ಗುರುನಾಥ ಗಾನಾಮೃತ
ತೊಟ್ಟಿಲೊಳಗಿಟ್ಟು ತೂಗೀರೇ ನಮ್ಮ ಗುರುನಾಥನಾ ಅವಧೂತನಾ
ರಚನೆ: ಅಂಬಾಸುತ
ತೊಟ್ಟಿಲೊಳಗಿಟ್ಟು ತೂಗೀರೇ ನಮ್ಮ ಗುರುನಾಥನಾ ಅವಧೂತನಾ ||ಪ||
ಪುಟ್ಟ ಕಂದನೆಂದು ಬಗೆದು ಪರಿಪರಿಯ ಹಾಡುಗಳ ಪಾಡುತ್ತ ನೀರೆಯರೇ ||ಅ.ಪ||
ಯೋಗನಿದ್ರೆಯ ಮಾಡುವ ಯೋಗೀವರ್ಯನ ಸಾನುರಾಗದಿಂದ
ಸಾಲದಿಹ ಮತಿಯಾ ನೀಡುವ ಸದ್ಗುರುನಾಥನ ಬಲುಪ್ರೇಮದಿಂದಾ ||೧||
ಪಟ್ಟವ ಬಿಟ್ಟು ಪುಟಕಿಟ್ಟ ಚಿನ್ನದಂತೆ ಕಂಗೊಳಿಸುತಿರುವನಾ
ಶಾರದೆ ಮಡಿಲೇರಿ ಬಂದಾ ಶ್ರೀ ಶ್ರೀನಿವಾಸನ ಸುತನಾ ||೨||
ಹುಸಿ ಮುನಿದು ತೋರಿ ಹಠ ಮಾಡಿ ಹೂಮಾಲೆ ಧರಿಸಿಕೊಳ್ಳದವನಾ
ಹಿರಿತನ ಸಿರಿತನ ದೊರೆತನ ಬಿಟ್ಟು ಗುರುತರ ಗುರುತನದಿಂದ ಮೆರೆದವನಾ ||೩||
ಸಖರಾಯಪುರದೊಳು ಸುಖವನ್ನೀಯುವ ಸಾತ್ವಿಕ ರೂಪವ ಧರಿಸಿದವನಾ
ಅಂಬಾಸುತನಾ ಭಾವಕೆ ಕಂದನಾಗಿ ಕಂಡು ಮುತ್ತೀನ ತೊಟ್ಟಿಲನೇರಿದವನಾ ||೪||
No comments:
Post a Comment