ಗುರುನಾಥ ಗಾನಾಮೃತ
ತಡಮಾಡದೇ ಬೇಗ ಭಿಕ್ಷೆ ನೀಡೈ ಗುರುವೇ
ರಚನೆ: ಅಂಬಾಸುತ
ತಡಮಾಡದೇ ಬೇಗ ಭಿಕ್ಷೆ ನೀಡೈ ಗುರುವೇ
ನಿನ್ನಂಗಳದಿ ನಿಂತು ನಾ ಬೇಡುತಿಹೆನು ||ಪ||
ಬಿಡಲಾರೆ ನೀ ಸ್ಥಳವಾ ನೀ ಭಿಕ್ಷೆ ನೀಡದೆ
ಬಡವ ನಾನಯ್ಯ ಬಹು ಬಳಲಿ ಬಂದಿಹೆನಯ್ಯಾ ||ಅ.ಪ||
ಕುಕ್ಷಿಯನೆ ಬಳಸಿ ಬಂದೆ ಖಾಲಿ ಜೋಳಿಗೆ ತಂದೆ
ನೀಡುವವರ ಕಾಣದಾದೇ ಹಸಿದು ಬೆಂಡಾದೆ
ಪುಣ್ಯಾತ್ಮರು ಪೇಳಿದರು ಪೋಗು ಸಖರಾಯಪುರಕೆ
ಅವಧೂತನೆಂಬಾ ಅರಸನಾ ಮನೆಗೆಂದು ||೧||
ನೀ ಸಾಹುಕಾರನಂತೇ ಈ ಜಗದ ಒಡೆಯನಂತೆ
ಬೇಡಿಸಿಕೊಳ್ಳದೆ ನೀಡಿ ಭಕ್ತರಾ ಪೊರೆವೆಯಂತೆ
ಭಕ್ತವತ್ಸಲನೆಂಬಾ ಬಿರುದ ಪೊತ್ತಿಹೆಯಂತೆ
ದೋಷಪೂರ್ಣರ ದೋಷವನು ನೀ ಕಳೆವೆಯಂತೆ ||೨||
ಭಕ್ತಿ ಎಂಬಾ ಅನ್ನವನು ಉಣಿಸಯ್ಯ ಎನಗೀಗ
ಜ್ಞಾನವೆಂಬೊ ಹಣವ ನೀಡಯ್ಯ ಬೇಗ
ವೈರಾಗ್ಯವೆಂಬೊ ಘನ ಧಾನ್ಯವಾ ನೀ ನೀಡಿ
ಎನ್ನ ಜೋಳಿಗೆಯಾ ತುಂಬಿಸೋ ಬೇಗ ||೩||
ಅವಧೂತ ಗುರುನಾಥ ಸದ್ಭಕ್ತ ಪರಿಪಾಲಕ
ಅಂಬಾಸುತನ ಈ ಮೊರೆಯಾ ಆಲಿಸೊ ಬೇಗ
ಭಿಕ್ಷೆ ನೀಡೀಗಲೇ ರಕ್ಷೆ ನೀನೇ ಎನಗೆ
ಈ ಶಿಕ್ಷೆ ತಾಳಲಾರೆನೋ ನಿನ್ನ ಕಾಣದೇ ಇರೆನೊ ||೪||
No comments:
Post a Comment