ಗುರುನಾಥ ಗಾನಾಮೃತ
ಪೂಜಿಸೊ ಗುರುವರನಾ ನೀ ಮನದೊಳು ಪೂಜಿಸೊ
ರಚನೆ: ಅಂಬಾಸುತ
ಪೂಜಿಸೊ ಗುರುವರನಾ ನೀ ಮನದೊಳು ಪೂಜಿಸೊ
ಗುರುಪದವಾ ಪೂಜಿಸೊ ಸದ್ಗುರು ಪಾದ ಪೂಜಿಸೊ ||ಪ||
ಅರಿಗಳ ಅಳಿಸೊ ಮನದಿ ಗುರುವನ್ನಿರಿಸೊ
ಘನ್ನ ಮಹಿಮನ ನೀ ಸದಾ ಮನದಲ್ಲಿರಿಸೊ ||೧||
ಹೂ ಅರಳಿಸೊ ಮನದೊಳಗೆ ನೀ ಹೂವನರಳಿಸೊ
ಅರಳಿದಾ ಆ ಹೂವ ಗುರುಪಾದಕಿರಿಸೊ ||೨||
ಹೊಗೆಯ ಹಾರಿಸೊ ಮನದಿ ಧೂಪವನಿರಿಸೊ
ಆ ಧೂಪದಿ ಗುರು ಮನೆ ಘಂ ಎನ್ನಿಸೊ ||೩||
ತಮವನಳಿಸೊ ಮನದಿ ಜ್ಯೋತಿಯ ನೀ ಬೆಳಗಿಸೊ
ಆ ಜ್ಯೋತಿಯಿಂದಲೆ ಗುರುವಿಗಾರುತಿ ಮಾಡಿಸೊ ||೪||
ಹಸಿವಾ ಇಂಗಿಸೊ ಮನದಿ ಪರಮಾನ್ನ ಬೇಯಿಸೊ
ಆ ಪರಮಾನ್ನದಿಂ ನೀ ಗುರುಭಿಕ್ಷೆ ಇರಿಸೊ ||೫||
ನೀತಿಯನ್ನಿರಿಸೊ ಮನವ ನಿರ್ಮಲವನ್ನಾಗಿಸೊ
ಆ ನಿರ್ಮಲತೆಯಿಂದ ನೀರಾಜನ ಗುರುವಿಗೆನ್ನೊ ||೬||
ಸಖರಾಯಪುರವಾಸ ನೀ ಸಲಹೆನ್ನೊ
ಅಂಬಾಸುತನ ಮನದೊಳು ನೀ ಪೂಜೆಗೊಂಬೊ ಎನ್ನೊ ||೭||
No comments:
Post a Comment