ಗುರುನಾಥ ಗಾನಾಮೃತ
ತೊರೆಯಲಾರೆ ಗುರುವೆ ನಿನ್ನ ಶ್ರೀಪಾದ
ರಚನೆ: ಅಂಬಾಸುತ
ತೊರೆಯಲಾರೆ ಗುರುವೆ ನಿನ್ನ ಶ್ರೀಪಾದ
ಮರೆಯಲಾರೆ ಗುರುವೆ ನಿನ್ನ ಶ್ರೀಪದ ||ಪ||
ತನುವಿನಾನಂದಕೆ ಕಾರಣ ನಿನ್ನ ಶ್ರೀಪಾದ
ಮನದ ಆನಂದಕೆ ಕಾರಣ ನಿನ್ನ ಶ್ರೀಪದ
ಅರ್ಚಿಸಲು ಪ್ರೇರಣೆ ನಿನ್ನ ಶ್ರೀಪಾದ
ಅರ್ಪಿಸಲು ಪ್ರೇರಣೆ ನಿನ್ನ ಶ್ರೀಪದ ||೧||
ಪಾಪವೆಲ್ಲವ ಕಳೆವುದು ನಿನ್ನ ಶ್ರೀಪಾದ
ಪುಣ್ಯಮಾರ್ಗವ ತೋರ್ವುದು ನಿನ್ನ ಶ್ರೀಪದ
ತೋರುತಿಹುದು ಭಗವಂತನ ನಿನ್ನ ಶ್ರೀಪಾದ
ಅವನೊಳು ತಲ್ಲೀನವಾಗಿಸಿಹುದು ನಿನ್ನ ಶ್ರೀಪದ ||೨||
ಸೇವ್ಯ ಸೇವಕ ಭಾವವೀವಿದು ನಿನ್ನ ಶ್ರೀಪಾದ
ಸ್ವಾನಂದಾಮೃತ ಉಣಿಸುವುದು ನಿನ್ನ ಶ್ರೀಪದ
ಸಗುಣ ಸಚ್ಚಿದಾನಂದ ನಿನ್ನ ಶ್ರೀಪಾದ
ಅವಗುಣ ಅಳಿಸುವುದು ನಿನ್ನ ಶ್ರೀಪದ ||೩||
ಸಖರಾಯಪುರವಾಸಿಯ ಶ್ರೀಪಾದ
ಅಂಬಾಸುತಗಾನಂದವ ನೀಡೊ ಪಾದ
ಶ್ರೀವೇಂಕಟಾಚಲನ ಶ್ರೀಪದ
ಅಲೌಕಿಕ ಸಿರಿಯ ನೀಡೊ ಪದ ||೪||
No comments:
Post a Comment