ಗುರುನಾಥ ಗಾನಾಮೃತ
ಹದ ಮಳೆಯಂತಿಹುದಮ್ಮ ಸತ್ಸಂಗ
ರಚನೆ: ಅಂಬಾಸುತ
ಹದ ಮಳೆಯಂತಿಹುದಮ್ಮ ಸತ್ಸಂಗ
ಹದ ಮಳೆಯಂತಿಹುದಮ್ಮ ||ಪ||
ಹದ ಮಾಡಿಕೊಳ್ಳಮ್ಮ ಬದು ಗಟ್ಟಿಗೊಳಿಸಿ
ಮನವಾ ನೀ ಹದ ಮಾಡಿಕೊಳ್ಳಮ್ಮ ||ಅ.ಪ||
ಹೊದ್ದು ಮಲಗದೆ ಕದ್ದು ಬಾಳದೆ ಇನ್ನು
ಉತ್ತಮ್ಮ ನೀನೀಗ ಮನವ
ತನುವೆಂಬಾ ಎತ್ತನು ಕಟ್ಟಿ
ತೃಣ ಕಳೆಯನೆಲ್ಲವ ಸುಟ್ಟಿ ||೧||
ಸಜ್ಜನರಿತ್ತ ಭಕ್ತಿ ಬೀಜವ ನೆಟ್ಟು
ಸ್ವಾಧ್ಯಾಯವೆಂಬಾ ಗೊಬ್ಬರವಿಟ್ಟು
ಸಾಧು ಸಂತರ ರಕ್ಷೆಯ ಬೇಲಿಯ ಕಟ್ಟು
ನಾನೆಂಬುದಿರದಾ ಬೆದರು ಬೊಂಬೆಯನಿಟ್ಟು ||೨||
ಗುರುರಕ್ಷೆ ಎಂಬಾ ಮಳೆ ಬಾರದೆ ಇರದು
ಗುಣಪೂರ್ಣ ಬೆಳೆಯನ್ಯಾರು ಕದಿಯರು
ಅಂಬಾಸುತನಾ ಈ ಪದವಾ ಕೇಳಮ್ಮ
ಅಂತರಂಗದೊಳು ಬೇಸಾಯ ಮಾಡಮ್ಮ ||೩||
No comments:
Post a Comment