ಗುರುನಾಥ ಗಾನಾಮೃತ
ನಾ ದಾಸನಾಗಬೇಕೊ ದಾಸಪದ ಬರೆಯಬೇಕೊ
ರಚನೆ: ಅಂಬಾಸುತ
ನಾ ದಾಸನಾಗಬೇಕೊ ದಾಸಪದ ಬರೆಯಬೇಕೊ
ದೊರೆ ನಿನ್ನ ಅರಿಯಬೇಕೊ ದೊರೆ ನಿನ್ನ ಮೆರೆಸಬೇಕೊ ||ಪ||
ವಿಠ್ಠಲನ ಕರೆದ ಪುರಂದರನಂಥಾಗಬೇಕೊ
ಆದಿಕೇಶವನ ನುತಿಸಿದ ಕನಕನಂಥಾಗಬೇಕೊ ||೧||
ಎನ್ನತನ ಬಿಡಲುಬೇಕೊ ನೀನೆ ಗತಿ ಎನ್ನಬೇಕೊ
ಸಿಕ್ಕರೆ ಉಣ್ಣಬೇಕೊ ಸಿಗದಿರೆ ಸರಿ ಎನ್ನಬೇಕೊ ||೨||
ನಿತ್ಯಗುರು ಸ್ತುತಿಯ ಮಾಡಿ ಸತ್ಯವನ್ನೆ ಪೇಳಬೇಕೊ
ಚಿತ್ತದೊಳಗವಗೆ ಗಟ್ಟಿ ಗುಡಿಯ ಅವಗೆ ಕಟ್ಟಬೇಕೊ ||೩||
ಭಾವ ಹಿರಿದಾಗಬೇಕೊ ಪದವಾಗಿ ಪುಟಿಯಬೇಕೊ
ಪದಪದದ ಒಳಗೂ ಅಕ್ಷರ ಗುರು ಕಾಣಬೇಕೊ ||೪||
ಸಖರಾಯಪುರವಾಸಿ ಅವಧೂತ ಗುರುನಾಥಾ
ಅಂಬಾಸುತನಾ ನಿನ್ನ ದಾಸನನ್ನಾಗಿಸಯ್ಯ ||೫||
No comments:
Post a Comment