗೆಯಾ ಸೂಸುತಾ || ೧ ||

ಕಣ್ಣಂಚಿನಲೇ ಎಲ್ಲರ ನೋಡುತಾ
ಮನದಲ್ಲಿಯೇ ಭಕ್ತರಾ ಹರಸುತಾ |
ನಿಮ್ಮೊಡನೆ ನಾನಿರುವೆನೆಂದು ಹೇಳುತಾ
ಪ್ರತೀಕ್ಷೆಯ ಫಲವು ಉತ್ತಮವಿದೆಯೆನುತಾ || ೨ ||

ಕರ್ಮದ ಕಾಷ್ಠವಾ ದಹಿಸುತಾ
ಧರ್ಮದ ಹಾದಿಯ ತೋರಿಸುತಾ |
ಹೃದಯದಲೇ ದೈವವ ಕಾಣಿರೆನುತಾ
ಸದ್ವಿದ್ಯೆಯ ದೀಪವಾ ಬೆಳಗಿಸುತಾ || ೩ ||
ಗುರುನಾಥ ಗಾನಾಮೃತ 
ಏಕೆ ಮೌನವಾಗಿಹೆ ಗುರುವೇ ಎನ್ನ ಮೊರೆ ಕೆಳದೇ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ಏಕೆ ಮೌನವಾಗಿಹೆ ಗುರುವೇ ಎನ್ನ ಮೊರೆ ಕೆಳದೇ ಗುರುವೇ
ನಿನ್ನದೇ ಧ್ಯಾನದಲಿ ಮನವು ಮುಳುಗಿಹುದು ದಯೆ ತೋರು ಗುರುವೇ|

ಚಿತ್ತವು ನಿನ್ನಲೇ ನೆಲೆ ನಿಲ್ಲಲಿ ವಿತ್ತದ ಹಿಂದೆ ಹೋಗದಿರಲಿ 
ಕಡುಬಡವನಾದರೂ ಚಿಂತೆಇಲ್ಲಾ ಬಕುತಿಯಲಿ ಸಿರಿವಂತನ ಮಾಡು ಗುರುವೇ|

ಮನವು ಬಯಸುವುದು ಲೌಕಿಕದ ಎಲ್ಲಾ ಸುಖವನು ದಿನವೂ
ಎಲ್ಲೆ ಮೀರಿ ಹೋಗದಿರಲಿ ಆಸೆಯು ನಿನ್ನ ನಿಗವು ಎನ್ನ  ಮೇಲಿರಲಿ ಗುರುವೇ|

ಸಂಸಾರ ಬಂಧನದ ಸುಳಿಯಲಿ ಸಿಲುಕಿ ನಿನ್ನ ಮರೆತನೇ  ನಾನು
ಎನ್ನ ಮನ್ನಿಸಿ ನಿನ್ನೊಳು ಎನ್ನ ಮನ ನಿಲ್ಲುವಂತೆ ಮಾಡೋ ಗುರುವೇ|

ಬಕುತಿಯ ಸೋಗಿನಲಿ ಎನ್ನ ಸ್ವಾರ್ಥವ ಮುಂದಿಟ್ಟು ನಿನ್ನ  ಬೇಡಿದೆನು
ಎನ್ನ ಮನ್ನಿಸಿ ನಿನ್ನವನೆಂದು ಕನಿಕರಿಸಿ ಹರಸೋ ನನ್ನ ಗುರುವೇ|

ಸಕಲವೂ ತಿಳಿದ ದೇವನು ಸಕರಾಯಪುರದಿ ನೆಲೆಸಿಹೆ ನೀನು
ಸಕಲ ಬಕುತರ ನಿತ್ಯವೂ ಸಲಹುವ ನೀನು ಎನ್ನನೂ ಸಲಹು ಗುರುವೇ|

ಗುರುನಾಥ ಗಾನಾಮೃತ 
ಎನ್ನ ಗುರುನಾಥನೇ ಸದಾ ಎನ್ನ ಕಾಯುವನು ಮನವೇ
ರಚನೆ: ಆನಂದರಾಮ್, ಶೃಂಗೇರಿ  


ಎನ್ನ ಗುರುನಾಥನೇ ಸದಾ ಎನ್ನ ಕಾಯುವನು ಮನವೇ
ಇನ್ನು ಯಾತಕೆ ಭಯವು ಅವನಲೇ ಲೀನನಾಗು ಮನವೇ|

ಪೊಳ್ಳು ಮಾತುಗಳ ನೀ  ನಂಬದೆ ಅವನನೇ ನಂಬು ಮನವೇ
ನಿತ್ಯ ನಿರಂತರ ಸತ್ಯವು ಅವನ ಇರುವು ಕೇಳೋ ಮನವೇ|

ಭಯ ಭೀತನಾಗಬೇಡ ಅನ್ಯರಿಗೆ ಅಂಜಿ ಬದುಕ ಬೇಡ ಮನವೇ
ನಿತ್ಯ ಅವನನೇ ನೆನೆಯುತ ಸುಂದರ ಸತ್ಯವ ನೀ ಅರಿಯೊ ಮನವೇ|

ಅವನ ಪಾದವ ಮನದಿ ತುಂಬಿ ಬಹು ಬಕುತಿಯ ಮಾಡು ಮನವೇ
ಮಕುತಿಯ ನೀಡುವ  ಆ ಪಾದವೇ ಮಹಾದೇವನ
ಪಾದ ತಿಳಿ ಮನವೇ|

ತುಂಡು ಉಡುಗೆಯ ದೊರೆಯೋ  ಮಹಾ ಮಹಿಮನೋ ಮನವೇ
ದಟ್ಟ ದಾರಿದ್ರವ ಹೊಡೆದೋಡಿಸುವ ಮಹಾ ಪುರುಷನೋ ಮನವೇ|

ಎಲ್ಲರೊಳಗೂಡಿ ತನ್ನ ಕೆಲಸವ ಮಾಡಿ ಸುಮ್ಮನಿರುವನೋ ಮನವೇ
ಹೃದಯ ತುಂಬಿ ಕೂಗಿದಾಗ ಓಗೊಡುವನೊ ಮನವೇ|

ಎನೂ ಬಯಸದ ಗುರು ಇವನು ಸರ್ವರನೂ ಕಾಯ್ವನು ಮನವೇ
ನೀ ಎತ್ತಲಾದರೂ ಸಾಗು ನಾ ಗುರುವ ನಂಬಿ ನಡೆವೆ ಓ ನನ್ನ ಮನವೇ|
ಗುರುನಾಥ ಗಾನಾಮೃತ 
ನಿತ್ಯ ನಿಮ್ಮ ಬಜಿಪೆ ಗುರುವೇ ನಿತ್ಯ ನಿಮ್ಮ ಸ್ತುತಿಪೆ ಗುರುವೇ
ರಚನೆ: ಆನಂದರಾಮ್, ಶೃಂಗೇರಿ  


ನಿತ್ಯ ನಿಮ್ಮ ಬಜಿಪೆ ಗುರುವೇ ನಿತ್ಯ ನಿಮ್ಮ ಸ್ತುತಿಪೆ ಗುರುವೇ
ಅಂತರಾಳದಿ ನೆಲೆ ನಿಂತ ನನ್ನದೆಂಬ ಬಾವ ಅಳಿಸಿ ಉದ್ಡರಿಸೋ ಗುರುವೇ|

ಬವರೋಗ ವೈದ್ಯ ನೀನು ಮೂಡ ಮನದ ಕ್ಲೇಶ ದೂರ ಮಾಡೋ
ದೃಷ್ಟಿಹೀನ ನಾನು  ಸರಿ ತಪ್ಪುಗಳ ಭೇದ ಅರಿಯದಾದೆನೊ ಗುರುವೇ|

ಸುಳ್ಳು ನುಡಿಯು ನಿನ್ನ ಮುಂದೆ ನಡೆಯಲಾರದೋ ಗುರುವೇ
ಉಗ್ರನಾಗಿ  ನುಡಿವಮಾತು ಬದುಕ ದಾರಿ ತೋರಿ ನಡೆಸಿದೆ  ಗುರುವೇ|

ದಯಾಮಯ ಗುರುವೇ ನೀನು ಪಾದಸೇವೆ ಭಾಗ್ಯ ನೀಡೋ ಗುರುವೇ
ಎನ್ನ ಶಿರವ ನಿನ್ನ ಪಾದಕಮಲದಡಿ ಇಡುವೆ ಮನ್ನಿಸಿ ಎನ್ನ ಹರಸು ಗುರುವೇ|

ಆಚಾರ ವಿಚಾರಗಳರಿವು ಈ  ಮನಕೆ ಇನ್ನೂ  ಇಲ್ಲ ಗುರುವೇ
ಮೌನದಿಂದ ನಿನ್ನ ಮುಂದೆ ಶಿರವಬಾಗಿ ಶರಣಾಗುವೆ ಓ ನನ್ನ ಗುರುವೇ|
ಗುರುನಾಥ ಗಾನಾಮೃತ 
ಕೃಪೆತೋರೋ ಗುರೋ
ರಚನೆ: ಶ್ರೀಮತಿ.ಶೈಲಜಾ ಕುಮಾರ್, ಮೈಸೂರು 

ಕೃಪೆತೋರೋ ಗುರೋ
ಬೆಳಕ ನೀಡೋ ಗುರೋ
ಕಳೆವುದು ಮೋಹಮಾಯ |
ಕೈಯ ನೀಡೋ ಗುರೋ
ದಾರಿತೋರೋ ಗುರೋ
ಮರೆವುದು ಜಗದ ಮಾಯ ||

ಭವದಾ ಈ ಬಂಧನದಲ್ಲಿ
ಸುಖ ದುಃಖಗಳ ಸುಳಿಯಲ್ಲಿ
ಒಮ್ಮೆ ದೃಷ್ಟಿಬೀರು ಗುರುವೇ |
ಅಜ್ಞಾನದಾ ಕತ್ತಲೆಯಲ್ಲಿ
ದಾಸ್ಯದಾ ಸುಳಿಯಲ್ಲಿ
ಸತ್ಯದರ್ಶನವಾ ಮಾಡಿಸು ಗುರುವೇ || ೧ ||

ಬಂದು ಹೋಗುವ ಬಂಧುಜನರಲ್ಲಿ
ಚಿತ್ತವ ಕೆಡಿಸೋ ಚಂಚಲತೆಯಲ್ಲಿ 
ಆತ್ಮಬಂಧುವಾಗು ನೀ ಗುರುವೇ |
ಬೋಧವ ಮಾಡುವ ಬೋಧಕನಾಗಿ
ಸನ್ಮತಿಯ ತೋರುವಾ ಸಂತನಾಗಿ
ಮಾರ್ಗಬಂಧುವಾಗು ನೀ ಗುರುವೇ || ೨ ||

Wednesday, September 19, 2018

ಗುರುನಾಥ ಗಾನಾಮೃತ 
ಬರೆಯಲಾರೆ ಪದಗಳಲ್ಲಿ ನುಡಿಯಲಾರೆ ಮಾತಿನಲ್ಲಿ
ರಚನೆ: ಆನಂದರಾಮ್, ಶೃಂಗೇರಿ  


ಬರೆಯಲಾರೆ ಪದಗಳಲ್ಲಿ ನುಡಿಯಲಾರೆ ಮಾತಿನಲ್ಲಿ
ಮೌನದಲ್ಲಿ ಲೀನನಾಗಿ ಗುರುವೇ ನಿನ್ನ ಧ್ಯಾನದಲ್ಲಿ ಮುಳುಗಿ ಹೋದೆನೋ|

ಬರೆದು ಬರೆದು ಸೋತೆನೋ ಮನಸು ಭಾರವಾಗಿ  ನೊಂದೆನೋ
ನಿನ್ನ ಕರುಣೆ ಪಡೆಯಲಾರದೆ ನೊಂದು ಗುರುವೇ ನಿನ್ನ ಕೂಗಿ ಕರೆದೆನೋ |

ಹುಚ್ಚು ಮನವ  ನಿಲ್ಲಿಸದೆ ಎಲ್ಲೆ ಮೀರಿ ಓಡುತಿದೆ ಕರ್ಮ ಮಾಡುತಿದೆ
ಸುಳ್ಳ ನುಡಿಯ ನುಡಿಸಿ ಮನವು ಬದುಕ ಮಲಿನ ಮಾಡಿದೆ |

ನುಡಿವಮಾತು ಬೇರೆ ನಡೆವ ಕರ್ಮ ಬೇರೆ ಬದುಕು ಮಿಥ್ಯೆಯೆನಿಸಿದೆ
ತೋರಿಕೆಯೇ ಮೆರೆಯುತಿದೆ ಬಕುತಿ ಮರೆಯಾಗಿ 
ಅಹಂ ಎದ್ದು ನಿಂತಿದೆ|

ಗುರುವೇ ನಿನ್ನ ನಂಬಿ ನಡೆದರೆ ಬದುಕ ದಾರಿ ಸುಗಮವೋ
ಗುರುವೇ ಎಲ್ಲಾ ನೀನೆ ಎನ್ನದೇನು ಇಲ್ಲವೆಂದೆ ಬದುಕು ಹಸನವೋ|

ನಿನ್ನ ಕರುಣೆಗಾಗಿ ಹಂಬಲಿಸಿ ನಿತ್ಯ ನಿನ್ನ ನೆನೆವೆನೋ ಗುರುವೇ
ಮನವ ಶುದ್ದಗೊಳಿಸಿ ತನುವು ನಿನ್ನ ಸೇವೆ ನಡೆಸಿ ಧನ್ಯವಾಗಲಿ|

Sunday, September 2, 2018

ಗುರುನಾಥ ಗಾನಾಮೃತ 
ಎಲ್ಲರಂತಲ್ಲಾ ನನ್ನ ಗುರುದೇವ ಬಲು ಕರುಣಾಳುವೋ
ರಚನೆ: ಆನಂದರಾಮ್, ಶೃಂಗೇರಿ  


ಎಲ್ಲರಂತಲ್ಲಾ ನನ್ನ ಗುರುದೇವ ಬಲು ಕರುಣಾಳುವೋ
ಬಲು ಸಜ್ಜನನೋ ಬಲು ಸರಳನೋ ನಮ್ಮ ಗುರುನಾಥನೋ|

ದೇಹಿ ಎಂದವರ ಎಂದೂ ಕೈ ಬಿಡನೊ ನಮ್ಮ ಗುರುವರನು
ಪರಿಹರಿಸಿ ನೋವುಗಳ ಕ್ಷಣಮಾತ್ರದಿ ಗುರುನಾಥನು|

ಬುದ್ದಿ ಹೇಳುತ ಶುದ್ದ ಮನಸ ಕೊಂಡಾಡುತಾ  ಹರಸುವನು
ಅನ್ಯರ ಗೊಡವೆ ಭೇಡೆನ್ನುತ ಸತ್ಯವರಿತು ಬಾಳೆಂದ ಗುರುನಾಥನು|

ತಂದೆ ತಾಯಿಯ ಗೌರವದಿ ಬಾಳಿಸೆಂದನೋ ಗುರುವು
ಮನ  ನೋಯಿಸದೆ ಒಡ ಹುಟ್ಟಿದವರೊಡಗೂಡಿ ಬಾಳೆಂದರು|

ಬದುಕಲಿ ಮಾನ ಅಪಮಾನ ಎರಡನು ಸಮಬಾವದಿ ಕಾಣೆಂದರು 
ಎಲ್ಲವನು ಅವಗರ್ಪಿಸಿ ಎನದೇನು ಇಲ್ಲವೆಂದೆನುತ ಬಾಳೆಂದರೋ|

ನಡೆದಾಡಿದ ದೇವ ಇವನು ಎಲ್ಲರೊಳ ಒಬ್ಬನಾಗಿ ದಾರಿ ತೋರಿದನೋ
ನಂಬಿ ಬರುವ ಬಕುತರ ನೋವ ತಾ ನುಂಗಿ ಮಹಾದೇವನಾದನೋ|
ಗುರುನಾಥ ಗಾನಾಮೃತ 
ಪೂಜಿಸಿರಿ ನಮ್ಮ ಗುರುದೇವನ ಮಹಾ ಮಹಿಮನ
ರಚನೆ: ಆನಂದರಾಮ್, ಶೃಂಗೇರಿ  


ಪೂಜಿಸಿರಿ ನಮ್ಮ ಗುರುದೇವನ ಮಹಾ ಮಹಿಮನ
ಬಜಿಸಿರಿ ಗುರುನಾಥನ ಎಲ್ಲರನೆಚ್ಚಿನ ಮಹಾದೇವನ|

ಹೂವಿನ ರಾಶಿಯಲಿ ಕುಳ್ಳಿರಿಸಿ ಪೂಜಿಸಿ ಅವಧೂತನ
ಮಲ್ಲಿಗೆ ಜಾಜಿಯೊಳು ಸಿಂಗರಿಸಿ ನಮ್ಮ ಗುರುನಾತನ|

ಗಂಧಾಕ್ಷತೆ ದೂಪ ದೀಪ ವೈಭವ ತೋರಿಸಿ ಬಜಿಸಿರಿ
ಎಳನೀರು ಸುಗಂದಿತ ದ್ರವ್ಯವ ಅಭಿಷೇಕ ಮಾಡಿರಿ|

ದಿವ್ಯ ಫಲ ಭವ್ಯ ಫಲವ ಅರ್ಪಿಸಿ ಗುರುನಾಥರಿಗೆ
ತಾಂಬೂಲ ದ್ರವ್ಯಾಧಿಗಳ ಸಮರ್ಪಿಸಿ ಗುರುದೇವಗೆ|

ವಿಧವಿಧದ ಆರತಿ ಬೆಳಗಿ ಬಲು ಮೋದದಿ ಬಜಿಸಿರಿ
ದೂಪದೀಪಗಳ ಸಂಭ್ರಮದಿ  ಗುರುವನು ವಂದಿಸಿರಿ|

ಮಂತ್ರಗಳ ಘೋಷದ ನಡುವೆ ಮೆರೆಸಿರಿ ಗುರುವರನ
ಪರಿಮಳ ಪುಷ್ಪದಿ  ಮಂತ್ರಪುಷ್ಪ  ಅರ್ಪಿಸಿ ಗುರುನಾಥಗೆ|
ಗುರುನಾಥ ಗಾನಾಮೃತ 
ನಿನ್ನ ಮುಂದೆ ನಿಂತೆನೋ ಎನೂ ಅರಿಯದಾದೆನೋ
ಗುರುವೇ 
ರಚನೆ: ಆನಂದರಾಮ್, ಶೃಂಗೇರಿ  


ನಿನ್ನ ಮುಂದೆ ನಿಂತೆನೋ ಎನೂ ಅರಿಯದಾದೆನೋ ಗುರುವೇ 
ಕೈ ಹಿಡಿಯುವೆಯೋ ಕೈ ಬಿಡಿಯುವೆಯೋ ಒಂದೂ  ತಿಳಿಯದಾದೆನೋ|

ಬೇಡಲು ಬಯವೋ ಗುರುವೇ ಕೈ ಮುಗಿದು ಮೌನದಿ ನಿಂತಿಹಿನೋ
ಮನದಿ ತುಂಬಿದ ದುಗುಡವ ಹೊರಲಾಗದೆ ಹೆದರಿ ಹೋಗಿಹೆನೋ|

ಹೇಗೆ ಪೂಜಿಸಲು ನೀ ಒಲಿದು ಎನ್ನ ಮನವ ತುಂಬುವೆಯೋ
ಏನು ಅರ್ಪಿಸಲಿ ನಿನಗೆ ಗುರುವೇ ಪಲವೋ ಪಂಚಾಮೃತವೋ|

ಶುದ್ದ ಬಾವ ಬೇಕೆನ್ನುವೆ ಗುರುವೇ ನೀನು  ಅದು ನನ್ನಲಿಲ್ಲವೋ
ನಿನ್ನ ಕರುಣೆ ಬೇಕೆನ್ನುವ ನಾನು ನಿನ್ನನು ಬೇಡಿ ಫಲವಿಲ್ಲವೋ|

ಸಂಸಾರ ನೌಕೆಯಲಿ ಸಾಗುತ ನಡೆವ ಕರ್ಮಕೆ ನಾನೇ ಹೊಣೆಯೋ
ನನ್ನನೇ ನಿನ್ನ ಪದಕಮಲಕೆ ಅರ್ಪಿಸಿರೆ ಎನಗೆ ಇನ್ಯಾತರ ಭಯವಿಲ್ಲವೋ|
ಗುರುನಾಥ ಗಾನಾಮೃತ 
ಮನುಜ ಜನುಮ ಬಹು ದುರ್ಲಬವು ಅರಿಯಿರೋ
ರಚನೆ: ಆನಂದರಾಮ್, ಶೃಂಗೇರಿ  


ಮನುಜ ಜನುಮ ಬಹು ದುರ್ಲಬವು ಅರಿಯಿರೋ
ಸಾಧಿಸಿ ಮೇಲೇರಿ ಎಂದನು ಗುರುವು ತಿಳಿಯಿರೋ|

ಎಲ್ಲಾ ಬ್ರಹ್ಮಮಯವು ಭೇದವೇತಕೋ ಎಂದರೋ
ಕಾಣದೆ ಚೈತನ್ಯವ   ಪರತಪಿಸುವೆಯಾಕೆ ಎಂದರೋ|

ಹರಿಕಾರ ಗುರಿಕಾರ ನೀನಲ್ಲ ಬರೀ ನೆಪ ಮಾತ್ರವೋ
ಅವನ ಪ್ರೇರಣೆಯ ಬಲದಿ ನಟಿಪ  ಕಲಾಕಾರನೋ|

ಮನವ  ಲಯಮಾಡಿ ಬಲುಆನಂದವ ಸವಿಯಿರೋ
ನಿರ್ಗುಣ ನಿರ್ವಿಕಾರನ ಅನಂತ ಮಹಿಮನ ಅರಿಯಿರೋ|

ಸಂಸಾರನೌಕೆಯಲಿ ಸಾಗುತ ನಿಮ್ಮ ಅರಿವ ಪಡೆಯಿರೋ
ಯಾವುದೂ ನಿಮದಲ್ಲವೆಂಬ ಸತ್ಯವ ಅರಿಯೀರೋ|

ನಿಮ್ಮ ಕಾರ್ಯವು ಅವನ ಅಣತಿಯಂತೆ ತಿಳಿಯಿರೋ
ಜೀವನ ನಾಟಕದ ಹರಿಕಾರ ಸೂತ್ರದಾರ ಅವನೆನ್ನಿರೋ|

ಮರು ಮಾತನಾಡದೆ ಮಹಾದೇವನಾ ನಂಬಿರೋ
ಬವ ಬಂದನ ಕಳಚಿ ಮುಕ್ತಿ ಕಾಣುವ ಮಾರ್ಗವಾ ಅರಿಯೀರೋ||
ಗುರುನಾಥ ಗಾನಾಮೃತ 
ಐದು ಬೆಲ್ಲದಚ್ಚಲೇ ಪೂರ್ವ
ರಚನೆ: ಅಂಬಾಸುತ 

ಐದು ಬೆಲ್ಲದಚ್ಚಲೇ ಪೂರ್ವ
ಕರ್ಮ ಕಳೆದ ಗುರುನಾಥ
ಇವನ ಮರ್ಮ ಅರಿಯಲಾದೀತೇ
ಇವಗಿನ್ಯಾರಾದರೂ ಸರಿಸಮರುಂಟೇ ||

ಭವ ಸಾಗರದಿ ಬಹು ನೊಂದು 
ಬಳಲಿ ಬೆಂಡಾದ ಭಾಮೆ
ಗುರುಮನೆಯ ಬಾಗಿಲಾ ತಟ್ಟಿದಳು ತಡವಿರದೆ
ಬದುಕಿದು ಸಾಕಿನ್ನು ಭಾರ ಬಹಳವಿಹುದು
ಉಸಿರ ನಿಲ್ಲಿಸು ಒಂದಿರುಳು
ಕೂಡ ತಡಮಾಡದೆ ಗುರುನಾಥ ಎಂದು ||

ಕರುಣಾಳು ಗುರುನಾಥ ಕರುಣೆಯಾ
ತೋರಿದಾ ಹುಸಿ ನಗೆಯ ಒಡನೆ
ಅಚ್ಚು ಐದು ಬೆಲ್ಲ  ಐದು ಮನೆಯಾಕೆಗೆ
ಸ್ವಚ್ಚ ಮನದಲಿ ಕೊಡಲು ಅಚ್ಚರಿಯು 
ನಿನಗಹುದು ಹುಚ್ಚುತನ ಬಿಡು
ಹಚ್ಚಹಸುರಿನ ಬಾಳು ಮುಂದೆ ನಿನಗಹುದೆಂದು ||

ಗುರುವಾಕ್ಯ ನೆಡೆಸಿದಳು ಭಾವುಕ ಭಕುತಳು
ಬೆಲ್ಲದಚ್ಚನು ನೀಡಿ ಭಕ್ತಿಯಿಂದಲೀ
ಕಷ್ಟ ಕಳೆಯಿತು ಆ ಕ್ಷಣ ನಿಷ್ಠೂರ ದೂರಾಯ್ತು
ಗುರು ಮಹಿಮೆಯಿಂದಲಿ ಗುರು ಮಹಿಮೆಯಿಂದಲಿ
ಎನುತ ಕಣ್ಣೀರಿಡುತ ನುಡಿದಳಾ ಭಾಮೆ
ಅಂಬಾಸುತನ ಮನವ ತೇವಗೊಳಿಸುತಲಿ ||
ಗುರುನಾಥ ಗಾನಾಮೃತ 
ಸಲಹಬೇಕೈ ಸದ್ಗುರುರಾಯ
ರಚನೆ: ಅಂಬಾಸುತ 

ಸಲಹಬೇಕೈ ಸದ್ಗುರುರಾಯ
ಬಲು ಆಯಾಸ ಈ ಭವ ಪ್ರಯಾಸವಾಗಿಹುದು ||ಪ||

ಪರಿಪರಿಯ ಮೋಹ ದಾಹದ ಬಾಧೆಗಳು
ಮರೆಸುತಿವೆ ಸಜ್ಜನಿಕೆಯಾ
ಮೆರೆಯುತ್ತಿಹೇ ನಾನೆಂಬಾ ಮಕುಟ ಹೊತ್ತು
ನಾಳೆ ಮರೆಯಾಗೊ ಈ ತನುವ ನೆಚ್ಚಿದ್ದು ||೧||

ಕಂಡು ಕಾಣದಂತಾಗೊ ಸುಖದ ಅಮಲು
ಕಂಗೆಡಿಸಿದೆ ಈ ಮನವಾ
ಕುಂದಿರೊ ಮಂದಭಾಗ್ಯನು ನಾನು ಅರಿವಿನ
ಕದ ತಟ್ಟದೇ ಕಾರಿರುಳಾ ಹೊಕ್ಕಿಹೆನಲ್ಲಾ ||೨||

ನಿಜವಾ ನಿರಾಕರಿಸಿ ಮದಗಜನಂತರಸಿ
ಸೋಜಿಗವೆಲ್ಲವ ಅಳಿಸಿದೆನೊ
ರಾಜೀಯ ಮಾತಿಲ್ಲ ರಾಜೀವಲೋಚನನಿಲ್ಲ
ಎನ್ನುತ್ತ ರೋಗವ ನಾನೇ ಕರೆದೇನಲ್ಲೋ ||೩||

ಗುರಿ ಇರದೆ ಗುರು ನೆನೆಯದೇ ಗತಿಮತಿ ತಿಳಿಯದೆ
ಗುಮ್ಮನಾನಾದೆನೋ ಅಸ್ಥಿತ್ವವಿರದ
ಅಂಬಾಸುತನ ಈ ಪದಕೇ ಈಡಾದೆನೊ
ಲೋಕಾದೊಳು ನರಕ ನಾ ಕಂಡು ಹೋದೆನೋ ||೪||
ಗುರುನಾಥ ಗಾನಾಮೃತ 
ತೊಟ್ಟಿಲೊಳಗಿಟ್ಟು ತೂಗೀರೇ ನಮ್ಮ ಗುರುನಾಥನಾ ಅವಧೂತನಾ 
ರಚನೆ: ಅಂಬಾಸುತ 

ತೊಟ್ಟಿಲೊಳಗಿಟ್ಟು ತೂಗೀರೇ ನಮ್ಮ ಗುರುನಾಥನಾ ಅವಧೂತನಾ ||ಪ||
ಪುಟ್ಟ ಕಂದನೆಂದು ಬಗೆದು ಪರಿಪರಿಯ ಹಾಡುಗಳ ಪಾಡುತ್ತ ನೀರೆಯರೇ ||ಅ.ಪ||

ಯೋಗನಿದ್ರೆಯ ಮಾಡುವ ಯೋಗೀವರ್ಯನ ಸಾನುರಾಗದಿಂದ
ಸಾಲದಿಹ ಮತಿಯಾ ನೀಡುವ ಸದ್ಗುರುನಾಥನ ಬಲುಪ್ರೇಮದಿಂದಾ ||೧||

ಪಟ್ಟವ ಬಿಟ್ಟು ಪುಟಕಿಟ್ಟ ಚಿನ್ನದಂತೆ ಕಂಗೊಳಿಸುತಿರುವನಾ
ಶಾರದೆ ಮಡಿಲೇರಿ ಬಂದಾ ಶ್ರೀ ಶ್ರೀನಿವಾಸನ ಸುತನಾ ||೨||

ಹುಸಿ ಮುನಿದು ತೋರಿ ಹಠ ಮಾಡಿ ಹೂಮಾಲೆ ಧರಿಸಿಕೊಳ್ಳದವನಾ
ಹಿರಿತನ ಸಿರಿತನ ದೊರೆತನ ಬಿಟ್ಟು ಗುರುತರ ಗುರುತನದಿಂದ ಮೆರೆದವನಾ ||೩||

ಸಖರಾಯಪುರದೊಳು ಸುಖವನ್ನೀಯುವ ಸಾತ್ವಿಕ ರೂಪವ ಧರಿಸಿದವನಾ
ಅಂಬಾಸುತನಾ ಭಾವಕೆ ಕಂದನಾಗಿ ಕಂಡು ಮುತ್ತೀನ ತೊಟ್ಟಿಲನೇರಿದವನಾ ||೪||
ಗುರುನಾಥ ಗಾನಾಮೃತ 
ಜಯ ಸಖರಾಯಪುರವಾಸ ಜಯ ಸದ್ಭಕ್ತಪಾಲಕ
ರಚನೆ: ಅಂಬಾಸುತ 

ಜಯ ಸಖರಾಯಪುರವಾಸ ಜಯ ಸದ್ಭಕ್ತಪಾಲಕ
ಜಯ ಪರಮೇಶ್ವರ ರೂಪ ಜಯ ಜಯ ಗುರುನಾಥ ||೧||

ಜಯ ಶ್ರೀನಿವಾಸ ಸುತ ಜಯ ಚಂದ್ರಶೇಖರ ನುತ
ಜಯ ಶ್ರೀಶಾರದ ಪ್ರೀತ ಜಯ ಜಯ ಗುರುನಾಥ ||೨||

ಜಯ ಸನ್ಮಾರ್ಗ ಬೋಧಕ ಜಯ ಸತ್ಕರ್ಮ ಕಾರಕ
ಜಯ ಸದ್ಧರ್ಮ ಪಾಲಕ ಜಯ ಜಯ ಗುರುನಾಥ  ||೩||

ಜಯ ಶ್ರೀಕೃಷ್ಣ ಯೋಗೀಂದ್ರ ಜಯ ಅವತಾರಿ ಪುರುಷ
ಜಯ ಯೋಗಿಜನ ವಂಧ್ಯ ಜಯ ಜಯ ಗುರುನಾಥ ||೪||

ಜಯ ಸದ್ಗುಣ ಸಾಕಾರ ಜಯ ನಿರ್ಗುಣ ನಿರಾಕಾರ
ಜಯ ಸದ್ವಿಚಾರ ಸಾಧಕ ಜಯ ಜಯ ಗುರುನಾಥ ||೫||

ಜಯ ಭವಬಂಧ ನಾಶಕ ಜಯ ನಿಜಾನಂದ ದಾಯಕ
ಜಯ ಆಧ್ಯಾತ್ಮ ನಿಜಸೂರ್ಯ ಜಯ ಜಯ ಗುರುನಾಥ ||೬||

ಜಯ ಆದ್ಯಂತ ರಹಿತ ಜಯ ಆತ್ಮಾನಂದ ವರಾ
ಜಯ ಶ್ರೀ ದೇಶೀಕೇಂದ್ರ ಜಯ ಜಯ ಗುರುನಾಥ ||೭||

ಜಯ ಅವಧೂತವರೇಣ್ಯ ಜಯ ಅಕ್ಷರ ಅನಂತಾ
ಜಯ ಅಂಬಾಸುತ ಪೋಷ ಜಯ ಜಯ ಗುರುನಾಥ ||೮||
ಗುರುನಾಥ ಗಾನಾಮೃತ 
ನೀ ರಥವನೇರುವುದಾ ಕಾಂಬುವ ಬಯಕೆ
ರಚನೆ: ಅಂಬಾಸುತ 

ನೀ ರಥವನೇರುವುದಾ ಕಾಂಬುವ ಬಯಕೆ
ಸದ್ಗುರುನಾಥ ನೀ ಸರ್ವಾಲಂಕಾರಯುಕ್ತನಾಗಿ ||ಪ||

ಕೋಟಿ ಕಣ್ಗಳು ಕಾಣಬಯಸಿಹವೊ
ನಿನ್ನ ರಥಾರೋಹಣವನ್ನು ಪತಿತಪಾವನನೇ
ಪರಿಪರಿಯ ಪುಷ್ಪಗಳಿಂದಲಂಕೃತಗೊಂಡು
ಛತ್ರಚಾಮರ ರಾಜಲಾಂಛನ ಮೊದಲಾಗಿ ||೧||

ಸುಸ್ವರದ ವೇದಮಂತ್ರಗಳೊಡನೇ
ಪಂಚವಾದ್ಯಗಳಾ ಸುನಾದದ ನಡುವೇ
ಭಕುತರ ಭಾವಿಕ ಭಜನೆಯಿಂದೊಡಗೂಡಿ
ಹೊನ್ನಿನ ಹಿರಿದಾದ ತೇರೊಳು ಗುರುವೇ ||೨||

ಈ ಭಾವಕೆ ಅಸ್ತು ಎನ್ನುತ ಬೇಗ
ಮನದ ಸಿರಿವಂತಿಕೆಯ ಮನ್ನಿಸಿ ಈಗ
ಬಯಕೆ ಹುಟ್ಟಿಸಿದವನೆ ಬಳಲಿಸದೆ ರಾಗ
ಹಾಕಿದ ಅಂಬಾಸುತನಾ ಪದ ಭಿನ್ನಹವಾಗಿ ||೩||