ಒಟ್ಟು ನೋಟಗಳು

Tuesday, June 5, 2018

ಗುರುನಾಥ ಗಾನಾಮೃತ 
ದೂರಕೆ ತಳ್ಳುವೆ ಎನಲು ನೀನ್ಯಾರೊ ಗುರುವೇ
ರಚನೆ: ಅಂಬಾಸುತ 

ದೂರಕೆ ತಳ್ಳುವೆ ಎನಲು ನೀನ್ಯಾರೊ ಗುರುವೇ
ಸನಿಹದೆ ನಾನಿರುವೆ ಎನಲು ನಾನ್ಯಾರೊ ಗುರುವೇ ||ಪ||

ಇಂದು ನೆನ್ನೆಯದು ಏನೀ ಸಂಬಂಧ
ತಿಳಿದವರು ಹೇಳಿದರು ಇದು ಜನುಮದ ಅನುಬಂಧ
ಗುರಿ ಅರಿವಿಲ್ಲದೆ ನಾ ತೊಳಲಾಡಿರಲು
ಕರ ಪಿಡಿದಾ ಗುರುವೇ ನೀ ಕೈ ಬಿಡುವೆಯೊ ಏನು? ||೧||

ಮನಮಂದಿರದಿ ನಿಂತೆ ಮನವನೆ ಗುಡಿಯಾಗಿಸಿದೆ
ಮನ ತೊರೆಯುವ ಮಾತ ನೀನೇತಕೆ ಆಡಿರುವೆ
ಬಿಟ್ಟಿರುವೆಯೊ ಏನೋ ನೀ ನನ್ನನ್ನೂ
ಬಿಡದೇ ಭಜಿಸಿಹ ಈ ನಿನ್ನ ಮಗನನ್ನು ||೨||

ದಾಸರು ಪೇಳಿದರು ಯಾರ ಹಂಗಿಲ್ಲ
ನಾ ಹೇಳುತಿಹೆನೊ ಈಗ ನೀನಿರದೆ ಬದುಕಿಲ್ಲ
ನೀ ತೊರೆದರು ನಾ ತೊರೆಯೇ ಪ್ರಭುವೇ ಗುರುವೇ
ಗತಿ ನೀ ಮತಿ ನೀ ಸ್ತುತಿ ನೀ ಎನಗೆ ಗುರುವೇ ||೩||

ಅರಿಯದೆ ಬಂದೆ ಅರಿವಾಗುತ ನಿಂತೇ
ಅಂಬಾಸುತಗೆ ಆಶ್ರಯವನೆ ಇತ್ತೇ
ಹೇ ಸಖರಾಯಪುರವರಾಧೀಶ್ವರಾ
ಮರೆತು ಮರೆತು ತೊರೆಯುವೆ ಎನ್ನದಿರೊ ||೪||

No comments:

Post a Comment